ಗದಗ ಜಿಲ್ಲೆಯ ಮಲಪ್ರಭಾ ನದಿ ತೀರದಲ್ಲಿರುವ ನರಗುಂದ ಪಟ್ಟಣ ಬಂಡಾಯಕ್ಕೆ ಪ್ರಸಿದ್ಧಿ ಪಡೆದ ಊರು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಇಲ್ಲಿನ ಅರಸರು ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟ, ನರಗುಂದ ಸಂಸ್ಥಾನ ಉಳಿಸಿಕೊಳ್ಳುವಲ್ಲಿ ಮಾಡಿದ ಕದನ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೈಲುಗಲ್ಲಾಗಿ ಉಳಿದಿದೆ.
ಗದಗ (ಜು. 01): ಗದಗ ಜಿಲ್ಲೆಯ ಮಲಪ್ರಭಾ ನದಿ ತೀರದಲ್ಲಿರುವ ನರಗುಂದ ಪಟ್ಟಣ ಬಂಡಾಯಕ್ಕೆ ಪ್ರಸಿದ್ಧಿ ಪಡೆದ ಊರು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಇಲ್ಲಿನ ಅರಸರು ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟ, ನರಗುಂದ ಸಂಸ್ಥಾನ ಉಳಿಸಿಕೊಳ್ಳುವಲ್ಲಿ ಮಾಡಿದ ಕದನ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೈಲುಗಲ್ಲಾಗಿ ಉಳಿದಿದೆ.
28ನೇ ವಯಸ್ಸಿನಲ್ಲಿ ಪಟ್ಟಕ್ಕೇರಿದ ಬಾಬಾಸಾಹೇಬ್ ಎಂದು ಖ್ಯಾತಿ ಹೊಂದಿದ್ದ ಭಾಸ್ಕರರಾವ್ 1842-1858ರ ವರೆಗೆ ನರಗುಂದ ಸಂಸ್ಥಾನವನ್ನು ಆಳ್ವಿಕೆ ಮಾಡಿದ್ದು, ಅವರಿಗೆ ಮಕ್ಕಳಿರಲಿಲ್ಲ. 1846ರಲ್ಲಿ ಒಂದು ಗಂಡು ಜನಿಸಿತ್ತಾದರೂ ಕೆಲವು ವರ್ಷಗಳಲ್ಲಿ ಅದು ತೀರಿ ಹೋಗಿತ್ತು. ಹಾಗಾಗಿ ದತ್ತು ಪುತ್ರರಿಗೆ ಹಕ್ಕಿಲ್ಲ ಎನ್ನುವ ನೀತಿಯಡಿ ನರಗುಂದ ಸಂಸ್ಥಾನವನ್ನು ಪಡೆಯಲು ಬ್ರಿಟಿಷ್ ಅಧಿಕಾರಿಗಳು ಹುನ್ನಾರ ಮಾಡುತ್ತಿದ್ದರು.
undefined
ನರಗುಂದ ಸಂಸ್ಥಾನವನ್ನು ಪಡೆದೇ ತೀರಬೇಕು ಎಂದು ಬಂದಿದ್ದ ಬ್ರಿಟಿಷ್ ಅಧಿಕಾರಿ ಮ್ಯಾನಸನ್, ದಕ್ಷಿಣದ ಸಂಸ್ಥಾನಿಕರ ಸಂರಕ್ಷಣೆಯ ಹೊಣೆಯನ್ನು ಇಂಗ್ಲಿಷ್ ಸರ್ಕಾರ ವಹಿಸಿಕೊಂಡಿದೆ. ಹೀಗಾಗಿ ನಿಮಗೇಕೆ ಶಸ್ತ್ರಾಸ್ತ್ರ? ಎನ್ನುವ ಮೂಲಕ ಬಾಬಾಸಾಹೇಬ್‌ರ ಬಲ ಉಡುಗಿಸಲು ಪ್ರಯತ್ನಿಸಿದ್ದರು. ಬಾಬಾಸಾಹೇಬ್ ಜಾಣ್ಮೆಯ ನಡೆಯನ್ನು ಅನುಸರಿಸಿ, ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಹೋಗಲು ಬನ್ನಿ ಎಂದು ಕರೆದರು. ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಹೋಗಲು 1858ರ ಮೇ 28ರಂದು ಜನರಲ್ ಲೆಸ್ಟರ್ ನರಗುಂದಕ್ಕೆ ಬರುತ್ತಾನೆ.
India@75: ಒಂದೂವರೆ ತಿಂಗಳು ಸಮುದ್ರ ತೀರದಲ್ಲಿ ಉಪ್ಪು ತಯಾರಿಸಿ ಬ್ರಿಟಿಷರಿಗೆ ಸಡ್ಡು
ಅವನಿಗೆ ತನ್ನಲ್ಲಿದ್ದ ಎಲ್ಲ ಶಸ್ತ್ರಾಸ್ತ್ರಗಳನ್ನು ನೀಡಿ, 3 ದೊಡ್ಡ ತೋಪುಗಳನ್ನು ಮಳೆ ಇರುವ ಕಾರಣ ಸಾಗಿಸಲು ಕಷ್ಟಎಂದು ತನ್ನಲ್ಲಿಯೇ ಉಳಿಸಿಕೊಳ್ಳುತ್ತಾನೆ. ಹೀಗೆ ಶಸ್ತ್ರಾಸ್ತ್ರಗಳನ್ನು ಪಡೆದು ಸಾಗುತ್ತಿರುವ ಅಧಿಕಾರಿಗಳೊಟ್ಟಿಗೆ ತಮ್ಮ ಸೈನಿಕರೇ ತೆರಳುತ್ತಿದ್ದ ಹಿನ್ನೆಲೆಯಲ್ಲಿ ಕತ್ತಲು ಆವರಿಸುತ್ತಿದ್ದಂತೆ ಅವರ ಮೇಲೆ ಆಕ್ರಮಣ ಮಾಡಿ ಮಧ್ಯರಾತ್ರಿಯೇ ಎಲ್ಲ ಶಸ್ತ್ರಾಸ್ತ್ರಗಳನ್ನು ಮರಳಿ ನರಗುಂದಕ್ಕೆ ತೆಗೆದುಕೊಂಡು ಬರುತ್ತಾರೆ.
ಈ ಘಟನೆಯಿಂದ ಕೆರಳಿದ ಇಂಗ್ಲಿಷರು ನರಗುಂದ ಸಂಸ್ಥಾನದ ಮೇಲೆ ದಾಳಿ ಮಾಡಲು ಮ್ಯಾನ್ಸನ್ ನೇತೃತ್ವದಲ್ಲಿ 1858ರ ಮೇ 29ರ ರಾತ್ರಿ ಸುರೇಬಾನ್ ತಲುಪಿದ್ದರು. ಇದು ಬಾಬಾಸಾಹೇಬ್ ಅವರಿಗೆ ಗೊತ್ತಾಗಿ ಅವರ ಆಪ್ತಮಿತ್ರರಾಗಿದ್ದ ವಿಷ್ಣುಪಂಥ ಹಾಗೂ ಹಲವಾರು ಗೆಳೆಯರ ಬಳಗದೊಂದಿಗೆ ರಾತ್ರಿಯೇ ಮ್ಯಾನ್ಸನ್ ಮೇಲೆ ದಾಳಿ ಮಾಡಿದರು.
ವಿಷ್ಣುಪಂಥ ಹಾಗೂ ಬಾಬಾಸಾಹೇಬ್ ಬೀಸಿದ ಕತ್ತಿ ಮ್ಯಾನ್ಸನ್ ರುಂಡವನ್ನು ತುಂಡರಿಸಿ ಅದನ್ನು ರಾತ್ರೋರಾತ್ರಿ ತಂದು ನರಗುಂದ ಪಟ್ಟಣದ ಅಗಸಿ ಬಾಗಿಲಿಗೆ ಕಟ್ಟಿದ್ದರು. ಬೆಳಗಾಗುವುದರಲ್ಲಿ ಅಗಸಿ ಬಾಗಿಲು ಬ್ರಿಟಿಷ್ ಅಧಿಕಾರಿಯ ರಕ್ತದಿಂದಾಗಿ ಕೆಂಪಾಗಿ ಹೋಗಿತ್ತು. ಅಂದಿನಿಂದ ಈ ಅಗಸಿ ಬಾಗಿಲಿಗೆ ‘ಕೆಂಪಗಸಿ’ ಎಂದೇ ಹೆಸರು ಬಿತ್ತು. ಈಗಲೂ ಹಾಗೆಯೇ ಕರೆಯುತ್ತಾರೆ.
ಹೀಗೆ ಬ್ರಿಟಿಷರ ವಿರುದ್ಧ ನಿರಂತರ ಹೋರಾಟ ಮಾಡಿದ್ದ ನರಗುಂದ ಸಂಸ್ಥಾನದ ಮೇಲೆ ದಾಳಿ ಮಾಡಿದ ಬ್ರಿಟಿಷರು ಜೂ. 2ರಂದು ಕೋಟೆ ಒಡೆದು ಒಳಗೆ ನುಗ್ಗಿ ಎಲ್ಲವನ್ನು ಧ್ವಂಸಗೊಳಿಸುತ್ತಾರೆ. ಸಾವಿರಾರು ಜನರ ಸಮ್ಮುಖದಲ್ಲಿ 1858ರ ಜೂ. 12ರಂದು ಬಾಬಾಸಾಹೇಬ್‌ರನ್ನು ಬೆಳಗಾವಿಯ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಗುತ್ತದೆ.
India@75:ಆಂಗ್ಲರಿಗೆ ಸಿಂಹಸ್ವಪ್ನವಾಗಿದ್ದ ವಿಜಯಪುರ ಇಂಚಗೇರಿ ಮಠ
ಹೇಗೆ ಹೋಗಬಹುದು?
ನರಗುಂದ ಪಟ್ಟಣ ವಿಜಯಪುರ- ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡೇ ಇದ್ದು, ಸಾಕಷ್ಟುಬಸ್ ಸೌಕರ್ಯ ಇದೆ. ಪಟ್ಟಣದ ಮುಖ್ಯದ್ವಾರದಲ್ಲಿಯೇ ಕೆಂಪಗಿಸಿ ಇದೆ.
- ಶಿವಕುಮಾರ ಕುಷ್ಟಗಿ