ಸ್ವಾತಂತ್ರ್ಯ ಅಮೃತ ಮಹೋ​ತ್ಸ​ವಕ್ಕೆ ಈಸೂರು ಸಜ್ಜು

By Suvarna NewsFirst Published Aug 13, 2022, 6:00 AM IST
Highlights

 ಸ್ವಾತಂತ್ರ್ಯ ಅಮೃತ ಮಹೋ​ತ್ಸ​ವಕ್ಕೆ ಈಸೂರು ಸಜ್ಜು. ಪತ್ರಿ​ಕಾ​ಗೋಷ್ಠಿ ನಡೆ​ಸಿ ಸಂಸದ ರಾಘ​ವೇಂದ್ರ ಹೇಳಿಕೆ. ಹೆಗ್ಗೆರೆ ಕೆರೆ ಏರಿ ಪರಿ​ಶೀ​ಲ​ನೆ

ಶಿಕಾರಿಪುರ (ಆ.12): ತಾಲೂಕಿನ ಈಸೂರು ಗ್ರಾಮದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾ​ಗು​ವು​ದು. ‘ಹರ್‌ ಘರ್‌ ತಿರಂಗಾ’ ಅಭಿ​ಯಾನ ಮೂಲಕ ಜನತೆಯಲ್ಲಿ ದೇಶಭಕ್ತಿ ಕಿಚ್ಚನ್ನು ಹೆಚ್ಚಿಸುವಂತೆ ಪ್ರಧಾನಿ ಮೋದಿ ಕರೆ ನೀಡಿ​ದ್ದಾರೆ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ವತಂತ್ರ ಗ್ರಾಮ ಎಂದು ಘೋಷಿಸಿಕೊಂಡು ಬ್ರಿಟಿಷ್‌ ಆಡಳಿತಕ್ಕೆ ಸವಾಲು ಹಾಕಿ ಹೋರಾಟದಿಂದ ಹುತಾತ್ಮರಾಗುವ ಮೂಲಕ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಶಾಶ್ವತವಾಗಿ ದಾಖಲಾದ ತಾಲೂಕಿನ ಈಸೂರು ಗ್ರಾಮದಲ್ಲಿ ಅತ್ಯಂತ ವಿಶಿಷ್ಟಕಾರ್ಯಕ್ರಮ ನಡೆ​ಸ​ಲಾ​ಗು​ವುದು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಶುಕ್ರವಾರ ತಾಲೂಕಿನ ಈಸೂರು ಗ್ರಾಮದಲ್ಲಿನ ಹೆಗ್ಗೆರೆ ಕೆರೆ ಏರಿ ತೀವ್ರ ಮಳೆಯಿಂದಾಗಿ ಕುಸಿದ ಪರಿಣಾಮ ಖುದ್ದು ವೀಕ್ಷಿಸಿ ನಂತರದಲ್ಲಿ ಗ್ರಾಪಂ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ವಿಶಿಷ್ಟವಾಗಿದೆ. 75ನೇ ವರ್ಷದ ಸವಿನೆನಪಿಗಾಗಿ ಅಮೃತ ಮಹೋತ್ಸವವನ್ನು ಹಬ್ಬದ ರೀತಿಯಲ್ಲಿ ವಿಜೃಂಭಣೆ ಆಚರಣೆಗಾಗಿ ದೇಶದ ಪ್ರತಿಯೊಂದು ಮನೆಯಲ್ಲಿ ತಿರಂಗಾ ಧ್ವಜವನ್ನು ಹಾರಿಸುವ ಮೂಲಕ ಯುವಪೀಳಿಗೆಯಲ್ಲಿ ರಾಷ್ಟ್ರಪ್ರೇಮದ ಕಿಚ್ಚನ್ನು ಹೆಚ್ಚಿಸಲು ಪ್ರಧಾನಿ ಮೋದಿ ಕರೆ ಮೇರೆಗೆ ತಾಲೂಕಿನ ಈಸೂರು ಗ್ರಾಮದಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಮಹೋತ್ಸವ ಅಂಗವಾಗಿ ಪ್ರಧಾನಿ ಮೋದಿ ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಹುತಾತ್ಮರನ್ನು ಗೌರವಿಸುವ ಹಿನ್ನೆಲೆಯಲ್ಲಿ ನಾಲ್ಕು ಸ್ಥಳವನ್ನು ಗುರುತಿಸಲಾ​ಗಿದೆ. ದೇಶದಲ್ಲಿ ಪ್ರಥಮ ಬಾರಿಗೆ ಸ್ವಾತಂತ್ರ್ಯ ಘೋಷಿಸಿಕೊಂಡು ಹಾಗೂ ಸ್ವಾತಂತ್ರ್ಯಕ್ಕಾಗಿ ನೇಣುಗಂಬಕ್ಕೆ ಏರಿ 5 ಹುತಾತ್ಮ ಹೋರಾಟಗಾರರ ಈಸೂರು ಗ್ರಾಮ ಸೇರ್ಪಡೆ ಆಗಿರುವುದು ಹೆಮ್ಮೆಯ ಸಂಗತಿ. ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದವರ ಕುಟುಂಬದ ಜತೆಗೆ 50ಕ್ಕೂ ಅಧಿಕ ಯೋಧರನ್ನು ಗೌರವಿಸುವ ಸದುದ್ದೇಶದಿಂದ ಪವಿತ್ರ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈಸೂರಿನಲ್ಲಿ 14ರಂದು ಮಧ್ಯಾಹ್ನ 2 ಗಂಟೆಗೆ ಮಹೋತ್ಸವವು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಸರ್ಕಾರದ ಸಚಿವ ಡಾ. ಕೆ.ಸಿ. ನಾರಾಯಣಗೌಡ, ಆರಗ ಜ್ಞಾನೇಂದ್ರ, ಬಸವರಾಜ್‌ ಭೈರತಿ, ಡಾ.ಅಶ್ವಥ್‌ನಾರಾಯಣ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್‌. ಜೀವರಾಜ್‌ ಸಹಿತ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಪ್ರತಿ ವರ್ಷ ಮೇ ತಿಂಗಳ ಅಂತ್ಯದಲ್ಲಿ ಆರಂಭವಾಗಬೇಕಿದ್ದ ಮಳೆ ಈ ಬಾರಿ ಜೂನ್‌ ಎರಡನೇ ವಾರದಲ್ಲಿ ಪ್ರಾರಂಭವಾಗಿದೆ. ಮಳೆ ಆಧಾರದಲ್ಲಿ ರೈತರು ಹೊಲ-ಗದ್ದೆಗಳಲ್ಲಿ ಕೃಷಿ ಚಟುವಟಿಕೆಗಳನ್ನು ಆರಂಭಿಸಿ ಮೆಕ್ಕೆಜೋಳ ಬಿತ್ತನೆ ಮಾಡಿದೆ. ಹಲವು ದಿನಗಳವರೆಗೆ ಮಳೆಯಾಗದೇ ಬಿತ್ತನೆಬೀಜ ಮೊಳಕೆಯೊಡೆಯದೇ ಹಾಳಾಯಿತು. ಅನಂತರ ಪುನಃ ಬಂದ ಮಳೆಗೆ ರೈತರು ಮತ್ತೆ ಹೊಲ-ಗದ್ದೆಗಳಿಗೆ ಮಾಡಿದ ಬಿತ್ತನೆಗೆ ಜೂನ್‌, ಜುಲೈ, ಆಗಸ್ಟ್‌ ತಿಂಗಳಲ್ಲಿ ನಿರಂತರವಾಗಿ ಮಳೆ ಸುರಿದಿದೆ ಎಂದರು.

ಈ ಹಿನ್ನೆಲೆಯಲ್ಲಿ ಮೆಕ್ಕೆಜೋಳ ಜೌಗಿನಿಂದಾಗಿ ಹಾಳಾಗಿದೆ. ಜಿಲ್ಲೆಯಲ್ಲಿ ಒಟ್ಟು ನಾಲ್ಕುವರೆ ಸಾವಿರ ಹೆಕ್ಟೇರ್‌ ಜಮೀನಿನಲ್ಲಿ ಮೆಕ್ಕೆಜೋಳದ ಬೆಳೆಗಳು ಸಂಪೂರ್ಣ ನೆಲಕಚ್ಚಿದೆ. ತಾಲೂಕಿನಲ್ಲಿ 25 ಹೆಕ್ಟೇರ್‌ ಭತ್ತ ಹಾಗೂ 2747 ಹೆಕ್ಟೇರ್‌ ಮೆಕ್ಕೆಜೋಳ ಬೆಳೆ ಹಾನಿಯಾಗಿದೆ. ಕೇಂದ್ರದ ಎನ್‌ಡಿಆರ್‌ಎಫ್‌ ಪ್ರಕಾರ ಹಾನಿಗೊಳಗಾದ ರೈತರ ಬೆಳೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗಿದೆ. ಶೀಘ್ರದಲ್ಲಿ ಬೆಳೆವಿಮೆ ವ್ಯಾಪ್ತಿಯಲ್ಲಿನ ರೈತರಿಗೆ ಪರಿಹಾರ ದೊರಕಿಸುವ ಭರವಸೆ ನೀಡಿದರು.

India @75: ದೇಶದಲ್ಲೇ ಮೊದಲು ಸ್ವಾತಂತ್ರ್ಯ ಘೋಷಿಸಿಕೊಂಡ ಈಸೂರು

ಸುದ್ದಿಗೋಷ್ಠಿಯಲ್ಲಿ ಎಂಎಡಿಬಿ ಅಧ್ಯಕ್ಷ ಕೆ.ಎಸ್‌.ಗುರುಮೂರ್ತಿ, ಕುವೆಂಪು ವಿವಿ ಕುಲಸಚಿವೆ ಅನುರಾಧ, ಗ್ರಾಪಂ ಅಧ್ಯಕ್ಷೆ ಶರ್ಮಿಳಾ ಭಾನು ಸಹಿತ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಗ್ರಾಮಸ್ಥರು ಹಾಜರಿದ್ದರು.

click me!