India@75: ವಿಜಯಪುರದ ಕೋಟ್ನಾಳದಲ್ಲಿ ಕಟ್ಟಲಾಗಿತ್ತು ಬ್ರಿಟಿಷರ ವಿರುದ್ಧ ಸೈನ್ಯ

By Suvarna News  |  First Published Jun 9, 2022, 11:54 AM IST

ವಿಜಯಪುರ ಜಿಲ್ಲೆಯ ಕೋಟ್ನಾಳ ಎಂಬ ಪುಟ್ಟಗ್ರಾಮ ಬ್ರಿಟಿಷರಿಗೆ ಸೆಡ್ಡು ಹೊಡೆದು ನಿಂತ ಗಂಡುಮೆಟ್ಟಿನ ನೆಲ. ಇಲ್ಲಿನ ಕೋಟೆಯಲ್ಲಿ ಸುಮಾರು 5 ಸಾವಿರ ಮಂದಿಯ ಬೃಹತ್‌ ಸೈನ್ಯವನ್ನು ಕಟ್ಟಿಯುದ್ಧತರಬೇತಿ ನೀಡಲಾಗಿತ್ತು.


ವಿಜಯಪುರ (ಜೂ. 09): ಜಿಲ್ಲೆಯ ಕೋಟ್ನಾಳ ಎಂಬ ಪುಟ್ಟಗ್ರಾಮ ಬ್ರಿಟಿಷರಿಗೆ ಸೆಡ್ಡು ಹೊಡೆದು ನಿಂತ ಗಂಡುಮೆಟ್ಟಿನ ನೆಲ. ಇಲ್ಲಿನ ಕೋಟೆಯಲ್ಲಿ ಸುಮಾರು 5 ಸಾವಿರ ಮಂದಿಯ ಬೃಹತ್‌ ಸೈನ್ಯವನ್ನು ಕಟ್ಟಿಯುದ್ಧತರಬೇತಿ ನೀಡಲಾಗಿತ್ತು. ರಹಸ್ಯವಾಗಿ ಮದ್ದುಗುಂಡುಗಳನ್ನು ತಯಾರಿಸಲಾಗಿತ್ತು. ಇಲ್ಲಿನ ಬಸವಲಿಂಗಪ್ಪ ದೇಶಮುಖ ಅವರ ಕುಟುಂಬ ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿತು. ಬ್ರಿಟಿಷರಿಗೆ ಪಾಲಿಗೆ ಸಿಂಹಸ್ವಪ್ನವಾಗಿದ್ದ ಈ ಕುಟುಂಬ ಸಾವೇ ಎದುರಿಗೆ ನಿಂತಿದ್ದರೂ ಹೋರಾಡುವುದನ್ನು ಮಾತ್ರ ಬಿಟ್ಟಿರಲಿಲ್ಲ.

ವೀರ ಸೇನಾನಿ ಬಸಲಿಂಗಪ್ಪ ದೇಶಮುಖ ಅವರು ವೆಂಕಟಪ್ಪ ನಾಯಕನ ಜೊತೆಗೂಡಿ ಬ್ರಿಟಿಷರ ವಿರುದ್ಧ ಹೋರಾಡಲು ಅಣಿಯಾಗಿದ್ದರು. ಆ ಕಾರಣಕ್ಕಾಗಿಯೇ ಅವರು ಕೋಟ್ನಾಳ, ಜಂಬಗಿ ಗ್ರಾಮಗಳಲ್ಲಿ ಸುಮಾರು 5 ಸಾವಿರ ಸೈನಿಕರನ್ನು ಒಳಗೊಂಡಿದ್ದ ದೊಡ್ಡ ಸೈನ್ಯ ಕಟ್ಟಿದ್ದರು.

Tap to resize

Latest Videos

India@75: ಸ್ವಾತಂತ್ರ್ಯ ಹೋರಾಟದ ಸ್ಪೂರ್ತಿಯ ತಾಣ ಮೈಸೂರಿನ ಸುಬ್ಬರಾಯನ ಕೆರೆ

ಮಾತ್ರವಲ್ಲದೆ ಅವರಿಗೆ ಯುದ್ಧದ ರಣತಂತ್ರಗಳನ್ನು ಹೇಳಿಕೊಡಲು ಇಲ್ಲಿನ ಕೋಟೆಯಲ್ಲಿ ಯುದ್ಧ ತರಬೇತಿ ಶಾಲೆಗಳನ್ನು ತೆರೆದಿದ್ದರು. ಈ ಕೋಟೆಯ ಹತ್ತಿರ ನಗಾರಿ ಬುರುಜು ಇದ್ದು ಶತ್ರಸೈನ್ಯ ದೂರದಿಂದ ಬರುತ್ತಿರುವಾಗಲೇ ವೀಕ್ಷಿಸಲು ಸಾಧ್ಯವಿತ್ತು. ಕೋಟೆಯಲ್ಲಿ ಕುದುರೆ ಲಾಯಗಳ ದೊಡ್ಡ ವೀಕ್ಷಣಾ ಗೋಪೂರವೂ ಇದೆ. ಕೋಟ್ನಾಳದಲ್ಲಿ ಮದ್ದುಗುಂಡು, ತುಪಾಕಿಗಳು, ಶಸ್ತ್ರಾಸ್ತ್ರಗಳನ್ನು ತಯಾರಿಸಿ ಸುರಪುರಕ್ಕೆ ಕಳುಹಿಸುವ ವೇಳೆ ಬ್ರಿಟಿಷರು ವಶಪಡಿಸಿಕೊಂಡರು. ಕೋಟೆಗಳನ್ನು ಭಗ್ನಗೊಳಿಸಿದರು.

ಆದರೂ ನಿಲ್ಲದ ಹೋರಾಟ:

ಆದರೂ ಬಸಲಿಂಗಪ್ಪ ದೇಶಮುಖ ಅವರು ಬ್ರಿಟಿಷರ ವಿರುದ್ಧ ನಿರಂತರ ಹೋರಾಟ ಮುಂದುವರಿಸಿದ್ದರು. ಜನರಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸುತ್ತಿದ್ದರು. ಬ್ರಿಟಿಷರ ವಿರುದ್ಧ ಹೋರಾಡಲು ಕೋಟ್ನಾಳದಲ್ಲಿಯೇ ಮದ್ದು ಗುಂಡು, ಹತಾರೆ, ಖಡ್ಗ ಮುಂತಾದ ಯುದ್ಧ ಸಾಮಗ್ರಿಗಳನ್ನು ತಯಾರಿಸಿ ಸಂಗ್ರಹಿಸುತ್ತಿದ್ದರು. ಮದ್ದು ಗುಂಡುಗಳನ್ನು ರಕ್ಷಿಸಲು ಗುಹೆ ಮಾಡಿಕೊಂಡಿದ್ದರು. ನೆಲಮನೆಯಲ್ಲಿ ಮದ್ದು ಗುಂಡುಗಳನ್ನು ಬ್ರಿಟಿಷರ ಕೈಗೆ ಸಿಗದಂತೆ ಜಾಗರೂಕತೆ ವಹಿಸಿದ್ದರು. ಸಮಯ ಸಾಧಿಸಿ ಬ್ರಿಟಿಷ್‌ ಸೈನ್ಯದ ಮೇಲೆ ದಾಳಿ ನಡೆಸಿ ಬ್ರಿಟಿಷರನ್ನು ಹಿಮ್ಮೆಟ್ಟಿಸುತ್ತಿದ್ದರು.

1857 ಮೊದಲ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರು ಬಸಲಿಂಗಪ್ಪ ಹಾಗೂ ಅವರ ತಂದೆ ವೀರಸಂಗಪ್ಪ ಅವರನ್ನು ಬಂಧಿಸಿ ಸೊಲ್ಲಾಪುರದ ಕಾರಾಗೃಹದಲ್ಲಿ ಎರಡು ವರ್ಷ ಚಿತ್ರಹಿಂಸೆ ನೀಡಿದ್ದರು. ಎಷ್ಟೇ ಚಿತ್ರಹಿಂಸೆ ನೀಡಿದರೂ ಬಸಲಿಂಗಪ್ಪ ಹಾಗೂ ವೀರಸಂಗಪ್ಪ ಅವರು ತಮ್ಮ ಗುಟ್ಟು ಮಾತ್ರ ಬಿಟ್ಟುಕೊಟ್ಟಿರಲಿಲ್ಲ. ನಂತರ ಸೊಲ್ಲಾಪುರದ ಕಲೆಕ್ಟರ್‌ ಕಚೇರಿ ಎದುರು ತಂದೆ ಮಗನನ್ನು ಗಲ್ಲುಗಂಬಕ್ಕೇರಿಸಿದರು.

India@75:ಹಳೇ ಮೈಸೂರಿನ ಸ್ವಾತಂತ್ರ್ಯ ಕಿಚ್ಚು ಹೊತ್ತಿಸಿದ ಶಿವಪುರ

ವಿಜಯಪುರದಲ್ಲಿ ದೇಶಮುಖ ಸ್ಮಾರಕ:

ಬಸಲಿಂಗಪ್ಪ, ವೀರಸಂಗಪ್ಪ ಅವರ ಸ್ಮರಣಾರ್ಥವಾಗಿ ವಿಜಯಪುರ ನಗರದ ಮಧ್ಯಭಾಗದಲ್ಲಿಯೇ ಸರ್ಕಾರ ಸ್ಮಾರಕವನ್ನು ಸ್ಥಾಪಿಸಿದ್ದು, ಸ್ಮಾರಕದ ಮೇಲೆ ಬಸಲಿಂಗಪ್ಪ ಹಾಗೂ ವೀರಸಂಗಪ್ಪ ದೇಶಮುಖ ಅವರ ಹೆಸರು ಸಹ ಬರೆಯಲಾಗಿದೆ. ಈ ಸ್ಮಾರಕಕ್ಕೆ ಸಂಪರ್ಕ ಕಲ್ಪಿಸುವ ನಗರದ ನಾಲ್ಕು ದಿಕ್ಕುಗಳ ರಸ್ತೆಗಳಿಗೆ ಬಸಲಿಂಗಪ್ಪ ವೀರಸಂಗಪ್ಪ ದೇಶಮುಖ ಸ್ಮಾರಕ ಎಂದು ನಾಮಫಲಕವನ್ನು ಅಳವಡಿಸಿಲ್ಲ. ಮಾತ್ರವಲ್ಲದೆ ಅವರ ಹೋರಾಟ ವಿವರವಿರುವ ಫಲಕವನ್ನೂ ಅಳವಡಿಸಿಲ್ಲ.

ತಲುಪುವುದು ಹೇಗೆ?

ಕೋಟ್ನಾಳ ಜಿಲ್ಲಾ ಕೇಂದ್ರ ವಿಜಯಪುರದಿಂದ 25 ಕಿ.ಮೀ. ದೂರದಲ್ಲಿದೆ. ವಿಜಯಪುರದಿಂದ ರಾಷ್ಟ್ರೀಯ ಹೆದ್ದಾರಿ- 50ರಲ್ಲಿ ಬರುವ 18 ಕಿ.ಮೀ. ಕ್ರಮಿಸಿ ತಿಡಗುಂದಿ ತಲುಪಿ ಪೂರ್ವಕ್ಕೆ ಮೂರು ಕಿ.ಮೀ. ಕ್ರಮಿಸಿದರೆ ಕೋಟ್ನಾಳ ತಲುಪಬಹುದು. ವಿಜಯಪುರದಿಂದ ತಿಡಗುಂದಿ ಮೂಲಕ ಕೋಟ್ನಾಳಕ್ಕೆ ಬಸ್‌ ವ್ಯವಸ್ಥೆಯೂ ಇದೆ.

- ರುದ್ರಪ್ಪ ಆಸಂಗಿ ವಿಜಯಪುರ

click me!