ಆ.7ರಂದು ಇಸ್ರೋದ ಚಿಕ್ಕ ರಾಕೆಟ್ ಎಸ್‌ಎಸ್‌ಎಲ್‌ವಿ ಉಡಾವಣೆ
ನವದೆಹಲಿ(ಆ.05): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆ.7ರಂದು 2 ಉಪಗ್ರಹಗಳನ್ನು ತಾನು ತಯಾರಿಸಿರುವ ಅತ್ಯಂತ ಚಿಕ್ಕ ‘ಸ್ಮಾಲ್ ಸ್ಯಾಟಲೈಟ್ ಲಾಂಚ್ ವೆಹಿಕಲ್’ (ಎಸ್‌ಎಸ್‌ಎಲ್‌ವಿ) ವಾಹಕದ ಮೂಲಕ ಹಾರಿಬಿಡುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷ ಆಗುತ್ತಿರುವ ನಿಮಿತ್ತ ದೇಶದ ಗ್ರಾಮೀಣ ಭಾಗದ 75 ಸರ್ಕಾರಿ ಶಾಲೆಗಳ 750 ವಿದ್ಯಾರ್ಥಿನಿಯರು ಸೇರಿ ತಯಾರಿಸಿರುವ 8 ಕೇಜಿ ತೂಕದ ‘ಆಜಾದಿ ಸ್ಯಾಟ್’ ಉಪಗ್ರಹವನ್ನು ಕಕ್ಷೆಗೆ ಕೊಂಡೊಯ್ಯಲಿದೆ. ಈ ವಾಹಕವು ತ್ರಿವರ್ಣ ಧ್ವಜವನ್ನೂ ನಭಕ್ಕೆ ಹೊತ್ತೊಯ್ಯಲಿರುವುದೂ ವಿಶೇಷ. ಈ ಹೊಸ ಪ್ರಯತ್ನದ ಮೂಲಕ ವಿಶ್ವದ ಚಿಕ್ಕ ರಾಕೆಟ್‌ಗಳ ಮಾರುಕಟ್ಟೆಗೆ ಅಡಿ ಇಡಲು ಇಸ್ರೋ ಸಜ್ಜಾಗಿದೆ. ಇದು ಎಸ್‌ಎಸ್‌ಎಲ್‌ವಿಯ ಮೊದಲ ಉಡಾವಣೆಯಾಗಿದ್ದು, 145 ಕೇಜಿ ತೂಕದ ಭೂ ಪರಿವೀಕ್ಷಣಾ ಉಪಗ್ರಹ ಮತ್ತು ‘ಆಜಾದಿ ಸ್ಯಾಟ್’ ಗಳನ್ನು ಹೊತ್ತೊಯ್ಯಲಿದೆ.
ಎಸ್‌ಎಸ್‌ಎಲ್‌ವಿ ಕಡಿಮೆ ಸುತ್ತುವ ಅವಧಿಯನ್ನು ಹೊಂದಿದ್ದು, ಕಡಿಮೆ ಎತ್ತರದ ಕಕ್ಷೆಗಳಿಗೆ ಉಪಗ್ರಹವನ್ನು ಸೇರಿಸುವ ಬಾಹ್ಯಾಕಾಶ ಬೇಡಿಕೆಯನ್ನು ಯಶಸ್ವಿಯಾಗಿ ಪೂರೈಸಲಿದೆ ಎಂದು ಇಸ್ರೋ ಅಧಿಕಾರಿಗಳು ಹೇಳಿದ್ದಾರೆ.
undefined
ಡೈನೋಸಾರ್ಸ್ ರೀತಿ ಮಾನವ ಕೂಡ ಭೂಮಿಯ ಮೇಲೆ ನಶಿಸಿ ಹೋಗ್ತಾನೆ: ಇಸ್ರೋ ಚೀಫ್ ಸೋಮನಾಥ್
ಯಾವಾಗ ಉಡಾವಣೆ:
ಈ ರಾಕೆಟ್‌ನ್ನು ಆ.7ರಂದು ಮುಂಜಾನೆ 9.18ಕ್ಕೆ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಉಡಾವಣೆ ಮಾಡಲಾಗುತ್ತದೆ. ಸುಮಾರು 13.2 ನಿಮಿಷಗಳ ಹಾರಾಟದ ಬಳಿಕ ಉಪಗ್ರಹಗಳನ್ನು ಈ ರಾಕೆಟ್ ಕಕ್ಷೆಗೆ ತಲುಪಿಸಲಿದೆ.
ಎಸ್‌ಎಸ್‌ಎಲ್‌ವಿ ವಿಶೇಷತೆ:
ಇಸ್ರೋದ ವರ್ಕ್ಹಾರ್ಸ್ ಎಂದೇ ಖ್ಯಾತಿ ಪಡೆದಿರುವ ಪಿಎಸ್‌ಎಲ್‌ವಿಗಿಂತ ಬರೋಬ್ಬರಿ 10 ಮೀ. ಚಿಕ್ಕದಾಗಿರುವ ಎಸ್‌ಎಸ್‌ಎಲ್‌ವಿ ಕೇವಲ 34 ಮೀ. ಉದ್ದ ಹಾಗೂ 2 ಮೀ. ವ್ಯಾಸವನ್ನು ಹೊಂದಿದೆ. ಈ ರಾಕೆಟ್ ಒಟ್ಟು 120 ಟನ್ ತೂಕವಿದ್ದು, ಸುಮಾರು 500 ಕೇಜಿ ಪೇಲೋಡ್ ಅನ್ನು 500 ಕಿ.ಮೀ. ದೂರದಲ್ಲಿರುವ ಕಕ್ಷೆಗೆ ತಲುಪಿಸುವ ಸಾಮರ್ಥ್ಯ ಹೊಂದಿದೆ.
ಆಜಾದಿ ಸ್ಯಾಟ್ ವಿಷೇಷತೆ:
ಸ್ವಾತಂತ್ರ್ಯ ದೊರಕಿ 75 ವರ್ಷ ಆದ ಕಾರಣ ದೇಶ ಇಂದು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದೆ. ಇದೇ ಸಂದರ್ಭದಲ್ಲಿ ವಿಶೇಷವಾಗಿ 75 ಪೇಲೋಡ್ ಇರುವ 75 ಗ್ರಾಮೀಣ ಸರ್ಕಾರಿ ಶಾಲೆಗಳ 750 ಮಕ್ಕಳು ‘ಆಜಾದಿ ಸ್ಯಾಟ್’ ಉಪಗ್ರಹ ಸಿದ್ಧಪಡಿಸಿದ್ದಾರೆ. ಇದು ‘ಆಜಾದಿ ಸ್ಯಾಟ್’ ವಿಶೇಷತೆ. ಈ ಮೂಲಕ ಬಾಹ್ಯಾಕಾಶ ಅಧ್ಯಯನದಲ್ಲಿ ಬಾಲಕಿಯರಿಗೂ ಪ್ರೇರಣೆ ನೀಡುವುದು ಇದರ ಹಿಂದಿನ ಉದ್ದೇಶ.