ಅನರ್ಹ ಶಾಸಕ ಬಿಸಿ ಪಾಟೀಲ್ ಮತ್ತೆ ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಗುಡುಗಿದ್ದಾರೆ. ಮೈತ್ರಿ ಸರ್ಕಾರವನ್ನು ರಾಕ್ಷಸರಿಗೆ ಹೋಲಿಸಿದ ಪಾಟೀಲ್, ಜನರಿಗಾಗಿ ವಿಷ ಕಂಠನಾದೆ ಎಂದಿದ್ದಾರೆ.
ಹೀರೇಕೆರೂರು(ನ.07): ಅನರ್ಹ ಶಾಸಕ ಬಿಸಿ ಪಾಟೀಲ್ ಮತ್ತೆ ಕಾಂಗ್ರೆಸ್ ಜೆಡಿಎಸ್ ವಿರುದ್ಧ ಹರಿಹಾಯ್ದಿದ್ದಾರೆ. ಹೀರೇಕೆರೂರಿನಲ್ಲಿ ಆಯೋಜಿಸಿದ್ದ ಸಿಎಂ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಬಿಸಿ ಪಾಟೀಲ್, ನಾವು ವಿಷ ಕಂಠರಾಗಿ ರಾಜ್ಯವನ್ನು ಕಾಪಾಡಿದ್ದೇವೆ. ರಾಜ್ಯದ ಹಿತಕ್ಕಾಗಿ ವಿಷ ಕುಡಿಯಬೇಕಾಯಿತು ಎಂದು ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ: ನಮ್ಮನ್ನು ಖರೀದಿಸಲು ನಾವು ದನ, ಕುರಿ, ಕೋಳಿ ಅಲ್ಲ: ಬಿ. ಸಿ. ಪಾಟೀಲ್
2018ರಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರಲಿಲ್ಲ. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಜೊತೆಯಾಗಿ ಸರ್ಕಾರ ಮಾಡಿದರು. ರಾಕ್ಷಸರಂತಿದ್ದ ಮೈತ್ರಿ ಸರ್ಕಾರ ಸಮುದ್ರ ಮಂಥನ ಮಾಡಿ ಅಮೃತವನ್ನು ಕೆಲವೇ ಕೆಲವು ಜಿಲ್ಲೆಗೆ ಕೊಂಡೊಯ್ಯಲು ನಿರ್ಧರಿಸಿದ್ದರು. ಆದರೆ ಮಂಥನದಲ್ಲಿ ವಿಷ ಹೊರಬಂದಾಗ ಶಿವ ಹೇಗೆ ಕುಡಿದು ಜಗತನ್ನು ಕಾಪಾಡಿದನೋ, ಹಾಗೇ ನಾವೆಲ್ಲಾ ವಿಷ ಕುಡಿದು ರಾಜ್ಯವನ್ನು ಕಾಪಾಡಿದೆವು ಎಂದು ಬಿಸಿ ಪಾಟೀಲ್ ಹೇಳಿದರು.
ಇದನ್ನೂ ಓದಿ: ಆತ್ಮಗೌರವಕ್ಕೆ ಧಕ್ಕೆ ಬಂದಿದ್ದರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ
ಕಾಂಗ್ರೆಸ್ ಜೆಡಿಎಸ್ ಸರ್ಕಾರವನ್ನು ಹೀಗೆ ಬಿಟ್ಟರೆ ರಾಜ್ಯವನ್ನೇ ವಿಷವನ್ನಾಗಿ ಮಾಡುತ್ತಾರೆ ಎಂಬುದು ನಮ್ಮ ಗಮನಕ್ಕೆ ಬಂದಿತ್ತು. ಹೀಗಾಗಿ ನಾವು 17 ಜನ ಎಚ್ಚೆತ್ತು ಯಡಿಯೂರಪ್ಪರನ್ನು ಸಿಎಂ ಮಾಡಿದೆವು ಎಂದಿದ್ದಾರೆ. ಎಲ್ಲರೂ ಕೋಟಿ ಕೊಟ್ಟಿದ್ದಾರೆ, ಕೋಟಿ ಕೋಟಿ ತೆಗೆದುಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಇದು ಸಾಧ್ಯಾನಾ? ಯಡಿಯೂರಪ್ಪ ಜಿಲ್ಲೆ ಅಭಿವೃದ್ಧಿಗೆ ಕೋಟಿ ಕೊಟ್ಟಿದ್ದಾರೆ ಎಂದರು.
85 ಕೋಟಿಯ ಯೋಜನೆಯನ್ನು ಕುಮಾರಸ್ವಾಮಿ ಬಳಿ ತೆಗೆದುಕೊಂಡು ಹೋದಾಗ ಬಿಸಾಕಿದರು. ಆದರೆ ಯಡಿಯೂರಪ್ಪ ಸರ್ವಾಂಗೀಣ ಅಭಿವೃದ್ದಿಗೆ ಒತ್ತು ನೀಡಿ ಹಣ ಮಂಜೂರು ಮಾಡಿದರು. ನನಗೆ ಶಾಸಕ ಸ್ಥಾನ ಹೋಗಿರುವುದು ಬೇಜಾರಿಲ್ಲ. ನನ್ನ ಜನರಿಗಾಗಿ ತ್ಯಾಗ ಮಾಡಿದ್ದೇನೆ ಎಂದು ಬಿಸಿ ಪಾಟೀಲ್ ಹೇಳಿದರು.