ನೆರೆಗೆ ಮತ್ತೆ 1500 ಕುಟುಂಬಗಳು ಬೀದಿಪಾಲು| ಎರಡು ತಿಂಗಳ ಹಿಂದಷ್ಟೇ 10 ಸಾವಿರಕ್ಕೂ ಹೆಚ್ಚು ಮನೆ ಬಿದ್ದು ಹಾನಿ| ನಾಲ್ಕು ದಿನಗಳಿಂದ ಬೀಳುತ್ತಿರುವ ಮಳೆಗೆ ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ ಹಾನಿ| ಬೆಳೆದುನಿಂತಿದ್ದ ಮೆಕ್ಕೆಜೋಳ, ಶೇಂಗಾ, ಈರುಳ್ಳಿ ಇನ್ನಿತರ ಬೆಳೆ ನೀರು ಪಾಲು|
ಹಾವೇರಿ[ಅ.23]: ನೆರೆ ಹಾವಳಿಯಿಂದ ಮನೆ, ಮಠ ಕಳೆದುಕೊಂಡ ಘಟನೆ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಕಳೆದ 4 ದಿನಗಳಿಂದ ಬೀಳುತ್ತಿರುವ ಮಳೆಗೆ ಮತ್ತೆ ಒಂದೂವರೆ ಸಾವಿರ ಕುಟುಂಬಗಳ ಜನರು ಸಂತ್ರಸ್ತರಾಗಿದ್ದಾರೆ. ಬೆಳೆದು ನಿಂತಿರುವ ಪೈರು ನೀರು ಪಾಲಾಗಿದ್ದು, ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ ಹಾನಿಗೀಡಾಗಿವೆ.
ಜಿಲ್ಲೆಯಲ್ಲಿ ಶುಕ್ರವಾರದಿಂದ ನಿತ್ಯವೂ ರಾತ್ರಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. 4 ದಿನಗಳಲ್ಲಿ ಇದರಿಂದ ಅವಾಂತರ ಸೃಷ್ಟಿಯಾಗಿದ್ದು, ಈಗಾಗಲೇ ಮೂವರು ನೀರು ಪಾಲಾಗಿದ್ದಾರೆ. ರಾಣಿಬೆನ್ನೂರಿನಲ್ಲಿ ಸೋಮವಾರದಿಂದ ಆರಂಭಿಸಿರುವ ಪರಿಹಾರ ಕೇಂದ್ರದಲ್ಲಿ 54 ಕುಟುಂಬಗಳ 195 ಜನರು ಆಶ್ರಯ ಪಡೆದಿದ್ದಾರೆ. ಹಿರೇಕೆರೂರು ಪಟ್ಟಣದಲ್ಲಿ ಕಾಲುವೆಯಲ್ಲಿ ಕೊಚ್ಚಿ ಹೋಗಿರುವ ಬಾಲಕ ಇನ್ನೂ ಪತ್ತೆಯಾಗಿಲ್ಲ. ಮಳೆ ಆರ್ಭಟಕ್ಕೆ ಕೆರೆಕಟ್ಟೆಗಳು ತುಂಬಿ ಕೋಡಿ ಬಿದ್ದು ಹರಿಯುತ್ತಿವೆ. ಇದರಿಂದ ಸಾವಿರಾರು ಎಕರೆ ಪ್ರದೇಶಗಳಲ್ಲಿ ಬೆಳೆದು ನಿಂತಿದ್ದ ಪೈರು ಜಲಾವೃತಗೊಂಡಿವೆ.
1513 ಮನೆ ಹಾನಿ:
ಅ. 18 ರಿಂದ ಸೋಮವಾರದವರೆಗಿನ 4 ದಿನಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 1513 ಮನೆ ಹಾನಿಗೀಡಾಗಿವೆ. ಹಾವೇರಿ ತಾಲೂಕಿನಲ್ಲಿ 355, ರಾಣಿಬೆನ್ನೂರು 61, ಬ್ಯಾಡಗಿ 55, ಹಿರೇಕೆರೂರು 232, ಸವಣೂರು 439, ಹಾನಗಲ್ಲ 207 ಹಾಗೂ ಶಿಗ್ಗಾಂವಿ ತಾಲೂಕಿನಲ್ಲಿ 148 ಮನೆಗಳು ಬಿದ್ದಿವೆ. ಇದರಿಂದ ಸಾವಿರಾರು ಜನರು ಮತ್ತೆ ಸಂತ್ರಸ್ತರಾಗಿದ್ದಾರೆ. ಶಿಗ್ಗಾಂವಿ ತಾಲೂಕಿನಲ್ಲಿ 14 ಗುಡಿಸಲುಗಳು ಬಿದ್ದಿದ್ದು, 24 ದನದ ಕೊಟ್ಟಿಗೆ ಧರೆಗುರುಳಿವೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹಿರೇಕೆರೂರು ತಾಲೂಕಿನಲ್ಲಿ 17 ದೊಡ್ಡ ಕೆರೆಗಳು ಭರ್ತಿಯಾಗಿ ಹೊಲಗದ್ದೆಗಳಲ್ಲಿ ನೀರು ಹರಿಯುತ್ತಿದೆ. ಸವಣೂರು ತಾಲೂಕಿನಲ್ಲಿ ಮನ್ನಂಗಿ- ಕುಣಿಮೆಳ್ಳಹಳ್ಳಿ ರಸ್ತೆ, ಕಡಕೋಳ- ಕೃಷ್ಣಾಪುರ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹಾನಗಲ್ಲ ತಾಲೂಕಿನ ಹರನಗಿರಿ ಬೀಗಾಪುರ, ಬೆಳಗಾಲಪೇಟೆ ರಸ್ತೆ ಸಂಪೂರ್ಣ ಹಾಳಾಗಿವೆ.
ಅಪಾರ ಬೆಳೆ ಹಾನಿ:
ಆಗಸ್ಟ್‌ನಲ್ಲಿ ಬಂದ ನೆರೆ ಹಾವಳಿಯಿಂದ ಜಿಲ್ಲೆಯಲ್ಲಿ 1.32 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾಳಾಗಿತ್ತು. ಈ ಹೊಡೆತದಿಂದ ಹೊರಬೀಳಲಾಗದೇ ರೈತರು ಒದ್ದಾಡುತ್ತಿದ್ದಾರೆ. ರಾಣಿಬೆನ್ನೂರು ತಾಲೂಕಿನ ನೆಗೆನಹಳ್ಳಿಯ ರೈತರೊಬ್ಬರು ಬೆಳೆ ನಾಶ ಹಾಗೂ ಸಾಲಬಾಧೆಯಿಂದ ಬೇಸತ್ತು ಸೋಮವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದದ್ದು ಆಗಿ ಹೋಯಿತು ಎಂದುಕೊಂಡ ರೈತರು ಮತ್ತೆ ಸಾಲಸೂಲ ಮಾಡಿ ಬಿತ್ತನೆ ಮಾಡಿದ್ದರು. ಈಗ ಎರಡನೇ ಬಾರಿಗೂ ಅತಿವೃಷ್ಟಿಯಿಂದ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಹಾವೇರಿ ಹೆಗ್ಗೇರಿ ಕೆರೆ, ಗುತ್ತಲ ಕೆರೆ, ರಾಣಿಬೆನ್ನೂರಿನ ಅಸುಂಡಿ ಕೆರೆ, ದೊಡ್ಡ ಕೆರೆ, ಹಿರೇಕೆರೂರಿನ ದುರ್ಗಾದೇವಿ ಕೆರೆ ಸೇರಿದಂತೆ 17 ಕೆರೆಗಳು ತುಂಬಿ ಪ್ರವಾಹ ಸೃಷ್ಟಿಸಿವೆ. ಶಿಗ್ಗಾಂವಿ ತಾಲೂಕಿನಲ್ಲಿ ಹುಟ್ಟಿರುವ ಬೆಳೆ ಹಳ್ಳವೂ ಅಪಾರ ಪ್ರಮಾಣದಲ್ಲಿ ಬೆಳೆ ನಾಶ ಮಾಡಿದೆ. ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ಹಾನಿ ಸಮೀಕ್ಷೆ ಆರಂಭಿಸಿದ್ದು, ಸುಮಾರು 10 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿನ ಬೆಳೆ ನಾಶವಾಗಿರುವ ಅಂದಾಜಿದೆ.