ವರದಿ: ಶಶಿಕುಮಾರ ಪತಂಗೆ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನನ್ನು ಯುದ್ಧದಲ್ಲಿ ಗೆಲ್ಲುವುದು ಅಸಾಧ್ಯ ಎಂಬುದನ್ನು ಅರಿತ ಬ್ರಿಟಿಷರು ಮೋಸದಿಂದ ಸೆರೆ ಹಿಡಿದ ಸ್ಥಳವೇ ಧಾರವಾಡ ಜಿಲ್ಲೆಯ ಡೋರಿ ಹಳ್ಳ. ಈಗಲೂ ಇಲ್ಲಿನ ಜನರು ಈ ಸ್ಥಳವನ್ನು ಪೂಜೆ ಮಾಡುತ್ತಾರೆ. ರಾಯಣ್ಣ(Rayanna) ಬ್ರಿಟಿಷರ ವಿರುದ್ಧ ಗೆರಿಲ್ಲಾ ತಂತ್ರದ ಮೂಲಕ ಯುದ್ಧ ಮಾಡಲು ವಾಸ ಮಾಡುತ್ತಿದ್ದ ಅಡಗುತಾಣಗಳಲ್ಲಿ ಸಮೀಪದ ಹಂಡಿಬಡಂಗನಾಥ ಮಠ(Handibadanganath Mutt), ಬಾಳಗುಂದ ಗುಡ್ಡ(Balagunda Gudda) ಮತ್ತು ಡೋರಿ ಗುಡ್ಡ(Dorigudda)ಗಳು ಪ್ರಮುಖವಾದದ್ದು. ಡೋರಿ ಹಳ್ಳದಲ್ಲಿ ರಾಯಣ್ಣ ಪ್ರತಿ ನಿತ್ಯ ಸ್ನಾನ ಮಾಡುತ್ತಿದ್ದನು. ಇದನ್ನು ಅರಿತ ಬ್ರಿಟಿಷರು ರಾಯಣ್ಣನನ್ನು ಸೆರೆಹಿಡಿಯಲು ಮಾವ ಲಕ್ಷ್ಮಣನನ್ನು ದಾಳವಾಗಿ ಬಳಸಿಕೊಳ್ಳುತ್ತಾರೆ. 1830ರ ಏಪ್ರಿಲ್ 7ರಂದು ಧಾರವಾಡದ ಗಿಡದ ಹುಬ್ಬಳ್ಳಿಯಲ್ಲಿ ರಾಯಣ್ಣನ ಜತೆಗಿದ್ದವರು ಬ್ರಿಟಿಷರ ಮೇಲೆ ದಾಳಿ ಮಾಡುತ್ತಾರೆ. ಈ ವೇಳೆ ರಾಯಣ್ಣನ ಖಡ್ಗ ಲಕ್ಷ್ಮಣನ ಬಳಿಯಿತ್ತು. ಬ್ರಿಟಿಷರು ದಾಳಿ ಮಾಡಿದ ವೇಳೆ ತನ್ನ ಖಡ್ಗ ಕೊಡು ಎಂದು ರಾಯಣ್ಣ ಕೇಳಿದರೂ ಲಕ್ಷ್ಮಣ ಕೊಡದೆ ಮೋಸ ಮಾಡುತ್ತಾನೆ. ಹೀಗಾಗಿ ರಾಯಣ್ಣನನ್ನು ಬ್ರಿಟಿಷರು ಸೆರೆ ಹಿಡಿಯಲು ಸಾಧ್ಯವಾಗುತ್ತದೆ.
undefined
India@75: ಹುತಾತ್ಮ ರಾಯಣ್ಣನ ಚರಿತ್ರೆ ಹೇಳುವ ಬೆಳಗಾವಿಯ ನಂದಗಡ
ಪೂರ್ವ ನಿಯೋಜಿತ ಮೋಸದ ಯೋಜನೆಯಂತೆ ಖೋದಾನಪುರ ನಿಂಗನಗೌಡ ಮತ್ತು ನೇಗಿನಾಳದ ವೆಂಕನಗೌಡರ ಹಾಗೂ ಆತ್ಮಿಯ ಗೆಳೆಯ ನೇಗಿನಾಳದ ಪೋಟದನ್ನವರ ಲಕ್ಕಪ್ಪ ಸೇರಿ ರಾಯಣ್ಣನನ್ನು ಮೋಸದಿಂದ ಸೆರೆಹಿಡಿದು ಕೊಡುತ್ತಾರೆ. ಬ್ರಿಟಿಷರ ಜಿಲ್ಲಾ ಕಚೇರಿ ಧಾರವಾಡದಲ್ಲಿ ಇದ್ದಿದ್ದರಿಂದ ಸೈನ್ಯವನ್ನು ಕಳಿಸಲು ಅನುಕೂಲವಾಗುವ ದೃಷ್ಟಿಯಿಂದ ಡೋರಿ ಹಳ್ಳದಲ್ಲಿಯೇ ಸೆರೆ ಹಿಡಿಯಲು ಸಂಚು ರೂಪಿತವಾಗಿರುತ್ತದೆ.
ಬ್ರಿಟಿಷರ ವಿರುದ್ದ ಹೋರಾಟ:
ಆಂಗ್ಲರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಲು ರಾಯಣ್ಣನ ಜತೆ 4000 ಸೈನಿಕರ ತಂಡವು ಇರುತ್ತಿತ್ತು. ಈ ಸೈನ್ಯದಲ್ಲಿದ್ದ ಸುಮಾರು 400 ಮಂದಿಯನ್ನು ಏ.8ರಂದು ಬ್ರಿಟಿಷರು ಸೆರೆ ಹಿಡಿದರು. ಅದರಲ್ಲಿ ರಾಯಣ್ಣನನ್ನು ಸೇರಿ ಮುಖ್ಯ ಆರೋಪಿಗಳೆಂದು 13 ಜನರನ್ನು ಹೆಸರಿಸಿ ಅವರನ್ನು 20 ತಿಂಗಳ ಕಾಲ ಧಾರವಾಡದ ಜೈಲಿನಲ್ಲಿ ವಿಚಾರಣೆ ನಡೆಸುತ್ತಾರೆ. ನಂತರ ರಾಯಣ್ಣನನ್ನು ಒಳಗೊಂಡು ಏಳು ಜನರಿಗೆ ಗಲ್ಲು ಶಿಕ್ಷೆ ಮತ್ತು 6 ಜನರಿಗೆ ಗಡೀಪಾರು ಶಿಕ್ಷೆಯನ್ನು ನೀಡಲಾಗುತ್ತದೆ.
India@75:ನೂರಾರು ಮಂದಿಯ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ಮಂಗಳೂರಿನ ಕೆನರಾ ಶಾಲೆ
ತಲುಪುವುದು ಹೇಗೆ?: ಧಾರವಾಡದಿಂದ 30 ಕಿ.ಮೀ. ಅಳ್ನಾವರ ಮಾರ್ಗವಾಗಿ, ಬೆಳಗಾವಿಯಿಂದ 78 ಕಿ.ಮೀ., ಬೆಂಗಳೂರಿಂದ 455 ಕಿ.ಮೀ., ಕಾರವಾರದಿಂದ 140 ಕಿ.ಮೀ. ದೂರದಲ್ಲಿ ಈ ಡೋರಿ ಹಳ್ಳ ಸಿಗುತ್ತದೆ. ಇಲ್ಲಿಗೆ ಬರಲು ಬಸ್ ಹಾಗೂ ರೈಲಿನ ವ್ಯವಸ್ಥೆ ಇದೆ.