ಅಕ್ಟೋಬರ್ 21, 1824. ಬ್ರಿಟಿಷ್ ಅಧಿಕಾರಿ, ಧಾರವಾಡದ ಕಲೆಕ್ಟರ್ ಆಗಿದ್ದ ಸೇಂಟ್ ಜಾನ್ ಥ್ಯಾಕರೆ ನೇತೃತ್ವದಲ್ಲಿ ಬ್ರಿಟಿಷ್ ಸೈನ್ಯ ಕಿತ್ತೂರಿನ ಮೇಲೆ ಆಕ್ರಮಣ ಮಾಡಲು ಸನ್ನದ್ಧವಾಗಿತ್ತು. ಕಿತ್ತೂರು ಕೋಟೆ ಎದುರು ನೆರೆದಿತ್ತು.
1824ರಲ್ಲಿ ಬೆಳಗಾವಿಯ ಕಿತ್ತೂರು ಸಂಸ್ಥಾನದ ಮೇಲೆ ಬ್ರಿಟಿಷರ ಕಣ್ಣು ಬಿದ್ದಿತ್ತು. ಈ ಸಂಸ್ಥಾನವನ್ನು ಹೇಗಾದರೂ ಮಾಡಿ ಕೈ ವಶ ಮಾಡಿಕೊಳ್ಳಬೇಕೆಂದು ಬ್ರಿಟಿಷರು ಹೊಂಚುಹಾಕಿದ್ದರು. ಆದರದು ಸುಲಭದ ಮಾತಾಗಿರಲಿಲ್ಲ. ಕಿತ್ತೂರು ಸಂಸ್ಥಾನ ಚಿಕ್ಕದಾಗಿದ್ದರೂ, ಪರಕೀಯರಿಂದ ಈ ಸಂಸ್ಥಾನ ಕಾಪಾಡಲು ಪ್ರಾಣವನ್ನೇ ಪಣಕೊಡಲು ಸಿದ್ಧವಾಗಿದ್ದ ಸಾವಿರಾರು ಶೂರರು ಅಲ್ಲಿದ್ದರು. ಅಂಥವರಲ್ಲಿ ಒಬ್ಬ ವೀರಕೇಸರಿ ಅಮಟೂರು ಬಾಳಪ್ಪ. ಈತ ಕಿತ್ತೂರು ರಾಣಿ ಚನ್ನಮ್ಮ ತಾಯಿಯ ಅಂಗರಕ್ಷಕನಾಗಿದ್ದ.
ಅಕ್ಟೋಬರ್ 21, 1824. ಬ್ರಿಟಿಷ್ ಅಧಿಕಾರಿ, ಧಾರವಾಡದ ಕಲೆಕ್ಟರ್ ಆಗಿದ್ದ ಸೇಂಟ್ ಜಾನ್ ಥ್ಯಾಕರೆ ನೇತೃತ್ವದಲ್ಲಿ ಬ್ರಿಟಿಷ್ ಸೈನ್ಯ ಕಿತ್ತೂರಿನ ಮೇಲೆ ಆಕ್ರಮಣ ಮಾಡಲು ಸನ್ನದ್ಧವಾಗಿತ್ತು. ಕಿತ್ತೂರು ಕೋಟೆ ಎದುರು ನೆರೆದಿತ್ತು. ಎರಡು ದಿನಗಳ ಚಿಕ್ಕಪುಟ್ಟಕಾದಾಟಗಳ ನಂತರ ಅ.23ರಂದು ಕಿತ್ತೂರು ಕೋಟೆ ಮೇಲೆ ಬ್ರಿಟಿಷರು ಫಿರಂಗಿ ದಾಳಿ ನಡೆಸಿದಾಗ ಇನ್ನೇನು ಕಿತ್ತೂರು ಬ್ರಿಟಿಷರ ವಶವಾಯಿತು ಅಂದುಕೊಂಡ ಸಂದರ್ಭ ಅದು. ಆಗ ಸರದಾರ ಗುರುಸಿದ್ದಪ್ಪನವರ ಮುಂದಾಳತ್ವದಲ್ಲಿ ಕಿತ್ತೂರಿನ ಸೈನ್ಯ, ಬ್ರಿಟಿಷರ ಮೇಲೆ ಮುಗಿಬಿತ್ತು. ರಾಣಿ ಚನ್ನಮ್ಮಳನ್ನು ಸೆರೆಹಿಡಿಯಲು ಅಥವಾ ಹತ್ಯೆ ಮಾಡಲೆಂದು ಬ್ರಿಟಿಷರು ಸಂಚು ರೂಪಿಸಿದ್ದರು. ಇಂಥ ಪರಿಸ್ಥಿತಿಯಲ್ಲಿ ರಾಣಿ ಚನ್ನಮ್ಮಳಿಗೆ ಬೆಂಗಾವಲಾಗಿದ್ದ ಆಕೆಯ ಅಂಗರಕ್ಷಕ ಅಮಟೂರು ಬಾಳಪ್ಪ ಸುತ್ತಮುತ್ತಲೂ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದ.
India@75: 1834 ರ ಅಮರಸುಳ್ಯಕಾಟಕಾಯಿ ಸಮರದಲ್ಲಿ ಹುತಾತ್ಮರಾದ ಹೋರಾಟಗಾರ ಅಪ್ಪಯ್ಯ ಗೌಡ
ಯುದ್ಧದ ಸಂದರ್ಭದಲ್ಲಿ ಥ್ಯಾಕರೆಯು ರಾಣಿ ಚನ್ನಮ್ಮಳತ್ತ ಮುನ್ನುಗ್ಗಿ ತನ್ನ ಪಿಸ್ತೂಲಿನಿಂದ ಆಕೆಗೆ ಗುರಿ ಇಟ್ಟ. ಇದನ್ನು ಗಮನಿಸಿದ ಅಮಟೂರು ಬಾಳಪ್ಪ ಒಂದು ಕ್ಷಣವನ್ನೂ ವ್ಯಯಿಸದೆ ತನ್ನ ಬಳಿ ಇದ್ದ ಡಬಲ್ ಬ್ಯಾರೆಲ್ ಬಂದೂಕಿನಿಂದ ಗುರಿ ಇಟ್ಟ. ಥ್ಯಾಕರೆಯ ಎದೆಭಾಗಕ್ಕೆ ಗುಂಡು ತಾಗಿ ಆತ ರಕ್ತದ ಮಡುವಿನಲ್ಲಿ ಬಿದ್ದು ಮೃತಪಟ್ಟ. ಅಂದಿಗೆ ಆ ಯುದ್ಧ ಮುಗಿಯಿತು. ಕಿತ್ತೂರು ಬ್ರಿಟಿಷರ ವಶವಾಗುವುದು ತಪ್ಪಿತು. ಮತ್ತೆ ಕಿತ್ತೂರು ಕೋಟೆ ಮೇಲೆ ನಂದಿಧ್ವಜ ರಾರಾಜಿಸಿತು. ಸೊಕ್ಕಿನಿಂದ ಮೆರೆಯುತ್ತಿದ್ದ ಬ್ರಿಟಿಷರಿಗೆ ಥ್ಯಾಕರೆಯ ಸಾವಿನಿಂದ ತಕ್ಕ ಪಾಠವಾಯಿತು.
ಆದರೆ, ಕಿತ್ತೂರಿನಲ್ಲಿ ಆದ ಸೋಲಿನ ಸೇಡು ಬ್ರಿಟಿಷರ ಎದೆಯಲ್ಲಿ ಕೊತ ಕೊತ ಕುದಿಯುತ್ತಿತ್ತು. ಬ್ರಿಟಿಷರು 2ನೇ ಬಾರಿ ಕಲೆಕ್ಟರ್ ಚಾಪ್ಲಿನ್ ನೇತೃತ್ವದಲ್ಲಿ ಕಿತ್ತೂರು ಮೇಲೆ ಯುದ್ಧ ಸಾರಿದರು. ಡಿಸೆಂಬರ್ 3, 1824ರಂದು ಅಪಾರ ಸೈನ್ಯದೊಂದಿಗೆ ಆಗಮಿಸಿದ ಬ್ರಿಟಿಷರು, ಕಿತ್ತೂರು ಕೋಟೆ ಮೇಲೆ ಭೀಕರ ಆಕ್ರಮಣ ಮಾಡಿದರು. ಇದೇ ವೇಳೆ ಮಲ್ಲಪ್ಪ ಶೆಟ್ಟಿ, ವೆಂಕಟರಾಯನ ಕುತಂತ್ರದಿಂದ ಮದ್ದಿನಲ್ಲಿ ಮಣ್ಣು, ಸಗಣಿ ಬೆರೆಸಿ, ಕಿತ್ತೂರಿನ ಕೋಟೆ ಮೇಲಿನ ಫಿರಂಗಿಗಳು ನಂದುವಂತೆ ನೋಡಿಕೊಂಡರು. ಈ ಯುದ್ಧದಲ್ಲೂ ರಾಣಿ ಚನ್ನಮ್ಮಳಿಗೆ ಬೆಂಗಾವಲಾಗಿದ್ದ ಅಮಟೂರು ಬಾಳಪ್ಪ ಶೌರ್ಯದಿಂದ ಕಾದಾಡಿದ. ತನ್ನ ಕೊನೆ ಉಸಿರು ಇರುವವರೆಗೂ ರಾಣಿ ಚನ್ನಮ್ಮಳ ಬಳಿ ಒಬ್ಬನೇ ಒಬ್ಬ ಬ್ರಿಟಿಷ್ ಸೈನಿಕ ಸುಳಿಯದಂತೆ ನೋಡಿಕೊಂಡ. ಹೋರಾಡುತ್ತಲೇ ನಿಶಸ್ತ್ರನಾದ. ಕೊನೆಯಲ್ಲಿ ಚಾಪ್ಲಿನ್ ಚನ್ನಮ್ಮಳಿಗೆ ಗುಂಡು ಹಾರಿಸಲು ಮುಂದಾದಾಗ ಆ ಗುಂಡೇಟಿಗೆ ತನ್ನ ಎದೆ ಕೊಟ್ಟು ನಿಂತು ಹುತಾತ್ಮನಾದ.
India@75:ಬ್ರಿಟಿಷರ ವಿರುದ್ಧ ಹೋರಾಡಿದ ಹಿಂದುಳಿದ ಜಾತಿಯ ವೀರ ಮಹಿಳೆಯರು
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕು ನಿಜಾರ್ಥದಲ್ಲಿ ಗಂಟುಮೆಟ್ಟಿನ ನಾಡು. ಈ ತಾಲೂಕಿನಲ್ಲಿ ತಾಯಿ ಚನ್ನಮ್ಮ, ಶೂರ ರಾಯಣ್ಣ ಮೊದಲ್ಗೊಂಡಂತೆ ಸಾವಿರಾರು ಸ್ವಾತಂತ್ರ್ಯ ಕಲಿಗಳು ಈ ನೆಲದಲ್ಲಿ ಆಗಿ ಹೋಗಿದ್ದಾರೆ. ಇವರಲ್ಲಿ ಅಮಟೂರಿನ ವೀರಕೇಸರಿ ಬಾಳಪ್ಪ ಕೂಡ ಒಬ್ಬರು.
ತಲುಪುವುದು ಹೇಗೆ?
ಬೆಳಗಾವಿಯಿಂದ ಬೈಲಹೊಂಗಲ 55 ಕಿ.ಮೀ. ದೂರದಲ್ಲಿದ್ದು, ಅಲ್ಲಿನ ಎಪಿಎಂಸಿ ಮಾರುಕಟ್ಟೆಬಳಿ ಇರುವ ಚನ್ನಮ್ಮ ವೃತ್ತದಿಂದ ದಕ್ಷಿಣಕ್ಕೆ ಧಾರವಾಡ ಮಾರ್ಗವಾಗಿ 1 ಕಿ.ಮೀ. ಸಾಗಿದರೆ, ವೀರಕೇಸರಿ ಅಮಟೂರು ಬಾಳಪ್ಪನವರ ಹೆಸರಿನ ಮಹಾದ್ವಾರ ಸಿಗುತ್ತದೆ. ಅಲ್ಲಿಂದ 5 ಕಿ.ಮೀ ದಕ್ಷಿಣಕ್ಕೆ ಸಾಗಿದರೆ ನೀವು ವೀರಕೇಸರಿ ಬಾಳಪ್ಪನವರ ಹುಟ್ಟೂರು ಅಮಟೂರು ಗ್ರಾಮ ತಲುಪಬಹುದು. ಗ್ರಾಮದಲ್ಲಿ ಬಾಳಪ್ಪನವರ ಸ್ಮರಣಾರ್ಥ ಉದ್ಯಾನ ಹಾಗೂ ಪ್ರತಿಮೆ ಸ್ಥಾಪಿಸಲಾಗಿದೆ.
- ಚನ್ನಬಸಪ್ಪ ರೊಟ್ಟಿ