ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ ನಡೆದ ಜನರ ಬಂಡಾಯ ಸ್ವಾತಂತ್ರ್ಯ ಹೋರಾಟದಲ್ಲಿ ಅಚ್ಚಳಿಯದೇ ಉಳಿದಿದೆ. ಈ ಬಂಡಾಯ ನಡೆದದ್ದು ಪ್ರಜಾಸಂಘದ ನೇತೃತ್ವದಲ್ಲಿ.
ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ ನಡೆದ ಜನರ ಬಂಡಾಯ ಸ್ವಾತಂತ್ರ್ಯ ಹೋರಾಟದಲ್ಲಿ ಅಚ್ಚಳಿಯದೇ ಉಳಿದಿದೆ. ಈ ಬಂಡಾಯ ನಡೆದದ್ದು ಪ್ರಜಾಸಂಘದ ನೇತೃತ್ವದಲ್ಲಿ. ಸಂಘದ ಅಧ್ಯಕ್ಷನನ್ನು ಬಂಧಿಸಿದ್ದಕ್ಕೆ ರೊಚ್ಚಿಗೆದ್ದ ಹೋರಾಟಗಾರರು ಜೈಲು ಧ್ವಂಸ ಮಾಡಿ, ಎಂಟು ಪೊಲೀಸರನ್ನು ಕೊಂದುಹಾಕಿದ್ದರು.
ದೇಶದಲ್ಲಿ ಬ್ರಿಟಿಷರು ವಿಧಿಸಿದ್ದ ತೆರಿಗೆ ವಿರೋಧಿಸಿ 1937ರಲ್ಲಿ ಕರ ನಿರಾಕರಣೆ ಸತ್ಯಾಗ್ರಹ ನಡೆಯುತ್ತಿತ್ತು. ಕರ ನಿರಾಕರಣೆ ಕಾನೂನು ಭಂಗ ಚಳವಳಿಯ ಕೊನೆಯ ಅಸ್ತ್ರವಾಗಿತ್ತು. ಈ ವೇಳೆ ರಾಮದುರ್ಗ ಸಂಸ್ಥಾನದಲ್ಲಿ ಆಳ್ವಿಕೆ ಮಾಡುತ್ತಿದ್ದ ರಾಜಾಸಾಹೇಬ ಬ್ರಿಟಿಷರ ತೆರಿಗೆ ಜತೆ ಮತ್ತಷ್ಟುಹೆಚ್ಚಿನ ತೆರಿಗೆಯನ್ನು ಸಂಸ್ಥಾನದ ಮೇಲೆ ಹೇರಿದ್ದರು.
undefined
ಇದೇ ವೇಳೆ ಬರಗಾಲ ಎದುರಾಯಿತು. ಹೀಗಾಗಿ ಜನರು ತೆರಿಗೆ ಕಡಿತಗೊಳಿಸಿ ಎಂದು ರಾಜಾಸಾಹೇಬ ಹತ್ತಿರ ವಿನಂತಿಸಿಕೊಂಡರು. ಇದಕ್ಕೆ ರಾಜಾಸಾಹೇಬ ಸೊಪ್ಪು ಹಾಕಲಿಲ್ಲ. ಹೀಗಾಗಿ ರಾಮದುರ್ಗ ಸಂಸ್ಥಾನದಲ್ಲಿ ಕರನಿರಾಕರಣೆ ಸತ್ಯಾಗ್ರಹ ಆರಂಭಗೊಂಡಿತು. ವಕೀಲ ಬಿ.ಎನ್.ಮುನವಳ್ಳಿ ಅಧ್ಯಕ್ಷತೆಯಲ್ಲಿ ಪ್ರಜಾಸಂಘ ಹುಟ್ಟಿಕೊಂಡಿತು.
India@75: ಹೋರಾಟಗಾರರ ಅಡ್ಡೆ ಚಿಕ್ಕೋಡಿಯ ಬಸವಪ್ರಭು ಕೋರೆ ಮನೆ
ಪ್ರಜಾಸಂಘ ರಾಮದುರ್ಗ, ಸುರೇಬಾನ, ಮೆಣಸಗಿಯಲ್ಲಿ ಮೂರು ಸ್ವಯಂ ಸೇವಕರ ಸಂಘಟನೆಗಳನ್ನು ಮಾಡಿಕೊಂಡು ಹಳ್ಳಿಹಳ್ಳಿಗಳಲ್ಲಿ ತಿರುಗಾಡಿ ಸ್ವಾತಂತ್ರ್ಯದ ಜಾಗೃತಿ ಮೂಡಿಸತೊಡಗಿತು. ಪೊಲೀಸರು ಊರೊಳಗೆ ಬರದಂತೆ ಬಹಿಷ್ಕಾರ ಹಾಕಿತು. ಈ ನಡೆ ಸ್ವಾತಂತ್ರ್ಯ ಚಳವಳಿಗೆ ಮತ್ತಷ್ಟುಇಂಬು ನೀಡಿತು. ನಾ.ಸು.ಹರ್ಡಿಕರ, ಗಂಗಾಧರರಾವ್ ದೇಶಪಾಂಡೆ ಇಲ್ಲಿಗೆ ಬಂದು ಹೋರಾಟದ ಗತಿ ಅವಲೋಕನ ಮಾಡುತ್ತಿದ್ದರು.
ಭೂ ಕಂದಾಯವನ್ನು ಅರ್ಧದಷ್ಟುಹಿಂದಕ್ಕೆ ಪಡೆಯಬೇಕು ಎಂಬ ಹೋರಾಟಗಾರರ ಬೇಡಿಕೆಗಳಿಗೆ ಸ್ಪಂದಿಸದಿದ್ದಾಗ ಪ್ರಜಾಸಂಘ ಉಗ್ರ ಹೋರಾಟಕ್ಕೆ ಅಣಿಯಾಯಿತು. ಬ್ರಿಟಿಷರು ಮತ್ತು ರಾಜಾಸಾಹೇಬ ಹೋರಾಟ ಹತ್ತಿಕ್ಕಲು ಸಂಸ್ಥಾನದಲ್ಲಿ 144 ಸೆಕ್ಷನ್ ಜಾರಿ ಮಾಡಿದರು. ಇದನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಜಾಸಂಘದ ಅಧ್ಯಕ್ಷ ಬಿ.ಎನ್.ಮುನವಳ್ಳಿ ಅವರನ್ನು ಬಂಧಿಸಲಾಯಿತು. ಅವರನ್ನು ಬಿಡುಗಡೆ ಮಾಡಬೇಕು ಎಂದು ಹೋರಾಟಗಾರರು ಜೈಲಿಗೆ ಮುತ್ತಿಗೆ ಹಾಕಿದರು. ಬಿಡುಗಡೆಯಾಗದಿದ್ದಾಗ ರೊಚ್ಚಿಗೆದ್ದ ಹೋರಾಟಗಾರರು ಜೈಲಿಗೆ ಬೆಂಕಿ ಇಟ್ಟು, ಅಲ್ಲಿದ್ದ ಎಂಟು ಜನ ಪೊಲೀಸ್ ಅಧಿಕಾರಿಗಳನ್ನು ಹತ್ಯೆ ಮಾಡಿದರು. ಈ ವೇಳೆ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ನಾಲ್ಕು ಜನ ಹೋರಾಟಗಾರರು ಹುತಾತ್ಮರಾದರು. ಅಲ್ಲದೇ ಎಂಟು ಜನರಿಗೆ ಗಲ್ಲು ಶಿಕ್ಷೆಯಾಯಿತು.
ಪ್ರಜಾಸಂಘದ ಹೋರಾಟದಲ್ಲಿ ಮಹಾದೇವಪ್ಪ ಪಟ್ಟಣ, ಲಿಂಗನಗೌಡ ಪಾಟೀಲ, ಮರುಳಾರಾಧ್ಯ ಶಾಸ್ತ್ರಿ, ಮಹಾದೇವಪ್ಪ ಬಡಕಲಿ, ಗಿರಿಧರಲಾಲ ಲಾಠಿ, ಸಿದ್ದಪ್ಪ ಮೇಟಿ, ರಾಮಪ್ಪ ಶಾಡ್ಲಗೇರಿ, ಈರಪ್ಪ ಡೋಣಿ, ನಿಂಗಪ್ಪ ಮೇಟಿ, ಮರಿಯಪ್ಪ ಪೂಜಾರಿ, ಟೀಕಪ್ಪ ಜಾಲೋಜಿ, ಫಕೀರಸಾಬ ಅಗಸರ, ಮಾನಪ್ಪ ಕೊಳ್ಳಿ, ಲಕ್ಕಪ್ಪ ಮುರುಡಿ, ಮಲ್ಲಪ್ಪ ಕುಂಬಾರ, ಮಹಾಲಿಂಗಯ್ಯ ಹಿರೇಮಠ ಹೀಗೆ ಅನೇಕರು ಭಾಗಿಯಾಗಿದ್ದರು. ಇವರೆಲ್ಲರ ಸ್ಮರಣಾರ್ಥ ರಾಮದುರ್ಗದ ತೇರು ಬಜಾರ್‌ನಲ್ಲಿ ಪ್ರಜಾಸಂಘದ ಅಧ್ಯಕ್ಷ ಬಿ.ಎನ್.ಮುನವಳ್ಳಿ ಅವರ ಪುತ್ಥಳಿ ನಿರ್ಮಿಸಲಾಗಿದೆ.
India@75:ದಾಸ್ಯದ ವಿರುದ್ಧ ದಂಗೆ ನಡೆದ ಸ್ಥಳ ಬೆಂಗಳೂರು ದಂಡು
ಹೋಗುವುದು ಹೇಗೆ?
ಬೆಳಗಾವಿಯಿಂದ ರಾಮದುರ್ಗ 110 ಕಿ.ಮೀ. ಇದೆ. ನೇರವಾಗಿ ಬಸ್ ಸೌಲಭ್ಯವಿದೆ. ರಾಮದುರ್ಗ ಬಸ್ ನಿಲ್ದಾಣದಿಂದ 2 ಕಿ.ಮೀ. ದೂರದಲ್ಲಿ ಈ ಪುತ್ಥಳಿ ಇದೆ.