ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದಲ್ಲಿ ರಾಷ್ಟ್ರಧ್ವಜ ತಯಾರಿಸುವ ಏಕೈಕ ಸಂಸ್ಥೆಯಾದ ಖಾದಿ ಗ್ರಾಮೋದ್ಯೋಗ ಕೇಂದ್ರದ ವಹಿವಾಟು ದಾಖಲೆ ಪ್ರಮಾಣದಲ್ಲಿ ಏರಿಕೆ
ಶಿವಾನಂದ ಗೊಂಬಿ
ಹುಬ್ಬಳ್ಳಿ(ಆ.05): ಧ್ವಜ ಸಂಹಿತೆಗೆ ತಿದ್ದುಪಡಿ ತಂದು ಪಾಲಿಸ್ಟರ್ ಬಟ್ಟೆಯ ಧ್ವಜ ಮಾರಾಟಕ್ಕೆ ಅವಕಾಶ ಕಲ್ಪಿಸಿರುವುದಕ್ಕೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೂ ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದಲ್ಲಿ ರಾಷ್ಟ್ರಧ್ವಜ ತಯಾರಿಸುವ ಏಕೈಕ ಸಂಸ್ಥೆಯಾದ ಖಾದಿ ಗ್ರಾಮೋದ್ಯೋಗ ಕೇಂದ್ರದ ವಹಿವಾಟು ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಪ್ರಧಾನಿ ಮೋದಿ ಅವರು ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ವೇಳೆ ‘ಹರ್ ಘರ್ ತಿರಂಗಾ’ ಕಾರ್ಯಕ್ರಮ ಘೋಷಿಸಿದ ಹಿನ್ನೆಲೆಯಲ್ಲಿ ವಹಿವಾಟಿನಲ್ಲಿ ಏರಿಕೆ ದಾಖಲಾಗಿದೆ. ಒಂದು ವೇಳೆ ಈ ಅಭಿಯಾನಕ್ಕೆ ನಮ್ಮ ಕೇಂದ್ರದಿಂದಲೇ ರಾಷ್ಟ್ರಧ್ವಜ ಖರೀದಿಯಾಗುತ್ತಿದ್ದರೆ ಸಂಸ್ಥೆಗೆ ಮತ್ತಷ್ಟುದೊಡ್ಡಮಟ್ಟದ ಆದಾಯ ಬರುತ್ತಿತ್ತು ಎಂದು ಖಾದಿ ಕೇಂದ್ರದ ಅಧಿಕಾರಿಗಳು ಹೇಳಿದ್ದಾರೆ.
ಇಡೀ ದೇಶಕ್ಕೆ ಹುಬ್ಬಳ್ಳಿ ಬೆಂಗೇರಿಯ ‘ಖಾದಿ ಗ್ರಾಮೋದ್ಯೋಗ ಕೇಂದ್ರ’ವೇ ರಾಷ್ಟ್ರಧ್ವಜ ಸರಬರಾಜು ಮಾಡುತ್ತದೆ. ಹಳ್ಳಿ ಗ್ರಾಪಂ ಕಚೇರಿಯಿಂದ ಹಿಡಿದು ವಿದೇಶಗಳಲ್ಲಿನ ಭಾರತೀಯ ರಾಯಭಾರಿ ಕಚೇರಿಗಳ ಮೇಲೂ ಹಾರಾಡುವ ರಾಷ್ಟ್ರಧ್ವಜ ಇದೇ ಕೇಂದ್ರದಲ್ಲಿ ತಯಾರಾಗುತ್ತದೆ.
ಹೆಚ್ಚು ವಹಿವಾಟು:
ಪ್ರತಿ ವರ್ಷ ಸರಾಸರಿ .2 ಕೋಟಿಯಿಂದ .3 ಕೋಟಿ ಮೌಲ್ಯದ ರಾಷ್ಟ್ರ ಧ್ವಜವನ್ನು ಇದು ಮಾರಾಟ ಮಾಡುತ್ತಿದೆ. ಕಳೆದ ವರ್ಷ 2021-2022 ಆರ್ಥಿಕ ವರ್ಷದಲ್ಲಿ ಬರೋಬ್ಬರಿ .2.5 ಕೋಟಿ ಮೌಲ್ಯದ ರಾಷ್ಟ್ರಧ್ವಜ ಮಾರಾಟ ಮಾಡಿತ್ತು. ಆದರೆ ಈ ವರ್ಷ ಅಂದರೆ 2022-23ರ ಸಾಲಿನ ಏಪ್ರಿಲ್‌ನಿಂದ ಜುಲೈವರೆಗೆ ಬರೊಬ್ಬರಿ .1.5 ಕೋಟಿ ಮೌಲ್ಯದ ಧ್ವಜಗಳನ್ನು ಮಾರಾಟ ಮಾಡಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ ಕೇವಲ .82 ಲಕ್ಷ ವಹಿವಾಟು ನಡೆಸಿತ್ತು. ಇದರಿಂದಾಗಿ ಕಳೆದ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕಿಂತ ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ .68 ಲಕ್ಷ ಹೆಚ್ಚಿಗೆ ವಹಿವಾಟು ನಡೆಸಿದಂತಾಗಿದೆ.
ಜಿಮ್‌ನಲ್ಲಿ ಬೆವರಿಳಿಸಿದ ರಾಹುಲ್: ರಾಷ್ಟ್ರಧ್ವಜ ತಯಾರಿಕಾ ಘಟಕಕ್ಕೂ ಭೇಟಿ, ಪೊಲೀಸರ ನಡೆಗೆ ಆಕ್ರೋಶ
ಕಾರಣವೇನು?:
ಕೇಂದ್ರ ಸರ್ಕಾರ ಈ ವರ್ಷ ಆ.13ರಿಂದ 15ರವರೆಗೆ ಹರ್ ಘರ್ ತಿರಂಗಾ ಅಭಿಯಾನ ನಡೆಸಲು ಕರೆಕೊಟ್ಟಿದೆ. ಇದರಿಂದ ಸರ್ಕಾರಿ ಕಚೇರಿ, ಸಂಘ-ಸಂಸ್ಥೆಗಳು ಹೆಚ್ಚಿಗೆ ಧ್ವಜ ಖರೀದಿಸುತ್ತಿವೆ. ಇದರ ನಡುವೆಯೇ ಕೇಂದ್ರ ಸರ್ಕಾರ ಧ್ವಜ ಸಂಹಿತೆಗೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ಕಾಂಗ್ರೆಸ್ .7,11,500 ಮೌಲ್ಯದ ಧ್ವಜ ಖರೀದಿಸಿದೆ. ಇದನ್ನು ನೋಡಿ ಇದೀಗ ಬೇರೆ ಬೇರೆ ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳೂ ಗ್ರಾಮೋದ್ಯೋಗ ಕೇಂದ್ರದಿಂದಲೇ ಧ್ವಜ ಖರೀದಿಸಲು ಮುಂದಾಗುತ್ತಿವೆ. ಇದರಿಂದಾಗಿ ವಹಿವಾಟು ಜಾಸ್ತಿಯಾಗಿದೆ.
10 ಕೋಟಿ ಧ್ವಜ ನಾವೇ ತಯಾರಿಸುತ್ತಿದ್ದೆವು
ಹರ್ ಘರ್ ತಿರಂಗಾದಿಂದ ಅಭಿಯಾನಕ್ಕೆ 10 ಕೋಟಿ ಧ್ವಜ ಬೇಕಾಗುತ್ತಿತ್ತು. ಅಷ್ಟೊಂದು ಧ್ವಜ ತಯಾರಿಸುವ ಸಾಮರ್ಥ್ಯ ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕಿಲ್ಲ. ಹೀಗಾಗಿ ಧ್ವಜ ಸಂಹಿತೆಗೆ ತಿದ್ದುಪಡಿ ತರಲಾಗಿದೆ ಎಂಬುದು ಸರ್ಕಾರದ ಸ್ಪಷ್ಟನೆ. ನಮಗೆ ಮುಂಚಿತವಾಗಿಯೇ ತಿಳಿಸಿದ್ದರೆ ಅಷ್ಟೂಧ್ವಜ ತಯಾರಿಸಿಕೊಡುತ್ತಿದ್ದೆವು ಎಂದು ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರ ಹೇಳಿದೆ.