ಹಾವೇರಿ: ಮತದಾರರ ಹೊಸ ನೋಂದಣಿ ಕಡ್ಡಾಯ

By Web Desk  |  First Published Oct 20, 2019, 8:21 AM IST

ಪಶ್ಚಿಮ ಪದವೀಧರ ಮತ ಕ್ಷೇತ್ರಕ್ಕೆ ಪದವೀಧರ ಮತದಾರರ ನೋಂದಣಿಗೆ ಜಿಲ್ಲಾಧಿಕಾರಿ ಸೂಚನೆ| ಪಶ್ಚಿಮ ಪದವೀಧರ ಮತ ಕ್ಷೇತ್ರದ ಕರ್ನಾಟಕ ವಿಧಾನ ಪರಿಷತ್‌ಗೆ 2020ರಲ್ಲಿ ನಡೆಯುವ ಚುನಾವಣೆಗೆ ಮತದಾರರ ಪಟ್ಟಿ ನೋಂದಣಿ ಕಾರ್ಯ ಆರಂಭ| ಈ ಹಿಂದಿನ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಮತ ಚಲಾಯಿಸಿದ್ದರೂ ಮತ್ತೆ ಹೊಸದಾಗಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯ|  ಎಲ್ಲ ಪದವೀಧರರು ಆಯಾ ತಹಸೀಲ್ದಾರ್‌ ಕಚೇರಿಯಲ್ಲಿ ನಿಗದಿತ ಅರ್ಜಿ ನಮೂನೆ ಭರ್ತಿ ಮಾಡಿ ನೋಂದಾಯಿಸಿಕೊಳ್ಳಬೇಕು| 


ಹಾವೇರಿ(ಅ.20): ಪಶ್ಚಿಮ ಪದವೀಧರ ಮತ ಕ್ಷೇತ್ರದ ಕರ್ನಾಟಕ ವಿಧಾನ ಪರಿಷತ್‌ಗೆ 2020ರಲ್ಲಿ ನಡೆಯುವ ಚುನಾವಣೆಗೆ ಮತದಾರರ ಪಟ್ಟಿ ನೋಂದಣಿ ಕಾರ್ಯ ಆರಂಭಗೊಂಡಿದೆ. ಈ ಹಿಂದಿನ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಮತ ಚಲಾಯಿಸಿದ್ದರೂ ಮತ್ತೆ ಹೊಸದಾಗಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಎಲ್ಲ ಪದವೀಧರರು ಆಯಾ ತಹಸೀಲ್ದಾರ್‌ ಕಚೇರಿಯಲ್ಲಿ ನಿಗದಿತ ಅರ್ಜಿ ನಮೂನೆ ಭರ್ತಿಮಾಡಿ ನೋಂದಾಯಿಸಿಕೊಳ್ಳಬೇಕು. ಪಶ್ಚಿಮ ಪದವೀಧರರ ಮತ ಕ್ಷೇತ್ರದ ವ್ಯಾಪ್ತಿಗೆ ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಒಳಗೊಂಡಿವೆ. ಇದೇ ಅ. 1ರಿಂದ ಪದವೀಧರ ಮತದಾರರ ನೋಂದಣಿ ಕಾರ್ಯ ಜಿಲ್ಲೆಯಲ್ಲಿ ಆರಂಭಿಸಲಾಗಿದೆ. ನ. 15ರ ವರೆಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ನ. 21ಕ್ಕೆ ಮತದಾರರ ಕರಡು ಪ್ರತಿ ಪ್ರಕಟಿಸಲಾಗುವುದು. ಡಿ. 9ರ ವರೆಗೆ ಆಕ್ಷೇಪಣೆಗೆ ಅವಕಾಶ ಕಲ್ಪಿಸಲಾಗುವುದು. ಡಿ. 26ರ ವರೆಗೆ ಆಕ್ಷೇಪಣೆಗಳನ್ನು ಪರಿಶೀಲನೆ ನಡೆಸಿ ಡಿಸೆಂಬರ್‌ ಅಂತ್ಯಕ್ಕೆ ಅಂತಿಮ ಪದವೀಧರರ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದರು.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈವರೆಗೂ ಕೇವಲ 3000 ಮತದಾರರು ಮಾತ್ರ ನೋಂದಣಿಯಾಗಿದ್ದಾರೆ. ಜಿಲ್ಲೆಯಲ್ಲಿ 22 ಸಾವಿರ ಪದವೀಧರ ಮತದಾರರನ್ನು ಅಂದಾಜಿಸಲಾಗಿದೆ. ಕಳೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ 18 ಸಾವಿರ ಮತದಾರರು ನೋಂದಾಯಿಸಿಕೊಂಡಿದ್ದರು. ಪಶ್ಚಿಮ ಪದವೀಧರರ ಮತದಾರರ ನೋಂದಣಿ ಅಧಿಕಾರಿಯಾಗಿ ಪ್ರಾದೇಶಿಕ ಆಯುಕ್ತರನ್ನು ಹಾಗೂ ಸಹಾಯಕ ನೋಂದಣಿ ಅಧಿಕಾರಿಯಾಗಿ ಜಿಲ್ಲಾಧಿಕಾರಿಗಳನ್ನು ನೇಮಿಸಲಾಗಿದೆ. ಪದವೀಧರ ಮತದಾರರಾಗಿ ನೊಂದಾಯಿಸಿಕೊಳ್ಳಲು ಸರಳವಾದ ಅರ್ಜಿಯನ್ನು ಭರ್ತಿಮಾಡಿ ಸ್ವಯಂ ಘೋಷಣಾ ಪತ್ರ ಸಲ್ಲಿಕೆಮಾಡಬೇಕಾಗುತ್ತದೆ. ಅರ್ಜಿಯೊಂದಿಗೆ ಯಾವುದೇ ಪದವಿ ಪ್ರಮಾಣಪತ್ರ ಅಥವಾ ಅಂಕಪಟ್ಟಿ, ಪದವಿಗೆ ಸಮಾನವಾದ ಡಿಪ್ಲೋಮಾ ಪದವಿಯ ಅಂಕಪಟ್ಟಿಅಥವಾ ವಿವಿ ನೀಡಿದ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಲು ಮನವಿ ಮಾಡಿದರು.

ಇವಿಪಿ ವಿಸ್ತರಣೆ:

ಮತದಾರರ ಸ್ವಯಂ ಪರಿಶೀಲನಾ ಹಾಗೂ ಸ್ವಯಂ ದೃಢೀಕರಣ ಅವಧಿಯನ್ನು ಅ. 15 ರಿಂದ ನವಂಬರ್‌ 18ರ ವರೆಗೆ ವಿಸ್ತರಿಸಲಾಗಿದೆ. ಯಾವುದೇ ತಪ್ಪು ಇಲ್ಲದೆ ಶುದ್ಧವಾದ ಮತದಾರರ ಯಾದಿಯನ್ನು ತಯಾರಿಸಲು ಚುನಾವಣಾ ಆಯೋಗ ವಿಶೇಷ ಮತದಾರರ ಪಟ್ಟಿಪರಿಷ್ಕಣಾ ಕಾರ್ಯವನ್ನು ಹಮ್ಮಿಕೊಂಡಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದರು.

ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ತಪ್ಪಾಗಿ ಮುದ್ರಿತವಾಗಿದ್ದರೆ ವಿಳಾಸ, ಇತರ ವಿವರಗಳು ತಪ್ಪಾಗಿದ್ದರೆ ಸರಿಪಡಿಸುವ ಅವಕಾಶ ಕಲ್ಪಿಸಲಾಗಿದೆ. ಸ್ವಯಂ ಮತದಾರರು ತಮ್ಮ ಮೊಬೈಲ್‌ಗಳಲ್ಲಿ ಓವರ್‌ ಹೆಲ್ಪಲೈನ್‌ ಬಳಸಿ ತಮ್ಮ ಹೆಸರುಗಳನ್ನು ತಾವೇ ತಿದ್ದುಪಡಿಮಾಡಿಕೊಳ್ಳಬಹುದು. ಅದು ಸಾಧ್ಯವಾಗದಿದ್ದರೆ ಬಿಎಲ್‌ಒಗಳ ಮುಖಾಂತರ ಅಥವಾ ಯಾವುದೇ ಸೇವಾ ಕೇಂದ್ರಗಳ ಮೂಲಕ ಅಥವಾ ತಹಸೀಲ್ದಾರ್‌ ಕಚೇರಿಗಳಲ್ಲಿ ಆರಂಭಿಸಿರುವ ಮತದಾರರ ಸಹಾಯಕ ಕೇಂದ್ರದಲ್ಲಿ ಅಥವಾ ಮತದಾರರ ಸಹಾಯವಾಣಿ 1950ಕ್ಕೆ ಕರೆ ಮಾಡಿ ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿದೆ. 

ತಾವು ತಮ್ಮ ಕುಟುಂಬದ ಸದಸ್ಯರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಬೇರೆ ಬೇರೆ ವಿಭಾಗಕ್ಕೆ ಹಂಚಿಹೊಗಿದ್ದರೆ ಒಂದೆಡೆ ಸೇರಿಸುವ ಅವಕಾಶ ಕಲ್ಪಿಸಲಾಗಿದೆ. ಹಾವೇರಿ ಜಿಲ್ಲೆಯಲ್ಲಿ 12,56,565 ಮತದಾರರ ಪೈಕಿ ಈಗಾಗಲೇ 7,83,470 ಮತದಾರರು ತಮ್ಮ ವಿವರಗಳನ್ನು ಪರಿಶೀಲಿಸಿಕೊಂಡಿದ್ದಾರೆ. ಮತದಾರರ ಪರಿಷ್ಕರಣೆ ಕಾರ್ಯದಲ್ಲಿ ಶೇ. 62ರಷ್ಟುಸಾಧನೆ ಮಾಡಿದ್ದು, ರಾಜ್ಯದಲ್ಲಿ ಹಾವೇರಿ ಮೂರನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಮತದಾರರ ಸಹಾಯಕ ಕೇಂದ್ರಗಳ ಮೂಲಕ 376702, ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ 42,006, ಬಿಎಲ್‌ಒ ಆ್ಯಪ್‌ ಮೂಲಕ 1,92,574, ಸಹಾಯವಾಣಿ 1950ನ್ನು ಸಂಪರ್ಕಿಸಿ 1,29,792 ಮತದಾರರು ವೋಟರ್‌ ಹೆಲ್ಪ್‌ ಲೈನ್‌ 34,643 ಮತದಾರರು ತಮ್ಮ ಹೆಸರುಗಳನ್ನು ಪರಿಶೀಲಿಸಿಕೊಂಡಿದ್ದಾರೆ. ಈ ಪೈಕಿ 86,573 ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿನ ದೋಷವಿದ್ದು ಸರಿಪಡಿಸಲು ಕೋರಿದ್ದಾರೆ. ದೋಷಗಳ ತಿದ್ದುಪಡಿ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಉಪ ಚುನಾವಣೆಗೆ ಸಿದ್ಧತೆ:

ನ. 11 ರಿಂದ ರಾಣಿಬೆನ್ನೂರು, ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ನೀತಿ ಸಂಹಿತೆ ಜಾರಿಗೆ ಬರಲಿದೆ. ಈಗಾಗಲೇ ಬ್ಯಾಲೆಟ್‌ ಹಾಗೂ ಕಂಟ್ರೋಲ್‌ ಯುನಿಟ್‌ಗಳ ಪರಿಶೀಲನೆ ಕಾರ್ಯ ಮುಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದರು.

ಜಿಪಂ ಸಿಇಒ ರಮೇಶ ದೇಸಾಯಿ ಮಾತನಾಡಿ, ಚುನಾವಣೆ ದಿನ ಮತದಾರ ಪಟ್ಟಿಯಲ್ಲಿ ನ್ಯೂನ್ಯತೆಗಳು ಕಂಡಬರದ ಹಾಗೆ ಮೊದಲೇ ಮತದಾರರ ಪಟ್ಟಿಪರಿಶೀಲನೆ ಕಾರ್ಯ ಹಮ್ಮಿಕೊಳ್ಳಲಾಗಿದೆ. ಮತದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮತದಾರ ಪಟ್ಟಿಪರಿಶೀಲನೆಗೆ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಹಿರೇಕೆರೂರಿಗೆ 22 ಹಾಗೂ ರಾಣಿಬೆನ್ನೂರಿಗೆ 26 ಸೆಕ್ಟರ್‌ ಅಧಿಕಾರಿಗಳನ್ನು ನೇಮಕಮಾಡಿ ಇವಿಎಂ ಬಳಸಿ ಮತದಾನ ಮಾಡುವ ಕುರಿತಂತೆ ಜಾಗೃತಿ ಮೂಡಿಸುವ ಕಾರ್ಯವನ್ನು ಕ್ಷೇತ್ರವಾರು ಹಮ್ಮಿಕೊಳ್ಳಲಾಗಿದೆ. 

ಬ್ಯಾಕ್‌ ಕಮೀಟಿ ಮೂಲಕ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪಿಡಿಒಗಳನ್ನು ಬಳಸಿಕೊಂಡು ಕರಪತ್ರ ಹಂಚಿಕೆ ಸೇರಿದಂತೆ ಮತದಾರರ ವ್ಯವಸ್ಥಿತ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ವಿವರಿಸಿದರು. ಚುನಾವಣಾ ತಹಸೀಲ್ದಾರ್‌ ಪ್ರಶಾಂತ ನಾಲವಾರ, ಜಿಪಂ ಸಹಾಯಕ ಕಾರ್ಯದರ್ಶಿ ಜಾಫರ ಸುತಾರ ಇದ್ದರು.
 

click me!