ಭಾರೀ ಮಳೆಯಿಂದಾಗಿ ಬೆಳೆದ ಬೆಳೆ ಕೈಗೆ ಸಿಗದೇ ಕಂಗಲಾಗಿದ್ದ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹಾವೇರಿ, [ಅ.22]: ಭಾರೀ ಮಳೆಯಿಂದ ಜಮೀನಿಗೆ ನೀರು ನುಗ್ಗಿ ಬೆಳೆ ನಾಶವಾದ ಹಿನ್ನೆಲೆಯಲ್ಲಿ ರೈತನೊರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು [ಮಂಗಳವಾರ] ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ರೈತನನ್ನು ಪ್ರಭು ಸಿದ್ದಪ್ಪ ಮಾಕನೂರು ಎಂದು ಗುರುತಿಸಲಾಗಿದೆ. ಈರುಳ್ಳಿ ಬೆಳೆಗಾಗಿ 8 ಲಕ್ಷ ರೂಪಾಯಿ ಸಾಲ ಮಾಡಿದ್ದ ಎನ್ನಲಾಗಿದೆ.
ಹಿರೇಕೆರೂರಿನಲ್ಲಿ ಭಾರೀ ಮಳೆ: ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಬಾಲಕ
ಜಮೀನಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದ. ಇನ್ನೇನು ಈರುಳ್ಳಿ ಬೆಳೆ ಕೈಗೆ ಸಿಗುತ್ತೆ ಎಂದುಕೊಂಡಿದ್ದ. ಆದ್ರೆ ಎರಡು ದಿನಗಳ ಹಿಂದೆ ಸುರಿದ ಮಳೆಗೆ ಬೆನಕನಕೊಂಡ ಕೆರೆ ಕೋಡಿ ಒಡೆದು ನೀರು ಪ್ರಭು ಸಿದ್ದಪ್ಪನ ಜಮೀನಿಗೆ ನುಗ್ಗಿದ್ದು, ಈರುಳ್ಳಿ ಬೆಳೆ ಸಂಪೂರ್ಣವಾಗಿ ನಾಶವಾಗಿ ಅಪಾರ ನಷ್ಟವಾಗಿದೆ.
ಇದರಿಂದ ಮನನೊಂದು ಮನೆಯಲ್ಲಿಯೇ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ರೈತನ ಶವವನ್ನು ರಾಣೆಬೆನ್ನೂರ ನಗರದ ಮುಖ್ಯ ರಸ್ತೆಯಲ್ಲಿ ಎದುರಿಟ್ಟು ಮೃತ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ರೈತರು ಪ್ರತಿಭಟಿಸಿದ್ದಾರೆ. ಇನ್ನೂ ಈ ಬಗ್ಗೆ ಹಲಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.