ವಿಶ್ವಕಪ್‌ನಲ್ಲಿಂದು ಕಿವೀಸ್‌-ಲಂಕಾ ಕಾದಾಟ

By Web DeskFirst Published Jun 1, 2019, 1:10 PM IST
Highlights

ಹಾಲಿ ರನ್ನರ್ ಅಪ್ ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ನಡುವಿನ ವಿಶ್ವಕಪ್ ಕಾದಾಟಕ್ಕೆ ಕಾರ್ಡಿಫ್ ಮೈದಾನ ಸಾಕ್ಷಿಯಾಗಿದ್ದು, ಕಿವೀಸ್ ಪಡೆ ಮೇಲ್ನೋಟಕ್ಕೆ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...

ಕಾರ್ಡಿಫ್‌[ಜೂ.01]: 4 ವರ್ಷಗಳ ಹಿಂದೆ ಆಸ್ಪ್ರೇಲಿಯಾ ವಿರುದ್ಧ ಫೈನಲ್‌ನಲ್ಲಿ ಸೋತು ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ನ್ಯೂಜಿಲೆಂಡ್‌ ಮತ್ತೊಂದು ಯಶಸ್ವಿ ಅಭಿಯಾನದ ನಿರೀಕ್ಷೆಯಲ್ಲಿದ್ದು, ಶನಿವಾರ ಇಲ್ಲಿನ ಸೋಫಿಯಾ ಗಾರ್ಡನ್ಸ್‌ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೆಣಸಲಿದೆ.

2015ರಲ್ಲಿ ಬ್ರೆಂಡನ್‌ ಮೆಕ್ಕಲಂ ನಾಯಕರಾಗಿದ್ದರು. ಅವರ ನಿವೃತ್ತಿ ಬಳಿಕ ಈಗ ಕೇನ್‌ ವಿಲಿಯಮ್ಸನ್‌ ತಂಡದ ಚುಕ್ಕಾಣಿ ಹಿಡಿದಿದ್ದಾರೆ. ಕಳೆದ ಬಾರಿ ವಿಶ್ವಕಪ್‌ ತಂಡದಲ್ಲಿದ್ದ ಬಹುತೇಕ ಆಟಗಾರರು ಈ ಬಾರಿಯೂ ಸ್ಥಾನ ಉಳಿಸಿಕೊಂಡಿದ್ದಾರೆ. ಅನುಭವವನ್ನು ಬಳಸಿಕೊಂಡು, ಟೂರ್ನಿಯಲ್ಲಿ ಯಶಸ್ಸಿನ ಪಥ ಕಂಡುಕೊಳ್ಳುವುದು ಕಿವೀಸ್‌ ಗುರಿಯಾಗಿದೆ.

ಮಾರ್ಟಿನ್‌ ಗಪ್ಟಿಲ್‌, ವಿಲಿಯಮ್ಸನ್‌, ರಾಸ್‌ ಟೇಲರ್‌, ಕಾಲಿನ್‌ ಮನ್ರೊ, ಹೆನ್ರಿ ನಿಕೋಲ್ಸ್‌ರಂತಹ ಅನುಭವಿ ಬ್ಯಾಟ್ಸ್‌ಮನ್‌ಗಳು ತಂಡದಲ್ಲಿದ್ದಾರೆ. ಜೇಮ್ಸ್‌ ನೀಶಮ್‌, ಮಿಚೆಲ್‌ ಸ್ಯಾಂಟ್ನರ್‌ ಆಲ್ರೌಂಡ್‌ ಬಲವೂ ಇದೆ. ಟ್ರೆಂಟ್‌ ಬೌಲ್ಟ್‌, ಲಾಕಿ ಫಗ್ರ್ಯೂಸನ್‌, ಟಿಮ್‌ ಸೌಥಿ ವೇಗದ ಪಡೆಯಲ್ಲಿದ್ದಾರೆ. ಸ್ಪಿನ್ನರ್‌ ಇಶ್‌ ಸೋಧಿಗೆ ಸೂಕ್ತ ಬೆಂಬಲ ನೀಡಬಲ್ಲ ಸ್ಪಿನ್ನರ್‌ಗಳ ಕೊರತೆ ಇದೆ.

ಕಳಪೆ ಲಯದಲ್ಲಿ ಲಂಕಾ: ಈ ವರ್ಷ ನ್ಯೂಜಿಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾ ಪ್ರವಾಸಗಳಲ್ಲಿ ವೈಟ್‌ವಾಶ್‌ ಮುಖಭಂಗ ಅನುಭವಿಸಿದ ಶ್ರೀಲಂಕಾ, ವಿಶ್ವಕಪ್‌ಗೆ ಕಾಲಿಡುವ ಮೊದಲು ಸ್ಕಾಟ್ಲೆಂಡ್‌ನಲ್ಲಿ ಒಂದು ಪಂದ್ಯವನ್ನಾಡಿತ್ತು. ಆ ಪಂದ್ಯವನ್ನಷ್ಟೇ ಗೆದ್ದ ಲಂಕಾ, ಕಳಪೆ ಲಯ ಎದುರಿಸುತ್ತಿದೆ. ತಂಡದಲ್ಲಿ ಅನುಭವಿಗಳ ಕೊರತೆ ಇದೆ. ಏಂಜೆಲೋ ಮ್ಯಾಥ್ಯೂಸ್‌, ತಿಸಾರ ಪೆರೇರಾ, ಕುಸಾರ್‌ ಮೆಂಡಿಸ್‌ ಮೇಲೆ ನಿರೀಕ್ಷೆ ಹೆಚ್ಚಿದೆ. ದಿಮುತ್‌ ಕರುಣರತ್ನೆ ಸ್ಕಾಟ್ಲೆಂಡ್‌ ವಿರುದ್ಧ ಆಡುವ ಮುನ್ನ ಏಕದಿನ ಕ್ರಿಕೆಟ್‌ನಲ್ಲಿ ಆಡಿ 4 ವರ್ಷಗಳೇ ಕಳೆದಿತ್ತು. ಗೊಂದಲಗಳ ನಡುವೆಯೇ ಲಂಕಾ ತನ್ನ ವಿಶ್ವಕಪ್‌ ಅಭಿಯಾನ ಆರಂಭಿಸಲಿದೆ. ನಾಯಕತ್ವಕ್ಕಾಗಿ ಶತಾಯಗತಾಯ ಪ್ರಯತ್ನ ನಡೆಸಿ ವಿಫಲರಾದ ಲಸಿತ್‌ ಮಾಲಿಂಗ, ಬೌಲಿಂಗ್‌ ಪಡೆ ಮುನ್ನಡೆಸಲಿದ್ದು ಅವರ ಪ್ರದರ್ಶನ ಲಂಕಾಕ್ಕೆ ಮಹತ್ವದೆನಿಸಿದೆ.

ಪಿಚ್‌ ರಿಪೋರ್ಟ್‌

ಕಾರ್ಡಿಫ್‌ನಲ್ಲಿ ನಡೆದಿರುವ 20 ಏಕದಿನಗಳಲ್ಲಿ 14 ಬಾರಿ 2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟ್‌ ಮಾಡಿದ ತಂಡ ಗೆಲುವು ಸಾಧಿಸಿದೆ. ಆದರೆ ಕಳೆದ 5 ಪಂದ್ಯಗಳಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡ ಗೆಲುವು ಕಂಡಿದ್ದು, ಟಾಸ್‌ ಗೆಲ್ಲುವ ತಂಡ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡರೆ ಅಚ್ಚರಿಯಿಲ್ಲ. ಪಿಚ್‌ ಬ್ಯಾಟಿಂಗ್‌ಗೆ ನೆರವು ನೀಡುವ ನಿರೀಕ್ಷೆ ಇದೆ.

ಒಟ್ಟು ಮುಖಾಮುಖಿ: 98

ನ್ಯೂಜಿಲೆಂಡ್‌: 48

ಶ್ರೀಲಂಕಾ: 41

ಟೈ: 01

ರದ್ದು: 08

ವಿಶ್ವಕಪ್‌ನಲ್ಲಿ ಕಿವೀಸ್‌ vs ಲಂಕಾ

ಪಂದ್ಯ: 10

ನ್ಯೂಜಿಲೆಂಡ್‌: 04

ಶ್ರೀಲಂಕಾ : 06

ಸಂಭವನೀಯ ಆಟಗಾರರ ಪಟ್ಟಿ

ನ್ಯೂಜಿಲೆಂಡ್‌: ಮಾರ್ಟಿನ್‌ ಗಪ್ಟಿಲ್‌, ಹೆನ್ರಿ ನಿಕೋಲ್ಸ್‌, ಕೇನ್‌ ವಿಲಿಯಮ್ಸನ್‌(ನಾಯಕ), ರಾಸ್‌ ಟೇಲರ್‌, ಟಾಮ್‌ ಬ್ಲಂಡೆಲ್‌, ಜೇಮ್ಸ್‌ ನೀಶಮ್‌, ಕಾಲಿನ್‌ ಡಿ ಗ್ರಾಂಡ್‌ಹೋಮ್‌, ಮಿಚೆಲ್‌ ಸ್ಯಾಂಟ್ನರ್‌, ಇಶ್‌ ಸೋಧಿ, ಟ್ರೆಂಟ್‌ ಬೌಲ್ಟ್‌, ಟಿಮ್‌ ಸೌಥಿ.

ಶ್ರೀಲಂಕಾ: ದಿಮುತ್‌ ಕರುಣರತ್ನೆ (ನಾಯಕ), ಲಹಿರು ತಿರಿಮನ್ನೆ, ಕುಸಾಲ್‌ ಮೆಂಡಿಸ್‌, ಕುಸಾಲ್‌ ಪೆರೇರಾ, ಏಂಜೆಲೋ ಮ್ಯಾಥ್ಯೂಸ್‌, ಧನಂಜಯ ಡಿ ಸಿಲ್ವಾ, ತಿಸಾರ ಪೆರೇರಾ, ಇಸುರು ಉಡಾನ, ಲಸಿತ್‌ ಮಾಲಿಂಗ, ಸುರಂಗ ಲಕ್ಮಲ್‌, ಜೆಫ್ರಿ ವಾಂಡರ್ಸೆ.

ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1

click me!