ಹಾಸಾನಾಂಬೆ ದರ್ಶನಕ್ಕೆ ತೆರೆ | ಮುಂದಿನ ವರ್ಷ ತೆರೆಯಲಿರುವ ದೇವಾಲಯದ ಬಾಗಿಲು | ಕೊನೆ ಕ್ಷಣದವರೆಗೂ ದೇವಾಲಯದ ಬಳಿ ಇದ್ದ ಭಕ್ತರಿಗೆ ದರ್ಶನಕ್ಕೆ ಅವಕಾಶ
ಹಾಸನ (ಅ.29) ಹಾಸನದ ಅಧಿದೇವತೆ ಹಾಸನಾಂಬೆ ತಾಯಿಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ಇಂದು ಮಧ್ಯಾಹ್ನ 1.20 ಕ್ಕೆ ದೇವಾಲಯದ ಬಾಗಿಲು ಮುಚ್ಚಲಾಗಿದ್ದು ದರ್ಶನಕ್ಕೆ ತೆರೆ ಬಿದ್ದಿದೆ.
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಎಂ.ಎ ಗೋಪಾಲಸ್ವಾಮಿ, ಶಾಸಕ ಪ್ರೀತಂ ಜೆ.ಗೌಡ, ತಿಪಟೂರಿನ ಶಾಸಕರಾದ ಪಿ.ನಾಗೇಶ್, ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ನಿವಾಸ್ ಸೆಪಟ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಬಿ.ಎ. ಪರಮೇಶ್ ಹಾಸನಾಂಬ ದೇವಾಲಯದ ವಿಶೇಷ ಆಡಳಿತಾಧಿಕಾರಿ ಡಾ.ಎಚ್.ಎಲ್ ನಾಗರಾಜ್, ಹೆಚ್ಚುವರಿ ಪೊಲಿಸ್ ಅಧೀಕ್ಷಕರಾದ ನಂದಿನಿ, ಉಪ ವಿಭಾಗಾಧಿಕಾರಿ ಡಾ.ನವೀನ್ ಭಟ್, ತಹಶೀಲ್ದಾರ್ ಮೇಘನಾ ಇವರುಗಳ ಸಮ್ಮುಖದಲ್ಲಿ ಬಾಗಿಲು ಮುಚ್ಚಲಾಯಿತು.
ವರ್ಷದಲ್ಲಿ 13 ದಿನ ತೆರೆಯುವ ಹಾಸನಾಂಬಾ ದೇವಾಲಯ
ಕೊನೆಯ ಕ್ಷಣದಲ್ಲಿಯೂ ಕೂಡ ದೇವಸ್ಥಾನದ ಬಳಿ ಇದ್ದಂತಹ ಭಕ್ತಾಧಿಗಳಿಗೆ ಹಾಸನಾಂಬೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ರಾಜ್ಯ ಮತ್ತು ರಾಷ್ಟ್ರಮಟ್ಟದ ರಾಜಕೀಯ ನಾಯಕರು ತಾಯಿ ಹಾಸನಾಂಬೆ ದರ್ಶನ ಪಡೆದಿದ್ದರು. ಡಿಕೆಶಿ ಪತ್ನಿ ಮತ್ತು ಪುತ್ರಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಅನೇಕರು ಹಾಸನಾಂಬಾ ದೇವಾಲಯಕ್ಕೆ ತೆರಳಿದ್ದರು.
ಹಿರಿಯ ಕಲಾವಿದ ದೊಡ್ಡಣ್ಣ , ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವರು ದೇವಿಯ ದರ್ಶನ ಪಡೆದರು. ಶುಕ್ರವಾರ ಹಾಗೂ ಶನಿವಾರ ಸರಿ ಸುಮಾರು 30 ಸಾವಿರಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದು ಇಂದು ಅಂದಾಜಿನ ಪ್ರಕಾರ ಈವರೆಗೆ 2.8 ಲಕ್ಷಕ್ಕೂ ಹೆಚ್ಚು ಭಕ್ತರು ಹಾಸನಾಂಬೆ ದರ್ಶನ ಪಡೆದಿದಿದ್ದಾರೆ ಎಂದು ಅಂಕಿ ಅಂಶಗಳು ಹೇಳಿವೆ.
300 ರೂ ಹಾಗೂ 1000 ರೂ ಹಾಗೂ ಲಾಡು ಮಾರಾಟಗಳಿಂದ ಸಂಗ್ರಹವಾಗಿರುವ ಹಣ ಕೋಟಿಗಳ ಗಡಿ ದಾಟಿದ್ದು, 2 ಕೋಟಿ ರೂ. ಆದಾಯ ಸಂಗ್ರಹದ ನಿರೀಕ್ಷೆ ಇದೆ ಎನ್ನಲಾಗಿದೆ.
ಹಾಸನಾಂಬೆ ಉತ್ಸವದ ಆರಂಭದ ದಿನಗಳಲ್ಲಿ ಭಕ್ತರ ಸಂಖ್ಯೆಯಲ್ಲಿ ಇಳಿಮುಖ ಕಂಡಿತ್ತಾದರೂ ಈಗ ರಜೆಗಳು ಪ್ರಾರಂಭವಾದ ನಂತರ ದೇವಿಯ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿತ್ತು.
ಒಂಚೂರು ಪುರಾಣ: ಕಾಶಿ ವಾರಣಾಸಿಯಿಂದ ದಕ್ಷಿಣಾಭಿಮುಖವಾಗಿ ವಾಯುವಿಹಾರಕ್ಕೆಂದು ಬಂದ ಸಪ್ತ ಮಾತೃಕೆಯರು ಅಂದರೆ, ಬ್ರಾಹ್ಮೀದೇವಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ದುರ್ಗೆ, ಚಾಮುಂಡಿ ಇವರು ಇಲ್ಲಿಗೆ ಬಂದರೆಂದು ಪ್ರತೀತಿ. ಅವರಲ್ಲಿ, ವೈಷ್ಣವಿ, ವಾರಾಹಿ ಮತ್ತು ಇಂದ್ರಾಣಿ ಈ ಮೂವರು ಹುತ್ತದಲ್ಲಿ ನೆಲೆಸಿದ ಸ್ಥಳವೇ ಹಾಸನಾಂಬೆಯ ದೇಗುಲ. (ದೇವನೊಬ್ಬನೇ ಆದರೂ ಆದಿ ಮಹರ್ಷಿಗಳು ಪುರುಷ ಮತ್ತು ಸ್ತ್ರೀ ಎರಡೂ ಶಕ್ತಿರೂಪಗಳನ್ನು ಒಂದಾಗಿ ಕಂಡಿದ್ದಾರೆ. ಹಾಗೆ ಕಂಡ ಸ್ತ್ರೀ ರೂಪಗಳೆ ಸಪ್ತಮಾತೃಕೆಯರು). ಹಾಸನ ನಗರದ ಹೃದಯಭಾಗದಲ್ಲಿರುವ ದೇವಿಕೆರೆಯಲ್ಲಿ, ಬ್ರಾಹ್ಮಿದೇವಿ, ಕೆಂಚಮ್ಮ ದೇವಿ ಹೊಸಕೋಟೆಯಲ್ಲಿ ನೆಲೆಸಿದ್ದಾರೆ. ಆದಿಶಕ್ತಿ ಸ್ವರೂಪಿಣಿ ಮಾತೃ ಸ್ವರೂಪಿಣಿಯಾಗಿರುವ ಹಾಸನಾಂಬೆ ಸಿಂಹಾಸನಾಪುರಿಯ ಅಧಿದೇವತೆ- ಭವತಾರಿಣಿ, ಅಸುರ ಸಂಹಾರಿಣಿ. ಬೇಡಿದ ವರಕೊಡುವ ಶಕ್ತಿದೇವತೆಯಾಗಿ ಜನಮಾನಸದಲ್ಲಿ ಕಾಣಿಸಿ ಕೊಂಡಿದ್ದಾಳೆ.