ದಡ ಸೇರೋ ಮುನ್ನ ಮುಳುಗಿದ ಭಾರತದ ಕ್ರಿಕೆಟ್ ಟೈಟಾನಿಕ್!

By Web DeskFirst Published Jul 10, 2019, 7:30 PM IST
Highlights

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯ ತಿರುವಿನ ಮೇಲೆ ತಿರುವು ಪಡೆದುಕೊಂಡಿತ್ತು.ಉಭಯ ದೇಶದ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿತ್ತು. ಆದರೆ ಅದೃಷ್ಠ ಕೈಹಿಡಿಯಲಿಲ್ಲ. ಜಡೇಜಾ ಹಾಗೂ ಧೋನಿ ಅದ್ಭುತ ಹೋರಾಟ ನೀಡಿ ಗೆಲುವಿಗಾಗಿ ಪ್ರಯತ್ನಿಸಿದರು. ಆದರೆ ಗೆಲುವು ಮಾತ್ರ ನಮ್ಮದಾಗಲಿಲ್ಲ.  ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ಕನಸು ನುಚ್ಚುನೂರು.

ಮ್ಯಾಂಚೆಸ್ಟರ್(ಜು.10):  ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಹೋರಾಟ ಅಂತ್ಯಗೊಂಡಿದೆ. ನ್ಯೂಜಿಲೆಂಡ್ ವಿರುದ್ಧದ  ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 18 ರನ‌ಗಳ ವಿರೋಚಿತ ಸೋಲು ಅನುಭವಿಸಿತು. ರವೀಂದ್ರ ಜಡೇಜಾ ಹಾಗೂ ಎಂ.ಎಸ್.ಧೋನಿ ಕೆಚ್ಚೆದೆಯ ಹೋರಾಟ ಭಾರತಕ್ಕೆ ಗೆಲುವು ತಂದುಕೊಡಲಿಲ್ಲ. ಮಹತ್ವದ ಪಂದ್ಯದಲ್ಲಿ  ಮುಗ್ಗರಿಸೋ ಮೂಲಕ ಭಾರತದ ಫೈನಲ್ ಕನಸು ನುಚ್ಚು ನೂರಾಯಿತು. ಗೆಲುವಿನೊಂದಿಗೆ ನ್ಯೂಜಿಲೆಂಡ್ ಸತತ 2ನೇ ಬಾರಿಗೆ ವಿಶ್ವಕಪ್ ಫೈನಲ್ ಪ್ರವೇಶಿಸಿದರೆ, ಇತ್ತ ಟೀಂ ಇಂಡಿಯಾ ಸತತ 2ನೇ ಬಾರಿಗೆ ಸೆಮಿಫೈನಲ್‌ನಿಂದ ಹೊರಬಿತ್ತು. 

ಗೆಲುವಿಗೆ  240 ರನ್ ಟಾರ್ಗೆಟ್ ಪಡೆದ ಟೀಂ ಇಂಡಿಯಾ ಆರಂಭದಲ್ಲಿ ಯಾರೂ ನಿರೀಕ್ಷಿಸಿದ ರೀತಿಯಲ್ಲಿ ವಿಕೆಟ್ ಪತನಗೊಂಡಿತು. ರೋಹಿತ್ ಶರ್ಮಾ, ನಾಯಕ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಒಂದೊಂದು ರನ್‌ಗಳಿಸಿ ಪೆವಿಲಿಯನ್ ಸೇರಿದರು. 5 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು  ಸಂಕಷ್ಟ ಅನುಭವಿಸಿತು.

ರಿಷಬ್ ಪಂತ್ ಹೋರಾಟ ನೀಡಲು ಮುಂದಾದರೆ, ಇತ್ತ ಸುವರ್ಣ ಅವಕಾಶವನ್ನು ದಿನೇಶ್ ಕಾರ್ತಿಕ್ ಕೈಚೆಲ್ಲಿದರು. ಕಾರ್ತಿಕ್ 6 ರನ್ ಸಿಡಿಸಿ ಔಟಾದರು. ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಪಂತ್ 32 ರನ್ ಸಿಡಿಸಿ ವಿಕೆಟ್ ಕೈಚೆಲ್ಲಿದರು. ಇತ್ತ ಹಾರ್ದಿಕ್ ಪಾಂಡ್ಯ ಕೂಡ 32 ರನ್ ಸಿಡಿಸಿ ಪೆವಿಲಿಯನ್ ಸೇರಿದರು.

92 ರನ್‌ಗೆ 6 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ ಹಾದಿ ಮತ್ತಷ್ಟು ಕಠಿಣಗೊಂಡಿತು. ಎಂ.ಎಸ್.ಧೋನಿ ಹಾಗೂ ರವೀಂದ್ರ ಜಡೇಜಾ ಹೋರಾಟ ಪಂದ್ಯದ ಲೆಕ್ಕಾಚಾರವನ್ನೇ ಬದಲಿಸಿತು. ಸೋಲೊಪ್ಪಿಕೊಂಡಿದ್ದ ಟೀಂ ಇಂಡಿಯಾ ಅಭಿಮಾನಿಗಳ ನಿರೀಕ್ಷೆಗಳು ಗರಿಗೆದರಿದವು. 3 ಜೀವದಾನ ಪಡದ ರವೀಂದ್ರ ಜಡೇಜಾ ಹಾಫ್ ಸೆಂಚುರಿ ಸಿಡಿಸಿದರು.

ಜಡೇಜಾ ಹಾಗೂ ಧೋನಿ ಪ್ರದರ್ಶನ ನ್ಯೂಜಿಲೆಂಡ್ ತಾಳ್ಮೆಯನ್ನು ಪರೀಕ್ಷಿಸಿತು. ಗೆಲುವಿಗೆ ಬೇಕಿದ್ದ ರನ್ ರೇಟ್ ಹೆಚ್ಚಾಗುತ್ತಿದ್ದಂತೆ ರವೀಂದ್ರ ಜಡೇಜಾ ಭರ್ಜರಿ ಹೊಡೆತಕ್ಕೆ ಮುಂದಾದರು. ಹೀಗಾಗಿ 77 ರನ್ ಸಿಡಿಸಿ ಔಟಾದರು. ಅಷ್ಟರಲ್ಲೇ ಟೀಂ ಇಂಡಿಯಾ ಪಾಳಯದ ಆತಂಕ ಹೆಚ್ಚಾಯಿತು.  12 ಎಸೆತದಲ್ಲಿ ಟೀಂ ಇಂಡಿಯಾ ಗೆಲುವಿಗೆ 31 ರನ್ ಅವಶ್ಯಕತೆ ಇತ್ತು.

ಭರ್ಜರಿ ಸಿಕ್ಸರ್ ಸಿಡಿಸಿದ ಧೋನಿ ಕುತೂಹಲ ಮತ್ತಷ್ಟು ಹೆಚ್ಚಿಸಿದರು. ಆದರೆ ರನೌಟ್‌ಗೆ ಬಲಿಯಾಗೋ ಮೂಲಕ ಭಾರತದ ಗೆಲುವಿನ ಕನಸು ನುಚ್ಚು ನೂರಾಯಿತು. ಧೋನಿ 50 ರನ್ ಸಿಡಿಸಿ ಔಟಾದರು.  ಭುವನೇಶ್ವರ್ ಕುಮಾರ್ ಹಾಗೂ ಯಜುವೇಂದ್ರ ಚಹಾಲ್ ವಿಕೆಟ್ ಪತನದೊಂದಿಗೆ ಭಾರತ 49.3 ಓವರ್‌ಗಳಲ್ಲಿ 221 ರನ್‌ಗೆ ಆಲೌಟ್ ಆಯಿತು. ಈ ಮೂಲಕ ನ್ಯೂಜಿಲೆಂಡ್ 18 ರನ್ ಗೆಲುವು ಸಾಧಿಸಿ ಸತತ 2ನೇ ಬಾರಿ ಫೈನಲ್ ಪ್ರವೇಶಿಸಿತು. ಭಾರತ ಸತತ 2ನೇ ಬಾರಿ ಸೆಮಿಫೈನಲ್‌ನಿಂದ ಹೊರಬಿತ್ತು. ಟೀಂ ಇಂಡಿಯಾ ಭಾರವಾದ ಹೆಜ್ಜೆಯೊಂದಿಗೆ ಟೂರ್ನಿಗೆ ವಿದಾಯ ಹೇಳಿತು. 

click me!