ಸಾಲಬಾಧೆ ತಾಳಲಾರದೆ ರೈತರಿಬ್ಬರು ಆತ್ಮಹತ್ಯೆಗೆ ಶರಣು| ವಿವಿಧ ಬ್ಯಾಂಕ್ ಗಳಲ್ಲಿ ಸಾಲ ಮಾಡಿಕೊಂಡಿದ್ದ ರೈತರು| ಈಚೆಗೆ ಸುರಿದ ಭಾರಿ ಮಳೆಗೆ ಸಂಪೂರ್ಣ ಹಾಳಾದ ಬೆಳೆ| ಬಿತ್ತನೆಗೆ ಮಾಡಿದ್ದ ಸಾಲವನ್ನು ತೀರಿಸಲಾಗದೇ ಮನನೊಂದು ಆತ್ಮಹತ್ಯೆ ಮಾಡಿಕೊಂಡ ರೈತರು|
ಬ್ಯಾಡಗಿ/ಸವಣೂರು: ಸಾಲಬಾಧೆ ತಾಳಲಾರದೆ ರೈತರಿಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ರೈತರನ್ನು ಬ್ಯಾಡಗಿ ತಾಲೂಕಿನ ಮಾಸಣಗಿ ಗ್ರಾಮದ ಈರಪ್ಪ ಶಾಂತಪ್ಪ ದೇಸಾಯಿ(50) ಹಾಗೂ ಸವಣೂರು ತಾಲೂಕಿನ ಶಿರಬಡಗಿ ಗ್ರಾಮದ ಶೇಖಪ್ಪ ಬಸವಣ್ಣೆಪ್ಪ ಹಡಪದ(55) ಎಂದು ಗುರುತಿಸಲಾಗಿದೆ.
ಎಂದಿನಂತೆ ಹೊಲಕ್ಕೆ ತೆರಳಿದ್ದ ಈರಪ್ಪ ಮೊದಲು ವಿಷ ಸೇವಿಸಿದ್ದಾರೆ. ಇದರಿಂದ ಪ್ರಯೋಜನ ಕಾಣದೇ ಇದ್ದಾಗ ಹೊಲದಲ್ಲಿದ್ದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಈರಪ್ಪ ತನಗಿದ್ದ ಕೇವಲ ಒಂದು ಎಕರೆ ಜಮೀನಿನಲ್ಲಿ ಹಾಗಲಕಾಯಿ ಬಿತ್ತನೆ ಮಾಡಿದ್ದು ಇನ್ನೇನು ಬೆಳೆ ಬಂದು ಕೈ ಸೇರುವಷ್ಟರಲ್ಲಿ ಈಚೆಗೆ ಸುರಿದ ಭಾರಿ ಮಳೆಗೆ ಬೆಳೆ ಸಂಪೂರ್ಣ ಹಾಳಾಗಿದೆ. ಬಿತ್ತನೆಗೆ ಮಾಡಿದ್ದ ಸಾಲವನ್ನು ತೀರಿಸಲಾಗದೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹೆಡಿಗ್ಗೊಂಡ ಗ್ರಾಮದ ಸಿಂಡಿಕೇಟ್ ಬ್ಯಾಂಕಿನಲ್ಲಿ 1.50 ಲಕ್ಷ, ಗ್ರಾಮದ ವಿಎಸ್‌ಎಸ್ ಬ್ಯಾಂಕಿನಲ್ಲಿ 15 ಸಾವಿರ ಹಾಗೂ ಕೈಗಡ ರೂಪದಲ್ಲಿ 1 ಲಕ್ಷ ಸೇರಿದಂತೆ ಒಟ್ಟು 2.65 ಲಕ್ಷ ಸಾಲವಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ನಡೆದಿದೆ.
ಇನ್ನು ಶೇಖಪ್ಪ ಬಸವಣ್ಣೆಪ್ಪ ಹಡಪದ ಅವರು ಖಾಸಗಿ ಫೈನಾನ್ಸ್‌ನಲ್ಲಿ 3.50 ಲಕ್ಷ, ಯಲವಗಿ ಕೆವಿಜಿ ಬ್ಯಾಂಕ್‌ನಲ್ಲಿ 50 ಸಾವಿರ ಸೇರಿದಂತೆ ಖಾಸಗಿ ಸಂಸ್ಥೆಗಳಲ್ಲಿ 4.45 ಲಕ್ಷ ಸಾಲ ಮಾಡಿದ ಬಗ್ಗೆ ಮಾಹಿತಿ ದೊರಕಿದೆ. ಮೃತ ರೈತನಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಈ ಕುರಿತು ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.