ಕೆರೆ ತುಂಬಿಸಿದ್ದಕ್ಕೆ ಕನವಳ್ಳಿ ಗ್ರಾಮಸ್ಥರಿಂದ ಗೌರವ ಸಮರ್ಪಣೆ| ಗ್ರಾಮಸ್ಥರ ಬೇಡಿಕೆ ಈಡೇರಿಸಿದ್ದಕ್ಕೆ ಶಾಸಕರನ್ನು ಆನೆ ಮೇಲೆ ಕೂರಿಸಿ ಮೆರವಣಿಗೆ ನಡೆಸಿ ಕೃತಜ್ಞತೆ ಸಲ್ಲಿಕೆ| ಕನವಳ್ಳಿ ಕೆರೆ ತುಂಬಿಸಲು ಶಾಸಕರು ಹೆಚ್ಚಿನ ಕಾಳಜಿ ತೋರಿಸಿದ್ದರು| ಇದು ರಾಜಕೀಯ ಜಿದ್ದಾಜಿದ್ದಿಗೂ ಕಾರಣವಾಗಿತ್ತು|
ಹಾವೇರಿ(ಅ.19): ಗ್ರಾಮಸ್ಥರ ಬೇಡಿಕೆಯನ್ನು ಈಡೇರಿಸಿದ್ದಕ್ಕೆ ಶಾಸಕರನ್ನು ಆನೆ ಮೇಲೆ ಕೂರಿಸಿ ಮೆರವಣಿಗೆ ನಡೆಸಿ ಕೃತಜ್ಞತೆ ಸಲ್ಲಿಸಿದ ಅಪರೂಪದ ಘಟನೆ ತಾಲೂಕಿನ ಕನವಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಗ್ರಾಮದ ಬಹು ವರ್ಷಗಳ ಬೇಡಿಕೆಯಾದ ಕೆರೆಯನ್ನು ತುಂಬಿಸಿದ್ದಕ್ಕೆ ಗ್ರಾಮಸ್ಥರು ಶಾಸಕರಿಗೆ ಗೌರವ ಸಲ್ಲಿಸುವ ನಿಮಿತ್ತ ಶುಕ್ರವಾರ ನೆಹರು ಓಲೇಕಾರ ಅವರನ್ನು ಆನೆ ಮೇಲೆ ಕೂಡ್ರಿಸಿ ಮೆರವಣಿಗೆ ಮಾಡಿದ್ದಾರೆ.
undefined
ಕನವಳ್ಳಿ ಕೆರೆ ತುಂಬಿಸಲು ಶಾಸಕರು ಹೆಚ್ಚಿನ ಕಾಳಜಿ ತೋರಿಸಿದ್ದರು. ಇದು ರಾಜಕೀಯ ಜಿದ್ದಾಜಿದ್ದಿಗೂ ಕಾರಣವಾಗಿತ್ತು. ಇಲ್ಲಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆವರಣದಲ್ಲಿದ್ದ ಪೈಪ್‌ಗಳನ್ನು ಬಳಸಿದ್ದಕ್ಕೆ ಜಿಪಂ ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ ವಿರೋಧ ವ್ಯಕ್ತಪಡಿಸಿದ್ದರು. ಇವರಿಬ್ಬರ ರಾಜಕೀಯ ಗುದ್ದಾಟದಲ್ಲಿ ಕನವಳ್ಳಿ ಗ್ರಾಮಸ್ಥರ ಮೇಲೆ ಪೈಪ್ ಕಳ್ಳತನ ಪ್ರಕರಣವೂ ದಾಖಲಾಗಿತ್ತು. ಆದರೂ ಛಲ ಬಿಡದೇ ಗ್ರಾಮದ ಕೆರೆ ತುಂಬಿಸಿದ್ದರು.
ಶುಕ್ರವಾರ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದ ಗ್ರಾಮಸ್ಥರು ಶಾಸಕರ ಶ್ರಮಕ್ಕೆ ತಕ್ಕ ಅಭಿನಂದನೆ ಸಲ್ಲಿಸಬೇಕೆಂದು ಆನೆ ತರಿಸಿ ಅದರ ಮೇಲೆ ಶಾಸಕರನ್ನು ಕೂಡ್ರಿಸಿ, ವಾದ್ಯ ಮೇಳಗಳೊಂದಿಗೆ ಭವ್ಯ ಮೆರವಣಿಗೆ ಮಾಡಿ ಅಭಿನಂದನೆ ಸಲ್ಲಿಸಿದರು.
ಯುಟಿಪಿ ಕಾಲುವೆಯಿಂದ ಕೆರೆಗೆ ನೀರು ಹರಿಸುವ ಕಾಮಗಾರಿಗೆ ನೆಹರು ಓಲೇಕಾರ ಚಾಲನೆ ನೀಡಿ, ನೀವೇ ಕೊಟ್ಟ ಅಧಿಕಾರವನ್ನು ಉಪಯೋಗಿಸಿಕೊಂಡು ನಿಮ್ಮ ಕೆಲಸ ಮಾಡಿದ್ದೇನೆ. ಕನವಳ್ಳಿ ಗ್ರಾಮದ ಬಹುವರ್ಷದ ಬೇಡಿಕೆಯನ್ನು ಕೇವಲ ಮೂರು ತಿಂಗಳಲ್ಲಿ ಈಡೇರಿಸಿದ್ದೇನೆ. ಇಂದು ಗ್ರಾಮಸ್ಥರು ಆನೆ ಮೆರವಣಿಗೆ ಮಾಡಿರುವುದನ್ನು ಕಂಡು ಭಾವುಕವಾಗಿದ್ದೇನೆ. ಕೇವಲ 6.50 ಲಕ್ಷ ವೆಚ್ಚದಲ್ಲಿ ಯೋಜನೆ ರೂಪಿಸಿ ಕೆರೆಗೆ ನೀರು ಹರಿಸುತ್ತಿದ್ದೇವೆ. ಕಾಲುವೆ ಮಾಡಿರುವ ಉದ್ದೇಶ ರೈತರಿಗೆ ನೀರು ಸಿಗಬೇಕು ಎಂಬುದಿದೆ. ಕನವಳ್ಳಿಯಲ್ಲಿ ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ನೀರು ಕೊಡುವ ಸ್ಥಿತಿಯಿತ್ತು. ಕಾಲುವೆಯಿಂದ ವ್ಯರ್ಥವಾಗಿ ನದಿ ಸೇರುವ ನೀರನ್ನು ನಾವು ಬಳಸಿಕೊಳ್ಳುತ್ತಿದ್ದೇವೆ. ಇದಕ್ಕೆ ಯಾರ ಪರವಾನಗಿಯೂ ಬೇಕಿಲ್ಲ. ಈ ಕುರಿತು ಸಿಎಂ ಗಮನಕ್ಕೆ ತಂದಿದ್ದು, ವಿಶೇಷ ಪ್ರಕರಣವೆಂದು ಪರಿಗಣಿಸಿ ಅನುಮತಿ ಕೊಡಲು ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.