ಸಾಹಿ​ತ್ಯ ಸಮ್ಮೇಳನ ತಂದ ಸಂಕಟ: ಗುರುತಿನ ಕಲ್ಲುಗಳಿಲ್ಲದೆ ಮಾಲೀಕರ ಪರದಾಟ

By Kannadaprabha News  |  First Published Feb 14, 2023, 12:39 PM IST

ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸಲು ಜಾಗ ನೀಡಿದ್ದ ಖಾಲಿ ನಿವೇಶನದಾರರು ಈಗ ತಮ್ಮ ಸೈಟ್‌ ಎಲ್ಲಿದೆ ಎಂದು ಹುಡುಕುತ್ತಿದ್ದಾರೆ. ತಮ್ಮ ನಿವೇಶನ ಎಲ್ಲಿದೆ ಎಂಬ ಗುರುತು ಸಿಗದೇ ಮಾಲೀಕರು ಕಂಗಾಲಾಗಿದ್ದಾರೆ


ನಾರಾಯಣ ಹೆಗಡೆ, ಕನ್ನಡಪ್ರಭ ವಾರ್ತೆ ಹಾವೇರಿ

ಹಾವೇರಿ: ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸಲು ಜಾಗ ನೀಡಿದ್ದ ಖಾಲಿ ನಿವೇಶನದಾರರು ಈಗ ತಮ್ಮ ಸೈಟ್‌ ಎಲ್ಲಿದೆ ಎಂದು ಹುಡುಕುತ್ತಿದ್ದಾರೆ. ತಮ್ಮ ನಿವೇಶನ ಎಲ್ಲಿದೆ ಎಂಬ ಗುರುತು ಸಿಗದೇ ಮಾಲೀಕರು ಕಂಗಾಲಾಗಿದ್ದಾರೆ. ನಗರದ ಹೊರವಲಯದ ಅಜ್ಜಯ್ಯನ ಗುಡಿ ಎದುರಿನ ಕೃಷಿ ಹಾಗೂ ಕೃಷಿಯೇತರ ನಿವೇಶನದ ಜಾಗ ಸೇರಿ 128 ಎಕರೆ ಜಾಗದಲ್ಲಿ ಜ.6ರಿಂದ ಮೂರು ದಿನಗಳ ಕಾಲ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ಮಾಡಲಾಗಿದೆ. ಸಮ್ಮೇಳನದ ಸಂದರ್ಭದಲ್ಲಿ ಸೈಟ್‌ಗಳ ಗುರುತಿಗೆ ಹಾಕಿದ್ದ ಕಲ್ಲುಗಳನ್ನು ತೆಗೆದು, ಚರಂಡಿಗಳನ್ನು ಮುಚ್ಚಿ ಸಮತಟ್ಟು ಮಾಡಲಾಗಿತ್ತು. ಆ ಜಾಗದಲ್ಲಿ ವೇದಿಕೆ ನಿರ್ಮಾಣ, ಪಾರ್ಕಿಂಗ್‌, ಅಡುಗೆ ವಿಭಾಗಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಜೆಸಿಬಿಯಿಂದ ಇಡೀ 128 ಎಕರೆ ಜಾಗವನ್ನು ಸಮತಟ್ಟು ಮಾಡುವ ವೇಳೆ ಸೈಟ್‌ಗಳ ಗಡಿ ಗುರುತಿಸುವ (boundary stones) ಕಲ್ಲುಗಳನ್ನೂ ತೆಗೆಯಲಾಗಿತ್ತು.

Tap to resize

Latest Videos

undefined

ಕೃಷಿ ಜಮೀನಿನಲ್ಲಿ ಬೆಳೆಗೆ ಅನುಗುಣವಾಗಿ ಪರಿಹಾರ ನೀಡಿದ್ದ​ರೆ, ನಿವೇಶನದಾರರಿಗೆ ಬೌಂಡರಿ ಮಾರ್ಕಿಂಗ್‌ ಮಾಡಿಕೊಡುವುದಾಗಿ ಜಿಲ್ಲಾಡಳಿತ (district administration) ಭರವಸೆ ನೀಡಿತ್ತು. ಆದರೆ, ಈವರೆಗೆ ಜಿಲ್ಲಾಡಳಿತವಾಗಲಿ, ಬಡಾವಣೆ ಮಾಲೀಕರಾಗಲಿ ಈ ಬಗ್ಗೆ ಕ್ರಮ ವಹಿಸದಿರುವುದು ಸೈಟ್‌ ಮಾಲೀಕರನ್ನು ಕಂಗಾಲಾಗಿಸಿದೆ. 

ಬಾಗಲಕೋಟೆಯಿಂದ ಹಾವೇರಿಗೆ ಹ್ಯಾಂಡಲ್‌ ಇಲ್ಲದ ಬೈಕಲ್ಲಿ ಬಂದ ಕನ್ನಡ ಪ್ರೇಮಿ: ಸಿದ್ದೇಶ್ವರ ಶ್ರೀ, ಪುನೀತ್‌ ಫೋಟೋ ಜತೆ ಸವಾರಿ

ಇಲ್ಲೇ ಎಲ್ಲೋ ಇತ್ರಿ: ಇಲ್ಲೇ ಎಲ್ಲೋ ನಮ್‌ ಸೈಟ್‌ ಇತ್ರಿ. ಆದ್ರೆ ಪಕ್ಕಾ ಎಲ್ಯಂತ ಗೊತ್ತಾಗ್ವಲ್ದು... ಹೀಗೆ ಹೇಳುತ್ತ ಮಾಲೀಕರು ತಮ್ಮ ಸೈಟ್‌ ಹುಡುಕುತ್ತಿರುವ ದೃಶ್ಯವನ್ನು ನಿತ್ಯವೂ ಕಾಣಬಹುದು. ಸಮ್ಮೇಳನ ನಡೆದ ಜಾಗದಲ್ಲಿ ಪ್ರಮುಖ ಡೆವಲಪರ್‌ (Developer) ಒಬ್ಬರು 22 ಎಕರೆ ಜಾಗದಲ್ಲಿ ಬಡಾವಣೆ ಅಭಿವೃದ್ಧಿಪಡಿಸಿದ್ದಾರೆ. ವಿವಿಧ ಅಳತೆಯ ಸುಮಾರು 200ಕ್ಕೂ ಹೆಚ್ಚು ಸೈಟ್‌ಗಳನ್ನು ಮಾಡಿ ಅವುಗಳಲ್ಲಿ ಅರ್ಧಕ್ಕೂ ಹೆಚ್ಚು ನಿವೇಶನಗಳನ್ನು ಮಾರಾಟ ಮಾಡಿದ್ದಾರೆ. ಪಕ್ಕದಲ್ಲೇ ಇನ್ನೂ ಒಂದೆರಡು ಮಾಲೀಕರಿಗೆ ಸೇರಿದ ಬಡಾವಣೆಗಳೂ ಇವೆ. ಒಟ್ಟು 300ಕ್ಕೂ ಹೆಚ್ಚು ಖಾಲಿ ನಿವೇಶನಗಳು ಇಲ್ಲಿವೆ. ಕೆಲ ವರ್ಷಗಳ ಹಿಂದೆಯೇ ಅನೇಕರು ಸೈಟ್‌ ಖರೀದಿ ಮಾಡಿದ್ದಾರೆ. ಆದರೆ, ಸಮ್ಮೇಳನದ ನಂತರ ಅವು ಎಲ್ಲಿವೆ ಎಂದು ಹುಡುಕಲು ಸಾಧ್ಯವಾಗುತ್ತಿಲ್ಲ. ಸಮ್ಮೇಳನದ ಬಳಿಕ ಅಲ್ಲಿಯ ಸೈಟ್‌ದರದಲ್ಲೂ ಕೊಂಚ ಏರಿಕೆಯಾಗಿದ್ದು, ಮಾರಾಟ ಮಾಡೋಣವೆಂದರೆ ಸೈಟ್‌ ಎಲ್ಲಿದೆ ಎಂಬುದನ್ನು ತೋರಿಸಲು ಸಾಧ್ಯವಾಗುತ್ತಿಲ್ಲ. ಕೆಲವು ಬಡ ಮಧ್ಯಮ ವರ್ಗದವರು (Middle class) ಬೆವರಿನ ಹಣ ನೀಡಿ ನಿವೇಶನ ಖರೀದಿಸಿದ್ದು, ಅಂಥವರು ಈಗ ಸೈಟ್‌ ಗೊತ್ತಾಗದೆ ಆತಂಕದಲ್ಲಿದ್ದಾರೆ.

ಸಮ್ಮೇಳನ ಮಾಡುವಾಗ ನಮ್ಮನ್ನು ಯಾರೂ ಕೇಳಲಿಲ್ಲ. ಕೇವಲ ಬಡಾವಣೆ ಮಾಡಿದ ಡೆವಲಪರ್‌ಗಳನ್ನಷ್ಟೇ ಕೇಳಿ ಸ್ಥಳ ಪಡೆದಿದ್ದಾರೆ. ಆ ಸಂದರ್ಭದಲ್ಲಿ ಅಪಸ್ವರ ಏಳಬಾರದು ಎಂಬ ಕಾರಣಕ್ಕೆ ಸುಮ್ಮನಿದ್ದೆವು. ನಮ್ಮ ಸೈಟ್‌ ಗಡಿ ಗುರುತು ನಾಶ ಮಾಡಲಾಗಿದೆ. ಸಮ್ಮೇಳನದ ನಂತರ ಸರಿ ಮಾಡಿಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಒಂದು ತಿಂಗಳಾದರೂ ಇನ್ನೂ ಕ್ರಮ ಕೈಗೊಂಡಿಲ್ಲ. ಇದರಿಂದ ಹಣ ಹೂಡಿಕೆ ಮಾಡಿದ ನಮಗೆ ಆತಂಕ ಶುರುವಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ನಿವೇಶನ ಮಾಲೀಕರೊಬ್ಬರು ಅಳಲು ತೋಡಿಕೊಂಡರು.

Kannada Sahitya Sammelana: ಗೋಕಾಕ್ ಚಳುವಳಿ ಮೀರಿಸುವ ಮತ್ತೊಂದು ಚಳುವಳಿ ಅಗತ್ಯವಿದೆ: ಸಾಹಿತಿ ದೊಡ್ಡರಂಗೇಗೌಡ

ಸಮ್ಮೇಳನ ನಡೆಸಿದ ಜಾಗದಲ್ಲಿ 200ಕ್ಕೂ ಹೆಚ್ಚು ನಿವೇಶನಗಳಿವೆ. ಅವುಗಳನ್ನು ಅನೇಕರು ಹಿಂದೆಯೇ ಖರೀದಿಸಿದ್ದಾರೆ. ಸಮ್ಮೇಳನದ ಸಂದರ್ಭದಲ್ಲಿ ಗಡಿ ಗುರುತಿಸುವ ಕಲ್ಲು ತೆಗೆದಿದ್ದಾರೆ. ಶೀಘ್ರ ಅವುಗಳ ಬೌಂಡರಿ ಗುರುತು ಹಾಕಿಕೊಡುವುದಾಗಿ ಜಿಲ್ಲಾಧಿಕಾರಿ ಹೇಳಿದ್ದಾರೆ. ಸೈಟ್‌ ಮಾಲೀಕರು ಆತಂಕಪಡುವ ಅಗತ್ಯವಿಲ್ಲ.

ಸಂಜೀವ್‌ ಕುಮಾ​ರ್‌ ನೀರಲಗಿ, ನಗರಸಭೆ ಅಧ್ಯಕ್ಷರು

ಸಮ್ಮೇಳನ ಸ್ಥಳದಲ್ಲಿದ್ದ ನಿವೇಶನಗಳ ಬೌಂಡರಿ ಮಾರ್ಕಿಂಗ್‌ ಮಾಡಿಕೊಡಲಾಗುವುದು. ಆದರೆ, ಇದನ್ನು ಕೇವಲ ಜಿಲ್ಲಾಡಳಿತ ಮಾಡಲು ಸಾಧ್ಯವಿಲ್ಲ. ಬಡಾವಣೆ ಮಾಲೀಕರು ನೇರವಾಗಿ ನಮ್ಮನ್ನು ಸಂಪರ್ಕಿಸಿದರೆ ನಾಳೆಯೇ ಮೊದಲಿದ್ದಂತೆ ಗುರುತು ಹಾಕಿಕೊಡಲಾಗುವುದು.

ರಘುನಂದನ ಮೂರ್ತಿ, ಜಿಲ್ಲಾಧಿಕಾರಿ ಹಾವೇರಿ

click me!