India@75: ತುಮಕೂರು ಕಾಲೇಜು ವಿದ್ಯಾರ್ಥಿಗಳು ರೂಪಿಸಿದ್ದ ಸ್ವಾತಂತ್ರ್ಯ ಹೋರಾಟ

By Suvarna News  |  First Published Jul 7, 2022, 4:26 PM IST

ಸ್ವಾತಂತ್ರ್ಯ ಸಂಗ್ರಾಮದಲ್ಲಿ ತುಮಕೂರು ಜಿಲ್ಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪಾತ್ರ ದೊಡ್ಡದು. ತುಮಕೂರು ನಗರ, ಚಿಕ್ಕನಾಯಕನಹಳ್ಳಿ, ತಿಪಟೂರು, ಕೊರಟಗೆರೆ, ಮಧುಗಿರಿ ಸೇರಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಸ್ವಾತಂತ್ರ್ಯ ಹೋರಾಟದಲ್ಲಿ ಚಾರಿತ್ರಿಕ ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ.


ಸ್ವಾತಂತ್ರ್ಯ ಸಂಗ್ರಾಮದಲ್ಲಿ ತುಮಕೂರು ಜಿಲ್ಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪಾತ್ರ ದೊಡ್ಡದು. ತುಮಕೂರು ನಗರ, ಚಿಕ್ಕನಾಯಕನಹಳ್ಳಿ, ತಿಪಟೂರು, ಕೊರಟಗೆರೆ, ಮಧುಗಿರಿ ಸೇರಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಸ್ವಾತಂತ್ರ್ಯ ಹೋರಾಟದಲ್ಲಿ ಚಾರಿತ್ರಿಕ ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ. ಈ ಎಲ್ಲಾ ಹೋರಾಟಗಳಿಗೆ ಸಾಕ್ಷಿಯಾಗಿ ನಿಂತಿರುವುದು ತುಮಕೂರಿನ ಈಗಿನ ಜೂನಿಯರ್‌ ಕಾಲೇಜು ಹಾಗೂ ಮೈದಾನ.

India@75: ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ಬೆಂಬಿಡದೇ ಕಾಡಿದ ಬಳ್ಳಾರಿಯ ಕೊಟ್ಟೂರು

Tap to resize

Latest Videos

ಸ್ವಾತಂತ್ರ್ಯ ಸಂಗ್ರಾಮದಲ್ಲಿ ತುಮಕೂರು ನಗರದಲ್ಲಿ ಆಗ ಇಂಟರ್‌ ಮೀಡಿಯೇಟರ್‌ನಲ್ಲಿ ಓದುತ್ತಿದ್ದ ಆರ್‌.ಎಸ್‌.ಆರಾಧ್ಯ ಎಂಬುವರು ವಿದ್ಯಾರ್ಥಿಗಳ ಸಂಘಟನೆ ಮಾಡಿ ಶಾಲಾ-ಕಾಲೇಜುಗಳನ್ನು ಬಂದ್‌ ಮಾಡಿ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಪ್ರೇರೇಪಿಸುತ್ತಿದ್ದರು. ತುಮಕೂರಿನ ಬೀದಿ ಬೀದಿಗಳಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಭಾಗಿಯಾಗಿದ್ದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಂ.ವಿ.ರಾಮರಾವ್‌ ಅವರ ಸ್ಫೂರ್ತಿಯುತ ಭಾಷಣ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೆಚ್ಚಿಸುತ್ತಿತ್ತು.

ತುಮಕೂರಿನ ಈಗಿನ ಜೂನಿಯರ್‌ ಕಾಲೇಜು, ಇಂಟರ್‌ ಮೀಡಿಯೇಟ್‌ ಕಾಲೇಜಿನ ಬಹುತೇಕ ವಿದ್ಯಾರ್ಥಿಗಳು ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದರು. ವಿದ್ಯಾರ್ಥಿ ಮುಖಂಡ ಆರಾಧ್ಯ ಅವರ ಸಂಘಟನೆಗೆ ವಿದ್ಯಾರ್ಥಿಗಳೆಲ್ಲ ಮಾರು ಹೋಗಿದ್ದರು. ಆರಾಧ್ಯ ಅವರನ್ನು ಬಂಧಿಸಿದರೆ ಬಹುಮಾನ ನೀಡುವುದಾಗಿ ಬ್ರಿಟಿಷರು ಘೋಷಿಸುವ ಮಟ್ಟಿಗೆ ಅವರು ತುಮಕೂರಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸ್ಫೂರ್ತಿಯಾಗಿದ್ದರು.

ಜಿಲ್ಲೆಯ ವಿದ್ಯಾರ್ಥಿಗಳು ಸ್ವಾತಂತ್ರ್ಯ ಸಂಗ್ರಾಮದ ಹೋರಾಟವನ್ನು ಕೇವಲ ತುಮಕೂರು ಜಿಲ್ಲೆಗೆ ಸೀಮಿತಗೊಳಿಸದೆ ಹಾಸನ, ಅರಸೀಕೆರೆಗೂ ಹೋಗಿ ಅಲ್ಲಿನ ವಿದ್ಯಾರ್ಥಿಗಳಲ್ಲಿ ಹೋರಾಟದ ಕಿಡಿ ಹಚ್ಚಿ ಬರುತ್ತಿದ್ದರು. ಇದನ್ನು ಧಮನಿಸಲು ವಿದ್ಯಾರ್ಥಿ ಮುಖಂಡ ಕೆ.ಎಸ್‌.ರಾಜಪ್ಪ ಹಾಗೂ ಬಿ.ಕೆ.ಪುಟ್ಟಣ್ಣಶೆಟ್ಟಿಅವರನ್ನು ಬ್ರಿಟಿಷರು ಬಂಧಿಸಿ ಯರವಾಡ ಜೈಲಿಗೆ ಕಳುಹಿಸಿದಾಗ, ತುಮಕೂರಿನ ವಿದ್ಯಾರ್ಥಿನಿಯರಿಗೆ ಬೆಂಗಳೂರು ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರು ಬೆಂಬಲ ನೀಡಿದರು.

ವಿದ್ಯಾರ್ಥಿನಿಯರಾದ ಪೊನ್ನಮ್ಮ, ಮೀನಾಕ್ಷಮ್ಮ, ಕೋಮಲ ಅವರು ತುಮಕೂರಿಗೆ ಬಂದು ಸ್ಫೂರ್ತಿದಾಯಕ ಮಾತು ಆಡಿದರು. ವಿದ್ಯಾರ್ಥಿನಿಯರೂ ಹೋರಾಟಕ್ಕೆ ಧುಮುಕುವುದರೊಂದಿಗೆ ಬ್ರಿಟಿಷರ ವಿರುದ್ಧದ ಹೋರಾಟ ಆಂದೋಲನದ ಸ್ವರೂಪ ಪಡೆದುಕೊಂಡಿತು. ತುಮಕೂರಿನ ಈಗಿನ ಜೂನಿಯರ್‌ ಕಾಲೇಜು ಮೈದಾನದಲ್ಲಿ ತುಮಕೂರಿನ ಎಲ್ಲಾ ವಿದ್ಯಾರ್ಥಿಗಳು ಒಟ್ಟಾಗಿ ಹೋರಾಟ ರೂಪಿಸುತ್ತಾ ಬಂದರು. ತುಮಕೂರಿನಲ್ಲಿ ಸರೋಜಮ್ಮ ಹಾಗೂ ಅಮೃತಾಬಾಯಿ ಅವರು ವಿದ್ಯಾರ್ಥಿನಿಯರ ಸಂಘಟನೆಯನ್ನು ದೊಡ್ಡಮಟ್ಟದಲ್ಲಿ ಮುನ್ನಡೆಸಿದರು. ಈ ಮಧ್ಯೆ ತುಮಕೂರು ನಗರಕ್ಕೆ ಸೀಮಿತವಾಗಿದ್ದ ಸ್ವಾತಂತ್ರ್ಯ ಹೋರಾಟ ಬಳಿಕ ತಾಲೂಕು ಕೇಂದ್ರಗಳಲ್ಲೂ ಸಂಘಟನೆಯಾಗುತ್ತದೆ.

6 ತಿಂಗಳು ತಲೆನೋವು: ಸುಮಾರು 6 ತಿಂಗಳ ಕಾಲ ಬ್ರಿಟಿಷರಿಗೆ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಹೋರಾಟ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. 6 ತಿಂಗಳ ನಂತರ ಬ್ರಿಟಿಷ್‌ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಹುಡುಕಿ ಹುಡುಕಿ ಜೈಲಿಗೆ ಕಳುಹಿಸುತ್ತಾರೆ. ವಿದ್ಯಾರ್ಥಿ ಮುಖಂಡರಾದ ಕೃಷ್ಣಾಚಾರ್‌ರನ್ನು ಬಂಧಿಸಲಾಗುತ್ತಿದ್ದಂತೆ ವಿದ್ಯಾರ್ಥಿಗಳು ರೈಲಿಗೆ ಬೆಂಕಿ ಹಚ್ಚಲು ಮುಂದಾಗುತ್ತಾರೆ. ಆಗ ಮತ್ತಷ್ಟುವಿದ್ಯಾರ್ಥಿಗಳನ್ನು ಬಂಧಿಸಲಾಗುತ್ತದೆ.

India@75:ಬ್ರಿಟಿಷರ ನಿದ್ದೆಗೆಡಿಸಿದ ರಾಣೆಬೆನ್ನೂರಿನ 'ನಾಡಬಾಂಬ್' ತಿಮ್ಮನಗೌಡ

ಬಂಧನ ಜಾಸ್ತಿಯಾಗುತ್ತಿದ್ದಂತೆ ವಿದ್ಯಾರ್ಥಿಗಳು ಶಾಲೆಗೆ ಹೋಗದೆ ಮೌನ ಪ್ರತಿಭಟನೆ ಮುಂದುವರೆಸುತ್ತಾರೆ. ಈ ವೇಳೆ ಬ್ರಿಟಿಷ್‌ ಅಧಿಕಾರಿಗಳು ಶಾಲಾ-ಕಾಲೇಜಿಗೆ ಹೋಗುವಂತೆ ಮನವಿ ಮಾಡಿದಾಗ ಬಂಧಿತರನ್ನು ಬೇಷರತ್‌ ಆಗಿ ಬಿಡುಗಡೆ ಮಾಡುವಂತೆ ಷರತ್ತು ಹಾಕುತ್ತಾರೆ. ಆಗ ಅನಿವಾರ್ಯವಾಗಿ ಬ್ರಿಟಿಷರು ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡುತ್ತಾರೆ. ಮಾತು ಕೊಟ್ಟಂತೆ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳುತ್ತಾರೆ. ವಿದ್ಯಾರ್ಥಿಗಳು ಅಂದು ರೂಪಿಸಿದ್ದ ಹೋರಾಟವನ್ನು ಇಂದಿಗೂ ಸ್ಮರಣೀಯ.

ತಲುಪುವುದು ಹೇಗೆ?

ಜಿಲ್ಲಾಕೇಂದ್ರ ತುಮಕೂರು ನಗರದಲ್ಲೇ ಜೂನಿಯರ್‌ ಕಾಲೇಜು ಇದೆ. ಆಟೋ ಮತ್ತು ಬಸ್‌ ಮೂಲಕ ಜೂನಿಯರ್‌ ಕಾಲೇಜು ತಲುಪಬಹುದು.

- ಸುಗಮ ಶ್ರೀನಿವಾಸ್ 

click me!