India@75: ಬ್ರಿಟಿಷರ ವಿರುದ್ಧ ಗುಪ್ತ ಸೈನ್ಯ ಕಟ್ಟಿದ್ದ ವಿಜಯಪುರದ ಕರಿಭಂಟನಾಳ ಸ್ವಾಮೀಜಿ

By Suvarna News  |  First Published Jul 8, 2022, 1:43 PM IST

- ಬ್ರಿಟಿಷರ ವಿರುದ್ಧ ಗುಪ್ತ ಸೈನ್ಯ ಕಟ್ಟಿದ್ದ ಸ್ವಾಮೀಜಿ

- ಕೋವಿ ಹಿಡಿದ ಕಾವಿ ತೊಟ್ಟಿದ್ದ ಕರಿಭಂಟನಾಳ ಸ್ವಾಮೀಜಿ

- ಆಂಗ್ಲರ ಆಳ್ವಿಕೆ ಅಂತ್ಯಗೊಳಿಸಲು ಸೈನ್ಯ ಕಟ್ಟಿ ಸಮರ


ಅತ್ಯಾಚಾರದಿಂದ ಮನನೊಂದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಮಾಡಿಕೊಂಡಿದ್ದ ಸ್ವಾಮೀಜಿಯೊಬ್ಬರ ಕಿವಿಗೆ ಬರಸಿಡಿಲಿನಂತೆ ಬಂದು ಅಪ್ಪಳಿಸುತ್ತದೆ. ಆ ಕ್ಷಣವೇ ಕಾವಿ ತೊಟ್ಟಿದ್ದ ಸ್ವಾಮೀಜಿ ಕೋವಿ ಹಿಡಿಯುವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅತ್ಯಾಚಾರವೆಸಗಿದ ಆಂಗ್ಲರ ಕ್ರೂರತನ ಮತ್ತು ದೌರ್ಜನ್ಯದ ಹುಟ್ಟಡಗಿಸಲು ದೊಡ್ಡ ಸೈನ್ಯವನ್ನೇ ಕಟ್ಟಿಸಮರ ಸಾರುತ್ತಾರೆ. ಅವರೇ ಕರಿಭಂಟನಾಳ ಮಠದ ಸ್ವಾಮೀಜಿ.

1800 ರಿಂದ 1857ರ ವರೆಗೆ ಜೀವಿಸಿದ್ದ ಗುರುಗಂಗಾಧರೇಶ್ವರ ಸ್ವಾಮೀಜಿ ಈಗಿನ ವಿಜಯಪುರ ಜಿಲ್ಲೆಯ ಕರಿಭಂಟನಾಳ ಗ್ರಾಮದ ಮಠದಲ್ಲಿ ಧರ್ಮೋಪದೇಶ ಮತ್ತು ಔಷಧೋಪಚಾರದಲ್ಲಿ ತೊಡಗಿದ್ದರು. ಪಕ್ಕದ ರೇಬಿನಾಳ ಗ್ರಾಮದ ಗೌರವಯುತ ಮನೆತನದ ಮಹಿಳೆ ಮೇಲೆ ಅತ್ಯಾಚಾರವಾಗಿ, ಈ ಅವಮಾನ ತಾಳದೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಶ್ರೀಗಳಿಗೆ ತಿಳಿಯುತ್ತದೆ. ಇದರಿಂದ ಸ್ವಾಮೀಜಿ ಕೋಪಗೊಂಡು ಬ್ರಿಟಿಷ ಆಳ್ವಿಕೆಯನ್ನು ಅಂತ್ಯಗೊಳಿಸಲು ಹೋರಾಟ ಮಾಡುವ ಸಂಕಲ್ಪ ತೊಡುತ್ತಾರೆ.

Latest Videos

undefined

India@75: ತುಮಕೂರು ಕಾಲೇಜು ವಿದ್ಯಾರ್ಥಿಗಳು ರೂಪಿಸಿದ್ದ ಸ್ವಾತಂತ್ರ್ಯ ಹೋರಾಟ

ಗೌಪ್ಯವಾಗಿ ಸೇನೆ ಕಟ್ಟಿ ತರಬೇತಿ:

ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಸಂಕಲ್ಪ ಮಾಡಿದ ತಕ್ಷಣವೇ ನೇರವಾಗಿ ಬಂಗಾಳದ ಆನಂದಮಠಕ್ಕೆ ಪ್ರಯಾಣ ಬೆಳೆಸಿದ ಗಂಗಾಧರೇಶ್ವರ ಸ್ವಾಮೀಜಿ ಅಲ್ಲಿ ಮತ್ತಷ್ಟುಸ್ಫೂರ್ತಿ ಪಡೆದು ಬರುತ್ತಾರೆ. ನಂತರ ಮಠಕ್ಕೆ ಮರಳಿ ಬಂದು ತಮ್ಮ ಮನದಿಚ್ಚೆಯನ್ನು ಭಕ್ತರ ಮುಂದೆ ಇಟ್ಟರು. ಮೊದಲೇ ಬ್ರಿಟಿಷರ ವಿರುದ್ಧ ಕುದಿಯುತ್ತಿದ್ದ ಭಕ್ತರು ಭಾರಿ ಸಂಖ್ಯೆಯ ಯುವಕರ ದಂಡನ್ನೇ ಸ್ವಾಮೀಜಿಗೆ ಅರ್ಪಿಸಿದರು. ಕರಿಭಂಟನಾಳದಲ್ಲೇ 21 ಗರಡಿಮನೆಗಳನ್ನು ನಿರ್ಮಿಸಿ ಮಠದಲ್ಲಿನ ಎಲ್ಲ ಸವಲತ್ತುಗಳನ್ನು ಬಳಸಿಕೊಂಡ ಸ್ವಾಮೀಜಿ, ಮೊದಲು ಯುವಕರನ್ನು ಮಾನಸಿಕ ಮತ್ತು ದೈಹಿಕವಾಗಿ ಬಲಗೊಳಿಸಿದರು.

ನಂತರ ಸುತ್ತಮುತ್ತ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ತಯಾರಿ ನಡೆಸಿದ್ದ ಕೊಟ್ನೂರ ಮತ್ತು ಸುರಪುರದ ನೆರವು ಪಡೆದು ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಬೇಕಾದ ಕತ್ತಿವರಸೆ ಮತ್ತು ಕುದುರೆ ಸವಾರಿಯಿಂದ ಹಿಡಿದು ಮದ್ದುಗುಂಡುಗಳನ್ನು ಬಳಸುವ ಎಲ್ಲ ರೀತಿಯ ತರಬೇತಿಯನ್ನು ಗುಪ್ತವಾಗಿ ನೀಡಿದರು.

ಸುರಪುರ ಸಂಸ್ಥಾನಕ್ಕೆ ಸೈನ್ಯ:

ಹೀಗೆ ಸೂಕ್ತ ತರಬೇತಿ ಪಡೆದು ಬ್ರಿಟಿಷರ ಸದೆಬಡಿಯಲು ತುದಿಗಾಲ ಮೇಲೆ ನಿಂತಿದ್ದ ಬಿಸಿರಕ್ತದಿಂದ ಕೂಡಿದ್ದ ಯುವ ಸೇನಾಪಡೆಯನ್ನು ಆಗ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಸುರಪುರ ಸಂಸ್ಥಾನಕ್ಕೆ ಕಳಿಸಿಕೊಟ್ಟರು. ಇಂತಹ ಸೈನ್ಯಗಳ ಬೆಂಬಲ ಪಡೆದ ರಾಜಾ ವೆಂಕಟಪ್ಪ ನಾಯಕ ಹಿಂದೂ ರಾಜರೆಲ್ಲರೂ ಒಟ್ಟಾಗಿ ಆಂಗ್ಲರನ್ನು ನಮ್ಮ ನಾಡಿನಿಂದಲೇ ಓಡಿಸಬಹುದು ಎಂದು ಅಬ್ಬರಿಸತೊಡಗಿದ. ಇದೇ ಸಂದರ್ಭದಲ್ಲಿ ಸಂಸ್ಥಾನದಲ್ಲಿನ ಕೆಲ ದುರುಳರ ಪಿತೂರಿಯಿಂದ ಸುರಪುರ ಸಂಸ್ಥಾನದ ಮೇಲೆ ಬ್ರಿಟಿಷರ ದೊಡ್ಡ ಸೈನ್ಯವೊಂದು ನುಗ್ಗಿಬಂತು.

ಈ ಸಂದರ್ಭದಲ್ಲಿ ಬಹಳ ಉತ್ಸಾಹಿಯಾಗಿದ್ದ ಅಲ್ಲಿನ ಯುವಸೇನೆ ಬ್ರಿಟಿಷ್‌ ಸೇನೆಯನ್ನು ಹಿಮ್ಮೆಟ್ಟಿಸುವ ಮೂಲಕ ಬ್ರಿಟಿಷ್‌ ಅಧಿಕಾರಿ ಕ್ಯಾಪ್ಟನ್‌ ನ್ಯೂಬೆರಿ ಹಾಗೂ ಸಹಾಯಕ ಅಧಿಕಾರಿ ಸ್ಟುವರ್ಚ್‌ ಎಂಬುವರನ್ನು ಕೊಲ್ಲುವ ಮೂಲಕ ಸಮರದಲ್ಲಿ ಮೇಲುಗೈ ಸಾಧಿಸಿತು. ಹೀಗೆ ಗಂಗಾಧರೇಶ್ವರ ಸ್ವಾಮೀಜಿ ಕಟ್ಟಿಬೆಳೆಸಿದ ಸೈನ್ಯ ಬ್ರಿಟಿಷರ ವಿರುದ್ಧದ ಹೋರಾಟದ ಸಂಗತಿ ಇಂದಿಗೂ ದೇಶಭಕ್ತಿ ಉಕ್ಕುವಂತೆ ಮಾಡುತ್ತದೆ.

India@75:ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ಬೆಂಬಿಡದೇ ಕಾಡಿದ ಬಳ್ಳಾರಿಯ ಕೊಟ್ಟೂರು

ತಲುಪುವುದು ಹೇಗೆ?

ಜಿಲ್ಲಾ ಕೇಂದ್ರವಾದ ವಿಜಯಪುರದಿಂದ 48 ಕಿ.ಮೀ.ಕ್ರಮಿಸಿ ಬಸವನ ಬಾಗೇವಾಡಿಗೆ ತೆರಳಬೇಕು. ಬಸವನ ಬಾಗೇವಾಡಿಯಿಂದ 12 ಕಿಮೀ ತೆರಳಿದರೆ ಕರಿಭಂಟನಾಳ ಗುರುಗಂಗಾಧರೇಶ್ವರ ಸ್ವಾಮೀಜಿ ದೇವಾಲಯ (ಮಠ) ತಲುಪಬಹುದು.

- ಮಲ್ಲಿಕಾರ್ಜುನ ಕರಿಯಪ್ಪನವರ

click me!