ವಿಶ್ವಕಪ್ 2019: ಭಾರತದ ಹ್ಯಾಟ್ರಿಕ್‌ಗೆ ವರುಣನ ಕೃಪೆ?

By Web DeskFirst Published Jun 13, 2019, 11:04 AM IST
Highlights

ವಿಶ್ವಕಪ್ ಟೂರ್ನಿಯಲ್ಲಿಂದು ಅಜೇಯ ತಂಡಗಳ ನಡುವೆ ಕಾದಾಟ ನಡೆಯುತ್ತಿದ್ದು, ಭಾರತ ಹ್ಯಾಟ್ರಿಕ್ ಗೆಲುವಿನ ಕನವರಿಕೆಯಲ್ಲಿದ್ದರೆ, ನ್ಯೂಜಿಲೆಂಡ್ ಸತತ 4ನೇ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...  

ನಾಟಿಂಗ್‌ಹ್ಯಾಮ್‌: ಗಾಯಾಳು ಶಿಖರ್‌ ಧವನ್‌ ಅನುಪಸ್ಥಿತಿಯಲ್ಲಿ ಭಾರತ ತಂಡದ ತಂತ್ರಗಾರಿಕೆಗೆ ಗುರುವಾರ ಪರೀಕ್ಷೆ ಎದುರಾಗಲಿದೆ. ಐಸಿಸಿ ಏಕದಿನ ವಿಶ್ವಕಪ್‌ ಪಂದ್ಯದಲ್ಲಿ ಭಾರತಕ್ಕೆ ಬಲಿಷ್ಠ ನ್ಯೂಜಿಲೆಂಡ್‌ ಎದುರಾಗಲಿದ್ದು, ಮಳೆಯಿಂದಾಗಿ ಪಂದ್ಯ ರದ್ದುಗೊಳ್ಳದಿದ್ದರೆ ಕಿವೀಸ್‌ ವೇಗದ ದಾಳಿಯನ್ನು ಎದುರಿಸುವಲ್ಲಿ ಭಾರತೀಯರು ಸಮಸ್ಯೆಗೊಳಗಾಗುವ ಸಾಧ್ಯತೆ ಇದೆ.

ಗುರುವಾರ ಮಳೆ ಸಾಧ್ಯತೆ ಶೇ.80ರಷ್ಟು ಇದ್ದು, ಪೂರ್ತಿ 50 ಓವರ್‌ ಇನ್ನಿಂಗ್ಸ್‌ ಆಟ ನಡೆಯುವುದು ಕಷ್ಟ. ಓವರ್‌ಗಳು ಕಡಿತಗೊಂಡರೆ ಭಾರತದ ನೂತನ ಆರಂಭಿಕ ಜೋಡಿಯಾದ ಕೆ.ಎಲ್‌.ರಾಹುಲ್‌ ಹಾಗೂ ರೋಹಿತ್‌ ಶರ್ಮಾ ಎಷ್ಟರ ಮಟ್ಟಗೆ ಯಶಸ್ಸು ಕಾಣುತ್ತಾರೆ ಎನ್ನುವ ಪ್ರಶ್ನೆ ಹುಟ್ಟಿದೆ.

ವಿಶ್ವಕಪ್‌ ಆರಂಭಕ್ಕೂ ಮುನ್ನ ನಡೆದಿದ್ದ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್‌ ವೇಗದ ದಾಳಿಗೆ ತತ್ತರಿಸಿತ್ತು. ಟ್ರೆಂಟ್‌ ಬೌಲ್ಟ್‌, ಮ್ಯಾಟ್‌ ಹೆನ್ರಿ, ಲಾಕಿ ಫಗ್ರ್ಯೂಸನ್‌, ಜೇಮ್ಸ್‌ ನೀಶಮ್‌, ಕಾಲಿನ್‌ ಡಿ ಗ್ರಾಂಡ್‌ಹೋಮ್‌ರಂತಹ ಪರಿಣಾಮಕಾರಿ ವೇಗಿಗಳ ಎದುರು ಯಶಸ್ಸು ಕಾಣುವುದು ಭಾರತೀಯರಿಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಜಾಗತಿಕ ಟೂರ್ನಿಗಳಲ್ಲಿ ಭಾರತ ವಿರುದ್ಧ ನ್ಯೂಜಿಲೆಂಡ್‌ ಉತ್ತಮ ದಾಖಲೆ ಸಹ ಹೊಂದಿದೆ.

ಶಂಕರ್‌-ಕಾರ್ತಿಕ್‌ ನಡುವೆ ಸ್ಪರ್ಧೆ: ಕಿವೀಸ್‌ ವಿರುದ್ಧ ಭಾರತ ತನ್ನ ಪ್ಲಾನ್‌ ‘ಬಿ’ ಪ್ರಯೋಗಿಸಬೇಕಿದೆ. ರಾಹುಲ್‌ ಆರಂಭಿಕನಾಗಿ ಕಣಕ್ಕಿಳಿದರೆ, 4ನೇ ಕ್ರಮಾಂಕಕ್ಕೆ ವಿಜಯ್‌ ಶಂಕರ್‌ ಹಾಗೂ ದಿನೇಶ್‌ ಕಾರ್ತಿಕ್‌ ನಡುವೆ ಸ್ಪರ್ಧೆ ಏರ್ಪಡಲಿದೆ. ಬುಧವಾರ ಅಭ್ಯಾಸದ ವೇಳೆ ವಿಜಯ್‌ ಶಂಕರ್‌ ಸುಮಾರು 30 ನಿಮಿಷಕ್ಕೂ ಹೆಚ್ಚು ಕಾಲ ನೆಟ್ಸ್‌ನಲ್ಲಿ ಬ್ಯಾಟ್‌ ಮಾಡಿದರೆ, ಕಾರ್ತಿಕ್‌ 10 ನಿಮಿಷ ಬ್ಯಾಟ್‌ ಮಾಡಿದರು. ಈ ಲೆಕ್ಕಾಚಾರದ ಪ್ರಕಾರ, ವಿಜಯ್‌ ಶಂಕರ್‌ಗೆ ಆಡುವ ಹನ್ನೊಂದರಲ್ಲಿ ಸ್ಥಾನ ಸಿಗಬಹುದು. ಮೋಡ ಕವಿದ ವಾತಾವರಣವಿರಲಿದ್ದು ವೇಗಿ ಮೊಹಮದ್‌ ಶಮಿಯನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಆಗ ಇಬ್ಬರು ಸ್ಪಿನ್ನರ್‌ಗಳ ಪೈಕಿ ಒಬ್ಬರು ಹೊರಗುಳಿಯಲಿದ್ದಾರೆ.

ನ್ಯೂಜಿಲೆಂಡ್‌ ತಂಡ ಸಮತೋಲನದಿಂದ ಕೂಡಿದೆ. ಸ್ಫೋಟಕ ಆರಂಭಿಕರು, ಸ್ಥಿರ ಮಧ್ಯಮ ಕ್ರಮಾಂಕ, ಪರಿಣಾಮಕಾರಿ ಆಲ್ರೌಂಡರ್‌ಗಳು, ಪ್ರಚಂಡ ವೇಗಿಗಳನ್ನು ತಂಡ ಹೊಂದಿದೆ. ಕೇನ್‌ ವಿಲಿಯಮ್ಸನ್‌, ರಾಸ್‌ ಟೇಲರ್‌, ಟಾಮ್‌ ಲೇಥಮ್‌ ಈ ಹಿಂದೆ ಭಾರತೀಯ ಸ್ಪಿನ್ನರ್‌ಗಳನ್ನು ಸಮರ್ಥವಾಗಿ ಎದುರಿಸಿದ ಹಿರಿಮೆ ಹೊಂದಿದ್ದಾರೆ. ಟೂರ್ನಿಯಲ್ಲಿ ಆಡಿರುವ 3 ಪಂದ್ಯಗಳಲ್ಲಿ ಗೆದ್ದು ನ್ಯೂಜಿಲೆಂಡ್‌ ಅಗ್ರಸ್ಥಾನದಲ್ಲಿ ಮುಂದುವರಿದಿದ್ದು, ಭಾರತ ವಿರುದ್ಧವೂ ಗೆಲುವಿಗಾಗಿ ಹಾತೊರೆಯುತ್ತಿದೆ.

ಪಿಚ್‌ ರಿಪೋರ್ಟ್‌

ಟ್ರೆಂಟ್‌ ಬ್ರಿಡ್ಜ್‌ನ ಪಿಚ್‌ ಉತ್ತಮ ಬೌನ್ಸ್‌ ಹೊಂದಿದ್ದು, ವಿಂಡೀಸ್‌ ತಂಡ ಪಾಕಿಸ್ತಾನ ಹಾಗೂ ಆಸ್ಪ್ರೇಲಿಯಾ ವಿರುದ್ಧ ಇದರ ಸಂಪೂರ್ಣ ಲಾಭ ಪಡೆದಿತ್ತು. ನ್ಯೂಜಿಲೆಂಡ್‌ ಸಹ ಬೌನ್ಸ್‌ ಬಳಸಿಕೊಳ್ಳುವ ವಿಶ್ವಾಸದಲ್ಲಿದೆ. ಗಂಟೆಗೆ 150 ಕಿ.ಮೀ ವೇಗದಲ್ಲಿ ಬೌಲ್‌ ಮಾಡಬಲ್ಲ ಫಗ್ರ್ಯೂಸನ್‌, ಹೆನ್ರಿ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿಸಲಿದೆ. ಪಿಚ್‌ನಲ್ಲಿ ತೇವಾಂಶ ಇಲ್ಲದಿದ್ದರೆ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ಲಾಭ ಸಿಗಲಿದ್ದು, ರನ್‌ ಹೊಳೆ ಹರಿಯಲಿದೆ.

ಒಟ್ಟು ಮುಖಾಮುಖಿ: 106

ಭಾರತ: 55

ನ್ಯೂಜಿಲೆಂಡ್‌: 45

ಟೈ: 01

ಫಲಿತಾಂಶವಿಲ್ಲ: 05

ವಿಶ್ವಕಪ್‌ನಲ್ಲಿ ಭಾರತ vs ನ್ಯೂಜಿಲೆಂಡ್‌

ಪಂದ್ಯ: 07

ಭಾರತ: 03

ನ್ಯೂಜಿಲೆಂಡ್‌: 04

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌, ವಿರಾಟ್‌ ಕೊಹ್ಲಿ(ನಾಯಕ), ವಿಜಯ್‌ ಶಂಕರ್‌, ಎಂ.ಎಸ್‌.ಧೋನಿ, ಹಾರ್ದಿಕ್‌ ಪಾಂಡ್ಯ, ಕೇದಾರ್‌ ಜಾಧವ್‌, ಕುಲ್ದೀಪ್‌ ಯಾದವ್‌, ಭುವನೇಶ್ವರ್‌ ಕುಮಾರ್‌, ಯಜುವೇಂದ್ರ ಚಹಲ್‌, ಜಸ್‌ಪ್ರೀತ್‌ ಬೂಮ್ರಾ.

ನ್ಯೂಜಿಲೆಂಡ್‌: ಮಾರ್ಟಿನ್‌ ಗಪ್ಟಿಲ್‌, ಕಾಲಿನ್‌ ಮನ್ರೊ, ಕೇನ್‌ ವಿಲಿಯಮ್ಸನ್‌ (ನಾಯಕ), ರಾಸ್‌ ಟೇಲರ್‌, ಟಾಮ್‌ ಲೇಥಮ್‌, ಜೇಮ್ಸ್‌ ನೀಶಮ್‌, ಕಾಲಿನ್‌ ಡಿ ಗ್ರಾಂಡ್‌ಹೋಮ್‌, ಮಿಚೆಲ್‌ ಸ್ಯಾಂಟ್ನರ್‌, ಲಾಕಿ ಫಗ್ರ್ಯೂಸನ್‌, ಮ್ಯಾಟ್‌ ಹೆನ್ರಿ, ಟ್ರೆಂಟ್‌ ಬೌಲ್ಟ್‌.

ಸ್ಥಳ: ನಾಟಿಂಗ್‌ಹ್ಯಾಮ್‌
ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1

click me!