ಹಾವೇರಿ ಮೆಡಿಕಲ್ ಕಾಲೇಜ್ ಜಾಗಕ್ಕೆ ಕಿತ್ತಾಟ ಶುರು!

By Web Desk  |  First Published Nov 12, 2019, 10:06 AM IST

ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ನಡೆದಿತ್ತು ಹೋರಾಟ | ದೇವಗಿರಿ ಯಲ್ಲಾಪುರ ಬಿಟ್ಟು ನೆಲೋಗಲ್‌ನಲ್ಲಿ ಆರಂಭಕ್ಕೆ ಒತ್ತಾಯ|ತಜ್ಞರು ಸ್ಥಳ ಪರಿಶೀಲಿಸಿ ಅವರು ಸೂಚಿಸುವ ಜಾಗದಲ್ಲಿ ಕಾಲೇಜಿಗೆ ಶಂಕುಸ್ಥಾಪನೆ ನೆರವೇರಿಸುವುದಾಗಿ ಮುಖ್ಯಮಂತ್ರಿಗಳೇ ತಿಳಿಸಿದ್ದಾರೆ|


ನಾರಾಯಣ ಹೆಗಡೆ

ಹಾವೇರಿ[ನ.12]: ಜಿಲ್ಲೆಗೆ ಮಂಜೂರಾಗಿರುವ ಮೆಡಿಕಲ್ ಕಾಲೇಜು ಸ್ಥಾಪನೆ ಕುರಿತು ಸ್ಥಳ ಗೊಂದಲ ಶುರುವಾಗಿದೆ. ಈಗಾಗಲೇ ಮೆಡಿಕಲ್ ಕಾಲೇಜಿಗೆಂದೇ ದೇವಗಿರಿಯಲ್ಲಾಪುರ ಗ್ರಾಮದಲ್ಲಿ ಮೀಸಲಾಗಿರುವ ಜಾಗಬಿಟ್ಟು ನೆಲೋಗಲ್‌ನಲ್ಲಿ ಕಾಲೇಜು ಆರಂಭಿಸುವಂತೆ ಒತ್ತಾಯ ಶುರುವಾಗಿದೆ.

Tap to resize

Latest Videos

ಕಳೆದ 8-10 ವರ್ಷಗಳಿಂದ ಜಿಲ್ಲೆಯಲ್ಲಿ ಮೆಡಿಕಲ್‌ ಕಾಲೇಜು ಸ್ಥಾಪಿಸುವಂತೆ ಪಕ್ಷಾತೀತವಾಗಿ ನಡೆಸಿದ ಹೋರಾಟದ ಫಲವಾಗಿ ಈಗ ಸರ್ಕಾರ ಅನುಮತಿ ನೀಡಿದೆ. ಕೇಂದ್ರ ಸರ್ಕಾರ ದೇಶಾದ್ಯಂತ ಅನೇಕ ಮೆಡಿಕಲ್ ಕಾಲೇಜು ಆರಂಭಕ್ಕೆ ಒಪ್ಪಿಗೆ ನೀಡಿದ್ದು, ಆ ಪೈಕಿ ಹಾವೇರಿಯಲ್ಲಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದೆ. ಕೇಂದ್ರ ಸರ್ಕಾರದ ಶೇ.60  ಹಾಗೂ ರಾಜ್ಯದ ಪಾಲು ಶೇ.40ರ ಪಾಲುದಾರಿಕೆಯಲ್ಲಿ ವೈದ್ಯಕೀಯ ಕಾಲೇಜು ಆರಂಭವಾಗಬೇಕಿದೆ. ಕೇಂದ್ರ ಸರ್ಕಾರ ತನ್ನ ಪಾಲಿನ 195 ಕೋಟಿ ಅನುದಾನ ನೀಡಲು ಈಗಾಗಲೇ ಒಪ್ಪಿಗೆ ನೀಡಿದೆ. ಶೀಘ್ರದಲ್ಲಿ ಶಂಕು ಸ್ಥಾಪನೆಗೆ ಆಗಬೇಕಿದ್ದ ಈ ಸಮಯದಲ್ಲಿ ಸ್ಥಳ ಗೊಂದಲ ಶುರುವಾಗಿದೆ.

ಸ್ಥಳದ ಬಗ್ಗೆ ವಿವಾದ: 

2012 ರಲ್ಲೇ ಜಿಲ್ಲೆಗೆ ಮೆಡಿಕಲ್‌ ಕಾಲೇಜು ಘೋಷಣೆ ಮಾಡಿದ್ದರೂ ಇದುವರೆಗೆ ಸರ್ಕಾರ ಅನುಮೋದನೆ ನೀಡಿರಲಿಲ್ಲ. ಆದರೆ,ಕಾಲೇಜು ಆರಂಭಕ್ಕೆ ಸ್ಥಳ ನಿಗದಿ ಮಾಡಲಾಗಿತ್ತು. ಹಾವೇರಿ ತಾಲೂಕಿನ ದೇವಗಿರಿ ಯಲ್ಲಾಪುರ ಗ್ರಾಮದಲ್ಲಿ 50 ಎಕರೆ ಜಾಗವನ್ನು ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಮೀಸಲಿಡಲಾಗಿದೆ. ಆ ಜಾಗದ ಪಹಣಿಯಲ್ಲಿ ಕೂಡ ಕಾಲೇಜು ಹೆಸರು ಬಂದಿದೆ. ಈಗ ಆ ಜಾಗದ ಬದಲಾಗಿ ನೆಲೋಗಲ್‌ ಗುಡ್ಡದ ಮೇಲೆ ಮೆಡಿಕಲ್ ಕಾಲೇಜು ಸ್ಥಾಪಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ದೇವಗಿರಿಯಲ್ಲಾಪುರಕ್ಕಿಂತ ನೆಲೋಗಲ್ ಸೂಕ್ತ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ನೆಲೋಗಲ್ ಏಕೆ?:

ದೇವಗಿರಿ ಯಲ್ಲಾಪುರದ ಹತ್ತಿರ ನಿಗದಿಪಡಿಸಿರುವ ಸ್ಥಳವು ಅವೈಜ್ಙಾನಿಕವಾಗಿದ್ದು,ತಗ್ಗು ಪ್ರದೇಶದಲ್ಲಿರುವುದರಿಂದ ನೀರು ನಿಂತು ಗುಂಡಿಯಾಗುತ್ತದೆ. ಈ ಸ್ಥಳದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣವಾದರೆ ಮುಂದಿನ ದಿನಗಳಲ್ಲಿ ನಿರ್ವಹಣೆ, ಆಸ್ಪತ್ರೆಗೆ ಬಂದು ಹೋಗುವುದು ಕಷ್ಟವಾಗಲಿದೆ. ಸಾರ್ವಜನಿಕರು, ವಿದ್ಯಾರ್ಥಿಗಳು, ರೋಗಿಗಳಿಗೆ ಓಡಾಡಲು ಸಮಸ್ಯೆಯಾಗುತ್ತದೆ. ಜಿಲ್ಲಾ ಕೇಂದ್ರ ಹಾಗೂ ಜಿಲ್ಲಾ ಆಸ್ಪತ್ರೆಯಿಂದ ಸುಮಾರು 7-8 ಕಿಮೀ ದೂರವಾಗುತ್ತದೆ. ಅಲ್ಲದೇ ರಾಷ್ಟ್ರೀಯ ಹೆದ್ದಾರಿಯಿಂದ 4 ಕಿಮೀ ದೂರವಾಗುತ್ತದೆ. ತುರ್ತು ಚಿಕಿತ್ಸಾ ವಾಹನಗಳು ಓಡಾಡಲು ತೊಂದರೆಯಾಗುತ್ತದೆ ಎಂಬ ಕಾರಣ ನೀಡಿ ದೇವಗಿರಿಯಲ್ಲಾಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಬೇಡ ಎಂದು ವಾದಿಸುವವರ ಅಭಿಪ್ರಾಯವಾಗಿದೆ.

ಇನ್ನು ನೆಲೋಗಲ್‌ನಲ್ಲಿ ಕಾಲೇಜು ಆರಂಭಿಸಿದರೆ ಜಿಲಾಸ್ಪತ್ರೆಯಿಂದ 3 ಕಿಮೀ ಅಂತರದಲ್ಲಾಗುತ್ತದೆ. ನೆಲೋಗಲ್ ಗ್ರಾಮದಲ್ಲಿರುವ ಸರ್ಕಾರಿ ಜಾಗಸ. ನಂ 102 ರ 44  ಎಕರೆ 32  ಗುಂಟೆ ಸ್ಥಳವು ವೈಜ್ಞಾನಿಕವಾಗಿ ವೈದ್ಯಕೀಯ ಮಹಾವಿದ್ಯಾಲಯ ನಿರ್ಮಾಣಕ್ಕೆ ಸೂಕ್ತವಾಗಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ ಅರ್ಧ ಕಿಮೀ ದೂರದಲ್ಲಿದೆ. ಇದರಿಂದ ಸಾರ್ವಜನಿಕರಿಗೆ, ರೋಗಿಗಳಿಗೆ ಯಾವಾಗಬೇಕಾದರೂ ತುರ್ತಾಗಿ ಹೋಗಲು ಸಾಧ್ಯವಾಗುತ್ತದೆ. ತುಂಗಾ ಮೇಲ್ದಂಡೆ ಕಾಲುವೆ, ಹೆಗ್ಗೇರಿ ಕೆರೆ ಸಮೀಪದಲ್ಲಿರುವುದರಿಂದ ನೀರಿನ ಸಮಸ್ಯೆಯೂ ಇರುವುದಿಲ್ಲ. ಅದಕ್ಕಾಗಿ ನೆಲೋಗಲ್ ಗುಡ್ಡದಲ್ಲಿ ಮೆಡಿಕಲ್ ಕಾಲೇಜು ಆರಂಭಿಸಬೇಕು ಎಂಬುದು ಕೆಲವರ ವಾದವಾಗಿದೆ.

ಸಮ್ಮೇಳನದಂತಾಗಬಾರದು: 

ಈಗಾಗಲೇ ಗುರುತಿಸಿರುವ ಸ್ಥಳವನ್ನು ಬಿಟ್ಟು ಹೊಸದಾಗಿ ನೆಲೋಗಲ್‌ನಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲು ಹೊಸದಾಗಿ ಪ್ರಕ್ರಿಯೆ ಶುರುವಾಗಬೇಕಾಗುತ್ತದೆ. ತಜ್ಞರು ಬಂದು ಸ್ಥಳ ಪರಿಶೀಲಿಸಬೇಕಾಗುತ್ತದೆ. ಇದರಿಂದ ಕಟ್ಟಡ ಹಾಗೂ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿ ಆರಂಭಿಸಲು ವಿಳಂಬವಾಗುವ ಸಾಧ್ಯತೆಯಿದೆ. ಈಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಡೆಸಿದ ಸಭೆಯಲ್ಲಿ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಈ ವಿಷಯವನ್ನು ಗಮನಕ್ಕೆ ತಂದಿದ್ದಾರೆ. ತಜ್ಞರು ಸ್ಥಳ ಪರಿಶೀಲಿಸಿ ಅವರು ಸೂಚಿಸುವ ಜಾಗದಲ್ಲಿ ಕಾಲೇಜಿಗೆ ಶಂಕುಸ್ಥಾಪನೆ ನೆರವೇರಿಸುವುದಾಗಿ ಮುಖ್ಯಮಂತ್ರಿಗಳೇ ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಹಿಂದೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಗೆ ಆತಿಥ್ಯ ನೀಡಲು ಅವಕಾಶ ಸಿಕ್ಕಾಗ ಹಾವೇರಿ ಮತ್ತು ರಾಣಿಬೆನ್ನೂರು ನಡುವೆ ಕಿತ್ತಾಟ ನಡೆದು ಸಮ್ಮೇಳನ ಪರರ ಪಾಲಾದ ಉದಾಹರಣೆ ಜನರ ಮನಸ್ಸಿಂದ ಅಳಿದಿಲ್ಲ. ಈಗ ಮೆಡಿಕಲ್ ಕಾಲೇಜು ಕೂಡ ಸ್ಥಳ ಗೊಂದಲದಿಂದ ಈ ರೀತಿಯಾಗಬಾರದು ಎಂಬುದು ಎಲ್ಲರ ಅಭಿಪ್ರಾಯವಾಗಿದೆ.

ಈ ಬಗ್ಗೆ ಮಾತನಾಡಿದ ಹಾವೇರಿ ಶಾಸಕ ನೆಹರು ಓಲೇಕಾರ ಅವರು, ಮೆಡಿಕಲ್ ಕಾಲೇಜಿಗೆ ಈಗಾಗಲೇ ಗುರುತಿಸಿರುವದೇವಗಿರಿ ಯಲ್ಲಾಪುರ ಗ್ರಾಮದಬಳಿಯ ಜಾಗ ತಗ್ಗು ಪ್ರದೇಶದಲ್ಲಿದೆ.ಈಚೆಗೆ ಸುರಿದ ಮಳೆಯಲ್ಲಿ ಅಲ್ಲಿನೀರು ನಿಂತು ಗುಂಡಿಯಾಗಿತ್ತು.ಇವೆಲ್ಲ ಗೊತ್ತಿದ್ದೂ ಅಲ್ಲೇ ಮೆಡಿಕಲ್‌ ಕಾಲೇಜು ಆರಂಭಿಸಿದರೆ ಮುಂದೆ ತೊಂದರೆ ಅನುಭವಿಸಬೇಕಾಗುತ್ತದೆ. ಈ ಕಾರಣಕ್ಕಾಗಿ ನೆಲೋಗಲ್‌ನಲ್ಲಿ ಕಾಲೇಜು ಆರಂಭಿಸುವುದು ಸೂಕ್ತ ಎಂದು ಹೇಳಿದ್ದಾರೆ. 
 

click me!