India@75: ಆಂಗ್ಲರಿಗೆ ಸಿಂಹಸ್ವಪ್ನವಾಗಿದ್ದ ವಿಜಯಪುರ ಇಂಚಗೇರಿ ಮಠ

By Kannadaprabha NewsFirst Published Jun 29, 2022, 10:18 AM IST
Highlights

ಸ್ವಾತಂತ್ರ್ಯ ಹೋರಾಟದಲ್ಲಿ ನೇರವಾಗಿ ಭಾಗವಹಿಸಿದ್ದ ಮಠಗಳ ಪೈಕಿ ವಿಜಯಪುರ (Vijayapura) ಜಿಲ್ಲೆಯ ಇಂಡಿ ತಾಲೂಕಿನ ಇಂಚಗೇರಿ ಮಠವೂ (Inchageri Mutt) ಒಂದು. ಇಲ್ಲಿನ ಮಠಾಧೀಶರಾಗಿದ್ದ ಮಾಧವಾನಂದ ಪ್ರಭುಗಳು ಬ್ರಿಟಿಷರಿಗೆ ಅಕ್ಷರಶಃ ಸಿಂಹಸ್ವಪ್ನವಾಗಿ ಕಾಡಿದ್ದರು.

ಸ್ವಾತಂತ್ರ್ಯ ಹೋರಾಟದಲ್ಲಿ ನೇರವಾಗಿ ಭಾಗವಹಿಸಿದ್ದ ಮಠಗಳ ಪೈಕಿ ವಿಜಯಪುರ (Vijayapura) ಜಿಲ್ಲೆಯ ಇಂಡಿ ತಾಲೂಕಿನ ಇಂಚಗೇರಿ ಮಠವೂ (Inchageri Mutt) ಒಂದು. ಇಲ್ಲಿನ ಮಠಾಧೀಶರಾಗಿದ್ದ ಮಾಧವಾನಂದ ಪ್ರಭುಗಳು ಬ್ರಿಟಿಷರಿಗೆ ಅಕ್ಷರಶಃ ಸಿಂಹಸ್ವಪ್ನವಾಗಿ ಕಾಡಿದ್ದರು.

ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಯಲ್ಲಿ ಆಂಗ್ಲರ ವಿರುದ್ಧ ತೊಡೆತಟ್ಟಲು ಅಂದು ಇಂಚಗೇರಿ ಮಠ ಪ್ರಮುಖ ವೇದಿಕೆಯಾಗಿತ್ತು. ಮಠದ ಸಾವಿರಾರು ಅನುಯಾಯಿಗಳನ್ನು ಬೆನ್ನಿಗೆ ಕಟ್ಟಿಕೊಂಡು ಬ್ರಿಟಿಷರ ವಿರುದ್ಧ ಉಗ್ರವಾಗಿ ಹೋರಾಡಿದ್ದ ಮಠದ ಮಾಧವಾನಂದ ಪ್ರಭುಗಳ ಬದುಕೇ ಅತ್ಯಂತ ರೋಚಕವಾದದ್ದು.

ಹೋರಾಟಗಾರರ ಆಶ್ರಯ ತಾಣವಾಗಿತ್ತು ವಿದ್ಯಾರ್ಥಿ ನಿಲಯ

1929ರಲ್ಲಿ ಇನ್ನೂ ಚಿಗುರು ಮೀಸೆಯ ಯುವಕನಾಗಿದ್ದ ಮಾಧವಾನಂದರು, ಹೇಗಾದರೂ ಮಾಡಿ ಬ್ರಿಟಿಷರನ್ನು ಹುಟ್ಟಡಗಿಸಲು ನಿರ್ಧರಿಸಿ ತಮ್ಮ ಅನುಯಾಯಿಗಳೊಂದಿಗೆ ಸೇರಿ ತಮ್ಮ ಸುತ್ತಮುತ್ತಲಿನ ಹುಲಕೋಟೆ, ಸಾವಳಗಿ, ಇಂಚಗೇರಿ ಪೊಲೀಸ್‌ ಠಾಣೆಗಳಿಗೆ ಮುತ್ತಿಗೆ ಹಾಕಿ ಶಸ್ತ್ರಾಸ್ತ್ರಗಳನ್ನು ಅಪಹರಿಸಿದ್ದರು. ಹಲವು ಅಂಚೆ, ನಾಡ ಕಚೇರಿಗೆ ಬೆಂಕಿ ಹಚ್ಚಿದ್ದರು. ರೈಲು ಹಳಿಗಳನ್ನು ಕಿತ್ತುಹಾಕಿ ಠಾಣೆಗಳನ್ನು ಧ್ವಂಸಗೊಳಿಸಿ ಆಂಗ್ಲರ ಎದೆಯಲ್ಲಿ ನಡುಕ ಹುಟ್ಟಿಸಿದ್ದರು.

ಇನ್ನು ಶ್ರೀಗಳ ನೇತೃತ್ವದಲ್ಲಿ ಬ್ರಿಟಿಷ್‌ ಸರ್ಕಾರಕ್ಕೆ ಸೇರಬೇಕಿದ್ದ ಬೊಕ್ಕಸವನ್ನೇ ದೋಚಿದ್ದು ಆ ಸಮಯದಲ್ಲಿ ಬಾರಿ ಸಾಹಸದ ಪ್ರಕರಣವಾಗಿತ್ತು. ಇದರ ಫಲವಾಗಿ ಅವರು 27 ಬಾರಿ ಜೈಲುವಾಸ ಅನುಭವಿಸಿದ್ದರು. ಅವರನ್ನು ಕೆಲಕಾಲ ಮುಂಬೈನ ಯರವಾಡ ಜೈಲಿನಲ್ಲಿ ಶಿಕ್ಷೆ ಅನುಭವಿಸುವಂತೆ ಮಾಡಲಾಗಿತ್ತು.

ಸ್ವಂತ ಬಂದೂಕು ಘಟಕ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಹಾಗೂ ಮಹಾರಾಷ್ಟ್ರದ ಜತ್‌ ತಾಲೂಕಿನ ಸೊನ್ಯಾಳದಲ್ಲಿ ತಾವೇ ಎರಡು ಬಂದೂಕು ಫ್ಯಾಕ್ಟರಿ ನಿರ್ಮಿಸಿ ಸಶಸ್ತ್ರವಾಗಿ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಇದರೊಂದಿಗೆ ತಮ್ಮೊಂದಿಗೆ 20 ಸಾವಿರಕ್ಕೂ ಅಧಿಕ ಭಕ್ತರನ್ನು ಹೋರಾಟದಲ್ಲಿ ಧುಮುಕಿಸಿದ್ದವರು ಶ್ರೀಗಳು.

ಮಾಧವಾನಂದ ಪ್ರಭುಗಳು ನೇತಾಜಿ ಸುಭಾಷ್‌ಚಂದ್ರ ಬೋಸ್‌ ಮತ್ತು ಮಹಾತ್ಮ ಗಾಂಧೀಜಿಯವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಅವರ ವಿಭಿನ್ನ ಹೋರಾಟದ ನಡೆಗಳನ್ನು ಕಂಡು ಬೆಚ್ಚಿಬಿದ್ದಿದ್ದ ಬ್ರಿಟಿಷರು 1938ರಲ್ಲಿ ಅವರನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲುವಂತೆ ಆದೇಶ ಮಾಡಿದ್ದರು.

India@75:ಪಿಕೆಟಿಂಗ್ ಚಳವಳಿಗೆ ಸಾಕ್ಷಿ ಮಂಡ್ಯದ ಫ್ರೆಂಚ್ ರಾಕ್ಸ್ ಸಂತೆ!

ಬೆಚ್ಚಿಬಿದ್ದ ಪೊಲೀಸರು!: ಅದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಭಕ್ತರನ್ನು ಒಗ್ಗೂಡಿಸಲು ಶ್ರೀಗಳು ತಮ್ಮ ವಾಹನದಲ್ಲಿ ಹೊರಟಿದ್ದರು. ಆಗ ಗೋಕಾಕ್‌ ಬಳಿ ಬ್ರಿಟಿಷ್‌ ಪೊಲೀಸರು ಇವರ ಮೇಲೆ ಹಲವು ಸುತ್ತು ಗುಂಡು ಹಾರಿಸಿದ್ದರು. ಆದರೆ ಸ್ಥಳಕ್ಕೆ ತೆರಳಿ ನೋಡಿದಾಗ ಅಲ್ಲಿ ಮಾಧವಾನಂದರು ಇರಲೇ ಇಲ್ಲ. ಅವರು ಗೋಕಾಕ್‌ ಬಳಿಯ ಗ್ರಾಮವೊಂದರಲ್ಲಿ ನಡೆದ ಗುಪ್ತ ಸಭೆಯೊಂದರಲ್ಲಿ ಪಾಲ್ಗೊಂಡಿದ್ದರು. ಇದನ್ನು ಮಾಧವಾನಂದರ ಪವಾಡ ಎಂದೂ ಭಕ್ತರು ಬಣ್ಣಿಸುತ್ತಾರೆ. ಈ ಚಮತ್ಕಾರ ಕಂಡಿದ್ದ ಬ್ರಿಟಿಷ್‌ ಪೊಲೀಸರು ಮತ್ತೆಂದಿಗೂ ಮಾಧವಾನಂದರ ಮೇಲೆ ಗುಂಡು ಹಾರಿಸುವ ದುಸ್ಸಾಹಸ ಮಾಡಲಿಲ್ಲ.

ತಲುಪುವುದು ಹೇಗೆ?

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಇಂಚಗೇರಿ ಗ್ರಾಮವು ಜಿಲ್ಲಾ ಕೇಂದ್ರ ವಿಜಯಪುರದಿಂದ 38 ಕಿ.ಮೀ. ದೂರದಲ್ಲಿದೆ. ವಿಜಯಪುರದಿಂದ ಬೆಂಗಳೂರು-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 51ರಲ್ಲಿ ಬರುವ ಹೂರ್ತಿ ಗ್ರಾಮಕ್ಕೆ ಬರಬೇಕು. ಅಲ್ಲಿಂದ ಕೇವಲ 8 ಕಿ.ಮೀ. ಕ್ರಮಿಸಿದರೆ ಇಂಚಗೇರಿ ಮಠಕ್ಕೆ ಹೋಗಬಹುದು.

- ಮಲ್ಲಿಕಾರ್ಜುನ ಕರಿಯಪ್ಪನವರ

click me!