
ಬ್ರಿಸ್ಟಲ್(ಜೂ.07): ಶ್ರೀಲಂಕಾ ಹಾಗೂ ಪಾಕಿಸ್ತಾನ ನಡವಿನ 2019ರ ವಿಶ್ವಕಪ್ ಟೂರ್ನಿಯಲ್ಲಿ11ನೇ ಲೀಗ್ ಪಂದ್ಯ ಮಳೆಯಿಂದ ರದ್ದಾಗಿದೆ. ಈ ಮೂಲಕ ಈ ವಿಶ್ವಕಪ್ ಟೂರ್ನಿಯಲ್ಲಿ ಒಂದು ಎಸೆತವೂ ಆಗದೇ ರದ್ದಾದ ಮೊದಲ ಪಂದ್ಯ ಅನ್ನೋ ಅಪಖ್ಯಾತಿಗೆ ಗುರಿಯಾಗಿದೆ. ಪಂದ್ಯ ರದ್ದಾದ ಕಾರಣ ಉಭಯ ತಂಡಗಳಿಗೆ ಒಂದೊಂದು ಅಂಕ ಹಂಚಲಾಗಿದೆ.
ಟಾಸ್‌ಗೂ ಮೊದಲು ಸುರಿದ ನಿರಂತರ ಮಳೆಯಿಂದ ಟಾಸ್ ವಿಲಂಬವಾಯಿತು. ಬಳಿಕ ಸುರಿದ ಮಳೆಯಿಂದ ಪಂದ್ಯ ಆಯೋಜಿಸಲು ಸಾಧ್ಯವಾಗಲಿಲ್ಲ. ಅಂತಿಮ ಹಂತದಲ್ಲಿ ಮಳೆ ನಿಂತರೂ ಒದ್ದೆಯಾದ ಮೈದಾನದಲ್ಲಿ ಪಂದ್ಯ ಆಯೋಜಿಸುವುದು ಸಾಧ್ಯವಿಲ್ಲ ಎಂದು ಅಂಪೈರ್ ಹೇಳಿದ್ದಾರೆ. ಹೀಗಾಗಿ ಪಂದ್ಯ ರದ್ದುಗೊಳಿಸಲಾಗಿದೆ.