ಈ ಬಾರಿಯಾದ್ರೂ ಹಾವೇರಿ ಮೆಡಿಕಲ್ ಕಾಲೇಜು ಕನಸು ನನಸಾಗುತ್ತಾ?

By Web Desk  |  First Published Oct 21, 2019, 8:34 AM IST

ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಕಾಲ ಕೂಡಿ ಬಂದಿದೆ| ಪ್ರಸಕ್ತ ಸಾಲಿನಲ್ಲಿಯೇ ಇಲ್ಲಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಅಸ್ತು ಎಂದ ಮುಖ್ಯಮಂತ್ರಿ| ಶೀಘ್ರದಲ್ಲಿ ಕಟ್ಟಡ ಆರಂಭಕ್ಕೂ ಚಾಲನೆ ಸಿಗುವ ಸಾಧ್ಯತೆಯಿದೆ| ಪ್ರತಿ ಬಾರಿಯ ಬಜೆಟ್‌ನಲ್ಲೂ ಮೆಡಿಕಲ್ ಕಾಲೇಜು ಆರಂಭಕ್ಕೆ ಅನುದಾನ ನಿರೀಕ್ಷಿಸಿದ್ದೇ ಬಂತು| ಆದರೆ, 2012 ರಿಂದ ಇದುವರೆಗೆ ಯಾವ ಸರ್ಕಾರವೂ ಅನುದಾನ ನೀಡದೇ ನಿರ್ಲಕ್ಷ್ಯ ವಹಿಸಿತ್ತು| 2012 ರಲ್ಲಿ ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಜಿಲ್ಲೆಗೆ ಮೆಡಿಕಲ್ ಕಾಲೇಜು ಘೋಷಣೆಯಾಗಿತ್ತು|
 


ನಾರಾಯಣ ಹೆಗಡೆ

ಹಾವೇರಿ[ಅ.21]: ಜಿಲ್ಲೆಯ ಜನರ ಬಹು ವರ್ಷಗಳ ಬೇಡಿಕೆಯಾದ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಕಾಲ ಕೂಡಿ ಬಂದಿದೆ. ಪ್ರಸಕ್ತ ಸಾಲಿನಲ್ಲಿಯೇ ಇಲ್ಲಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಮುಖ್ಯಮಂತ್ರಿಗಳು ಅಸ್ತು ಎಂದಿದ್ದು, ಶೀಘ್ರದಲ್ಲಿ ಕಟ್ಟಡ ಆರಂಭಕ್ಕೂ ಚಾಲನೆ ಸಿಗುವ ಸಾಧ್ಯತೆಯಿದೆ.

Tap to resize

Latest Videos

ಕಳೆದ ಅನೇಕ ವರ್ಷಗಳಿಂದ ಹಾವೇರಿಗೆ ಮೆಡಿಕಲ್‌ ಕಾಲೇಜು ಮರೀಚಿಕೆಯಾಗಿಯೇ ಉಳಿದಿತ್ತು. ಪ್ರತಿ ಬಾರಿಯ ಬಜೆಟ್‌ನಲ್ಲೂ ಮೆಡಿಕಲ್ ಕಾಲೇಜು ಆರಂಭಕ್ಕೆ ಅನುದಾನ ನಿರೀಕ್ಷಿಸಿದ್ದೇ ಬಂತು. ಆದರೆ, 2012 ರಿಂದ ಇದುವರೆಗೆ ಯಾವ ಸರ್ಕಾರವೂ ಅನುದಾನ ನೀಡದೇ ನಿರ್ಲಕ್ಷ್ಯ ವಹಿಸಿತ್ತು. 2012 ರಲ್ಲಿ ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಜಿಲ್ಲೆಗೆ ಮೆಡಿಕಲ್ ಕಾಲೇಜು ಘೋಷಣೆಯಾಗಿತ್ತು. ಅಲ್ಲಿಂದ ಇಲ್ಲಿಯ ತನಕವೂ ಎಲ್ಲ ಪಕ್ಷಗಳ ರಾಜಕೀಯ ನಾಯಕರಿಂದ ಸಿಕ್ಕಿದ್ದು ಭರವಸೆ ಮಾತ್ರ. ಆದ್ದರಿಂದ ಜಿಲ್ಲೆಯ ಜನರಿಗೆಸರ್ಕಾರಗಳ ಬಗ್ಗೆ, ಜನಪ್ರತಿನಿಧಿಗಳ ಮಾತನ್ನು ನಂಬದಂತಾಗಿದ್ದರು. ಆದರೆ, ಈಗ ಮೆಡಿಕಲ್ ಕಾಲೇಜಿನ ಕನಸು ನನಸಾಗುವ ಸಾಧ್ಯತೆ ಕಂಡುಬರುತ್ತಿದೆ. 

34 ಎಕರೆ ಜಾಗ ಮೀಸಲು: 

ನಗರದ ಹೊರವಲಯದ ದೇವಗಿರಿ ಯಲ್ಲಾಪುರ ಬಳಿ ಜಿಲ್ಲಾಡಳಿತವು 53 ಎಕರೆ ಜಾಗವನ್ನು ಗುರುತಿಸಿದ್ದು, ಅದರಲ್ಲಿ 34 ಎಕರೆಜಾಗವನ್ನು ಮೆಡಿಕಲ್ ಕಾಲೇಜಿಗೆ ಮೀಸಲಿಡಲಾಗಿದೆ. 2012 ರಲ್ಲಿ ಆಗಿನ ಬಿಜೆಪಿ ಸರ್ಕಾರ ರಾಜ್ಯದಲ್ಲಿ 7 ಮೆಡಿಕಲ್ ಕಾಲೇಜುಗಳಲ್ಲಿ 6ಕ್ಕೆ ಅನುದಾನ ನೀಡಿ ಹಾವೇರಿಯನ್ನು ಕಡೆಗಣಿಸಿತ್ತು. ಹಾವೇರಿಯೊಂದಿಗೆ ಘೋಷಣೆಯಾಗಿದ್ದ ಗದಗ ಮೆಡಿಕಲ್ ಕಾಲೇಜು ಈಗಾಗಲೇ ಆರಂಭವಾಗಿದೆ. ಆದರೆ, ಹಾವೇರಿಯದ್ದು ಕೇವಲ ಘೋಷಣೆಗೆ ಸೀಮಿತವಾಗಿದೆ. ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ತಜ್ಞರ ತಂಡ ಇಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಮೀಸಲಿಟ್ಟಿರುವ ಸ್ಥಳಪರಿಶೀಲನೆ ಮಾಡಿದೆ. 

ಕೆಲವು ದಿನಗಳ ಹಿಂದೆ ಕೇಂದ್ರ ಸರ್ಕಾರ ದೇಶಾದ್ಯಂತ 75 ಹೊಸ ಮೆಡಿಕಲ್‌ ಕಾಲೇಜು ಆರಂಭಕ್ಕೆ ಹಸಿರು ನಿಶಾನೆ ತೋರಿತ್ತು. ಅದರಲ್ಲಿ ರಾಜ್ಯದಲ್ಲಿ ಹಾವೇರಿ ಸೇರಿದಂತೆ 6 ಕಾಲೇಜು ಸೇರಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಲ್ಲಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಅಸ್ತು ಎಂದಿದ್ದಾರೆ. ಈಗಾಗಲೇ ಕಾಲೇಜು ಕಟ್ಟಡಕ್ಕೆ ಅಗತ್ಯ ಜಾಗವಿದ್ದು, ಅನುದಾನ ಬಿಡುಗಡೆಯಾಗಬೇಕಿದೆ. 

ಬಿಜೆಪಿಗೆ ಅಸ್ತ್ರವಾಗಿದ್ದ ವಿಷಯ:

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಜಿಲ್ಲೆಯ ಬಿಜೆಪಿ ನಾಯಕರಿಗೆ ಮೆಡಿಕಲ್ ಕಾಲೇಜು ಪ್ರಮುಖ ಅಸ್ತ್ರವಾಗಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೆಡಿಕಲ್ ಕಾಲೇಜಿಗೆ ಅನುಮತಿ ನೀಡಿದ್ದರೂ ಕಾಂಗ್ರೆಸ್ ಸರ್ಕಾರ ಅನುದಾನ ನೀಡುತ್ತಿಲ್ಲ ಎಂಬ ಆರೋಪ ಸಾಮಾನ್ಯವಾಗಿತ್ತು. ಇದು ಆಗಿನ ಜಿಲ್ಲೆಯ ಕಾಂಗ್ರೆಸ್‌ ನಾಯಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿತ್ತು. ಮೈತ್ರಿ ಸರ್ಕಾರದ ಅವಧಿಯಲ್ಲೂ ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡುತ್ತಿರುವ ಆರೋಪ ವ್ಯಕ್ತವಾಗಿತ್ತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಆಗ ಮೆಡಿಕಲ್ ಕಾಲೇಜಿಗೆ ಒತ್ತಾಯಿಸುತ್ತಿದ್ದವರೇ ಈಗ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಬಸವರಾಜ ಬೊಮ್ಮಾಯಿ ಈಗ ಸರ್ಕಾರದಲ್ಲಿ ಪ್ರಭಾವಿ ಖಾತೆ ಹೊಂದಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿ ಸದ್ಯಕ್ಕೆ ಬಿಜೆಪಿ ಬಿಟ್ಟರೆ ಬೇರೆ ಪಕ್ಷದ ಶಾಸಕರೇ ಇಲ್ಲ. ಇದ್ದ ಏಕೈಕ ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲರೂ ಬಿಜೆಪಿಯತ್ತ ಹೆಜ್ಜೆ ಇಟ್ಟಿದ್ದಾರೆ. ಆದ್ದರಿಂದ ಜಿಲ್ಲೆಯ ಬೇಡಿಕೆಗಳೆಲ್ಲವನ್ನೂ ಈಡೇರಿಸಿಕೊಳ್ಳಲು ಇದು ಸಕಾಲವಾಗಿದೆ. ಹೊಸದಾಗಿ ಆರಂಭವಾಗುವ ಮೆಡಿಕಲ್‌ ಕಾಲೇಜಿಗೆ ಮೂಲಸೌಲಭ್ಯ ಕಲ್ಪಿಸಲು ಅಗತ್ಯ ಅನುದಾನ ಬಿಡುಗಡೆ ಮಾಡಬೇಕಿದೆ. ಆರಂಭಿಕವಾಗಿ 100 ಕೋಟಿ ಕೊಡಬೇಕು ಎಂಬುದು ಜಿಲ್ಲೆಯ ಜನರ ಒತ್ತಾಯವಾಗಿದೆ. 

ಹಾವೇರಿಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಿಸಬೇಕು ಎಂಬುದು ಜಿಲ್ಲೆಯ ಜನರ ಬಹು ವರ್ಷಗಳ ಬೇಡಿಕೆಯಾಗಿದೆ. ಆದರೆ, ಇಷ್ಟು ವರ್ಷ ಕೇವಲ ಭರವಸೆಗೆ ಮಾತ್ರ ಸೀಮಿತವಾಗಿತ್ತು. ಈಗ ಬಿಜೆಪಿ ಸರ್ಕಾರ ಮೆಡಿಕಲ್ ಕಾಲೇಜು ಆರಂಭಕ್ಕೆ ಅನುಮೋದನೆನೀಡಿರುವುದು ಸ್ವಾಗತಾರ್ಹ. ಇದರಿಂದ  ಜಿಲ್ಲೆಯ ಶೈಕ್ಷಣಿಕ ಕ್ರಾಂತಿಗೆ ಸಹಕಾರಿಯಾಗಲಿದೆ. ಶೀಘ್ರದಲ್ಲಿ ಸರ್ಕಾರ ಮೂಲಸೌಲಭ್ಯ ಕಲ್ಪಿಸಲು ಅನುದಾನ ನೀಡಬೇಕು. ಬರುವವರ್ಷದಿಂದಲೇ ಶೈಕ್ಷಣಿಕ ಚಟುವಟಿಕೆ ಆರಂಭಿಸಬೇಕು ಎಂದು ಐಎಂಎ ಜಿಲ್ಲಾ ಘಟಕದ ಅಧ್ಯಕ್ಷ  ಡಾ. ಮೃತ್ಯುಂಜಯ ತುರಕಾಣಿ ಅವರು ಹೇಳಿದ್ದಾರೆ. 
 

click me!