ರಾಜ್ಯದಲ್ಲಿ ನೆರೆ ಹಾವಳಿಗೆ ತುತ್ತಾಗಿರುವ ಪ್ರದೇಶದ 1 ಸಾವಿರ ಬಡ ವಿದ್ಯಾರ್ಥಿಗಳಿಗೆ ಶ್ರೀಮಠದ ವಿದ್ಯಾಸಂಸ್ಥೆಯಲ್ಲಿ ಉಚಿತ ಊಟ, ವಸತಿ ಸೇರಿ ಶಿಕ್ಷಣ| ಗೋಕಾಕನಿಂದ 130 ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಲ್ಲಿ ಶಿಕ್ಷಣ ಪಡೆಯಲು ಮುಂದೆ ಬಂದಿದ್ದಾರೆ| ಕಷ್ಟ, ನೋವು, ನಲಿವು ಯಾರನ್ನು ಬಿಟ್ಟಿಲ್ಲ. ಎಲ್ಲರಿಗೂ ಬರುವುದು ಸಹಜ. ಕಷ್ಟ ಬಂದಾಗ ಮಾನವೀಯ ಸಂಬಂಧಗಳು ಮುಖ್ಯವಾಗುತ್ತವೆ|
ಹಾವೇರಿ(ಅ.17): ರಾಜ್ಯದಲ್ಲಿ ನೆರೆ ಹಾವಳಿಗೆ ತುತ್ತಾಗಿರುವ ಪ್ರದೇಶದ 1 ಸಾವಿರ ಬಡ ವಿದ್ಯಾರ್ಥಿಗಳಿಗೆ ಶ್ರೀಮಠದ ವಿದ್ಯಾಸಂಸ್ಥೆಯಲ್ಲಿ ಉಚಿತ ಊಟ, ವಸತಿ ಸೇರಿ ಶಿಕ್ಷಣ ನೀಡುವುದಾಗಿ ಸಿರಿಗೆರೆ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯರು ಹೇಳಿದ್ದಾರೆ.
ತಾಲೂಕಿನಲ್ಲಿ ವರದಾ ನದಿಯ ನೆರೆ ಬಾಧಿತ ನಾಗನೂರು ಗ್ರಾಮದಲ್ಲಿನ 122 ನೆರೆ ಸಂತ್ರಸ್ತರಿಗೆ ಶ್ರೀಮಠದಿಂದ ಬುಧವಾರ ಪಾತ್ರೆ, ಅಕ್ಕಿ, ಬಟ್ಟೆಗಳ ಕಿಟ್ ವಿತರಿಸಿ ಅವರು ಮಾತನಾಡಿದರು.
ಈಗಾಗಲೇ ಗೋಕಾಕನಿಂದ 130 ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಲ್ಲಿ ಶಿಕ್ಷಣ ಪಡೆಯಲು ಮುಂದೆ ಬಂದಿದ್ದಾರೆ. ಇಲ್ಲಿಯೂ ಜಿಲ್ಲಾಡಳಿತ, ಸ್ಥಳೀಯರು ಬಡ ಮಕ್ಕಳನ್ನು ಗುರುತಿಸಿ ನಮ್ಮ ಸಂಸ್ಥೆಗೆ ಕಳಿಸಿದರೆ ಅವರಿಗೆ ಉಚಿತ ಶಿಕ್ಷಣ ಕೊಡಲಾಗುವುದು ಎಂದರು.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಷ್ಟ, ನೋವು, ನಲಿವು ಯಾರನ್ನು ಬಿಟ್ಟಿಲ್ಲ. ಎಲ್ಲರಿಗೂ ಬರುವುದು ಸಹಜ. ಕಷ್ಟ ಬಂದಾಗ ಮಾನವೀಯ ಸಂಬಂಧಗಳು ಮುಖ್ಯವಾಗುತ್ತವೆ. ಜಗತ್ತಿನಲ್ಲಿ ಎರಡು ರೀತಿಯಲ್ಲಿ ಸಂಕಷ್ಟಗಳು ಎದುರಾಗುತ್ತವೆ. ಒಂದು ಪ್ರಾಕೃತಿಕ ವಿಕೋಪದಿಂದಾಗುವ ಸಂಕಷ್ಟ. ಇನ್ನೊಂದು ಮಾನವ ನಿರ್ಮಿತ ಸಂಕಷ್ಟಗಳು. ಪ್ರಾಕೃತಿಕ ಸಂಕಷ್ಟಗಳು ಬಂದಾಗ ಎಲ್ಲರ ನೆರವು ಅಗತ್ಯವಾಗಿದೆ. ಸರ್ಕಾರವು ಎಲ್ಲ ರೀತಿಯ ನೆರವು ನೀಡುತ್ತಿದೆ. ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಮನೆ ನಿರ್ಮಿಸಿಕೊಳ್ಳಲು ನಿಮಗೆ 5 ಲಕ್ಷಗಳ ಪರಿಹಾರ ಘೋಷಿಸಿದ್ದು, ಅದನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳಬೇಡಿ ಎಂದು ತಿಳಿಸಿದ್ದಾರೆ.
ಗ್ರಾಮದ ಹತ್ತಿರ ವರದಾ ನದಿಗೆ ಕಟ್ಟಿರುವ ಬ್ಯಾರೇಜ್‌ನಿಂದ ಮುಳುಗಡೆ ಭೀತಿ ಹೆಚ್ಚಾಗಿರುವ ಮಾತುಗಳು ಕೇಳಿ ಬಂದಿವೆ. ಅದನ್ನು ಸರ್ಕಾರ ಪರಿಶೀಲಿಸಿ ಒಂದೇ ಕಡೆ ಎತ್ತರದಲ್ಲಿ ಬ್ಯಾರೇಜ್ ನಿರ್ಮಿಸುವ ಬದಲು ನದಿಯ ಉದ್ದಕ್ಕೂ ಅಲ್ಲಲ್ಲಿ ಬ್ಯಾರೇಜ್ ನಿರ್ಮಿಸಿ. ಇದರಿಂದ ಹೆಚ್ಚು ಜನರಿಗೆ ಕಡಿಮೆ ನಷ್ಟದಲ್ಲಿ ಅನುಕೂಲವಾಗುತ್ತದೆ. ಈ ಕುರಿತು ತಂತ್ರಜ್ಞರಿಗೂ ಸೂಚನೆ ಕೊಡಿ ಎಂದು ಸ್ಥಳದಲ್ಲಿದ್ದ ಸಚಿವ ಬಸವರಾಜ ಬೊಮ್ಮಾಯಿಯವರಿಗೆ ಸಲಹೆ ನೀಡಿದರು.
ಬ್ಯಾರೇಜ್ ನಿರ್ಮಾಣದಿಂದ ರೈತರಿಗೆ ಅನುಕೂಲವಾಗುತ್ತದೆ. ಕೆಲ ಸಮಯದಲ್ಲಿ ಒಂದನ್ನು ಪಡೆದುಕೊಳ್ಳಲು ಒಂದನ್ನು ಕಳೆದುಕೊಳ್ಳುವ ಸ್ಥಿತಿ ಉಂಟಾಗುತ್ತದೆ. ಎಲ್ಲವನ್ನೂ ಅಳೆದು ತೂಗಿ ನಿರ್ಧಾರ ಕೈಗೊಳ್ಳಬೇಕು. ಇಲ್ಲಿನ ಬ್ಯಾರೇಜ್ ಎತ್ತರ ಅಷ್ಟೇನು ಅಪಾಯಕಾರಿಯಿಲ್ಲದೇ ಇದ್ದರೂ ದೊಡ್ಡ ಪ್ರಮಾಣದಲ್ಲಿ ಮಳೆ ಬಂದಿದ್ದರಿಂದ ಸಮಸ್ಯೆಯಾಗಿದೆ. ಇದಕ್ಕೂ ಸೂಕ್ತ ವ್ಯವಸ್ಥೆ ಕಲ್ಪಿಸಿ ಎಂದರು.
ಜಿಪಂ ಸದಸ್ಯ ವಿರುಪಾಕ್ಷಪ್ಪ ಕಡ್ಲಿ ಮಾತನಾಡಿ, ನೆರೆಯಿಂದ ರೈತರು ಜಮೀನುಗಳಿಗೆ ಹೋಗುವ ದಾರಿಗಳು ಹಾಳಾಗಿದ್ದು, ಅವುಗಳ ದುರಸ್ತಿಗೆ ಅನುದಾನ ಒದಗಿಸಬೇಕು. ಕಳೆದ ವಾರ ಸುರಿದ ಮಳೆಗೆ ಮತ್ತೆ ಕೆಲ ಮನೆಗಳು ಬಿದ್ದಿವೆ. ಬೆಳೆಹಾನಿಯೂ ಆಗಿದೆ. ಇವುಗಳಿಗೆ ಪರಿಹಾರ ಒದಗಿಸಲು ಸರ್ಕಾರ ಮುಂದಾಗಬೇಕು ಎಂದು ಸಚಿವರಿಗೆ ವಿನಂತಿಸಿದರು.
ಕೂಡಲ ಗುರುನಂಜೇಶ್ವರ ಮಠದ ಗುರುಮಹೇಶ್ವರ ಶಿವಾಚಾರ್ಯರು, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಶಿವಕುಮಾರ ಉದಾಸಿ, ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಸುರೇಶಗೌಡ ಪಾಟೀಲ, ಶಿವರಾಜ ಸಜ್ಜನರ, ಎಸ್.ಆರ್. ಪಾಟೀಲ, ಜಪಂ ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ, ಮಾಲತೇಶ ಸೊಪ್ಪಿನ, ಜಿಲ್ಲಾಧಿಕಾರಿ ಕೃಷ್ಣ ಬಾಜಪೈ, ಎಡಿಸಿ ಎನ್. ತಿಪ್ಪೇಸ್ವಾಮಿ, ತಹಸೀಲ್ದಾರ್ ಶಂಕರ ಜಿ.ಎಸ್, ನೀಲಪ್ಪ ಬಾರ್ಕಿ, ಉಳಿವೆಪ್ಪ ಗಾಳಿ, ಗ್ರಾಪಂ ಅಧ್ಯಕ್ಷೆ ಮಂಜವ್ವ ಜುಂಜಣ್ಣನವರ, ಉಪಾಧ್ಯಕ್ಷೆ ನೀಲಪ್ಪ ಅವ್ವಕ್ಕನವರ ಇತರರಿದ್ದರು. ಸುರೇಶ ಹೊಸಮನಿ ಸ್ವಾಗತಿಸಿದರು. ಶಿಕ್ಷಕ ಕರ್ಜಗಿ ನಿರೂಪಿಸಿದರು.