ವಿಶ್ವಕಪ್ 2019: ಬಾಂಗ್ಲಾ ಓಟಕ್ಕೆ ಬ್ರೇಕ್-ನ್ಯೂಜಿಲೆಂಡ್‌ಗೆ 2 ವಿಕೆಟ್ ಗೆಲುವು

By Web DeskFirst Published Jun 6, 2019, 1:47 AM IST
Highlights

ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ. ನ್ಯೂಜಿಲೆಂಡ್ ವಿರುದ್ಧ ಗೆಲುವಿನ ವಿಶ್ವಾಸದಲ್ಲಿದ್ದ ಬಾಂಗ್ಲಾದೇಶ ಸೋಲಿಗೆ ಶರಣಾಗಿದೆ. ಅಂತಿಮ ಎಸೆತದವರೆಗೂ ಹೋರಾಡಿದ  ಬಾಂಗ್ಲಾ ವಿರೋಚಿತ ಸೋಲು ಕಂಡಿದೆ, ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

ಓವಲ್(ಜೂ.05): ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ್ದ ಬಾಂಗ್ಲಾದೇಶಕ್ಕೆ ಸೋಲಿನ ಕಹಿ ಎದುರಾಗಿದೆ. ನ್ಯೂಜಿಲೆಂಡ್ ವಿರುದ್ಧ ಗೆಲುವಿನ ವಿಶ್ವಾಸದಲ್ಲಿದ್ದ ಬಾಂಗ್ಲಾ ವಿರೋಚಿತ ಸೋಲು ಕಂಡಿದೆ . ಬಾಂಗ್ಲಾ ಹುಲಿಗಳ ವಿರುದ್ಧ ತಿಣುಕಾಡಿದ  ನ್ಯೂಜಿಲೆಂಡ್ 2 ವಿಕೆಟ್ ಗೆಲುವು ಸಾಧಿಸಿದೆ.

ಗೆಲುವಿಗೆ 245 ರನ್ ಟಾರ್ಗೆಟ್ ಪಡೆದ ನ್ಯೂಜಿಲೆಂಡ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಮಾರ್ಟಿನ್ ಗಪ್ಟಿಲ್ ಹಾಗೂ ಕಾಲಿನ್ ಮುನ್ರೋ ಮೊದಲ ವಿಕೆಟ್‌ಗೆ 35 ರನ್ ಜೊತೆಯಾಟ ನೀಡಿದರು. ಗಪ್ಟಿಲ್ 25 ರನ್ ಸಿಡಿಸಿ ಔಟಾದರು. ಕಾಲಿನ್ ಮುನ್ರೋ 24 ರನ್ ಸಿಡಿಸಿ ನಿರ್ಗಮಿಸಿದರು. 

ನಾಯಕ ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ಜೊತೆಯಾಟದಿಂದ ನ್ಯೂಜಿಲೆಂಡ್ ನಿಟ್ಟುಸಿರುಬಿಟ್ಟಿತು. ರಾಸ್ ಟೇಲರ್ ಅರ್ಧಶತಕ ಸಿಡಿಸಿದರೆ, ವಿಲಿಯಮ್ಸನ್ 40 ರನ್ ಸಿಡಿಸಿ ಔಟಾದರು.  ಟಾಮ್ ಲಾಥಮ್ ಡಕೌಟ್ ಆದರು. ಈ ಮೂಲಕ ನ್ಯೂಜಿಲೆಂಡ್ ಸಂಕಷ್ಟಕ್ಕೆ ಸಿಲುಕಿತು. ತಂಡದ ಜವಾಬ್ದಾರಿ ಹೊತ್ತಿದ್ದ ರಾಸ್ ಟೇಲರ್ 82 ರನ್ ಸಿಡಿಸಿ ಔಟಾದರು.

ಜಿಮ್ಮಿ ನೀಶನ್ ಹಾಗೂ  ಕೊಲಿನ್ ಡೇ ಗ್ರ್ಯಾಂಡ್ ಹೊಮ್ಮೆ ಹೋರಾಟಕ್ಕೆ ಸೈಫುದ್ದೀನ್ ಬ್ರೇಕ್ ಹಾಕಿದರು. ಗ್ರ್ಯಾಂಡ್ ಹೊಮ್ಮೆ 15 ಹಾಗೂ  ನೀಶಮ್ 25 ರನ್ ಸಿಡಿಸಿ ಔಟಾದರು. ಹೀಗಾಗಿ ನ್ಯೂಜಿಲಂಡ್ ಗೆಲುವಿನ ಹಾದಿ ಮತ್ತಷ್ಟು ಕಠಿಣವಾಯಿತು. ಅಂತಿಮ 30  ಎಸೆತದಲ್ಲಿ ಕಿವೀಸ್ ಗೆಲುವಿಗೆ 18 ರನ್ ಅವಶ್ಯಕತೆ ಇತ್ತು. ಮಿಚೆಲ್ ಸ್ಯಾಂಟ್ನರ್ ಹಾಗೂ ಮ್ಯಾಟ್ ಹೆನ್ರಿ ಬ್ಯಾಟಿಂಗ್ ನೆರವು ನೀಡಿತು. ಆದರೆ ಹೆನ್ರಿ 6 ರನ್ ಸಿಡಿಸಿ ನಿರ್ಗಮಿಸಿದರು. 

ಸ್ಯಾಂಟ್ನರ್ ಹಾಗೂ  ಲ್ಯೂಕ್ ಫರ್ಗ್ಯುಸನ್ ಹೋರಾಟದಿಂದ ನ್ಯೂಜಿಲೆಂಡ್ 47.1 ಓವರ್‌ಗಳಲ್ಲಿ 8 ವಿಕೆಟ್  ಕಳೆದುಕೊಂಡು ಗೆಲುವು ಸಾಧಿಸಿತು. 2 ವಿಕೆಟ್ ರೋಚಕ ಗೆಲುವು ಸಾಧಿಸಿದ ನ್ಯೂಜಿಲೆಂಡ್ ಗೆಲುವಿನ ಲಯ ಮುಂದುವರಿಸಿತು. ಇತ್ತ ಬಾಂಗ್ಲಾದೇಶ ಸೋಲು ಕಂಡರೂ ದಿಟ್ಟ ಹೋರಾಟ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

click me!