India@75: ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ಹೋರಾಟ ಹೆಜ್ಜೆ

By Kannadaprabha News  |  First Published Jul 15, 2022, 4:43 PM IST

ಬ್ರಿಟಿಷರ ದಾಸ್ಯದಿಂದ ಸ್ವತಂತ್ರರಾಗಲು ನಾಡಿನ ಉದ್ದಗಲ ನಡೆದ ಸ್ವಾಭಿಮಾನದ ಹೋರಾಟದಲ್ಲಿ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯ ಜೈನಕಾಶಿ, ಇಂದಿನ ಜ್ಞಾನಕಾಶಿ ಮೂಡುಬಿದಿರೆಯ ಕೊಡುಗೆಯೂ ಗಮನಾರ್ಹವಾದದ್ದು.


ಬ್ರಿಟಿಷರ ದಾಸ್ಯದಿಂದ ಸ್ವತಂತ್ರರಾಗಲು ನಾಡಿನ ಉದ್ದಗಲ ನಡೆದ ಸ್ವಾಭಿಮಾನದ ಹೋರಾಟದಲ್ಲಿ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯ ಜೈನಕಾಶಿ, ಇಂದಿನ ಜ್ಞಾನಕಾಶಿ ಮೂಡುಬಿದಿರೆಯ ಕೊಡುಗೆಯೂ ಗಮನಾರ್ಹವಾದದ್ದು.

16ನೇ ಶತಮಾನದ ಉತ್ತರಾರ್ಧದಲ್ಲೇ ಪೋರ್ಚುಗೀಸರ ಅತಿಕ್ರಮಣ ನೀತಿಗೆ ಸಡ್ಡು ಹೊಡೆದ ಉಳ್ಳಾಲದ ರಾಣಿ ಅಬ್ಬಕ್ಕನ ತವರು ನೆಲವಾದ ಮೂಡುಬಿದಿರೆಯಲ್ಲಿ ಸ್ವಾತಂತ್ರ್ಯ ಹೋರಾಟದ ಹೆಜ್ಜೆಗಳಿಗೆ ಸಾಕ್ಷಿಯಾಗಿ ಚೌಟರ ಅರಮನೆ, ಸ್ವರಾಜ್ಯ ಮೈದಾನ, ಸಮಾಜ ಮಂದಿರದ ಧ್ವಜಸ್ತಂಭ, ಗಾಂಧಿ ಪಾರ್ಕ್ ಹೀಗೆ ಹಲವು ಸ್ಮಾರಕಗಳು ಇಂದಿಗೂ ರಾಷ್ಟಾ್ರಭಿಮಾನ, ತ್ಯಾಗ, ಸ್ಫೂರ್ತಿಯ ಸಂಕೇತಗಳಂತಿವೆ.

Tap to resize

Latest Videos

India@75: ಬ್ರಿಟಿಷರ ವಿರುದ್ಧ ಹೋರಾಡಿದ ಬುಡಕಟ್ಟು ನಾಯಕ ಬಿರ್ಸಾ ಮುಂಡಾ

ಈಗ ತಾಲೂಕಾಗಿರುವ ಮೂಡುಬಿದಿರೆಯ ಹೃದಯ ಭಾಗದಲ್ಲಿ ನಾಡಿನ ಸುವ್ಯವಸ್ಥಿತ ಸಿಂಥೆಟಿಕ್‌ ಟ್ರ್ಯಾಕ್‌ನ ತಾಣವೆನಿಸಿರುವ ಸ್ವರಾಜ್ಯ ಮೈದಾನ, ಸ್ವಾತಂತ್ರ್ಯ ಅಮೃತದ ಸವಿನೆನಪುಗಳ ಸಂಗಮ ಸ್ಥಾನವೂ ಹೌದು. ಇದರ ಹತ್ತಿರದಲ್ಲೇ ಬ್ರಿಟಿಷ್‌ ಅಧಿಕಾರಿಗಳ ವಾಸ್ತವ್ಯಕ್ಕಿದ್ದ ಸರ್‌ ಆರ್ಥರ್‌ ಲವ್ಮೀ ಬಂಗ್ಲೋ (1907) ಇದ್ದ ಕಾರಣ ಇದು ಬಂಗ್ಲೆಗುಡ್ಡೆಯೆನಿಸಿತ್ತು. 29 ಎಕರೆ ವಿಸ್ತೀರ್ಣದ ಈ ಮೈದಾನ ನಂತರ ರಕ್ಷಣಾ ಇಲಾಖೆಯದ್ದು ಎಂದು ಗುರುತಿಸಿಕೊಂಡು ಮಿಲಿಟರಿ ತಂಗುವ ಸ್ಥಳವಾಯಿತು. 1962ರಲ್ಲಿ ಇಲ್ಲಿ ಮಿಲಿಟರಿ ಕ್ಯಾಂಪ್‌ ಕೂಡ ನಡೆದಿತ್ತು ಎನ್ನಲಾಗಿದೆ.

ರಾಣಿ ಅಬ್ಬಕ್ಕನಿಗೆ ಮೂಡುಬಿದಿರೆ ನಂಟು:

ಉಳ್ಳಾಲದ ತುಳುವರ ವೀರರಾಣಿ ಅಬ್ಬಕ್ಕ (1525-70)ನ ಮೂಲವೂ ಮೂಡುಬಿದಿರೆಯ ಚೌಟರ ಅರಮನೆಯದ್ದು. ಸ್ವಾತಂತ್ರ್ಯ ಹೋರಾಟದ ಮೊದಲ ಮಹಿಳೆಯಾಗಿಯೂ ಆಕೆಯದ್ದು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ ಸಾಧನೆ. ಕಾಷ್ಠ ಶಿಲ್ಪದ ಮೇರು ಕೃತಿಯಾಗಿ ಇಂದಿಗೂ ಉಳಿದುಕೊಂಡಿರುವ ಚೌಟರ ಅರಮನೆಯ ಭಾಗಗಳು, ದೀವಟಿಗೆ ಹಿಡಿದ 18 ಅಡಿ ಎತ್ತರದ ಅಬ್ಬಕ್ಕನ ಪ್ರತಿಮೆ, ರಾಜಾಂಗಣದ ಹೊರಗಿರುವ ಅಬ್ಬಕ್ಕನ ಸ್ಮಾರಕ ಆಕೆಯ ನೆನಪನ್ನು ಜೀವಂತವಾಗಿರಿಸಿವೆ.

ಸ್ವರಾಜ್ಯ ಮೈದಾನವಾಗಿ ನಾಮಕರಣ:

ಸಭಾಂಗಣಗಳೇ ಇಲ್ಲದ ಅಂದಿನ ಕಾಲಕ್ಕೆ ಸಭೆ ಸೇರಲು ಬಳಕೆಯಾಗುತ್ತಿದ್ದ ಬಂಗ್ಲೆಗುಡ್ಡೆ ಸ್ವಾತಂತ್ರ್ಯ ಹೋರಾಟದ ನಾಯಕರುಗಳಿಗೂ ಸಂಗಮ ತಾಣವಾಗಿತ್ತು. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆತಾಗ ಆಲಂಗಾರಿನಿಂದ ಮೂಡುಬಿದಿರೆ ಪೇಟೆ ಮೂಲಕ ಇದೇ ಬಂಗ್ಲೆಗುಡ್ಡೆವರೆಗೆ ನಡೆದ ಐತಿಹಾಸಿಕ ವಿಜಯೋತ್ಸವದಲ್ಲಿ ಹಿರಿಯ ಕಿರಿಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸ್ವಾತಂತ್ರ್ಯದ ಸವಿನೆನಪಿಗಾಗಿ ಹೋರಾಟಗಾರರು ಇದಕ್ಕೆ ಸ್ವರಾಜ್ಯ ಮೈದಾನ ಎಂದು ನಾಮಕರಣ ಮಾಡಿದ್ದರು ಎಂದು ತಿಳಿದು ಬರುತ್ತದೆ.

India@75:ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದ ಹುಬ್ಬಳ್ಳಿ ಸಿದ್ಧಾರೂಢ ಮಠ

ದೇಶಾಭಿಮಾನ, ಖಾದಿ ಪ್ರೇಮ, ಗಾಂಧಿ ವಿಚಾರಧಾರೆಗಳಿಗೆ ಮನಸೋತಿದ್ದ ಅಂದಿನ ಜನತೆಯ ಸ್ವಾಭಿಮಾನದ ಹೋರಾಟ, ಮೊದಲ ಸ್ವಾತಂತ್ರ್ಯ ಸಮರದ ಸವಿನೆಪಿಗಾಗಿ ಸಮಾಜ ಮಂದಿರದಲ್ಲಿ ಕಟ್ಟಿಸಿದ್ದ ಧ್ವಜಕಟ್ಟೆ(1957), ಗಾಂಧಿ ಶತಮಾನೋತ್ಸವ ಸ್ಮಾರಕವಾದ ಗಾಂಧಿ ಪಾರ್ಕ್ (1969) ಹಾಗೂ ಮೂಡುಬಿದಿರೆ ಪೇಟೆಯ ನಡುವಿನ ಗಾಂಧಿ ನಗರ ಇವೆಲ್ಲವೂ ಸ್ವಾತಂತ್ರ್ಯದ ಸನಿನೆನಪಿನ ಸ್ಮರಣಿಕೆಗಳೇ ಆಗಿವೆ.

ತಲುಪುವುದು ಹೇಗೆ?

ಮಂಗಳೂರಿನಿಂದ 36 ಕಿ.ಮೀ. ದೂರವಿರುವ ಮೂಡುಬಿದಿರೆಗೆ ಸಾಕಷ್ಟುಬಸ್‌ಗಳಿವೆ.

ಮೂಡುಬಿದಿರೆ ಪೇಟೆಗೆ ಪ್ರವೇಶಿಸುವ ರಾ.ಹೆ.169 ಪಕ್ಕದಲ್ಲೇ ಸ್ವರಾಜ್ಯ ಮೈದಾನ ಕಾಣಸಿಗುತ್ತದೆ.

- ಗಣೇಶ್‌ ಕಾಮತ್‌ ಮೂಡುಬಿದಿರೆ

 

click me!