ಎವರೆಸ್ಟ್‌ನಿಂದ ಮೃತರ ಶವ ಕೆಳಗೆ ತರಲು ₹1 ಕೋಟಿ ವೆಚ್ಚ! ಪರ್ವತಾರೋಹಿ ಅರುಣ್ ಕಳೇಬರ ಹಿಮದಲ್ಲೇ ಬಿಡಲು ಕುಟುಂಬ ನಿರ್ಧಾರ

Gowthami K   | Kannada Prabha
Published : May 29, 2026, 10:16 AM IST
family decides to leave arun kumar tiwari body on mount everest

ಸಾರಾಂಶ

ವಿಶ್ವದ ಅತಿ ಎತ್ತರದ ಶಿಖರವಾದ ಎವರೆಸ್ಟ್ ಏರುವಾಗ ಯಾರಾದರೂ ಮೃತಪಟ್ಟರೆ, ಅವರ ಶವವನ್ನು ಮರಳಿ ತರುವುದು ಅತ್ಯಂತ ಸಂಕಷ್ಟದ ಮತ್ತು ದುಬಾರಿ ಕಾರ್ಯಾಚರಣೆಯಾಗಿದೆ. ಈ ಕಾರ್ಯಾಚರಣೆಗೆ ಆಗುವ ಅಗಾಧ ವೆಚ್ಚ ಮತ್ತು ಶೆರ್ಪಾಗಳ ಜೀವಕ್ಕೆ ಇರುವ ಅಪಾಯದಿಂದಾಗಿ, ಹೈದರಾಬಾದ್‌ನ ಪರ್ವತಾರೋಹಿ ಅರುಣ್ ಕುಮಾರ್ ಅವರ ಕುಟುಂಬದಂತೆ ಅನೇಕರು ತಮ್ಮ ಪ್ರೀತಿಪಾತ್ರರ ಶವವನ್ನು ಹಿಮಾಲಯದಲ್ಲೇ ಬಿಡಲು ನಿರ್ಧರಿಸಿದ್ದಾರೆ.

ಹೈದರಾಬಾದ್‌: ವಿಶ್ವದ ಅತ್ಯಂತ ಎತ್ತರದ ಹಿಮಶಿಖರ ಎವರೆಸ್ಟ್‌ ಏರುವುದು ಪ್ರತಿಯೊಬ್ಬ ಚಾರಣಿಗರ ಕನಸು. ಆದರೆ ಸುರಕ್ಷಿತವಾಗಿ ಹೋಗಿ ಬಂದರೆ ತೊಂದರೆ ಇಲ್ಲ. ಆದರೆ ಹೋದವರ ಪೈಕಿ ಯಾರಾದರೂ ಅಲ್ಲೇ ಮೃತಪಟ್ಟರೆ ಅದು ಕುಟುಂಬದವರ ಪಾಲಿಗೆ ಅಥವಾ ಶವಗಳನ್ನು ಮರಳಿ ಕೆಳಗೆ ತರಲು ಹೋಗುವವರ ಪಾಲಿಗೂ ಭಾರೀ ಸವಾಲಿನ ಕೆಲಸ. ಇದೇ ಕಾರಣಕ್ಕೆ ಇತ್ತೀಚೆಗೆ ಯಶಸ್ವಿಯಾಗಿ ಹಿಮಶಿಖರ ಏರಿ, ಕೆಳಗೆ ಇಳಿಯುವ ವೇಳೆ ಮೃತ ಪಟ್ಟ ಹೈದ್ರಾಬಾದ್‌ನ ಅರುಣ್ ಕುಮಾರ್‌ ದೇಹವನ್ನು ಅಲ್ಲೇ ಬಿಡಲು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ.

ಸಾಹಸದ ಯಾತ್ರೆ:

8,848.86 ಮೀ. ಎತ್ತರದ ಮೌಂಟ್‌ ಎವರೆಸ್ಟ್‌ನ ಶಿಖರ ಏರುವ ಪ್ರಕ್ರಿಯೆ ಒಟ್ಟಾರೆ 2 ತಿಂಗಳಿನದ್ದು. ಇದಕ್ಕೆ ಆಗುವ ವೆಚ್ಚ ಅಂದಾಜು 50 ಲಕ್ಷ ರು.ನಿಂದ 90 ಲಕ್ಷ ರು. ಇದರಲ್ಲಿ ಶಿಖರ ಏರುವ ಶುಲ್ಕ, ತರಬೇತಿ, ಶೆರ್ಪಾಗಳ ವೆಚ್ಚ, ಶಿಖರ ಹತ್ತಲು ಬೇಕಾದ ಉಪಕರಣ, ವಿಮಾ ವೆಚ್ಚ ಸೇರಿರುತ್ತದೆ.

ಮೃತಪಟ್ಟರೆ ಸಂಕಷ್ಟ:

ಒಂದು ವೇಳೆ ಶಿಖರ ಏರುವ ವೇಳೆ ಅಥವಾ ಇಳಿಯುವ ವೇಳೆ ಅಲ್ಲಿ ಯಾರಾದರೂ ಸಾವನ್ನಪ್ಪಿದರೆ ಅವರನ್ನು ಕರೆತರುವುದು ಬಹಳ ಕಷ್ಟದ ಕೆಲಸ. ಕಾರಣ ಸಮುದ್ರದ ಮಟ್ಟದಿಂದ 6400 ಅಡಿ ಎತ್ತರದವರೆಗೆ ಮಾತ್ರ ಹೆಲಿಕಾಪ್ಟರ್‌ಗಳು ಸಾಗಬಲ್ಲದು. ಆ ಎತ್ತರದಲ್ಲಿ ಸಿಕ್ಕಿಬಿದ್ದಿದ್ದರೆ ಜೀವಂತ ವ್ಯಕ್ತಿ ಅಥವಾ ಮೃತ ವ್ಯಕ್ತಿಗಳ ಶವವನ್ನು ಕಾಪ್ಟರ್‌ ಮೂಲಕ ಕೆಳಗೆ ತರಬಹುದು. ಇದಕ್ಕೆ ವಿಮೆ ಹಣ ಲಭ್ಯವಿದೆ. ಆದರೆ ಕಾಪ್ಟರ್‌ ಬಿಟ್ಟು ಶೆರ್ಪಾಗಳೇ ಶವ ಎಳೆದು ತರಬೇಕೆಂದರೆ ಅದಕ್ಕೆ ವಿಮೆ ಹಣ ಲಭ್ಯವಿಲ್ಲ.

ಭಾರೀ ಹೊರೆ:

ಕಾಪ್ಟರ್‌ಗಳು ತೆರಳಲು ಸಾಧ್ಯವಾಗದ ಪ್ರಕರಣಗಳಲ್ಲಿ ಶೆರ್ಪಾಗಳೇ ಮೃತರ ಶವ ತರುತ್ತಾರೆ. ಆದರೆ ಇದಕ್ಕೆ ಕನಿಷ್ಠ 1 ಕೋಟಿ ರು.ಅಥವಾ ಅದಕ್ಕಿಂತಲೂ ಹೆಚ್ಚು ಶುಲ್ಕ ವಿಧಿಸಲಾಗುತ್ತದೆ. ಇದೀಗ ಅರುಣ್‌ ಪ್ರಕರಣದಲ್ಲೂ ಆಗಿದ್ದು ಇದೇ. ಅವರು ಸಾವನ್ನಪ್ಪಿದ ಪ್ರದೇಶ ಶಿಖರದ ತುದಿಯಿಂದ 60 ಮೀಟರ್‌ ಕೆಳಗಿದೆ. ಇಲ್ಲಿಂದ ಶವ ತರಬೇಕಾದರೆ ಕನಿಷ್ಠ 10-12 ಶೆರ್ಪಾಗಳು ತೆರಳಬೇಕು. ಅವರು ಆಕ್ಸಿಜನ್‌ ಸಿಲಿಂಡರ್‌ ಸೇರಿದಂತೆ ರಕ್ಷಣೆಗೆ ಬೇಕಾಗುವ ಇನ್ನಿತರೆ ಉಪಕರಣ ಹೊತ್ತುಕೊಂಡು ಹತ್ತಬೇಕಾದ ಕಾರಣ ಸಮಯವೂ ಜಾಸ್ತಿ ತಗುಲುತ್ತದೆ. ಬಳಿಕ ಶವ ಇರುವ ಜಾಗಕ್ಕೆ ತೆರಳಿ ಅಲ್ಲಿ ಶವ ಹುಡುಕಿ ಹೊರತೆಗೆದು, ಹಗ್ಗ ಕಟ್ಟಿ ದುರ್ಗಮ ಮಾರ್ಗದಲ್ಲಿ ಇಳಿಸಬೇಕು. ಸದಾ ನೀರ್ಗಲ್ಲು ಕುಸಿತದ ಅಪಾಯ ಇರುವ ಈ ಪ್ರದೇಶಕ್ಕೆ ತೆರಳುವುದು ಶೆರ್ಪಾಗಳ ಜೀವಕ್ಕೂ ಅಪಾಯ.

ಶವ ಅಲ್ಲೇ ಬಿಡಲು ನಿರ್ಧಾರ:

ಇದೇ ಕಾರಣಕ್ಕೆ ಕುಟುಂಬ ಸದಸ್ಯರು ಅರುಣ್‌ ಶವವನ್ನೇ ಶಿಖರದ ಹಿಮದ ನಡುವೆಯೇ ಬಿಡಲು ನಿರ್ಧರಿಸಿದ್ದಾರೆ. ‘ದೇಹ ತರಲು ಮುಂದಾದರೂ ಅದು ನಮ್ಮನ್ನು ತಲುಪುವಷ್ಟರಲ್ಲಿ ಬಹಳ ಹಾನಿಯಾಗಿರುತ್ತದೆ. ಪರ್ವಾತಾರೋಹಿಯಾಗಿದ್ದ ತಿವಾರಿಯ ಬಯಕೆಯೂ ಹಿಮಾಲಯದೊಂದಿಗೆ ಹೀಗೆ ಸಂಪರ್ಕದಲ್ಲಿರುವುದೇ ಆಗಿತ್ತು’ ಎಂದಿದ್ದಾರೆ.

ಮೃತಪಟ್ಟಿದ್ದು ಹೇಗೆ?:

ಪರ್ವತಾರೋಹಣದ ವೇಳೆಯೇ ಅರುಣ್‌ರ ಆರೋಗ್ಯ ಹದಗೆಟ್ಟಿದ್ದು, ಅಲ್ಲಿಂದಲೇ ಮರಳುವಂತೆ ಅವರಿಗೆ ಸೂಚಿಸಲಾಗಿತ್ತು. ಆದರೆ, ‘ಶಿಖರಕ್ಕೆ ಇಷ್ಟು ಸ್ಪಷ್ಟವಾಗಿ ಕಾಣುತ್ತಿರುವಾಗ ಹಿಂದಿರುಗುವ ಮಾತೇ ಇಲ್ಲ’ ಎಂದು ಅವರದನ್ನು ತಿರಸ್ಕರಿಸಿ ತಮ್ಮಾಸೆಯಂತೆ ಪರ್ವತದ ತುದಿಯನ್ನೇರಿದ್ದರು. ಅಲ್ಲಿಂದ ಇಳಿಯುವ ವೇಳೆ ಅರುಣ್‌ ಇದ್ದಕ್ಕಿದ್ದಂತೆ ರಕ್ತದ ವಾಂತಿ ಮಾಡಿಕೊಳ್ಳಲಾರಂಭಿಸಿದರು. ಕೂಡಲೇ ಜತೆಗಿದ್ದ ಶೆರ್ಪಾಗಳು ಆಕ್ಸಿಜನ್‌ ಮಾಕ್ಸ್‌ ನೆರವಿನಿಂದ ಅವರನ್ನು ರಕ್ಷಿಸಲು ಯತ್ನಿಸಿದರಾದರೂ ಸಫಲರಾಗಲಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಗಳನ್ನು ಮದುವೆ ಮಾಡಿಕೊಡುವ ಮುನ್ನ ಅಳಿಯನ ಟ್ರಾಫಿಕ್ ಚಲನ್ ಚೆಕ್‌ ಮಾಡಿ ಗುಣ-ನಡತೆ ತಿಳಿದುಕೊಂಡ ತಂದೆ!
ಭಾರತದ ಹೊಸ ಪರ್ವ, ದೇಶದ ಮೊದಲ ಹೈಡ್ರೋಜನ್ ರೈಲಿಗೆ ಕೇಂದ್ರ ಅಸ್ತು, ರೈಲು ಓಡುವುದು ಹೇಗೆ? ಎಲ್ಲೆಲ್ಲಿ ನಿಲುಗಡೆ?