India@75: ಸ್ವಾತಂತ್ರ್ಯ, ಸ್ವಾಭಿಮಾನದ ಸಾಕ್ಷಿ ಕಿತ್ತೂರು ಕೋಟೆ

Published : Jul 09, 2022, 10:43 AM ISTUpdated : Aug 04, 2022, 07:20 PM IST
India@75: ಸ್ವಾತಂತ್ರ್ಯ, ಸ್ವಾಭಿಮಾನದ ಸಾಕ್ಷಿ ಕಿತ್ತೂರು ಕೋಟೆ

ಸಾರಾಂಶ

ಕಿತ್ತೂರಿನ ರಾಣಿ ಚನ್ನಮ್ಮನ ಕೋಟೆ ಬೆಳಗಾವಿ ಭಾಗದ ಪ್ರಮುಖ ಐತಿಹಾಸಿಕ ಸ್ಮಾರಕಗಳಲ್ಲಿ ಒಂದು. ಸ್ವಾತಂತ್ರ್ಯ, ಸ್ವಾಭಿಮಾನದ ಸಾಕ್ಷಿಯಾಗಿ ಇಂದಿಗೂ ಅಪರಿಮಿತ ದೇಶಪ್ರೇಮಿ, ನಾಡಭಕ್ತ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

ಕಿತ್ತೂರಿನ ರಾಣಿ ಚನ್ನಮ್ಮನ ಕೋಟೆ ಬೆಳಗಾವಿ ಭಾಗದ ಪ್ರಮುಖ ಐತಿಹಾಸಿಕ ಸ್ಮಾರಕಗಳಲ್ಲಿ ಒಂದು. ಸ್ವಾತಂತ್ರ್ಯ, ಸ್ವಾಭಿಮಾನದ ಸಾಕ್ಷಿಯಾಗಿ ಇಂದಿಗೂ ಅಪರಿಮಿತ ದೇಶಪ್ರೇಮಿ, ನಾಡಭಕ್ತ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ಎಂದೇ ಹೆಸರಾಗಿರುವ ಕಿತ್ತೂರು ಚನ್ನಮ್ಮ ತನ್ನ ನಾಡಿನ ಉಳಿವಿಗಾಗಿ ಹೋರಾಡಿದ ಕುರುಹುಗಳು ಈ ಕೋಟೆಯಲ್ಲಿವೆ. ಬ್ರಿಟಿಷರ ವಿರುದ್ಧ ಹೋರಾಡಿದ ದಿಟ್ಟಮಹಿಳೆ ಚನ್ನಮ್ಮ. ಕಿತ್ತೂರು ನಾಡಿನ ಧೀರ, ವೀರ ಮಹಿಳೆ ಚನ್ನಮ್ಮ.

ಗಂಡುಮೆಟ್ಟಿದ ನೆಲ, ನಾರಿಶಕ್ತಿಯ ಪ್ರತೀಕ:

ಈ ಕೋಟೆಯನ್ನು 1650​-1681ರ ನಡುವೆ ಕಿತ್ತೂರು ದೇಸಾಯಿ ರಾಜವಂಶದ ಅಲ್ಲಪ್ಪಗೌಡ ದೇಸಾಯಿ ನಿರ್ಮಿಸಿದರು. ಇದು ಇಂದಿಗೂ ಈ ಗಂಡುಮೆಟ್ಟಿದ ನೆಲದ ಧೈರ್ಯ ಮತ್ತು ನಾರಿಶಕ್ತಿಯ ಪ್ರತೀಕ. ರಾಣಿ ಚನ್ನಮ್ಮ 1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕಿಂತ ಮೊದಲೇ 1824 ರಲ್ಲಿ ಬ್ರಿಟಿಷರ ವಿರುದ್ಧ ಯುದ್ಧ ಸಾರಿದ ದಿಟ್ಟ ಮಹಿಳೆ. ಇದೇ ಕೋಟೆ ಮುಂಭಾಗದಲ್ಲೇ ಬ್ರಿಟಿಷರೊಂದಿಗೆ ಎರಡು ಬಾರಿ ಕಾದಾಡಿದ ಧೀರೆ ಚನ್ನಮ್ಮ. ಮೊದಲ ಕಾಳಗದಲ್ಲಿ ಬ್ರಿಟಿಷ್‌ ಸೇನಾಧಿಕಾರಿ ಥ್ಯಾಕರೆಯನ್ನು ಯುದ್ಧದಲ್ಲಿ ಸಂಹರಿಸಿ, ಬ್ರಿಟಿಷ್‌ ಸೈನ್ಯವನ್ನೇ ಹಿಮ್ಮೆಟ್ಟಿಸಿ ನಾಡನ್ನು ರಕ್ಷಿಸಿದ ಚನ್ನಮ್ಮ, ಎರಡನೇ ಕಾಳಗದಲ್ಲಿ ಬ್ರಿಟಿಷ್‌ ಸೇನಾನಿ ಚಾಪ್ಲಿನ್‌ ನೇತೃತ್ವದ ಬ್ರಿಟಿಷ್‌ ಸೇನೆಯೊಂದಿಗೆ ಕಲಿತನದಿಂದ ಕಾದಾಡಿ ಕೊನೆಗೆ ಬ್ರಿಟಿಷರಿಂದ ಬಂಧನಕ್ಕೆ ಒಳಗಾಗುತ್ತಾಳೆ. ಆ ಎರಡೂ ಯುದ್ಧಗಳಲ್ಲಿ ಸಿಡಿದ ತೋಪುಗಳು, ಮದ್ದುಗುಂಡಿನಿಂದಾಗಿ ಕೋಟೆಯಲ್ಲಾದ ಬಿರುಕುಗಳು ಇಂದಿಗೂ ಕೋಟೆ ಆವರಣದಲ್ಲಿ ಕಾಣಸಿಗುತ್ತವೆ.

ಏಳಡಿ ಅಗಲದ ಗೋಡೆಯ ಕೋಟೆ:

ಕಿತ್ತೂರು ಕೋಟೆಯ ಮಣ್ಣಿನ ಗೋಡೆ 7 ಅಡಿ ದಪ್ಪವಿದೆ. ವರ್ತುಲಾಕಾರದಲ್ಲಿ ನಿರ್ಮಿಸಿದ ಈ ಕೋಟೆಯ ಸುತ್ತ 15 ಅಡಿ ಆಳ, ಅಷ್ಟೇ ಅಗಲವಾದ ಕಂದಕ ನಿರ್ಮಿಸಲಾಗಿದೆ. ಅಲ್ಲಲ್ಲಿ ಕಾವಲುಗೋಪುರಗಳನ್ನು ನಿರ್ಮಿಸಲಾಗಿದೆ. ಮೇಲ್ನೋಟಕ್ಕೆ ಇಡೀ ಕೋಟೆ ಭಗ್ನಾವಶೇಷದಂತಿದ್ದರೂ ಕೋಟೆ ಚೆನ್ನಾಗಿದ್ದ ಕಾಲದಲ್ಲಿ ಅಸಾಧಾರಣ ದುರ್ಗವಾಗಿತ್ತು ಎಂದು ಬ್ರಿಟಿಷ್‌ ಚರಿತ್ರಕಾರರೇ ಉಲ್ಲೇಖಿಸಿದ್ದಾರೆ. ಈ ಕೋಟೆಯ ಈಶಾನ್ಯ ಮೂಲೆಯಲ್ಲಿ ದೇಸಾಯರ ಅರಮನೆಯಿದ್ದ ಸ್ಥಳವಿದೆ. ಪ್ರಸ್ತುತ ಅರಮನೆಯ ಬಹುತೇಕ ಭಾಗ ನಾಶವಾಗಿದೆ.

ಅದರ ಹೊರಾಂಗಣದ ಉದ್ದ ಸುಮಾರು 100 ಅಡಿ ಅಗಲ 30 ಅಡಿ ಉದ್ದ ಇದ್ದು, ಅಲ್ಲಿರುವ ತೇಗದ ಕಂಬಗಳ ಮೇಲಿನ ಕೆತ್ತನೆಯ ಕೆಲಸ ತುಂಬಾ ನಾಜೂಕಿನಿಂದ ಕೂಡಿದೆ. ನೆಲಕ್ಕೆ ಹಾಸುಗಲ್ಲುಗಳಾಗಿ ಉಪಯೋಗಿಸಿದ್ದ ಹೊಳಪುಳ್ಳ ನಯವಾದ ಕಲ್ಲು ಚಪ್ಪಡಿಗಳು ಭವ್ಯತೆಗೆ ಮೂಕಸಾಕ್ಷಿಗಳಾಗಿವೆ. ಕೋಟೆಯಲ್ಲಿದ್ದ ಕೋಣೆಗಳು, ಪಾಕಶಾಲೆಗಳು, ಸ್ನಾನಗೃಹಗಳು, ಬಾವಿಗಳು, ಗೋಡೆಯೊಳಗೆ ಸಾಗುತ್ತಿದ್ದ ನೀರಿನ ಕೊಳಾಯಿಗಳು, ಹೊಗೆಗೂಡುಗಳು, ಧ್ರುವನಕ್ಷತ್ರದ ವೀಕ್ಷಣಾಕಿಂಡಿ ಇವುಗಳನ್ನು ಈಗಲೂ ಗುರುತಿಸಬಹುದಾಗಿದೆ.

ರಾಣಿ ಚನ್ನಮ್ಮ ಸ್ಮಾರಕ ವಸ್ತುಸಂಗ್ರಹಾಲಯ:

ಕೋಟೆ ಆವರಣದಲ್ಲಿ ರಾಣಿ ಚನ್ನಮ್ಮ ಸ್ಮಾರಕ ವಸ್ತುಸಂಗ್ರಹಾಲಯ ನಿರ್ಮಿಸಲಾಗಿದ್ದು, ಪುರಾತತ್ವ ಇಲಾಖೆ ಸುಪರ್ದಿಯಲ್ಲಿದೆ. ಇಲ್ಲಿ ಕಿತ್ತೂರುನಾಡಿಗೆ ಸಂಬಂಧಿಸಿದ ಐತಿಹಾಸಿಕ ಸ್ಮಾರಕಗಳು, ಪ್ರಾಚೀನ ವಸ್ತುಗಳನ್ನು ಸಂಗ್ರಹಿಸಲಾಗಿದೆ. ಅದರಲ್ಲಿ ನೂರಾರು ಶಸ್ತ್ರಾಸ್ತ್ರಗಳು, ಕತ್ತಿ-ಗುರಾಣಿಗಳು, ಚರ್ಮದ ಜಾಕೆಟ್‌ಗಳು, ಬಂದೂಕುಗಳು, ತೋಪುಗಳು, ಕಿತ್ತೂರು ಅರಮನೆಯ ಅಳಿದುಳಿದ ಕಿಟಕಿಗಳು, ಮರದ ಕೆತ್ತನೆಗಳು, ಕಿತ್ತೂರು ರಾಜಕಾರಣಕ್ಕೆ ಸಂಬಂಧಿಸಿದ ಪತ್ರಗಳು, ದಾಖಲೆಗಳು, ವಿಗ್ರಹಗಳು ಹಾಗೂ ಶಾಸನಗಳು ಸೇರಿವೆ.

ಕಿತ್ತೂರು ತಲುಪುವುದು ಹೇಗೆ?

ಕಿತ್ತೂರು ಬೆಳಗಾವಿಯಿಂದ ದಕ್ಷಿಣಕ್ಕೆ 50 ಕಿ.ಮೀ, ಧಾರವಾಡದಿಂದ ಉತ್ತರಕ್ಕೆ 32 ಕಿ.ಮೀ. ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿದೆ. ಧಾರವಾಡ ಅಥವಾ ಬೆಳಗಾವಿವರೆಗೆ ರೈಲುಮಾರ್ಗದ ಮೂಲಕ ತೆರಳಿ, ನಂತರ ರಸ್ತೆ ಮಾರ್ಗದ ಮೂಲಕ ತಲುಪಬಹುದು.

- ಚನ್ನಬಸಪ್ಪ ರೊಟ್ಟಿ

 

PREV
Read more Articles on
click me!

Recommended Stories

ಸೋನಿಯಾ ಅಳಿಯ ರಾಬರ್ಟ್ ವಾದ್ರಾ ರಾಜಕೀಯ ಪ್ರವೇಶ ಶೀಘ್ರ? ಹೇಳಿದ್ದೇನು?
451ಕೋಟಿ ರೂ ನೆಕ್ಲೆಸ್, 277 ಕೋಟಿ ರೂ ಕುದುರೆ ಲಾಯ, ಕೋಟ್ಯಧಿಪತಿಗಳು ತಮ್ಮರಿಗಾಗಿ ನೀಡಿದ ದುಬಾರಿ ಉಡುಗೊರೆಗಳಿವು!