- ಜಕ್ಕಲಿಯಲ್ಲಿ ಮೊಳಗಿತ್ತು ಸ್ವಾತಂತ್ರ್ಯ ಹೋರಾಟದ ಕಹಳೆ
-ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ನರಗುಂದದ ಬಾಬಾಸಾಹೇಬ
-ಗಾಂಧೀಜಿ ಭಾಷಣ ಕೇಳಲು ಎತ್ತಿನ ಬಂಡಿಗಳಲ್ಲಿ ಬಂದಿದ್ದ ದೇಶಾಭಿಮಾನಿಗಳು
ಗದಗ (ಜೂ. 16): ಸ್ವಾತಂತ್ರ್ಯ ಹೋರಾಟದಲ್ಲಿ ಜಿಲ್ಲೆಯ ನರಗುಂದದ ಅಂದಿನ ದೊರೆ ಬಾಬಾಸಾಹೇಬರ ಹೋರಾಟ ಕ್ರಾಂತಿಯ ಕಿಡಿ ಹೊತ್ತಿಸಿತ್ತು. ನಂತರದ ವರ್ಷಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಗದಗ ನಗರ ಹಾಗೂ ಜಕ್ಕಲಿ ಗ್ರಾಮಕ್ಕೆ ಭೇಟಿ ನೀಡಿ ಭಾಷಣ ಮಾಡಿದ್ದು ಸ್ವಾತಂತ್ರ್ಯ ಹೋರಾಟಕ್ಕೆ ದೊಡ್ಡ ತಿರುವು ನೀಡಿತು.
1857ರ ಪ್ರಥಮ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನರಗುಂದದ ದೊರೆಯಾಗಿದ್ದ ಭಾಸ್ಕರರಾವ್ ಭಾವೆ ನೇರವಾಗಿ ಬ್ರಿಟೀಷ್‌ರ ವಿರುದ್ಧ ಹೋರಾಟ ನಡೆಸಿದ್ದರು. ಅವರನ್ನು ಅಂದಿನ ಜನ ಪ್ರೀತಿಯಿಂದ ಬಾಬಾಸಾಹೇಬ ಎಂದು ಕರೆಯಲ್ಪಡುತ್ತಿದ್ದರು. ಬ್ರಿಟಿಷರು ನಿಮ್ಮಲ್ಲಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನು ಒಪ್ಪಿಸುವಂತೆ ಸೂಚಿಸಿರುವುದನ್ನು ವಿರೋಧಿಸಿ ಜಿಲ್ಲೆಯ ನರಗುಂದದಿಂದ 1857ರ ಮೇ 10 ರಂದು ಬಾಬಾಸಾಹೇಬರ ಮುಂದಾಳುತನದಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಧ್ವನಿ ಮೊಳಗಿತ್ತು.
ಅಂದಾನಪ್ಪ ನೇತೃತ್ವ:
ಆ ಬಳಿಕ ಜಕ್ಕಲಿ ಗ್ರಾಮದಲ್ಲಿ ದೊಡ್ಡಮಟ್ಟದಲ್ಲಿ ಸ್ವಾತಂತ್ರ್ಯ ಹೋರಾಟ ಸಂಘಟಿಸಿದ್ದ ಅಂದಾನಪ್ಪ ದೊಡ್ಡಮೇಟಿ ಗಾಂಧೀಜಿ ಅವರೊಂದಿಗೆ ನೇರ ಸಂಪರ್ಕ ಹೊಂದಿದ್ದರು. ಅವರು ಮೊದಲ ಬಾರಿಗೆ 1930ರಲ್ಲಿ ವಿದೇಶಿ ಬಟ್ಟೆಗಳನ್ನು ಜಕ್ಕಲಿ ಗ್ರಾಮದಲ್ಲಿ ಸುಟ್ಟು ದೇಶಾಭಿಮಾನದ ಜ್ವಾಲೆಯನ್ನು ಹೊತ್ತಿಸಿ, ಖಾದಿ ಬಟ್ಟೆಗಳನ್ನು ತೊಟ್ಟು ಆಂದೋಲನದಲ್ಲಿ ಭಾಗಿಯಾದರು.
1934ರಲ್ಲಿ ಗಾಂಧೀಜಿ ಭೇಟಿ: ಅಂದಾನಪ್ಪ ಅವರ ಮುತುವರ್ಜಿಯಿಂದಾಗಿ 1934ರ ಮಾ.3ರಂದು ಗಾಂಧೀಜಿ ಜಕ್ಕಲಿ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಉತ್ತರ ಕರ್ನಾಟಕದ ಮೂಲೆ ಮೂಲೆಗಳಿಂದ ಎತ್ತಿನಬಂಡಿಗಳ ಮೇಲೆ ತ್ರಿವರ್ಣಧ್ವಜವನ್ನು ಕಟ್ಟಿಕೊಂಡು ಸಾವಿರಾರು ಸಂಖ್ಯೆಯಲ್ಲಿ ಜನರು ಬಂದಿದ್ದರು. ಗಾಂಧೀಜಿಯನ್ನು ಎದುರುಗೊಳ್ಳಲು ಜಕ್ಕಲಿ ಗ್ರಾಮಸ್ಥರು 40್ಡ80 ಅಳತೆಯ ಸ್ಥಳದಲ್ಲಿ ಚಪ್ಪರ ಹಾಕಿ ಬಿಳಿಜೋಳದ ದಂಟಿನಿಂದ ವೇದಿಕೆಯನ್ನು ಅಲಂಕರಿಸಿದ್ದರು. 20 ಎಕರೆ ಹೊಲಕ್ಕೆ ಹಾಸಲು ಸಾಲುವಷ್ಟುಗುಡಾರ ಹೊಲಿದು ಜಮೀನಿನ ತುಂಬೆಲ್ಲಾ ಹಾಸಲಾಗಿತ್ತು.
ಇಂದಿಗೂ ಗಾಂಧಿ ವೃತ್ತವಿದೆ: ಮಹಾತ್ಮ ಗಾಂಧೀಜಿ ಗದಗ-ಬೆಟಗೇರಿ ಮೂಲಕ ಜಕ್ಕಲಿ ಗ್ರಾಮಕ್ಕೆ ತೆರಳಿದ್ದರು. ಅವರು ಜಕ್ಕಲಿಗೆ ತೆರಳಿದ ದಾರಿಯತ್ತ ಮುಖ ಮಾಡಿಯೇ ಗದಗದ ಗಾಂಧೀವೃತ್ತದಲ್ಲಿ ಗಾಂಧಿ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗಿದೆ. ಇನ್ನು ಬೆಟಗೇರಿಯಲ್ಲಿಯ ಹೊಸಪೇಟೆ ಚೌಕ ಭಾಗದಲ್ಲಿಯೂ ಅವರು ಭೇಟಿ ನೀಡಿರುವ ಬಗ್ಗೆ ಕುರುಹುಗಳಿದ್ದು, ಜಿಲ್ಲೆಯ ಸ್ವಾತಂತ್ರ್ಯ ಹೋರಾಟಕ್ಕೆ ವಿಶೇಷ ಇತಿಹಾಸವಿದೆ.
ತಲುಪುವುದು ಹೇಗೆ?
ಗದಗ ಕಡೆಯಿಂದ ಹೋಗುವವರು ನರೇಗಲ ಮಾರ್ಗವಾಗಿ ಹೋದರೆ 30 ಕಿ.ಮೀ. ದೂರದಲ್ಲಿದೆ. ಬಾಗಲಕೋಟೆ ವಿಜಾಪುರ ಭಾಗದಿಂದ ಬರುವವರು ರೋಣ ಮೂಲಕ ಕೇವಲ 12 ಕಿ.ಮೀ. ಕ್ರಮಿಸಿದರೆ ಜಕ್ಕಲಿಯಲ್ಲಿರುವ ಗಾಂಧಿ ಸ್ಮಾರಕ ತಲುಪಬಹುದು. ಗಾಂಧೀಜಿ ಅಂದು ಗ್ರಾಮಕ್ಕೆ ನೀಡಿದ ದಿ.ಅಂದಾನಪ್ಪ ದೊಡ್ಡಮೇಟಿ ಅವರ ಜಮೀನಲ್ಲಿರುವ ಸ್ಮಾರಕಕ್ಕೆ ಗ್ರಾಮಸ್ಥರಿಂದ, ಕುಟುಂಬಸ್ಥರಿಂದ ವಿಶೇಷ ಪೂಜೆಗಳು ಜರುಗುತ್ತದೆ.
- ಶಿವಕುಮಾರ ಕುಷ್ಟಗಿ