
ಲಖನೌ: ಉತ್ತರಪ್ರದೇಶದ ಮೀರಾಪುರ ಕ್ಷೇತ್ರದ ಕಾಕ್ರೋಲಿಯಲ್ಲಿ ಉಪಚುನಾವಣೆಗೆ ಮತದಾನ ನಡೆಯುತ್ತಿದ್ದ ವೇಳೆ 2 ಗುಂಪುಗಳು ಹೊಡೆದಾಡಿಕೊಂಡು, ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಲಘು ಲಾಠಿಪ್ರಹಾರ ನಡೆಸಿ ಜನರನ್ನು ಚದುರಿಸಿ ಮತದಾನಕ್ಕೆ ಅನುವು ಮಾಡಿದ್ದಾರೆ. ಇದನ್ನು ವಿರೋಧಿಸಿರುವ ಎಐಎಂಐಎಂ ನಾಯಕ ಮೊಹಮ್ಮದ್ ಅರ್ಶದ್, ‘ಜನರು ಮನೆಯಿಂದ ಹೊರಬಂದು ಮತ ಚಲಾಯಿಸದಂತೆ ಪೊಲೀಸರು ತಡೆಯುತ್ತಿದ್ದಾರೆ. ಇದು ಜನರ ಚುನಾವಣೆಯಾಗುವ ಬದಲು ಸರ್ಕಾರದ ಚುನಾವಣೆಯಾಗಿದೆ’ ಎಂದು ಆರೋಪಿಸಿದ್ದಾರೆ.
ಮತ ಹಾಕದಂತೆ ತಡೆದ 5 ಪೊಲೀಸರು ಸಸ್ಪೆಂಡ್
ಉತ್ತರಪ್ರದೇಶದ ಉಪಚುನಾವಣೆ ವೇಳೆ ಮತ ಚಲಾಯಿಸಲು ಬಂದ ಮತದಾರರ ಚೀಟಿಗಳನ್ನು ಪರಿಶೀಲಿಸಿದ ಪೋಲಿಸರು ಕೆಲವರನ್ನು ಮತ ಚಲಾಯಿಸದಂತೆ ತಡೆದಿರುವ ಘಟನೆ ಮುಜಪ್ಫರ್‌ನಗರದಲ್ಲಿ ನಡೆದಿದೆ. ಹೀಗಾಗಿ ಈ ಕೃತ್ಯ ಎಸಗಿದ 5 ಪೊಲೀಸರನ್ನು ಚುನಾವಣಾ ಆಯೋಗ ಅಮಾನತು ಮಾಡಿದೆ. ಇವರಲ್ಲಿ ಇಬ್ಬರು ಸಬ್ ಇನ್ಸ್‌ಪೆಕ್ಟರ್‌ಗಳು, ಇಬ್ಬರು ಮುಖ್ಯ ಪೇದೆಗಳು ಹಾಗೂ ಇಬ್ಬರು ಪೇದೆಗಳಿದ್ದಾರೆ.
‘ನಮ್ಮ (ಎಸ್‌ಪಿ) ಪರವಾಗಿ ಮತ ಚಲಾಯಿಸುವ ಸಾಧ್ಯತೆಯಿದ್ದ ಮತದಾರರನ್ನು ತಡೆಯಲಾಗುತ್ತಿದೆ’ ಎಂದು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ವಿಡಿಯೋ ಸಾಕ್ಷಿ ಸಮೇತ ಆಯೋಗಕ್ಕೆ ದೂರು ನೀಡಿದ್ದರು. ಇದನ್ನು ಪರಿಶೀಲಿಸಿದ ಜಿಲ್ಲಾ ಚುನಾವಣಾಧಿಕಾರಿಗಳು, ಕೃತ್ಯದಲ್ಲಿ ತೊಡಗಿದ್ದ ಐವರು ಪೊಲೀಸರನ್ನು ಅಮಾನತುಗೊಳಿಸುವಂತೆ ಆದೇಶಿಸಿದ್ದಾರೆ.
ಗನ್‌ನಿಂದ ಪೊಲೀಸರ ಬೆದರಿಕೆ:
ಈ ನಡುವೆ ಪೊಲೀಸರು ಮುಜಫ್ಫರ್ ನಗರ ಜಿಲ್ಲೆಯ ಮೀರಾಪುರ ಕ್ಷೇತ್ರದ ಮಹಿಳಾ ಮತದಾರರನ್ನು ಗನ್‌ನಿಂದ ಬೆದರಿಸುತ್ತಿರುವ ವಿಡಿಯೋವನ್ನೂ ಅಖಿಲೇಶ್ ಶೇರ್ ಮಾಡಿದ್ದಾರೆ.
ಇದನ್ನೂ ಓದಿ: ಇನ್ನೂ ಮೂರು ವರ್ಷ ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲಲ್ಲ: ಸಚಿವ ಈಶ್ವರ ಖಂಡ್ರೆ
ಗೋಣಿ ಚೀಲದಲ್ಲಿ ಮಹಿಳೆ ಶವ ಪತ್ತೆ
ಉತ್ತರ ಪ್ರದೇಶದ ಕರ್ಹಾಲ್ ಕ್ಷೇತ್ರದಲ್ಲಿ 23 ವರ್ಷದ ಮಹಿಳೆ ಶವ ಗೋಣಿ ಚೀಲದಲ್ಲಿ ಪತ್ತೆಯಾಗಿದೆ. ಬುಧವಾರ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದಕ್ಕೆ ಈ ಕೊಲೆ ನಡೆದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
‘ಮಹಿಳೆಗೆ ಉಪಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕದಂತೆ ಸ್ಥಳೀಯ ಸಮಾಜವಾದಿ ಪಕ್ಷದ ಕಾರ್ಯಕರ್ತರೊಬ್ಬರು ಒತ್ತಡ ಹೇರುತ್ತಿದ್ದರು. 3 ದಿನಗಳ ಹಿಂದೆ ಎಸ್‌ಪಿ ಪಕ್ಷದ ಪ್ರಶಾಂತ್ ಯಾದವ್ ನಮ್ಮ ಮನೆಗೆ ಬಂದು ಸಮಾಜವಾದಿ ಪಕ್ಷದ ಸೈಕಲ್ ಚಿಹ್ನೆಗೆ ಮತ ಹಾಕುವಂತೆ ಕೇಳಿದ್ದರು. ಆದರೆ ನಮ್ಮ ಕುಟುಂಬಕ್ಕೆ ಪಿಎಂ ಆವಾಸ್ ಯೋಜನೆಯಡಿ ಮನೆ ದೊರೆತಿರುವುದರಿಂದ ಬಿಜೆಪಿ ಹಾಕುತ್ತೇವೆ ಎಂದು ಹೇಳಿದ್ದೆವು. ಈ ಕಾರಣಕ್ಕೆ ಕೊಲೆ ನಡೆದಿದೆ ’ ಎಂದು ಮೃತ ಮಹಿಳೆ ಕುಟುಂಬಸ್ಥರು ಹೇಳಿದ್ದಾರೆ.
ಮಹಿಳೆಯ ತಂದೆ ನೀಡಿದ ದೂರಿನನ್ವಯ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ಸಾವಿನ ವಿಚಾರವಾಗಿ ಸಮಾಜವಾದಿ ಪಕ್ಷದ ನಡೆಗೆ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.
ಇದನ್ನೂ ಓದಿ: ಮತ ಸಮರ ಅಂತ್ಯ; ಮಹಾರಾಷ್ಟ್ರದಲ್ಲಿ ಶೇಕಡಾ 4ರಷ್ಟು ಮತದಾನ ಹೆಚ್ಚಳ