ಇಸ್ರೇಲ್‌ ಮೇಲಿನ ದಾಳಿಗೆ ಅಮೆರಿಕ - ಇರಾನ್ 600 ಕೋಟಿ ಡಾಲರ್‌ ಡೀಲ್‌ ಹಣ ಬಳಕೆ? ಇರಾನ್‌ ದುಡ್ಡಿಂದ್ಲೇ ಹಮಾಸ್‌ ಉಗ್ರರ ದಾಳಿ?

First Published | Oct 9, 2023, 1:09 PM IST

ಹಮಾಸ್‌ಗೆ ಇರಾನ್‌ನಿಂದ ಬೆಂಬಲವಿತ್ತು ಎಂಬುದು ಹೊಸ ವಿಚಾರವೇನಲ್ಲ. ಆದರೆ, ಈಗಿನ ಹಠಾತ್‌ ದಾಳಿಗೆ ಅಮೆರಿಕ - ಇರಾನ್‌ ನಡುವಿನ 6 ಬಿಲಿಯನ್ ಡಾಲರ್‌ ಹಣ ಕಾರಣವಾಯ್ತಾ ಎಂಬ ಚರ್ಚೆ ಶುರುವಾಗಿದೆ.

ಶನಿವಾರ ಇಸ್ರೇಲ್ ಮೇಲೆ ಪ್ಯಾಲೆಸ್ತೀನ್‌ನಲ್ಲಿರೋ ಹಮಾಸ್‌ ಉಗ್ರರ ಗುಂಪು ಅನಿರೀಕ್ಷಿತ ದಾಳಿ ಮತ್ತು ಇಸ್ರೇಲ್‌ನ ಪ್ರತೀಕಾರವು 1,100 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದುಕೊಂಡಿದೆ. ಇದರಿಂದ ಇರಾನ್ ಬೆಂಬಲಿತ ಇಸ್ಲಾಮಿಸ್ಟ್ ಗುಂಪಿನತ್ತ ಗಮನ ಹೆಚ್ಚಾಗಿದೆ. ಹಮಾಸ್‌ಗೆ ಇರಾನ್‌ನಿಂದ ಬೆಂಬಲವಿತ್ತು ಎಂಬುದು ಹೊಸ ವಿಚಾರವೇನಲ್ಲ. ಆದರೆ, ಈಗಿನ ಹಠಾತ್‌ ದಾಳಿಗೆ ಅಮೆರಿಕ - ಇರಾನ್‌ ನಡುವಿನ 6 ಬಿಲಿಯನ್ ಡಾಲರ್‌ ಹಣ ಕಾರಣವಾಯ್ತಾ ಎಂಬ ಚರ್ಚೆ ಶುರುವಾಗಿದೆ.
 

ಆದರೆ, ಏನಿದು 6 ಬಿಲಿಯನ್ ಡಾಲರ್‌ ಡೀಲ್‌? ಅಮೆರಿಕ - ಇರಾನ್‌ ನಡುವಣ ಒಪ್ಪಂದವೇನು? ಈ ಹಣದಿಂದ್ಲೇ ಇರಾನ್‌,  ಹಮಾಸ್‌ ಉಗ್ರರಿಗೆ ದುಡ್ಡು ಕಳಿಸಿದ ಬಳಿಕ ಇಸ್ರೇಲ್‌ ಮೇಲೆ ದಾಳಿಯಾಗಿದ್ಯಾ? ಇದರ ಅಸಲಿಯತ್ತಿನ ಬಗ್ಗೆ ತಿಳಿದುಕೊಳ್ಳೋದು ಮುಖ್ಯವಾಗಿದೆ.
 

Tap to resize

ಸೆಪ್ಟೆಂಬರ್‌ನಲ್ಲಿ ಯುಎಸ್-ಇರಾನ್ ಕೈದಿಗಳ ವಿನಿಮಯದಲ್ಲಿ ಅಮೆರಿಕ ಇರಾನ್‌ಗೆ 6 ಬಿಲಿಯನ್ ಡಾಲರ್‌ ಅಂದರೆ 600 ಕೋಟಿ ಡಾಲರ್‌ ನಿಧಿಯನ್ನು ನೀಡಬೇಕಿದೆ. ಆದರೆ, ಈ ದುಡ್ಡಲ್ಲಿ ಒಂದು ಡಾಲರ್‌ ಸಹ ಈವರೆಗೆ ಇರಾನ್‌ಗೆ ನೀಡಿಲ್ಲ ಎಂದು ಅಮೆರಿಕ ಸ್ಪಷ್ಟನೆ ನೀಡಿದೆ. ಸೆಪ್ಟೆಂಬರ್‌ನಲ್ಲಿ ಯುಎಸ್ - ಇರಾನ್ ಕೈದಿಗಳ ವಿನಿಮಯದಲ್ಲಿ ಸ್ಥಗಿತಗೊಂಡಿರೋ 6 ಬಿಲಿಯನ್‌ ಡಾಲರ್‌ ಫಂಡ್‌ನಲ್ಲಿ ಇರಾನ್‌ಗೆ ಇನ್ನೂ ಒಂದು ಡಾಲರ್ ಖರ್ಚು ಮಾಡಲು ಸಾಧ್ಯವಾಗಿಲ್ಲ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಭಾನುವಾರ ಹೇಳಿದ್ದಾರೆ.
 

"ಇರಾನ್ ಈ ನಿರ್ದಿಷ್ಟ ದಾಳಿಯನ್ನು ನಿರ್ದೇಶಿಸಿದ್ದಾರೆ ಅಥವಾ ಹಿಂದೆ ಇದ್ದಾರೆ ಎಂಬುದಕ್ಕೆ ಇನ್ನೂ ಪುರಾವೆಗಳಿಲ್ಲ. ಆದರೆ ಖಂಡಿತವಾಗಿಯೂ ದೀರ್ಘ ಸಂಬಂಧವಿದೆ" ಎಂದೂ ಆಂಟೋನಿ ಬ್ಲಿಂಕೆನ್ ಹೇಳಿದರು.

ಏನಿದು ಇರಾನ್ ಕೈದಿಗಳ ವಿನಿಮಯ ಒಪ್ಪಂದ?
ಆಗಸ್ಟ್‌ನಲ್ಲಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಇರಾನ್‌ ಜತೆ ಒಪ್ಪಂದ ಅನುಮೋದಿಸಿದ್ದನ್ನು ಸೆಪ್ಟೆಂಬರ್‌ನಲ್ಲಿ ಬಹಿರಂಗವಾಯ್ತು. ಇರಾನ್‌ನಲ್ಲಿ ವಶಕ್ಕೊಳಗಾಗಿದ್ದ ಅಮೆರಿಕದ 5 ನಾಗರಿಕರನ್ನು ಬಿಡುಗಡೆ ಮಾಡಲು ದಕ್ಷಿಣ ಕೊರಿಯಾದಲ್ಲಿ ಫ್ರೀಜ್‌ ಆಗಿದ್ದ 6 ಬಿಲಿಯನ್ ಡಾಲರ್‌ ನಿಧಿಯನ್ನು ವರ್ಗಾವಣೆ ಮಾಡಲು ಅಮೆರಿಕ ಸಹಾಯ ಮಾಡಿತ್ತು. ಹಾಗೆ, ಅಮೆರಿಕದಲ್ಲಿ ಸೆರೆ ಹಿಡಿಯಲಾಗಿದ್ದ ಇರಾನಿಯರನ್ನು ಬಿಡುಗಡೆ ಮಾಡಲೂ ಅನುಮತಿಸಿತ್ತು.

6 ಬಿಲಿಯನ್ ಡಾಲರ್‌  ಹಣ ಯಾರದ್ದು?
6 ಬಿಲಿಯನ್ ಡಾಲರ್ ಇರಾನಿನ ಹಣವಾಗಿದ್ದು, ಅದು ದಕ್ಷಿಣ ಕೊರಿಯಾದ ಬ್ಯಾಂಕ್‌ಗಳಲ್ಲಿ ಫ್ರೀಜ್‌ ಆಗಿತ್ತು. ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ 2019 ರಲ್ಲಿ ಇರಾನ್‌ನ ತೈಲ ರಫ್ತು ಮತ್ತು ಅದರ ಬ್ಯಾಂಕಿಂಗ್ ವಲಯದ ಮೇಲೆ ನಿರ್ಬಂಧಗಳನ್ನು ವಿಧಿಸಿದ ನಂತರ, ಈ ಇರಾನಿನ ತೈಲ ಆದಾಯವನ್ನು ಸಿಯೋಲ್‌ನಲ್ಲಿ ನಿರ್ಬಂಧಿಸಲಾಗಿತ್ತು.
 

ಈಗ 6 ಬಿಲಿಯನ್ ಡಾಲರ್‌ ಎಲ್ಲಿದೆ?
ಹಣವನ್ನು ಇರಾನ್‌ಗೆ ನೀಡಿಲ್ಲ. ಕತಾರ್‌ನ ಸೆಂಟ್ರಲ್ ಬ್ಯಾಂಕ್‌ ಸದ್ಯ ನಿಧಿಯನ್ನು ನೋಡಿಕೊಳ್ಳುತ್ತಿದ್ದು, ಅದು ದೋಹಾದಲ್ಲಿದೆ. 

ಆದರೆ, ಇರಾನ್‌ ಕೈದಿಗಳ ಒಪ್ಪಂದದ ನಿಯಮಗಳ ಅಡಿಯಲ್ಲಿ, ಹಣವನ್ನು ಇರಾನ್‌ನ ಹೊರಗೆ ಆಹಾರ ಅಥವಾ ಆಮದು ಮಾಡಿಕೊಳ್ಳಲು ಇತರ ವಸ್ತುಗಳನ್ನು ಖರೀದಿಸುವುದು ಸೇರಿದಂತೆ ಮಾನವೀಯ - ಸಂಬಂಧಿತ ಉದ್ದೇಶಗಳಿಗಾಗಿ ಮಾತ್ರ ಬಳಸಬಹುದು ಎಂದು ಯುಎಸ್ ಅಧಿಕಾರಿಗಳು ತಿಳಿಸಿದ್ದಾರೆ. 

ಈ ನಿರ್ಬಂಧಿತ ನಿಧಿಗಳು ಇರಾನ್‌ಗೆ ಹೋಗಲು ಸಾಧ್ಯವಿಲ್ಲ. ಇದನ್ನು ಭವಿಷ್ಯದ ಮಾನವೀಯ ಸಂಬಂಧಿತ ಉದ್ದೇಶಗಳಿಗಾಗಿ ಮಾತ್ರ ಬಳಸಬಹುದು. ಇದಕ್ಕೆ ವಿರುದ್ಧವಾಗಿ ಯಾವುದೇ ಸಲಹೆಯು ಸುಳ್ಳು ಮತ್ತು ತಪ್ಪುದಾರಿಗೆಳೆಯುವಂತಿದೆ ಎಂದೂ ಅಧಿಕಾರಿ ಹೇಳಿದ್ದಾರೆ. ಹಾಗೂ, ಇರಾನ್‌ ಜನರಿಗೆ ಆಹಾರ, ಔಷಧ, ವೈದ್ಯಕೀಯ ಸಾಧನಗಳು ಮತ್ತು ಕೃಷಿ ಉತ್ಪನ್ನಗಳನ್ನು ಖರೀದಿಸಲು ಮಾತ್ರ ಇದನ್ನು ಬಳಸಬಹುದು ಎಂದು ಹೇಳಿದ್ದಾರೆ.
 

ಒಪ್ಪಂದದ ವಿರೋಧಿಗಳ ವಾದವೇನು? 
ಅಮೆರಿಕದ 2024 ರ ಅಧ್ಯಕ್ಷೀಯ ಅಭ್ಯರ್ಥಿಯಾಗಲು ಸ್ಪರ್ಧಿಸುತ್ತಿರುವ ಹೆಚ್ಚಿನ ರಿಪಬ್ಲಿಕ್‌ ಪಕ್ಷದ ಅಭ್ಯರ್ಥಿಗಳು ಜೋ ಬೈಡೆನ್‌ರ ಇರಾನ್ ಒಪ್ಪಂದವನ್ನು ಇಸ್ರೇಲ್‌ ಮೇಲಿನ ದಾಳಿಗಳಿಗೆ ಲಿಂಕ್ ಮಾಡಲು ಪ್ರಯತ್ನಿಸಿದರು. ಅಲ್ಲದೆ, ಅಮೆರಿಕದ ತೆರಿಗೆದಾರರು ಇಸ್ರೇಲ್ ಮೇಲಿನ ದಾಳಿಗೆ ಹಣ ನೀಡಿದ್ದಾರೆ ಎಂದೂ ಆರೋಪಿಸಿದರು.

ನಿಕ್ಕಿ ಹ್ಯಾಲೆ ಸಹ 6 ಬಿಲಿಯನ್ ಡಾಲರ್‌ ಹಣ ಬಿಡುಗಡೆಯಾಗಲಿದೆ ಎಂದು ಇರಾನ್‌ಗೆ ತಿಳಿದಿದೆ. ಈ ಹಿನ್ನೆಲೆ ಹಮಾಸ್‌ಗೆ ಅವರು ಹಣ ಸಹಾಯ ಮಾಡ್ತಿದ್ದಾರೆ ಎಂದೂ ಹೇಳಿಕೊಂಡಿದ್ದಾರೆ. 

Latest Videos

click me!