ಸಿದ್ದಾಪುರದ ಮಹಿಳೆಯರು ನಡೆಸಿದ ಹೋರಾಟ ಸ್ವಾತಂತ್ರ್ಯ ಚಳವಳಿಯ ಸಾಹಸಗಾಥೆಯಲ್ಲಿ ಒಂದು ಚರಿತ್ರಾರ್ಹ ಘಟನೆಯಾಗಿ ದಾಖಲಾಗಿದೆ. ಆ ಹೋರಾಟದ ಕೆಚ್ಚು, ಶೌರ್ಯದ ಮೇಲೆ ಮಾವಿನಗುಂಡಿಯ ಮಹಿಳಾ ಸತ್ಯಾಗ್ರಹ ಸ್ಮಾರಕ ಬೆಳಕು ಚೆಲ್ಲುತ್ತಿದೆ.
ಸಿದ್ದಾಪುರದ ಮಹಿಳೆಯರು ನಡೆಸಿದ ಹೋರಾಟ ಸ್ವಾತಂತ್ರ್ಯ ಚಳವಳಿಯ ಸಾಹಸಗಾಥೆಯಲ್ಲಿ ಒಂದು ಚರಿತ್ರಾರ್ಹ ಘಟನೆಯಾಗಿ ದಾಖಲಾಗಿದೆ. ಆ ಹೋರಾಟದ ಕೆಚ್ಚು, ಶೌರ್ಯದ ಮೇಲೆ ಮಾವಿನಗುಂಡಿಯ ಮಹಿಳಾ ಸತ್ಯಾಗ್ರಹ ಸ್ಮಾರಕ ಬೆಳಕು ಚೆಲ್ಲುತ್ತಿದೆ.
ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ 1932ರಲ್ಲಿ ಮಾವಿನಗುಂಡಿಯ ಮಹಿಳೆಯರು ಕರ ನಿರಾಕರಣೆ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದರು. ಕರ ನಿರಾಕರಣೆ ಸ್ವಾತಂತ್ರ್ಯ ಹೋರಾಟದ ಪ್ರಮುಖ ಭಾಗವಾಗಿತ್ತು.
India@75:ಸ್ವಾತಂತ್ರ್ಯ, ಸ್ವಾಭಿಮಾನದ ಸಾಕ್ಷಿ ಕಿತ್ತೂರು ಕೋಟೆ
ಆದರೆ ಕರ ನಿರಾಕರಣೆ ಸತ್ಯಾಗ್ರಹದಲ್ಲಿ ಭಾಗಿಯಾದವರ ಚರ, ಸ್ಥಿರ ಸ್ವತ್ತುಗಳನ್ನು ಬ್ರಿಟಿಷ್ ಅಧಿಕಾರಿಗಳು ಮುಲಾಜಿಲ್ಲದೆ ವಶಪಡಿಸಿಕೊಂಡು ಹರಾಜು ಹಾಕುತ್ತಿದ್ದರು. ಆದರೆ ಹರಾಜಿನಲ್ಲಿ ಯಾರೇ ಹೋರಾಟಗಾರರ ವಸ್ತುಗಳನ್ನು ಕೊಂಡರೂ ಇಲ್ಲಿನ ಮಹಿಳೆಯರು ಅವರ ಮನೆ ಎದುರು ಹೋಗಿ ಸತ್ಯಾಗ್ರಹ ನಡೆಸುತ್ತಿದ್ದರು. ಅವರು ಹರಾಜಿನಲ್ಲಿ ಕೊಂಡ ವಸ್ತು, ಜಾನುವಾರುಗಳನ್ನು ಮರಳಿ ಕೊಡುವ ತನಕ ಮಹಿಳೆಯರು ಸತ್ಯಾಗ್ರಹ ನಡೆಸುತ್ತಿದ್ದರು. ವಸ್ತುಗಳನ್ನು ವಾಪಸ್ ಪಡೆದ ನಂತರ ಅವುಗಳನ್ನು ಮೂಲ ವಾರಸುದಾರರಿಗೆ ಹಸ್ತಾಂತರಿಸುತ್ತಿದ್ದರು.
ತ್ಯಾಗಲಿ ಭುವನೇಶ್ವರಮ್ಮ, ಕಲ್ಲಾಳ ಲಕ್ಷ್ಮಮ್ಮ, ದೊಡ್ಮನೆ ಮಹಾದೇವಮ್ಮ, ಕುಳಿಬೀಡು ಗಣಪಮ್ಮ, ಹಣಜಿಪೈಲ್ ದುಗ್ಗಮ್ಮ, ಕುಳಿಬೀಡು ಭಾಗೀರತಮ್ಮ, ಕಲ್ಲಾಳ ಕಾವೇರಮ್ಮ, ಹೊಸಕೊಪ್ಪ ಸೀತಮ್ಮ, ಗುಂಜಗೋಡ ಮಾದೇವಮ್ಮ, ಹೆಗ್ಗಾರ ದೇವಮ್ಮ ಮತ್ತಿತರರು ನಿರಂತರವಾಗಿ ಸತ್ಯಾಗ್ರಹ ನಡೆಸಿದವರು.
ಸತ್ಯಾಗ್ರಹದಲ್ಲಿ ಪಾಲ್ಗೊಂಡ ಬಾಣಂತಿ, ಗರ್ಭಿಣಿಯರನ್ನು ಬ್ರಿಟಿಷ್ ಅಧಿಕಾರಿಗಳು ಒದೆಯುತ್ತಿದ್ದರು. ದೌರ್ಜನ್ಯ ನಡೆಸುತ್ತಿದ್ದರು. ಆದರೆ ಛಲ ಬಿಡದೆ ಇಲ್ಲಿನ ಮಹಿಳಾಮಣಿಗಳು ಹೋರಾಡಿದರು. ಜಪ್ತಿ ಮಾಡಿದ ಸಾಮಗ್ರಿ, ಜಾನುವಾರುಗಳನ್ನು ಮರಳಿ ಪಡೆಯುವಲ್ಲಿ ಸಫಲರಾದರು. ಮಹಿಳೆಯರ ಕೆಚ್ಚು, ರೋಷ ಬ್ರಿಟಿಷ್ ಅಧಿಕಾರಿಗಳ ಸೊಕ್ಕನ್ನು ಅಡಗಿಸಿತು. ಬ್ರಿಟಿಷರ ದಬ್ಬಾಳಿಕೆಗೆ ಹೆದರದೆ ಸತ್ಯಾಗ್ರಹ ನಡೆಸಿದ ಹಿರಿಮೆ ಇವರದ್ದು.
India@75:ತುಮಕೂರು ಕಾಲೇಜು ವಿದ್ಯಾರ್ಥಿಗಳು ರೂಪಿಸಿದ್ದ ಸ್ವಾತಂತ್ರ್ಯ ಹೋರಾಟ
ಸ್ಮಾರಕ ನಿರ್ಮಾಣ:
ಸತ್ಯಾಗ್ರಹ ನಡೆಸಿದ ಮಹಿಳೆಯರು ಬಂಧಿತರಾಗಿದ್ದ ಸ್ಥಳದಲ್ಲಿ ಕಾರಾಗೃಹ ಮಾದರಿಯನ್ನು ನಿರ್ಮಿಸಲಾಗಿದೆ. ಬಾಗಿಲಿಗೆ ಬ್ರಿಟಿಷ್ ಕಾವಲುಗಾರನ ಮೂರ್ತಿ ನಿಲ್ಲಿಸಲಾಗಿದೆ. ಎದುರುಗಡೆ ಮಹಿಳಾ ಹೋರಾಟಗಾರರ ಶಿಲ್ಪಗಳಿವೆ. ಪಕ್ಕದಲ್ಲಿ ಶಿವನ ಮೂರ್ತಿಯನ್ನು ರಚಿಸಿ, ಅದರಿಂದ ಗಂಗೆ ಹರಿಯುವ ದೃಶ್ಯ ರೂಪಿಸಲಾಗಿದೆ.
ಪ್ರವಾಸಿಗರು ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಕೂಡ ಮಾಡಲಾಗಿದೆ. ಪಶ್ಚಿಮ ಘಟ್ಟಕಾರ್ಯಪಡೆ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಈ ತಾಣವನ್ನು 2012-13ರಲ್ಲಿ ಅಭಿವೃದ್ಧಿಪಡಿಸಿದೆ. ಆದರೆ ನಿರ್ವಹಣೆ ಇಲ್ಲದೆ ಸ್ಮಾರಕ ಸೊರಗುತ್ತಿದ್ದು, ಸ್ವಾತಂತ್ರ್ಯ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಸ್ಮಾರಕಕ್ಕೆ ಕಾಯಕಲ್ಪ ನೀಡಬೇಕು ಎಂದು ಹಿರಿಯ ಚಿಂತಕರಾದ ಅಶೋಕ್ ಹೆಗಡೆ ಮಾವಿನಗುಂಡಿ ಆಗ್ರಹಿಸಿದ್ದಾರೆ.
ಸ್ಮಾರಕ ತಲುಪುವುದು ಹೇಗೆ?:
ಮಾವಿನಗುಂಡಿ ಮಹಿಳಾ ಸತ್ಯಾಗ್ರಹ ಸ್ಮಾರಕವು ಜೋಗ ಜಲಪಾತದಿಂದ ಕೇವಲ 3 ಕಿ.ಮೀ. ದೂರದಲ್ಲಿದೆ. ಮಾವಿನಗುಂಡಿ ಸರ್ಕಲ್‌ನ ಪ್ರಮುಖ ರಸ್ತೆಯ ಪಕ್ಕದಲ್ಲೇ ಈ ಸ್ಮಾರಕವಿದೆ. ಸಿದ್ದಾಪುರದಿಂದ 20 ಕಿ.ಮೀ. ದೂರದಲ್ಲಿದೆ. ಜೋಗಕ್ಕೆ ಪ್ರವಾಸಕ್ಕೆ ತೆರಳಿದವರು ಮಾವಿನಗುಂಡಿ ಸ್ಮಾರಕ್ಕೂ ಭೇಟಿ ನೀಡಬಹುದಾಗಿದೆ.
- ವಸಂತಕುಮಾರ ಕತಗಾಲ