ರಾಣಿಬೆನ್ನೂರಿನಲ್ಲಿ ಕೋಳಿವಾಡ ಪರ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ವಾಗ್ದಾಳಿ|ಕೋಳಿವಾಡ ಗೆಲುವು ನಿಶ್ಚಿತ ಎಂದು ಸಿದ್ದರಾಮಯ್ಯ| ಆರ್. ಶಂಕರ್ ಅವರನ್ನು ಎರಡು ಸಾರಿ ಮಂತ್ರಿ ಮಾಡಿದ್ದೆ ಆದರೆ, ಆತ ನನ್ನ ಬೆನ್ನಿಗೆ ಚೂರಿ ಹಾಕಿ ಹೋದ| ಶಂಕರ್ ರಾಜಕಾರಣದಲ್ಲಿ ಇರಲೇಬಾರದು| ಯಾರೇ ಆಗಲಿ ಜನರಿಗೆ, ನಾಯಕರಿಗೆ ದ್ರೋಹ ಮಾಡಿದವರಿಗೆ ಬೆಂಬಲ ಕೊಡಬಾರದು|
ರಾಣಿಬೆನ್ನೂರು(ನ.27): ಆಪರೇಷನ್ ಕಮಲದ ಪಿತಾಮಹ ಯಡಿಯೂರಪ್ಪ. ರಾಜ್ಯದಲ್ಲಿ ಬಿಎಸ್‌ವೈಗೆ ಬಂದ ಪರಿಸ್ಥಿತಿ ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್‌ಗೆ ಬಂದಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಕೋಳಿವಾಡ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ಯಡಿಯೂರಪ್ಪ 2008 ರಲ್ಲಿ ಆಪರೇಷನ್ ಕಮಲ ಆರಂಭ ಮಾಡಿದರು. ಆಗ 9 ಜನ, ಈಗ 17 ಜನ ಶಾಸಕರ ಆಪರೇಷನ್ ಮಾಡಿದರು. ಹಿಂಬಾಗಿಲಿನಿಂದ ಬಂದು ಅಧಿಕಾರ ಹಿಡಿದಿದ್ದರು. ಸುಪ್ರೀಂಕೋರ್ಟ್ ಫಡ್ನವಿಸ್‌ಗೆ ಬಹುಮತ ಸಾಬೀತಿಗೆ 24 ಗಂಟೆ ಕಾಲಾವಕಾಶ ನೀಡಿದೆ. ರಾಜ್ಯದಲ್ಲೂ ಬಿಎಸ್‌ವೈಗೆ ಇಷ್ಟೇ ಕಾಲಾವಕಾಶ ನೀಡಲಾಗಿತ್ತು. ಯಡಿಯೂರಪ್ಪಗೆ ಬಹುಮತ ಸಾಬೀತು ಪಡಿಸಲು ಆಗಲಿಲ್ಲ, ರಾಜೀನಾಮೆ ನೀಡಿದರು. ಮಹಾರಾಷ್ಟ್ರದಲ್ಲೂ ಹಾಗೇ ಆಗಿದೆ ಎಂದರು.
ಅನರ್ಹರು ನಾಲಾಯಕ್:
ಬೇರೆ ಪಕ್ಷದಿಂದ ಗೆದ್ದ ಚುನಾಯಿತ ಪ್ರತಿನಿಧಿಗಳನ್ನು ಹಣಕೊಟ್ಟು ಅಧಿಕಾರದ ಆಮಿಷವೊಡ್ಡಿ ಪಕ್ಷಾಂತರ ಮಾಡಿಸಿಕೊಳ್ಳುವುದು ಸಂವಿಧಾನ ಬಾಹೀರವಾದ ಕ್ರಮವಾಗಿದೆ. ಆಯ್ಕೆಯಾದ ಪಕ್ಷಕ್ಕೆ, ಮತದಾರರಿಗೆ ದ್ರೋಹ ಮಾಡಿದವರನ್ನು ಮತ್ತೆ ವಿಧಾನಸಭೆಗೆ ಕಳುಹಿಸಬಾರದು. ರಾಜ್ಯದಲ್ಲಿ ಉಪ ಚುನಾವಣೆಯನ್ನು ಯಾರೂ ಬಯಸಿರಲಿಲ್ಲ. ಅನಾವಶ್ಯವಾಗಿ ಚುನಾವಣೆ ಬಂದಿದೆ. 17ಶಾಸಕರು ರಾಜೀನಾಮೆ ಕೊಟ್ಟಿರುವುದರಿಂದ ಈಗ 15 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಈ ಶಾಸಕರು ರಾಜೀನಾಮೆ ಕೊಡಲು ಬಿಜೆಪಿಯವರು, ಸಿಎಂ ಯಡಿಯೂರಪ್ಪ, ಅಮಿತ್ ಶಾ, ಪ್ರಧಾನಿ ಮೋದಿ ಕಾರಣ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಪಕ್ಷಾಂತರ ನಿಷೇಧ ಕಾಯ್ದೆಯಡಿ 17 ಜನ ಶಾಸಕರನ್ನು ಅನರ್ಹ ಮಾಡಲಾಗಿದೆ. ಈ 17 ಜನ ಅನರ್ಹರು ಶಾಸಕರಾಗಲು ನಾಲಾಯಕ್. ಸುಪ್ರೀಂಕೋರ್ಟ್ ಸಹ ಸ್ಪೀಕರ್ ಆದೇಶ ಎತ್ತಿ ಹಿಡಿದಿದೆ. ಹೀಗಾಗಿ ಅವರ ಶಾಸಕ ಸ್ಥಾನವೂ ಹೋಗಿದೆ ಎಂದರು.
ಮತ್ತೆ 10 ಕೆಜಿ ಅಕ್ಕಿ:
ನಮ್ಮ ಸರ್ಕಾರ ಇದ್ದಾಗ ಕೊಟ್ಟಎಲ್ಲ ಭರವಸೆಗಳನ್ನು ಈಡೇರಿಸಿದೆ. ಅಧಿಕಾರ ಸ್ವೀಕರಿಸಿ ಒಂದೇ ಗಂಟೆಯಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ ಜಾರಿಗೊಳಿಸಿದ್ದೆವು. ಅನ್ನಭಾಗ್ಯ ಯೋಜನೆ ಮೂಲಕ 4 ಕೋಟಿ ಜನರು ತಲಾ 7 ಕೆಜಿ ಅಕ್ಕಿ ಪಡೆಯುತ್ತಿದ್ದರು. ಈಗ ಯಡಿಯೂರಪ್ಪ 7 ಕೆಜಿ ಅಕ್ಕಿಯನ್ನು 4ಕೆಜಿಗೆ ಇಳಿಸಿದ್ದಾರೆ. ಬಡವರ ಹೊಟ್ಟೆಮೇಲೆ ಹೊಡೆಯುವ ಕೆಲಸ ಮಾಡಿದರೆ ನಾವು ಸಹಿಸುವುದಿಲ್ಲ, ನಿಮಗೆ ಅಕ್ಕಿ ಕೊಡಲು ಆಗದಿದ್ದರೆ ಮನೆಗೆ ಹೋಗಿ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ಆಗ ನಾವು 10 ಕೆಜಿ ಅಕ್ಕಿ ಉಚಿತವಾಗಿ ಕೊಡುತ್ತೇವೆ ಎಂದರು.
ಎರಡು ನಾಲಿಗೆ:
ಅಧಿಕಾರ ಇದ್ದಾಗ ಒಂದು ಮಾತು, ಇಲ್ಲದಾಗ ಇನ್ನೊಂದು ಮಾತನಾಡುವ ಯಡಿಯೂರಪ್ಪಗೆ ಎರಡು ನಾಲಿಗೆ ಇವೆ. ಬಿಜೆಪಿಯವರು ಟಿಪ್ಪು ಜಯಂತಿ ಮಾಡಿದ್ರೆ ದೇಶ ಭಕ್ತ, ನಾವು ಮಾಡಿದ್ರೆ ಟಿಪ್ಪು ಮತಾಂಧ ಎನ್ನುತ್ತೀರಿ ನಿಮಗೆ ನಾಚಿಕೆ ಆಗಲ್ವ. 10ವರ್ಷ ಮುಸ್ಲಿಂರು ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸಿದರೆ ಮಾತ್ರ ಬಿಜೆಪಿ ಟಿಕೆಟ್ ಕೊಡುತ್ತೇವೆ ಎಂದು ಹಿರಿಯ ನಾಯಕ ಈಶ್ವರಪ್ಪ ಹೇಳುತ್ತಾರೆ. ಅವರೊಬ್ಬ ದೊಡ್ಡ ಪೆದ್ದ ಎಂದು ಟೀಕಿಸಿದರು.
ಮೋದಿ 5 ವರ್ಷದಲ್ಲಿ ಯಾವುದೇ ಸಾಧನೆ ಮಾಡದೇ ಭಾವನಾತ್ಮಕ ವಿಚಾರ ಪ್ರಸ್ತಾಪ ಮಾಡುತ್ತಿದ್ದಾರೆ. ಅವುಗಳಿಂದ ಹೊಟ್ಟೆತುಂಬಲ್ಲ, ನಮ್ಮ ರಾಜ್ಯದಲ್ಲಿ 105 ವರ್ಷಗಳ ಬಳಿಕ ದೊಡ್ಡ ಪ್ರವಾಹ ಬಂದಿದೆ. ಇದರಿಂದ . 1 ಲಕ್ಷ ಕೋಟಿ ಹಾನಿಯಾಗಿದೆ. ಆದರೆ, ಪ್ರಧಾನಿ ಮೋದಿ ಕರ್ನಾಟಕಕ್ಕೆ ಬಂದು ಕಷ್ಟಕೇಳಿದರಾ? ಇಂಥವರಿಗೆ ವೋಟ್ ಹಾಕಬೇಕೆನ್ರಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಜಾತಿಗಿಂತ ಪಕ್ಷ ಮುಖ್ಯ:
2018ರ ಚುನಾವಣೆಯಲ್ಲಿ ಕೆ.ಬಿ. ಕೋಳಿವಾಡ ಸೋತಿದ್ದರು. ನಾನು ಪ್ರಚಾರಕ್ಕೆ ಬರಲಿಲ್ಲ, ಹಾಗಾಗಿ ಸೋತೆ ಎಂಬುದು ಕೋಳಿವಾಡರ ಮನಸ್ಸಿನಲ್ಲಿತ್ತು. ಆರ್. ಶಂಕರ್ ಕುರುಬ ಸಮುದಾಯಕ್ಕೆ ಸೇರಿದವರು ಅದಕ್ಕೆ ಸಿದ್ದರಾಮಯ್ಯ ಕೋಳಿವಾಡ ಪರ ಮತಯಾಚನೆ ಮಾಡಲಿಲ್ಲ ಅಂತ ಯಾರೋ ಕೋಳಿವಾಡ ಮನಸ್ಸಿನಲ್ಲಿ ತುಂಬಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಬೆಂಬಲ ಕೊಟ್ಟಿಲ್ಲ. ನನಗೆ ಜಾತಿಗಿಂತ ಪಕ್ಷ ಮುಖ್ಯ ಎಂದರು.
ಬೆನ್ನಿಗೆ ಚೂರಿ ಹಾಕಿದ ಶಂಕರ್
ಆರ್. ಶಂಕರ್ ಅವರನ್ನು ಎರಡು ಸಾರಿ ಮಂತ್ರಿ ಮಾಡಿದ್ದೆ. ಆದರೆ, ಆತ ನನ್ನ ಬೆನ್ನಿಗೆ ಚೂರಿ ಹಾಕಿ ಹೋದ. ಶಂಕರ್ ರಾಜಕಾರಣದಲ್ಲಿ ಇರಲೇಬಾರದು. ಯಾರೇ ಆಗಲಿ ಜನರಿಗೆ, ನಾಯಕರಿಗೆ ದ್ರೋಹ ಮಾಡಿದವರಿಗೆ ಬೆಂಬಲ ಕೊಡಬಾರದು. ಇಂತವರಿಂದ ಪ್ರಜಾಪ್ರಭುತ್ವ ಹಾಳಾಗುತ್ತದೆ. ಶಂಕರ್ ಸೋಲುತ್ತಾರೆ ಅಂತ ಗೊತ್ತಾಗಿ ಬಿಜೆಪಿಯವರು ಟಿಕೆಟ್ ಕೊಟ್ಟಿಲ್ಲ, ಏನೂ ಕೆಲಸ ಮಾಡದೇ ಜನರಿಂದ ದೂರವಾಗಿದ್ದಾರೆ. ಈಗ ಕ್ರಿಮಿನಲ್ ಹಿನ್ನೆಲೆ ಇರೋ ವ್ಯಕ್ತಿಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದಾರೆ. ಹೀಗಾಗಿ ಕೋಳಿವಾಡ ಗೆಲುವು ನಿಶ್ಚಿತ ಎಂದು ಸಿದ್ದರಾಮಯ್ಯ ಹೇಳಿದರು.
ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.