ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದೇ ಹೇಳಲಾಗುವ 1834ರಲ್ಲಿ ಕೊಡಗಿನಲ್ಲಿ ನಡೆದ ಅಮರ ಸುಳ್ಯ ಕಾಟಕಾಯಿ ಸಮರದಲ್ಲಿ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಗಲ್ಲಿಗೇರಿಸಲ್ಪಟ್ಟು ಹುತಾತ್ಮರಾದವರು ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡ.
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದೇ ಹೇಳಲಾಗುವ 1834ರಲ್ಲಿ ಕೊಡಗಿನಲ್ಲಿ ನಡೆದ ಅಮರ ಸುಳ್ಯ ಕಾಟಕಾಯಿ ಸಮರದಲ್ಲಿ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಗಲ್ಲಿಗೇರಿಸಲ್ಪಟ್ಟು ಹುತಾತ್ಮರಾದವರು ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡ. ಅವರನ್ನು ಮಡಿಕೇರಿಯ ಕೋಟೆ ಆವರಣದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲೇ ಬ್ರಿಟಿಷರು ಗಲ್ಲಿಗೇರಿಸಿದ್ದರು.
ಕೊಡಗನ್ನು ಬ್ರಿಟಿಷರು ವಶಪಡಿಸಿಕೊಂಡ ಸಂದರ್ಭ ಕ್ಯಾಪ್ಟನ್ ಲಿಹಾರ್ಡಿ ಕೊಡಗಿನ ಅರಸ ಚಿಕ್ಕವೀರರಾಜೇಂದ್ರನನ್ನು ಗಡೀಪಾರು ಮಾಡಿದ್ದಲ್ಲದೆ ಜನತೆಯ ಮೇಲೆ ತೆರಿಗೆ ವಿಧಿಸಿ ಆದೇಶ ಹೊರಡಿಸಿದ್ದನು. ಇದನ್ನು ವಿರೋಧಿಸಿದ ಕೆಲವರು ಗುಪ್ತವಾಗಿ ಸೇನೆ ಕಟ್ಟಿದರು. ಸುಳ್ಯದ ಕೆದಂಬಾಡಿ ರಾಮಗೌಡರು, ಶನಿವಾರಸಂತೆಯ ಪುಟ್ಟಬಸಪ್ಪ, ಸುಳ್ಯದ ಕುಡೆಕಲ್ಲು, ಕುಟ್ಟಸೇರಿದಂತೆ ಇತರರು ಬಲಮುರಿ ಗ್ರಾಮದ ಗುಡ್ಡೆಮನೆ ಅಪ್ಪಯ್ಯಗೌಡರ ನೇತೃತ್ವದಲ್ಲಿ ಸೇನೆ ರಚಿಸಿದರು. ಮಂಗಳೂರಿನಲ್ಲಿ ಗುಪ್ತ ಸಭೆಗಳ ಮೂಲಕ ದಂಗೆ ಸಂಚು ರೂಪಿಸಿದರು.
India@75:ಬ್ರಿಟಿಷರ ವಿರುದ್ಧ ಹೋರಾಡಿದ ಹಿಂದುಳಿದ ಜಾತಿಯ ವೀರ ಮಹಿಳೆಯರು
ಆದರೆ ಬ್ರಿಟಿಷರೊಂದಿಗೆ ಆಪ್ತರಾಗಿದ್ದವರು ಗೌಡರ ಸೇನೆಯ ಬಗ್ಗೆ ಬ್ರಿಟಿಷರಿಗೆ ಮಾಹಿತಿ ನೀಡಿ ಸೇನೆ ಸೆರೆಯಾಗಲು ಕಾರಣರಾದರು. ಸುಬೇದಾರರಾಗಿದ್ದ ಅಪ್ಪಯ್ಯ ಗೌಡರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಬ್ರಿಟಿಷರ ವಿರುದ್ಧ ದಂಗೆಯೆದ್ದು ಮಡಿಕೇರಿ ಕೋಟೆ ಕಡೆಗೆ ತಮ್ಮ ಸೇನೆಯೊಂದಿಗೆ ಬರುತ್ತಿದ್ದ ಸಂದರ್ಭ ಲಿಹಾರ್ಡಿ ಕಳುಹಿಸಿದ ಸೇನೆ ಅಪ್ಪಯ್ಯ ಗೌಡರ ಸೇನೆಯನ್ನು ಸದೆಬಡಿದು ಅಪ್ಪಯ್ಯಗೌಡ ಸೇರಿದಂತೆ, ರಾಮೇಗೌಡ, ಪುಟ್ಟಬಸಪ್ಪ ಇನ್ನಿತರರನ್ನು ಸೆರೆ ಹಿಡಿಯಲಾಯಿತು.
ಕುಟುಂಬಸ್ಥರ ಮುಂದೆಯೇ ಗಲ್ಲು: ಸೆರೆವಾಸದಲ್ಲಿದ್ದ ರಾಮೇಗೌಡ, ಪುಟ್ಟಬಸಪ್ಪ ಇನ್ನಿತರರನ್ನು ಮಂಗಳೂರಿನಲ್ಲಿ ಗಲ್ಲಿಗೇರಿಸಿದರೆ, ಅಪ್ಪಯ್ಯ ಗೌಡರನ್ನು 1837ನೇ ಅ.31ರಂದು ಮಡಿಕೇರಿಯ ಕೋಟೆ ಆವರಣದಲ್ಲಿ ಬಹಿರಂಗವಾಗಿ ಗಲ್ಲಿಗೇರಿಸಲಾಯಿತೆಂದು ಉಲ್ಲೇಖವಿದೆ. ಬ್ರಿಟಿಷರ ಈ ನಡೆ ಎಷ್ಟುಕ್ರೂರವಾಗಿತ್ತೆಂದರೆ ಅಪ್ಪಯ್ಯಗೌಡ ಪತ್ನಿ ಸೇರಿದಂತೆ ಕುಟುಂಬಸ್ಥರನ್ನು ಕರೆಸಿ, ಎಲ್ಲರ ಸಮ್ಮುಖದಲ್ಲೇ ಅವರನ್ನು ಗಲ್ಲಿಗೇರಿಸಲಾಯಿತು.
ಇದೀಗ ಗೌಡ ಜನಾಂಗದ ಪ್ರಮುಖರು, ಸಾರ್ವಜನಿಕರು ಸೇರಿ ಸಮಿತಿ ರಚನೆ ಮಾಡಿ ನಿರಂತರ ಪ್ರಯತ್ನ ಮಾಡಿದ ಪರಿಣಾಮ ಮಡಿಕೇರಿಯ ಸುದರ್ಶನ ವೃತ್ತದ ಬಳಿ ಸರ್ಕಾರದ ಮೂಲಕ ಅಪ್ಪಯ್ಯ ಗೌಡರ ಪ್ರತಿಮೆ ನಿರ್ಮಾಣ ಮಾಡಿದ್ದಾರೆ. ಪ್ರತಿ ವರ್ಷ ಗೌಡರ ಸಂಸ್ಮರಣೆ ಕಾರ್ಯ ಮಾಡಲಾಗುತ್ತಿದೆ.
India@75:ರಾಣಿ ಚನ್ನಮ್ಮನಿಗೆ ಗುರಿಯಿಟ್ಟಿದ್ದ ಗುಂಡಿಗೆ ಎದೆಕೊಟ್ಟ ವೀರ ಅಮಟೂರು ಬಾಳಪ್ಪ
ತಲುಪುವುದು ಹೇಗೆ?
ಮಡಿಕೇರಿ ನಗರದ ಹೃದಯ ಭಾಗದಲ್ಲಿರುವ ಕೋಟೆ ಆವರಣದಲ್ಲಿ ಅಪ್ಪಯ್ಯ ಗೌಡರ ಗಲ್ಲಿಗೇರಿಸಿದ ಸ್ಥಳ ಇದೆ. ಅಲ್ಲಿ ಸಣ್ಣ ಕಲ್ಲಿನ ಕೆತ್ತನೆಯಲ್ಲಿ ಈ ಪ್ರಕರಣವನ್ನು ಉಲ್ಲೇಖಿಸಲಾಗಿದೆ. ಬಸ್ ನಿಲ್ದಾಣದಿಂದ ಕೋಟೆ ಕೇವಲ ಅರ್ಧ ಕಿ.ಮೀ. ದೂರದಲ್ಲಿದೆ. ಜ.ತಿಮ್ಮಯ್ಯ ವೃತ್ತದಿಂದ ಕೇವಲ 200 ಮೀ. ಅಂತರದಲ್ಲಿದೆ. ಬಸ್‌ನಲ್ಲಿ ಮಡಿಕೇರಿ ತಲುಪಿದರೆ ಬಸ್‌ಸ್ಟ್ಯಾಂಡಿನಿಂದ ಮಡಿಕೇರಿ ಕೋಟೆಗೆ ಕಾಲ್ನಡಿಗೆಯಲ್ಲೇ ತೆರಳಬಹುದು.
- ವಿಘ್ನೇಶ್ ಎಂ. ಭೂತನಕಾಡು