Latest Videos

ಹೋರಾಟಗಾರರ ಆಶ್ರಯ ತಾಣವಾಗಿತ್ತು ವಿದ್ಯಾರ್ಥಿನಿಲಯ

By Suvarna NewsFirst Published Jun 28, 2022, 2:43 PM IST
Highlights

* ಸ್ವಾತಂತ್ರ್ಯ ಹೋರಾಟಗಾರರಿಗೆ ಆಶ್ರಯ ನೀಡಿದ್ದ ಶ್ರೀಗಳು

* ಹೋರಾಟಗಾರರ ಆಶ್ರಯ ತಾಣವಾಗಿತ್ತು ವಿದ್ಯಾರ್ಥಿನಿಲಯ

* ವಿಷಯ ತಿಳಿದು ಶ್ರೀಗಳನ್ನು ಬಂಧಿಸಲು ಮುಂದಾಗಿದ್ದ ಬ್ರಿಟಿಷರು

* ಕಣ್ತಪ್ಪಿಸಿ ಗೂಡ್‌್ಸರೈಲಿನಲ್ಲಿ ಕೆಳದಿಮಠಕ್ಕೆ ಹೋಗಿದ್ದ ಶ್ರೀಗಳು

ಸಿ.ಎ.ಇಟ್ನಾಳಮಠ

ಸ್ವಾತಂತ್ರ್ಯ ಹೋರಾಟದಲ್ಲಿ ಸದ್ದಿಲ್ಲದೆ ಸಾವಿರಾರು ಜನರು ಹೋರಾಟ ನಡೆಸಿದ್ದಾರೆ. ಆದರೆ, ಅದರಲ್ಲಿ ಬೆಳಕಿಗೆ ಬರುವುದು ಕೆಲವರು ಮಾತ್ರ. ಅದರಂತೆಯೇ ಸ್ವಾತಂತ್ರ್ಯ ಚಳವಳಿಯಲ್ಲಿ ಹೋರಾಟಗಾರರಿಗೆ ಆಶ್ರಯ ನೀಡಿದ್ದಲ್ಲದೆ, ತಮ್ಮದೆಯಾದ ಕೊಡುಗೆ ನೀಡಿದವರು ಬೈಲಹೊಂಗಲ ತಾಲೂಕಿನ ನಾಗನೂರು ಮಠದ ಪೀಠಾಧಿಪತಿಗಳಾಗಿದ್ದ ಡಾ.ಶಿವಬಸವ ಸ್ವಾಮೀಜಿಯವರು. ಬೆಳಗಾವಿಯಲ್ಲಿ ಅವರು ಬಡ ವಿದ್ಯಾರ್ಥಿಗಳಿಗಾಗಿ ಸ್ಥಾಪನೆ ಮಾಡಿದ್ದ ಉಚಿತ ವಿದ್ಯಾರ್ಥಿ ನಿಲಯದಲ್ಲಿ(ಅಂದು ಪ್ರಸಾದ ನಿಲಯ ಎನ್ನುತ್ತಿದ್ದರು) ಸ್ವಾತಂತ್ರ್ಯ ಹೋರಾಟಗಾರರಿಗೂ ಆಶ್ರಯ ನೀಡಿದ್ದರು. ಮಾತ್ರವಲ್ಲದೆ ಅವರಿಗೆ ಉಚಿತ ಊಟದ ವ್ಯವಸ್ಥೆಯನ್ನೂ ಕಲ್ಪಿಸಿದ್ದರು.

ಬೆಳಗಾವಿಯಲ್ಲಿ ಚಲೇಜಾವ್‌ ಚಳವಳಿಯ ಕಾವು ಆರಂಭವಾಗಿ ವಿಕೋಪ ಮಟ್ಟಕ್ಕೆ ಹೋದಾಗ ಚಳವಳಿಗಾರರನ್ನು ಹಿಡಿದು ಜೈಲಿಗೆ ಹಾಕುವ ಕೆಲಸವನ್ನು ಬ್ರಿಟಿಷರು ಆರಂಭಿಸಿದ್ದರು. ಆಗ ಹೋರಾಟಗಾರರು ಭೂಗತರಾಗಿ ಹೋರಾಟ ಮುಂದುವರಿಸಬೇಕಾಯಿತು. ಅವರಾರ‍ಯರೂ ತಮ್ಮ ಊರುಗಳಿಗೆ ಮಾತ್ರವಲ್ಲ ತಮ್ಮ ಆಪ್ತರ ಮನೆಗಳಿಗೂ ಹೋಗುವಂತಹ ಪರಿಸ್ಥಿತಿ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಆಪತ್ಬಾಂಧವನಾದದ್ದು ಈ ಉಚಿತ ಪ್ರಸಾದ ನಿಲಯ.

ಮುಂದೆ ಚಳವಳಿ ಮತ್ತಷ್ಟುಗಂಭೀರ ಸ್ವರೂಪ ಪಡೆದಾಗ ವಿದ್ಯಾರ್ಥಿನಿಲಯದಲ್ಲಿ ಉಳಿದುಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಯಿತು. ಆಗ ಶ್ರೀಗಳು ಒಂದು ಉಪಾಯ ಹುಡುಕಿದರು. ಅಡುಗೆಯವರಿಗೆ ಸುಮಾರು ನೂರಾರು ಜನಕ್ಕೆ ಸಾಕಾಗುವಷ್ಟುಪ್ರಸಾದ ಸಿದ್ಧಪಡಿಸಿ ಮನೆಗೆ ತೆರಳುವಂತೆ ತಿಳಿಸಿದ್ದರು. ಮಧ್ಯರಾತ್ರಿ ಸ್ವಾಮೀಜಿ ಎದ್ದು ಮಾಡಿದ ಅಡುಗೆ ಎಲ್ಲ ಪಾತ್ರೆಗಳನ್ನು ಹೊತ್ತು ಮಠದ ಹಿತ್ತಲ ಬಾಗಿಲಲ್ಲಿ ಇಡುತ್ತಿದ್ದರು. ಆಗ ಹೋರಾಟಗಾರರು ರಾತ್ರಿ ಬಂದು ಊಟ ಮಾಡಿ ಹೋಗುತ್ತಿದ್ದರು.

ಸ್ವಾಮೀಜಿಗಳ ಬಂಧನಕ್ಕೆ ಆದೇಶ:

ಸ್ವಾಮೀಜಿಯ ಚಲನವಲನ ಕಡೆ ನಿಗಾ ಇಟ್ಟಿದ್ದ ಬ್ರಿಟಿಷರಿಗೆ ಈ ವಿಷಯ ಗೊತ್ತಾಗಿ ಅವರನ್ನು ಬಂಧಿಸಲು ಆದೇಶ ಹೊರಡಿಸಿದರು. ಇದು ಸ್ವಾಮೀಜಿಯವರ ನಿಷ್ಠಾವಂತ ಭಕ್ತರಾದ ಜಿಗಜಿನ್ನಿ ವಕೀಲರಿಗೆ ತಿಳಿಯಿತು. ತಕ್ಷಣ ವಕೀಲರು ಸ್ವಾಮೀಜಿಯವರಿಗೆ ಭೂಗತವಾಗಲು ಸಲಹೆ ನೀಡಿದರು. ನಂತರ ಶ್ರೀಗಳು ಪ್ರಸಾದ ನಿಲಯ ಜವಾಬ್ದಾರಿಯನ್ನು ಬೇರೆಯವರಿಗೆ ಒಪ್ಪಿಸಿ, ರಾತ್ರಿ ಒಂದು ಕಂಬಳಿಯನ್ನು ಮುಖಕ್ಕೆ ಸುತ್ತಿಕೊಂಡು ಬೆಳಗಾವಿ ರೈಲು ನಿಲ್ದಾಣಕ್ಕೆ ಬಂದವರು ಒಂದು ಗೂಡ್‌್ಸ ರೈಲು ಏರಿ ಘಟಪ್ರಭಾ ನಿಲ್ದಾಣಕ್ಕೆ ಬರುತ್ತಾರೆ. ಅಷ್ಟರಲ್ಲಿ ಹುಬ್ಬಳ್ಳಿ ಕಡೆ ಹೋಗುವ ಜನದಟ್ಟಣೆ ಇರುವ ರೈಲು ಬರುತ್ತದೆ. ಅದನ್ನೇರಿ ಮಾರನೆ ದಿನ ನಸುಕಿಗೆ ಬ್ಯಾಡಗಿಗೆ ಬಂದು ಇಳಿದರು. ಅಲ್ಲಿಂದ ಸಾಗರದ ಮೂಲಕ ಕೆಳದಿ ಮಠಕ್ಕೆ ಹೊರಟರು. ಕೆಳದಿ ಮಠ ಕಾಡು ಬೆಟ್ಟದಲ್ಲಿ ಇದ್ದಂತೆ ಇತ್ತು. ಇಲ್ಲಿ ಇವರನ್ನು ಯಾರೂ ಹಿಡಿಯುವ ಸಾಧ್ಯತೆ ಇರಲಿಲ್ಲ. ಈ ಕಾವು ಮುಗಿಯುವವರೆಗೆ ಅಲ್ಲಿಯೇ ಉಳಿದುಕೊಂಡರು.

ತಲುಪುವುದು ಹೇಗೆ?

ಬೆಳಗಾವಿಯ ಮಾರುತಿ ಗಲ್ಲಿಯಲ್ಲಿ ಡಾ.ಶಿವಬಸವ ಸ್ವಾಮೀಜಿಯವರು ಆರಂಭಿಸಿರುವ ವಸತಿ ನಿಲಯ ಈಗಲೂ ಇದೆ. ಬೆಳಗಾವಿ ಬಸ್‌ ನಿಲ್ದಾಣದಿಂದ 2 ಕಿ.ಮೀ. ದೂರದಲ್ಲಿದೆ. ರೈಲ್ವೆ ನಿಲ್ದಾಣದಿಂದ ಈ ಸ್ಥಳ ಕೇವಲ 1 ಕಿ.ಮೀ. ದೂರದಲ್ಲಿದೆ.

click me!