ವಿಶ್ವಕಪ್ 2019 ಪಾಕಿಸ್ತಾನಕ್ಕೆ ವಿಂಡೀಸ್‌ ದೈತ್ಯರ ಭೀತಿ!

By Web DeskFirst Published May 31, 2019, 12:20 PM IST
Highlights

ಮಾಜಿ ವಿಶ್ವಕಪ್ ಚಾಂಪಿಯನ್ಸ್‌ಗಳಾದ ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನ ನಡುವಿನ ಕಾಳಗಕ್ಕೆ ನಾಟಿಂಗ್‌ಹ್ಯಾಮ್ ಮೈದಾನ ಸಾಕ್ಷಿಯಾಗಲಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...

ನಾಟಿಂಗ್‌ಹ್ಯಾಮ್‌[ಮೇ.31]: ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ನ 2ನೇ ದಿನವಾದ ಶುಕ್ರವಾರ, ಮಾಜಿ ಚಾಂಪಿಯನ್‌ಗಳಾದ ವೆಸ್ಟ್‌ಇಂಡೀಸ್‌ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲಿವೆ. ಹೀನಾಯ ಫಾರ್ಮ್’ನಲ್ಲಿರುವ ಪಾಕಿಸ್ತಾನ 2 ವರ್ಷಗಳ ಹಿಂದೆ ಇಂಗ್ಲೆಂಡ್‌ನಲ್ಲಿ ಕಂಡ ಚಾಂಪಿಯನ್ಸ್‌ ಟ್ರೋಫಿ ಗೆಲುವಿನಿಂದ ಸ್ಫೂರ್ತಿ ಪಡೆಯುವ ಉತ್ಸಾಹದಲ್ಲಿದೆ. ಮತ್ತೊಂದೆಡೆ ತಾರಾ ಆಟಗಾರರ ಸೇರ್ಪಡೆಯಿಂದ ವೆಸ್ಟ್‌ಇಂಡೀಸ್‌ ಬಲಿಷ್ಠವಾಗಿ ತೋರುತ್ತಿದೆ.

ಪಾಕಿಸ್ತಾನ ಪ್ರಚಂಡ ವೇಗದ ಬೌಲರ್‌ಗಳನ್ನು ಹೊಂದಿದ್ದರೆ, ವೆಸ್ಟ್‌ಇಂಡೀಸ್‌ನಲ್ಲಿ ಹೊಡಿಬಡಿ ಬ್ಯಾಟ್ಸ್‌ಮನ್‌ಗಳ ದಂಡೇ ಇದೆ. ಮೊಹಮದ್‌ ಆಮೀರ್‌, ವಾಹಬ್‌ ರಿಯಾಜ್‌, ಶಾಹೀನ್‌ ಅಫ್ರಿದಿ ವರ್ಸಸ್‌ ಕ್ರಿಸ್‌ ಗೇಲ್‌, ಶಾಯ್‌ ಹೋಪ್‌, ಆ್ಯಂಡ್ರೆ ರಸೆಲ್‌ ನಡುವಿನ ಪೈಪೋಟಿ ಭಾರಿ ಕುತೂಹಲ ಮೂಡಿಸಿದೆ.

ಪಾಕ್‌ ಕಳಪೆ ಲಯ: ಪಾಕಿಸ್ತಾನ ತಾನಾಡಿರುವ ಕಳೆದ 10 ಏಕದಿನಗಳಲ್ಲಿ ಸೋಲು ಕಂಡಿದೆ. ಆಸೀಸ್‌ ವಿರುದ್ಧ 0-5ರಲ್ಲಿ ವೈಟ್‌ವಾಶ್‌ ಅನುಭವಿಸಿದ್ದ ಪಾಕ್‌, ಇಂಗ್ಲೆಂಡ್‌ ವಿರುದ್ಧ 0-4ರಲ್ಲಿ ಸರಣಿ ಸೋತಿತ್ತು. ಅಭ್ಯಾಸ ಪಂದ್ಯದಲ್ಲಿ ಆಫ್ಘಾನಿಸ್ತಾನಕ್ಕೆ ಶರಣಾಗಿತ್ತು. ಆದರೆ 2017ರ ಚಾಂಪಿಯನ್ಸ್‌ ಟ್ರೋಫಿಗೂ ಇದೇ ರೀತಿ ಕಳಪೆ ಲಯದೊಂದಿಗೆ ಕಾಲಿಟ್ಟಿದ್ದ ಪಾಕಿಸ್ತಾನ, ಬಲಿಷ್ಠ ತಂಡಗಳನ್ನು ಸೋಲಿಸಿ ಚಾಂಪಿಯನ್‌ ಆಗಿತ್ತು. ಮತ್ತೊಮ್ಮೆ ಅಂಥದ್ದೇ ಪವಾಡವನ್ನು ಪಾಕಿಸ್ತಾನ ಎದುರು ನೋಡುತ್ತಿದೆ.

ವಿಂಡೀಸ್‌ ಭರ್ಜರಿ ಲಯ: ಐರ್ಲೆಂಡ್‌ನಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಫೈನಲ್‌ ಸೇರಿ ಬಾಂಗ್ಲಾದೇಶ ವಿರುದ್ಧ 3 ಬಾರಿ ಸೋಲು ಕಂಡರೂ, ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ 421 ರನ್‌ ಚಚ್ಚಿ ವಿಂಡೀಸ್‌ ಲಯಕ್ಕೆ ಮರಳಿದೆ. ವಿಂಡೀಸ್‌ ಈ ವಿಶ್ವಕಪ್‌ನಲ್ಲಿ 500 ರನ್‌ ತಲುಪುವ ಗುರಿ ಹೊಂದಿದ್ದು, ಕೆರಿಬಿಯನ್‌ ದೈತ್ಯರ ಬ್ಯಾಟಿಂಗ್‌ ಅಬ್ಬರಕ್ಕೆ ಪಾಕಿಸ್ತಾನ ಬಲಿಯಾದರೆ ಅಚ್ಚರಿಯಿಲ್ಲ.

ಪಿಚ್‌ ರಿಪೋರ್ಟ್‌

ಟ್ರೆಂಟ್‌ ಬ್ರಿಡ್ಜ್‌ ಕ್ರೀಡಾಂಗಣದ ಪಿಚ್‌ ಬ್ಯಾಟ್ಸ್‌ಮನ್‌ಗಳ ಸ್ವರ್ಗ ಎನಿಸಿದ್ದು, ಇಲ್ಲಿ 11 ಬಾರಿ 300+, 2 ಬಾರಿ 400+ ಮೊತ್ತ ದಾಖಲಾಗಿದೆ. ಇಂಗ್ಲೆಂಡ್‌ ತಂಡ ಕಳೆದ ವರ್ಷ ಇದೇ ಮೈದಾನದಲ್ಲಿ ಆಸೀಸ್‌ ವಿರುದ್ಧ 481 ರನ್‌ ದಾಖಲಿಸಿತ್ತು. ಇಲ್ಲಿ ನಡೆದಿರುವ 45 ಏಕದಿನ ಪಂದ್ಯಗಳಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡಗಳು 18 ಬಾರಿ ಗೆದ್ದರೆ, ಗುರಿ ಬೆನ್ನತ್ತಿದ ತಂಡಗಳು 24 ಪಂದ್ಯಗಳಲ್ಲಿ ಜಯಿಸಿದೆ. ಹೀಗಾಗಿ ಟಾಸ್‌ ಗೆಲ್ಲುವ ತಂಡ ಮೊದಲು ಫೀಲ್ಡ್‌ ಮಾಡಲು ನಿರ್ಧರಿಸುವ ಸಾಧ್ಯತೆ ಹೆಚ್ಚು.


ಸಂಭವನೀಯ ಆಟಗಾರರ ಪಟ್ಟ

ವೆಸ್ಟ್‌ಇಂಡೀಸ್‌: ಕ್ರಿಸ್‌ ಗೇಲ್‌, ಎವಿನ್‌ ಲೆವಿಸ್‌, ಶಾಯ್‌ ಹೋಪ್‌, ಡರೆನ್‌ ಬ್ರಾವೋ, ಶಿಮ್ರೊನ್‌ ಹೆಟ್ಮೇಯರ್‌, ಜೇಸನ್‌ ಹೋಲ್ಡರ್‌ (ನಾಯಕ), ಆ್ಯಂಡ್ರೆ ರಸೆಲ್‌, ಆ್ಯಶ್ಲೆ ನರ್ಸ್‌, ಕೀಮಾರ್‌ ರೋಚ್‌, ಒಶಾನೆ ಥಾಮಸ್‌, ಫ್ಯಾಬಿಯನ್‌ ಆಲನ್‌.

ಪಾಕಿಸ್ತಾನ: ಫಖರ್‌ ಜಮಾನ್‌, ಇಮಾಮ್‌ ಉಲ್‌ ಹಕ್‌, ಬಾಬರ್‌ ಆಜಂ, ಮೊಹಮದ್‌ ಹಫೀಜ್‌, ಶೋಯೆಬ್‌ ಮಲಿಕ್‌, ಸರ್ಫರಾಜ್‌ ಅಹ್ಮದ್‌(ನಾಯಕ), ಇಮಾದ್‌ ವಾಸಿಂ, ಶದಾಬ್‌ ಖಾನ್‌, ಹಸನ್‌ ಅಲಿ, ವಾಹಬ್‌ ರಿಯಾಜ್‌, ಮೊಹಮದ್‌ ಆಮೀರ್‌.

ಸ್ಥಳ: ನಾಟಿಂಗ್‌ಹ್ಯಾಮ್‌,

ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ 

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1


ಒಟ್ಟು ಮುಖಾಮುಖಿ: 133

ವೆಸ್ಟ್‌ಇಂಡೀಸ್‌: 70

ಪಾಕಿಸ್ತಾನ: 60

ಟೈ: 03

ವಿಶ್ವಕಪ್‌ನಲ್ಲಿ ವಿಂಡೀಸ್‌ vs ಪಾಕಿಸ್ತಾನ

ಪಂದ್ಯ: 10

ವೆಸ್ಟ್‌ಇಂಡೀಸ್‌: 07

ಪಾಕಿಸ್ತಾನ: 03

ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...

click me!