India@75: ಪಿಕೆಟಿಂಗ್‌ ಚಳವಳಿಗೆ ಸಾಕ್ಷಿ ಮಂಡ್ಯದ ಫ್ರೆಂಚ್‌ ರಾಕ್ಸ್‌ ಸಂತೆ

By Kannadaprabha NewsFirst Published Jun 27, 2022, 12:43 PM IST
Highlights

ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ 1942ರ ಕ್ವಿಟ್‌ ಇಂಡಿಯಾ ಅಥವಾ ಚಲೇಜಾವ್‌ ಚಳವಳಿ ಕಿಚ್ಚು ಮಂಡ್ಯದಲ್ಲೂ ರೋಷಾಗ್ನಿಯಂತೆ ಆವರಿಸಿತು. ಆ ಘಟನೆಗೆ ಇಂದಿಗೂ ಸಾಕ್ಷಿಯಾಗಿ ನಿಂತಿರುವುದು ಪಾಂಡವಪುರದ ಫ್ರೆಂಚ್‌ ರಾಕ್ಸ್‌ ಸಂತೆ.

ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ 1942ರ ಕ್ವಿಟ್‌ ಇಂಡಿಯಾ ಅಥವಾ ಚಲೇಜಾವ್‌ ಚಳವಳಿ ಕಿಚ್ಚು ಮಂಡ್ಯದಲ್ಲೂ ರೋಷಾಗ್ನಿಯಂತೆ ಆವರಿಸಿತು. ಆ ಘಟನೆಗೆ ಇಂದಿಗೂ ಸಾಕ್ಷಿಯಾಗಿ ನಿಂತಿರುವುದು ಪಾಂಡವಪುರದ ಫ್ರೆಂಚ್‌ ರಾಕ್ಸ್‌ ಸಂತೆ. ಇಲ್ಲಿ ನಡೆದ ಪಿಕೆಟಿಂಗ್‌ ಚಳವಳಿಯಲ್ಲಿ ಹತ್ತಾರು ಗ್ರಾಮಗಳ ನೂರಾರು ಹೋರಾಟಗಾರರು ಭಾಗವಹಿಸಿದ್ದರು. ಇದೇ ಸ್ಥಳದಲ್ಲಿ ಅನೇಕ ಮಂದಿಯನ್ನು ಬ್ರಿಟಿಷ್‌ ಪೊಲೀಸರು ಬಂಧಿಸಿದ್ದರು.

ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯು 8 ಆಗಸ್ಟ್‌ 1942ರಲ್ಲಿ ಮುಂಬೈನಲ್ಲಿ ಸಮಾವೇಶಗೊಂಡು ಮಹಾತ್ಮಗಾಂಧಿ ನೇತೃತ್ವದಲ್ಲಿ ಚಲೇಜಾವ್‌ ಚಳವಳಿ ಗೊತ್ತುವಳಿಯನ್ನು ಅಂಗೀಕರಿಸಿತು. ನಂತರ ಬ್ರಿಟಿಷರು ಗಾಂಧೀಜಿ ಅವರನ್ನು ಬಂಧಿಸಿದಾಗ ದೇಶದ ಅನೇಕ ಭಾಗಗಳಲ್ಲಿ ಚಳವಳಿ ಉಗ್ರಸ್ವರೂಪ ಪಡೆಯಿತು.

ಅದರ ಬಿಸಿ ಮಂಡ್ಯಕ್ಕೂ ತಟ್ಟಿಜನಜಾಗೃತಿಯನ್ನು ಉಂಟುಮಾಡಿತು. ಬ್ರಿಟಿಷರ ವಿರುದ್ಧ ಮಂಡ್ಯ ಜಿಲ್ಲೆಯಲ್ಲೂ ಕಾರ್ಮಿಕರು ಹರತಾಳವನ್ನು ನಡೆಸಿದರು. ಶಾಲೆ-ಕಾಲೇಜುಗಳನ್ನು ಬಹಿಷ್ಕರಿಸಿ ವಿದ್ಯಾರ್ಥಿಗಳು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದರು.

India@75: ಹೋರಾಟಕ್ಕೆ ಶಕ್ತಿ ತುಂಬಿದ ಬಳ್ಳಾರಿಯ ಮಲ್ಲಸಜ್ಜನ ವ್ಯಾಯಾಮ ಶಾಲೆ

ಸಾರಾಯಿ ಅಂಗಡಿಗೆ ಬೆಂಕಿ: ಗ್ರಾಮೀಣ ಪ್ರದೇಶದ ವಾರದ ಸಂತೆಗಳಲ್ಲಿ ಸುಂಕ ಕೊಡುವುದನ್ನು ವಿರೋಧಿಸಿ ಕರ ನಿರಾಕರಣೆ ಚಳವಳಿ ನಡೆಸಿದರು. ಆ ಸಂದರ್ಭದಲ್ಲಿ ಸಾರಾಯಿ ಅಂಗಡಿಗಳ ಎದುರು ಪಿಕೆಟಿಂಗ್‌ ನಡೆಸಿದರು. ಪ್ರಮುಖವಾಗಿ ಪಾಂಡವಪುರದ ಫ್ರೆಂಚ್‌ ರಾಕ್ಸ್‌ ಸಂತೆಯಲ್ಲಿ ನಡೆದ ಪಿಕೆಟಿಂಗ್‌ ಚಳವಳಿಯಲ್ಲಿ ಕ್ಯಾತನಹಳ್ಳಿ, ಲಕ್ಷ್ಮೇಸಾಗರ ಮತ್ತು ಇನಾಂ ಹಿರೇಮರಳಿ ಗ್ರಾಮಗಳ ಜನರು ಪಾಲ್ಗೊಂಡಿದ್ದರು.

ಪಾಂಡವಪುರದಲ್ಲಿ ಅ.15ರಂದು ಸಾರಾಯಿ ಅಂಗಡಿಗೆ ಬೆಂಕಿ ಹಚ್ಚಿ ಸಂತೆ ಸುಂಕ ನೀಡಬಾರದು ಎಂದು ಪ್ರಚಾರ ಮಾಡಿ ವೈ.ಸಿ.ಮರಿಯಪ್ಪನವರ ಅಧ್ಯಕ್ಷತೆಯಲ್ಲಿ ಮುನಿಸಿಪಲ್‌ ಕಚೇರಿ ಎದುರು ಸಾರ್ವಜನಿಕ ಸಭೆ ನಡೆಸಲಾಯಿತು. ಪಿಕೆಟಿಂಗ್‌ ಚಳವಳಿ ನಡೆಸುತ್ತಿದ್ದವರ ಪೈಕಿ ಅ.15 ರಂದು 25 ಜನರನ್ನು, ಅ.17ರಂದು ತೆಂಡೇಕೆರೆಯಲ್ಲಿ 7 ಜನರನ್ನು ಬಂಧಿಸುವುದರೊಂದಿಗೆ ಚಳವಳಿಯನ್ನು ಹತ್ತಿಕ್ಕಲಾಯಿತು.

ಅಲ್ಲಲ್ಲಿ ಪ್ರಚಾರ ಭಾಷಣ: ಮೈಸೂರು ಸಂಸ್ಥಾನದ ಚಳವಳಿ ನಾಯಕತ್ವ ವಹಿಸಿದ್ದ ಕೆ.ಟಿ.ಭಾಷ್ಯಂ, ಮಳವಳ್ಳಿ ವೀರಪ್ಪ ಸೇರಿದಂತೆ ಇನ್ನಿತರರು ಮುಂಬೈನಿಂದ ಯಶವಂತಪುರ ರೈಲು ನಿಲ್ದಾಣಕ್ಕೆ ಬಂದಿಳಿದಾಗ ಅವರನ್ನು ಬಂಧಿಸಲಾಯಿತು. ಅದೇ ಸಮಯದಲ್ಲಿ ಮಂಡ್ಯ ಜಿಲ್ಲೆಯೊಳಗೆ ಪ್ರತಿಭಟನೆಯ ಕಿಚ್ಚನ್ನು ಹರಡುತ್ತಿದ್ದ ಸಾಹುಕಾರ್‌ ಚನ್ನಯ್ಯ, ಎಚ್‌.ಕೆ.ವೀರಣ್ಣಗೌಡ, ಪಾಲಹಳ್ಳಿ ಸೀತಾರಾಮಯ್ಯ, ಕೆಂಗಲ್‌ ಹನುಮಂತಯ್ಯ, ಮಳವಳ್ಳಿ ಎಚ್‌.ಕೆ.ರಾಮಚಂದ್ರಯ್ಯ, ಪಿ.ಎನ್‌.ಜವರಪ್ಪಗೌಡ, ಅರಕೆರೆ ಎಂ.ಪುಟ್ಟೇಗೌಡ, ಬಂದೀಗೌಡ, ಎಚ್‌.ಸಿ.ದಾಸಪ್ಪ ಸೇರಿದಂತೆ ಹಲವಾರು ಮಂದಿ ಜಿಲ್ಲಾದ್ಯಂತ ಸಂಚರಿಸಿ ಪ್ರಚಾರ ಭಾಷಣಗಳನ್ನು ನಡೆಸುವುದರೊಂದಿಗೆ ಚಲೇಜಾವ್‌ ಚಳವಳಿಯನ್ನು ಯಶಸ್ವಿಗೊಳಿಸಿದರು.

India@75:ಸ್ವಾತಂತ್ರ್ಯ ಚಳವಳಿಗೆ ಹೊಸ ಉತ್ಸಾಹ ತಂದುಕೊಟ್ಟ ಬಾರ್ಡೋಲಿ ಗ್ರಾಮ!

ಶಿವಪುರ ಧ್ವಜ ಸತ್ಯಾಗ್ರಹ ಹೋರಾಟ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದಲ್ಲಿ ಒಂದು ದೊಡ್ಡ ಮೈಲಿಗಲ್ಲು. ಅದರಷ್ಟುರೌದ್ರರೂಪವನ್ನು ಕ್ವಿಟ್‌ ಇಂಡಿಯಾ ಚಳವಳಿ ಪಡೆದುಕೊಳ್ಳದಿದ್ದರೂ ಪ್ರಖರತೆಯಿಂದ ಕೂಡಿತ್ತು. ಸ್ವಾತಂತ್ರ್ಯ ಹೋರಾಟದ ಬಗ್ಗೆ ಜನರನ್ನು ಜಾಗೃತಗೊಳಿಸುವಲ್ಲಿ ಪರಿಣಾಮಕಾರಿ ಪಾತ್ರ ವಹಿಸಿತ್ತು.

- ಮಂಡ್ಯ ಮಂಜುನಾಥ

click me!