ವಿಶ್ವಕಪ್ ಟೂರ್ನಿಯಿಂದ ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ವೇಗಿ ಹೊರಬಿದ್ದಿದ್ದಾರೆ. ಭಾರತ ಎದುರಿನ ಮಹತ್ವದ ಪಂದ್ಯ ಎದುರಿಸುವ ಮುನ್ನವೇ ಕೂಟದಿಂದ ಹೊರಬಿದ್ದಿರುವುದು ಹರಿಣಗಳ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಷ್ಟಕ್ಕೂ ಯಾರು ಆ ಕ್ರಿಕೆಟಿಗ? ನೀವೇ ನೋಡಿ...
ಲಂಡನ್[ಜೂ.04]: ಸತತ ಎರಡು ಸೋಲು ಕಂಡು ಕಂಗೆಟ್ಟಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಮತ್ತೊಂದು ಬಲವಾದ ಹೊಡೆತ ಬಿದ್ದಿದ್ದು ತಂಡದ ಪ್ರಮುಖ ವೇಗಿ ಡೇಲ್ ಸ್ಟೇನ್ ಗಾಯದ ಸಮಸ್ಯೆಯಿಂದಾಗಿ ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಭಾರತ ವಿರುದ್ಧದ ಮಹತ್ವದ ಪಂದ್ಯ ಇರುವಾಗಲೇ ತಂಡದ ಸ್ಟಾರ್ ವೇಗಿ ಅಲಭ್ಯತೆ ಹರಿಣಗಳ ಪಡೆಗೆ ಹಿನ್ನಡೆಯಾಗುವ ಸಾಧ್ಯತೆಯಿದೆ.
undefined
ಐಪಿಎಲ್ ಟೂರ್ನಿಯ ಮಧ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡಿಕೊಂಡಿದ್ದ ಸ್ಟೇನ್, ಎರಡು ಪಂದ್ಯಗಳನ್ನು ಆಡಿದ್ದರು. ಇದಾದ ಬಳಿಕ ಗಾಯದ ಸಮಸ್ಯೆಯಿಂದಾಗಿ ಮತ್ತೆ ತಂಡದಿಂದ ಹೊರಗುಳಿದಿದ್ದರು. ಇನ್ನು ವಿಶ್ವಕಪ್ ಟೂರ್ನಿಯ ಮೊದಲೆರಡು ಪಂದ್ಯಗಳಲ್ಲೂ ಸ್ಟೇನ್ ಕಣಕ್ಕಿಳಿದಿರಲಿಲ್ಲ. ಭುಜದ ನೋವಿನಿಂದ ಬಳಲುತ್ತಿರುವ ಸ್ಟೇನ್ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸದ ಹಿನ್ನಲೆಯಲ್ಲಿ ಅವರನ್ನು ಕೈ ಬಿಡಲಾಗಿದೆ. ಇದೀಗ ಸ್ಟೇನ್ ಬದಲಿಗೆ ಬ್ಯುರಾನ್ ಹೆಂಡ್ರಿಕ್ಸ್ ತಂಡ ಕೂಡಿಕೊಂಡಿದ್ದಾರೆ. ಎಡಗೈ ವೇಗಿ ಹೆಂಡ್ರಿಕ್ಸ್ 140 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.
ದಕ್ಷಿಣ ಆಫ್ರಿಕಾ ತಂಡವು ಈಗಾಗಲೇ ಹಾಶೀಂ ಆಮ್ಲಾ, ಲುಂಗಿ ಎನ್’ಗಿಡಿ, ಫಾಫ್ ಡುಪ್ಲೆಸಿಸ್ ಗಾಯದ ಭೀತಿ ಎದುರಿಸುತ್ತಿದೆ. ಈಗಾಗಲೇ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ವಿರುದ್ಧ ಸೋತು ಮುಖಭಂಗ ಅನುಭವಿಸಿರುವ ದಕ್ಷಿಣ ಆಫ್ರಿಕಾ ಇದೀಗ ಜೂನ್ 05ರಂದು ಬಲಿಷ್ಠ ಭಾರತ ತಂಡವನ್ನು ಎದುರಿಸಲಿದೆ.
ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...