
ಹಾವೇರಿ (ಅ.24) ಅಪ್ರಾಪ್ತೆ ಮೇಲೆ ಕಳೆದ ಹಲವು ತಿಂಗಳಿನಿಂದ ಸತತವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ಇದೀಗ ಬೆಳಗಿಗೆ ಬಂದಿದೆ. ಹಾವೇರಿಯ ಅಪ್ರಾಪ್ತೆ ಗರ್ಭಿಣಿಯಾಗುತ್ತಿದ್ದಂತೆ ಈ ಪ್ರಕರಣ ಬೆಳಕಿಗೆ ಬಂದಿದೆ. ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ ಆರೋಪಿ ತನ್ನ ಗೆಳೆಯರ ಜೊತೆ ಸೇರಿ ಅಪ್ರಾಪ್ತೆ ಮೇಲೆ ದೌರ್ಜನ್ಯ ಎಸಗಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಪೋಕ್ಸೋ ಕೇಸ್ ಅಡಿ ಪ್ರಕರಣ ದಾಖಲಿಸಿದ್ದಾರೆ.
ಉದಯ ಕರಿಯಣ್ಣನವರ, ಕಿಶನ್ ವಡ್ಡರ, ಆಕಾಶ ಮಂತಗಿ ಮತ್ತು ಚಂದ್ರು ಗೊಲ್ಲರ ಈ ಪ್ರಕರಣದ ಆರೋಪಿಗಳು. ಹಾವೇರಿ ಜಿಲ್ಲೆ ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕಳೆದ ಮಾರ್ಚ್ ತಿಂಗಳಿನಲ್ಲಿ ಬಾಲಕಿಗೆ ಇನಸ್ಟಾಗ್ರಾಂನಲ್ಲಿ ಆರೋಪಿಗಳು ಪರಿಚಯವಾಗಿದ್ದರು. ಗೆಳೆತನ ಹೆಸರಿನಲ್ಲಿ ಅಪ್ರಾಪ್ತೆಯನ್ನು ಬಳಸಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಈ ಆರೋಪಿಗಳು ಉತ್ತಮ ಗೆಳೆಯರಂತೆ ಸಂಬಂಧ ಬೆಳೆಸಿದ್ದಾರೆ. ಬಳಿಕ ಬಾಲಕಿಯನ್ನು ಕರೆದು ಖೆಡ್ಡಾಗೆ ಸಿಲುಕಿಸಿದ್ದಾರೆ. ಬ್ಲಾಕ್ ಮೇಲ್ ಮಾಡಿ ಬಾಲಕಿ ಮೇಲೆ ದೌರ್ಜನ್ಯ ಎಸಗಿದ್ದಾರೆ. 2025ರ ಮಾರ್ಚ್ ತಿಂಗಳಲ್ಲಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಉದಯ ಕರಿಯಣ್ಣನವರ ಬಳಿಕ ಗೆಳೆಯರಾದ ಕಿಶನ್ ವಡ್ಡರ, ಆಕಾಶ ಮಂತಗಿ ಮತ್ತು ಶಿವಾಜಿ ಗೊಲ್ಲರ ಎಪ್ರಿಲ್ ತಿಂಗಳಲ್ಲಿ ದೌರ್ಜನ್ಯ ಎಸಗಿದ್ದಾರೆ. ಇದೀಗ ಆರೋಪಿಗಳಿಗಾಗಿ ಹುಡುಕಾಟ ಆರಂಭಗೊಂಡಿದೆ.
ದಾವರಣೆಗೆರೆಯಲ್ಲೂ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಘಟನೆ ಅಕ್ಟೋಬರ್ 15ರಂದು ವರದಿಯಾಗಿತ್ತು. ಇಬ್ಬರು ಆಟೋ ಚಾಲಕರು ಈ ಕೃತ್ಯ ಎಸಗಿದ್ದರು. ಅಕ್ಟೋಬರ್ 9 ರಂದು ಈ ಘಟನೆ ನಡೆದಿತ್ತು. ತಡವಾಗಿ ಬೆಳಕಿಗೆ ಬಂದಿತ್ತು. ಬಸ್ ನಿಲ್ದಾಣದಿಂದ ಅಟೋ ಮೂಲಕ ಪ್ರಯಾಣಿಸುತ್ತಿದ್ದ ಅಪ್ರಾಪ್ತ ಯುವತಿಯನ್ನು ಆಟೋ ಚಾಲಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ. ಲೈಂಗಿಕವಾಗಿ ಸಹಕರಿಸಲು ಒತ್ತಾಯಿಸಿದ್ದಾನೆ. ಬಾಲಕಿ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಮೊಬೈಲ್, ಹಣ ಕಿತ್ತುಕೊಂಡು ಇಬ್ಬರು ಆಟೋ ಚಾಲಕರು ಪರಾರಿಯಾಗಿದ್ದರು. ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.