India@75: ಸ್ವಾತಂತ್ರ್ಯ ಹೋರಾಟದ ಪ್ರಾಂಗಣ ಹಾಸನದ ಜ್ಯುಬಿಲಿಹಾಳ್‌ ಮೈದಾನ

By Suvarna NewsFirst Published Aug 7, 2022, 4:06 PM IST
Highlights

ಸ್ವಾತಂತ್ರ್ಯ ಹೋರಾಟದಲ್ಲಿ ಹಾಸನ ಜಿಲ್ಲೆಯ ಕೊಡುಗೆ ಅನನ್ಯವಾದುದು. ಸ್ವಾತಂತ್ರ್ಯ ಹೋರಾಟಗಾರರೆಲ್ಲರೂ ತಮ್ಮ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸುತ್ತಿದ್ದುದೇ ಇಲ್ಲಿನ ಜ್ಯುಬಿಲಿಹಾಳ್‌ ಮೈದಾನದಲ್ಲಿ.

ಸ್ವಾತಂತ್ರ್ಯ ಹೋರಾಟದಲ್ಲಿ ಹಾಸನ ಜಿಲ್ಲೆಯ ಕೊಡುಗೆ ಅನನ್ಯವಾದುದು. ಸ್ವಾತಂತ್ರ್ಯ ಹೋರಾಟಗಾರರೆಲ್ಲರೂ ತಮ್ಮ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸುತ್ತಿದ್ದುದೇ ಇಲ್ಲಿನ ಜ್ಯುಬಿಲಿಹಾಳ್‌ ಮೈದಾನದಲ್ಲಿ.

ಹಾಸನ ನಗರದ ಹೃದಯ ಭಾಗದಲ್ಲಿಯೇ ಇರುವ ಈ ಜ್ಯುಬಿಲಿಹಾಳ್‌ ಮೈದಾನ ಪ್ರಸ್ತುತ ಮೈದಾನವಾಗಿ ಉಳಿದಿಲ್ಲ. ಬದಲಿಗೆ ಅದೀಗ ಜಿಲ್ಲಾ ಕೇಂದ್ರ ಗ್ರಂಥಾಲಯದ ಆವರಣವಾಗಿದೆ. ಮೈದಾನದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲೇ ನಿರ್ಮಾಣವಾದ ಕಟ್ಟಡವೊಂದಿದ್ದು, ಇಂದಿಗೂ ಅದೇ ಕಟ್ಟಡದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯವಿದೆ. ಈ ಗ್ರಂಥಾಲಯದ ಮುಂದಿರುವ ಮೈದಾನವೇ ಜ್ಯುಬಿಲಿಹಾಳ್‌ ಮೈದಾನ.

ಜ್ಯುಬಿಲಿಹಾಳ್‌ ಸ್ವಾತಂತ್ರ್ಯ ಪೂರ್ವದಲ್ಲಿ ಕುದುರೆಗಳು ಮೇಯುವ ಮೈದಾನವಾಗಿತ್ತು. ಇದೇ ಮೈದಾನದ ಪಕ್ಕದಲ್ಲೇ ಇದ್ದ ಕಟ್ಟಿನಕೆರೆ (ಹಿಂದೆ ಅದೊಂದು ಕೆರೆ) ಪ್ರಸ್ತುತ ಬಸ್‌ ನಿಲ್ದಾಣವಾಗಿದೆ. ಕೆರೆ ಪಕ್ಕ ಇದ್ದ ಮೈದಾನದಲ್ಲಿ ಕುದುರೆಗಳು ಮೇಯುವಂತಹ ಜೊಂಡಷ್ಟೇ ಬೆಳೆಯುತ್ತಿತ್ತು.

India@75:ಹೋರಾಟಗಾರರ ಅಡ್ಡೆ ಚಿಕ್ಕೋಡಿಯ ಬಸವಪ್ರಭು ಕೋರೆ

ಹೋರಾಟಗಾರರು ಸೇರುತ್ತಿದ್ದ ಜಾಗ:

ಹಾಸನ ಜಿಲ್ಲೆಯಲ್ಲಿ ಕೂಡ ನೂರಾರು ಸ್ವಾತಂತ್ರ್ಯ ಹೋರಾಟಗಾರರಿದ್ದರು. ಅವರ ಪೈಕಿ ಬೋರಣ್ಣಗೌಡ, ಎಚ್‌.ಎಸ್‌.ಸಿದ್ಧನಂಜಪ್ಪ, ಹಾರನಹಳ್ಳಿ ರಾಮಸ್ವಾಮಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್‌, ಎಲ್‌.ಟಿ.ಕಾರ್ಲೆ, ಕೆ.ಸಿ.ಕರಿಗೌಡರು, ಸಂಪತ್‌ ಅಯ್ಯಂಗಾರ್‌, ಚನ್ನರಾಯಪಟ್ಟಣದ ಜೋಗಣ್ಣಗೌಡರು, ಪಂಡಿತ್‌ ಶ್ರೀನಿವಾಸ್‌ ಅಯ್ಯಂಗಾರ್‌, ಹೊಳೆನರಸೀಪುರದ ಸಿಂಗ್ರಿಗೌಡ, ಬೇಲೂರಿನ ನಂಜುಂಡಯ್ಯ, ಪುಪ್ಪೇಗೌಡ, ಸುದ್ದ ಮಂಜಪ್ಪಗೌಡ, ಅರಸೀಕೆರೆಯ ಡಾ.ಕರಿಸಿದ್ದಪ್ಪ, ಯಶೋಧರಮ್ಮ ದಾಸಪ್ಪ, ಸಕಲೇಶಪುರದ ಎಸ್‌.ಕೆ.ಕರೀಂಖಾನ್‌ ಹೀಗೆ ಜಿಲ್ಲೆಯ ಹಲವಾರು ಸ್ವಾತಂತ್ರ್ಯ ಹೋರಾಟಗಾರರು ಇದೇ ಮೈದಾನದಲ್ಲಿ ಒಟ್ಟಾಗಿ ಸೇರಿ ತಮ್ಮ ಹೋರಾಟದ ಮುಂದಿನ ಹಾದಿಯನ್ನು ನಿರ್ಧರಿಸುತ್ತಿದ್ದರು.

ಗಾಂಧೀಜಿ ಭೇಟಿ:

ಸ್ವಾತಂತ್ರ್ಯ ಹೋರಾಟ ತೀವ್ರವಾಗಿದ್ದ 1940ರ ದಶಕದಲ್ಲಿ ಈ ಜ್ಯುಬಿಲಿಹಾಳ್‌ ಮೈದಾನಕ್ಕೆ ಮಹಾತ್ಮ ಗಾಂಧೀಜಿಯವರು ಕೂಡ ಭೇಟಿ ನೀಡಿದ್ದರು. ಅಂದಿನ ಕಾಲಕ್ಕೇ ಹಾಸನ ಜಿಲ್ಲೆಯ ಅರಸೀಕೆರೆಗೆ ರೈಲ್ವೆ ಸಂಪರ್ಕ ಇತ್ತು. ಹಾಗಾಗಿ ಗಾಂಧೀಜಿಯವರು ರೈಲಿನ ಮೂಲಕ ಅರಸೀಕೆರೆಗೆ ಬಂದು ಅಲ್ಲಿಂದ ಕಾರಿನ ಮೂಲಕ ಹಾಸನಕ್ಕೆ ಬಂದು ಇದೇ ಜ್ಯುಬಿಲಿಹಾಳ್‌ ಮೈದಾನದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನುಉದ್ದೇಶಿಸಿ ಭಾಷಣ ಮಾಡಿದ್ದರು. ಹೀಗಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಈ ಜ್ಯುಬಿಲಿಹಾಳ್‌ ಮೈದಾನ ಸಾಕ್ಷಿಯಾಗಿದೆ.

India@75:ಬ್ರಿಟಿಷರು, ಜಮೀನ್ದಾರರಿಗೆ ಸಿಂಹಸ್ವಪ್ನವಾಗಿದ್ದ ಬಾಗಲಕೋಟೆಯ ಧೀರ ಸಿಂಧೂರ ಲಕ್ಷ್ಮಣ

ತಲುಪುವುದು ಹೇಗೆ?

ಹಾಸನ ಸಿಟಿ ಬಸ್‌ ನಿಲ್ದಾಣದಿಂದ ಮುನ್ನೂರು ಮೀಟರ್‌ ದೂರದಲ್ಲೇ ಈ ಜ್ಯುಬಿಲಿಹಾಳ್‌ ಮೈದಾನವಿದೆ. ಅದರ ತುಂಬೆಲ್ಲಾ ಮರಗಿಡಗಳನ್ನು ಬೆಳೆಸಲಾಗಿದೆ.

- ಎಚ್‌.ಟಿ.ಮೋಹನ್‌ಕುಮಾರ್‌

click me!