ಒಮಾನ್ ಬಳಿ ಅಮೆರಿಕ ನಡೆಸಿದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟಿದ್ದು, ಮತ್ತೊಂದು ಭಾರತೀಯರಿದ್ದ ಹಡಗಿನ ಮೇಲೂ ದಾಳಿ ನಡೆದಿದೆ. ಈ ದಾಳಿಗಳನ್ನು ಖಂಡಿಸಿರುವ ಭಾರತ, ಅಮೆರಿಕಕ್ಕೆ ದಾಳಿ ನಿಲ್ಲಿಸುವಂತೆ ಆಗ್ರಹಿಸಿದೆ. ಈ ನಡುವೆ, ಅಮೆರಿಕ-ಇರಾನ್ ನಡುವಿನ ದಾಳಿ-ಪ್ರತಿದಾಳಿ ತೀವ್ರಗೊಂಡಿದೆ.
ಮಸ್ಕತ್: ಒಮಾನ್ ಬಳಿ ಪಲಾವ್ ಗಣರಾಜ್ಯದ ಹಡಗೊಂದರ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ನಾಪತ್ತೆಯಾಗಿದ್ದ ಮೂವರು ಭಾರತೀಯರು ಮೃತಪಟ್ಟಿರುವುದು ಖಚಿತವಾಗಿದೆ. ಮೂವರ ಶವಗಳೂ ಇದೀಗ ಪತ್ತೆಯಾಗಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ದಾಳಿಗೊಳಗಾದ ಈ ಟ್ಯಾಂಕರ್‌ನಲ್ಲಿದ್ದ 28 ಸಿಬ್ಬಂದಿಯಲ್ಲಿ 24 ಮಂದಿ ಭಾರತೀಯ ಪ್ರಜೆಗಳಾಗಿದ್ದರು. ಮೃತರನ್ನು ಹಡಗಿನ ಡೆಕ್ ಕೆಡೆಟ್ ಆದಿತ್ಯ ಶರ್ಮಾ, ಎಂಜಿನ್ ಫಿಟ್ಟರ್ ಶಿವಾನಂದ ಚೌರಾಸಿಯಾ ಮತ್ತು ಮುಖ್ಯ ಎಂಜಿನಿಯರ್ ಪಟ್ನಾಲಾ ಸುರೇಶ್ ಎಂದು ಗುರುತಿಸಲಾಗಿದೆ.
ಇರಾನ್‌ನಿಂದ ತೈಲ ಸಾಗಿಸುತ್ತಿದ್ದ ಈ ಹಡಗು ತಾನು ನೀಡಿದ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಹೇಳಿಕೊಂಡಿತ್ತು. ಈ ದಾಳಿಯನ್ನು ಕೇಂದ್ರ ಸರ್ಕಾರ ತೀವ್ರವಾಗಿ ಖಂಡಿಸಿದ್ದು, ರಾಜತಾಂತ್ರಿಕ ಮಾರ್ಗದ ಮೂಲಕ ಅಮೆರಿಕದ ಮುಂದೆ ತನ್ನ ಆಕ್ಷೇಪ ಹೊರಹಾಕಿತ್ತು. ಇದರ ಜತೆಗೆ ವಿಶ್ವಸಂಸ್ಥೆಯಲ್ಲೂ ಈ ವಿಚಾರ ಪ್ರಸ್ತಾಪಿಸಿ ಶಾಂತಿ ಕಾಯ್ದುಕೊಳ್ಳುವಂತೆ ಮನವಿ ಮಾಡಿದೆ.
25
ಭಾರತೀಯರಿದ್ದ ಮತ್ತೊಂದು ಹಡಗಿಗೆ ಒಮಾನ್‌ನಲ್ಲಿ ದಾಳಿ
ಒಮಾನ್ ಕಡಲಿನಲ್ಲಿ ಭಾರತೀಯರಿದ್ದ ಮತ್ತೊಂದು ಹಡಗಿನ ಮೇಲೆ ಮತ್ತೆ ದಾಳಿ ನಡೆದಿದೆ. ಇಲ್ಲಿನ ಶಿನಾಸ್ ಬಂದರಿನ ಬಳಿ 20 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಎಂಇ ಜಲವೀರ್ ಎನ್ನುವ ವಾಣಿಜ್ಯ ಹಡಗಿನ ಮೇಲೆ ದಾಳಿ ನಡೆಸಲಾಗಿದೆ. ಇದು ಕಳೆದ 3 ದಿನಗಳಲ್ಲಿ ಭಾರತದ ಹಡಗಿನ ಮೇಲೆ ನಡೆದ ಮೂರನೆಯ ದಾಳಿಯಾಗಿದೆ.
ವರದಿಗಳ ಪ್ರಕಾರ ದಾಳಿ ವೇಳೆ ಹಡಗಿನಲ್ಲಿ 20 ಸಿಬ್ಬಂದಿ ಇದ್ದು ಅವರೆಲ್ಲರೂ ಸುರಕ್ಷಿತವಾಗಿದ್ದಾರೆ. ಜಲವೀರ್ ಹಡಗು ಭಾರತಕ್ಕೆ ಸೇರಿದ್ದೇ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಅದರಲ್ಲಿ ಭಾರತೀಯರಿದ್ದರು ಎನ್ನುವುದು ಖಚಿತವಾಗಿದೆ.
'ಒಮಾನ್‌ನ ಶಿನಾಸ್ ಬಂದರಿನ ಬಳಿ ದಾಳಿಯಾಗಿದೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಹೆಚ್ಚಿನ ವಿವರಗಳಿಗಾಗಿ ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದೇವೆ' ಎಂದು ಭಾರತೀಯ ರಾಯಭಾರಿ ಕಚೇರಿ ಟ್ವಿಟ್ ಮಾಡಿದೆ. ಈ ನಡುವೆ ಮೂರು ದಾಳಿಯ ಹಿಂದೆ ಅಮೆರಿಕ ನೌಕಾಪಡೆಯ ಕೈವಾಡದ ಹಿನ್ನೆಲೆಯಲ್ಲಿ ಕೂಡಲೇ ದಾಳಿ ನಿಲ್ಲುವಂತೆ ಅಮೆರಿಕಕ್ಕೆ ಭಾರತ ಆಗ್ರಹಿಸಿದೆ.
35
ಟ್ರಂಪ್ ಎಚ್ಚರಿಕೆಗೆ ತಿರುಗೇಟು ನೀಡಿರುವ ಇರಾನ್
ಟೆಹ್ರಾನ್: ಮತ್ತಷ್ಟು ಕಠಿಣ ದಾಳಿ ಕುರಿತಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆಗೆ ತಿರುಗೇಟು ನೀಡಿರುವ ಇರಾನ್, ‘ನಮ್ಮ ಮೇಲೆ ಮತ್ತೇನಾದರೂ ದಾಳಿ ಮುಂದುವರೆಸಿದರೆ ನಾವು ಕೂಡ ಹಿಂದೆಂದೂ ಕಾಣದಂಥ ಪ್ರತಿಕ್ರಿಯೆ ನೀಡಲಿದ್ದೇವೆ. ಜೊತೆಗೆ ಇಂಥ ದಾಳಿಯು ಇಂಧನ ಮೂಲಸೌಕರ್ಯಗಳು ಮತ್ತು ಮಾರುಕಟ್ಟೆಯನ್ನೇ ಧ್ವಂಸಮಾಡಲಿದೆ’ ಎಂದು ಕಟು ನುಡಿಗಳಲ್ಲಿ ಎಚ್ಚರಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಇರಾನ್ ಸಂಸತ್‌ನ ಸ್ಪೀಕರ್ ಮತ್ತು ಅಮೆರಿಕ ಜೊತೆಗಿನ ಸಂಧಾನಕಾರರಾಗಿರುವ ಮೊಹಮ್ಮದ್ ಬಾಗೆರ್ ಘಾಲಿಬಾಫ್, ‘ಅಮೆರಿಕ ದಾಳಿ ಮುಂದುವರೆಸಿದರೆ ಅದು, ಒಂದೋ ತೈಲ ಹಾಗೂ ಅನಿಲ ಎಲ್ಲರಿಗೂ ಸಿಗಬೇಕು ಇಲ್ಲವೇ ಯಾರಿಗೂ ಸಿಗಬಾರದು ಎಂಬಂಥ ಪರಿಸ್ಥಿತಿಗೆ ಕಾರಣವಾಗಲಿದೆ. ಆಗ ನಾವು ನೀಡುವ ತಿರುಗೇಟು ಅಮೆರಿಕದ ಆರ್ಥಿಕತೆ ಹಲವು ವರ್ಷಗಳ ಕಾಲ ಸಂಕಷ್ಟದಲ್ಲಿ ಸಿಕ್ಕಿಬೀಳುವ ಸಂದರ್ಭವನ್ನು ಸೃಷ್ಟಿಸಲಿದೆ. ಅಮೆರಿಕದ ಪ್ರಚೋದನಾಕಾರಿ ನಿರ್ಧಾರಗಳು ಕೊನೆಯಿಲ್ಲದ ಕೆಸರಿನ ಕೊಳವನ್ನು ಸೃಷ್ಟಿಸುತ್ತಿವೆ. ಕೊನೆಗೆ ಅದರಲ್ಲಿ ಅಮೆರಿಕ ವರ್ಷಗಳ ಕಾಲ ಸಿಕ್ಕಿಹಾಕಿಕೊಳ್ಳಬೇಕಾಗುತ್ತದೆ. ಬೇರೆಯದೇ ಇರಾನ್ ಅನ್ನು ನೋಡಬೇಕಾಗುತ್ತದೆ’ ಎಂದು ಗುರುವಾರ ಕಟು ಎಚ್ಚರಿಕೆ ನೀಡಿದ್ದಾರೆ.
ದುಬೈ: ಕದನ ವಿರಾಮದ ನಡುವೆಯೂ ಇರಾನ್ ಮತ್ತು ಅಮೆರಿಕ ನಡುವಿನ ದಾಳಿ-ಪ್ರತಿದಾಳಿ ಎರಡನೇ ದಿನವಾದ ಗುರುವಾರವೂ ಮುಂದುವರಿದೆ. ಸಂಧಾನ ಮಾತುಕತೆ ನಿಂತಲ್ಲೇ ನಿಂತಿದ್ದರಿಂದ ಅಸಮಾಧಾನಗೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬುಧವಾರವಷ್ಟೇ ಇರಾನ್ ಮೇಲೆ ದಾಳಿಯ ಮುನ್ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಅಮೆರಿಕ ಸೇನೆ ಇರಾನ್‌ನ ಹಲವು ನಗರಗಳ ಮೇಲೆ ಬಾಂಬ್ ದಾಳಿ ಮಾಡಿದೆ.
ಗುರುವಾರ ಇರಾನ್‌ನ ಸೇನಾ ಕಣ್ಗಾವಲು ವ್ಯವಸ್ಥೆ, ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಗುರಿಮಾಡಿಕೊಂಡು ಮತ್ತೆ ದಾಳಿ ನಡೆಸಲಾಗಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕುವೈಟ್, ಬಹರೈನ್ ಮತ್ತು ಜೋರ್ಡನ್ ಮೇಲೆ ಭಾರೀ ಕ್ಷಿಪಣಿ, ಡ್ರೋನ್ ದಾಳಿ ನಡೆಸಿದೆ. ಇದರಿಂದ ಕುವೈಟ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನ ಸೇವೆ ಕೆಲಕಾಲ ಅಸ್ತವ್ಯಸ್ತಗೊಂಡಿತ್ತು.
ಈ ದಾಳಿಗೆ ಪ್ರತಿಯಾಗಿ ಇರಾನ್ ಕೂಡ ಅಮೆರಿಕದ ಸೇನಾ ನೆಲೆಗಳಿರುವ ಜೋರ್ಡಾನ್, ಕುವೈತ್ ಮತ್ತು ಬಹರೈನ್ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿದೆ. ಇರಾನ್ 8ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಜೋರ್ಡಾನ್‌ನತ್ತ ಹಾರಿಬಿಟ್ಟಿದ್ದು, ಅವುಗಳನ್ನು ಹೊಡೆದುರುಳಿಸಲಾಗಿದೆ ಎಂದು ಅಲ್ಲಿನ ಸರ್ಕಾರ ಹೇಳಿಕೊಂಡಿದೆ.
55
ಹೋರ್ಮುಜ್ ಬಂದ್
ಮತ್ತೆ ಸಂಘರ್ಷ ಆರಂಭವಾಗಿರುವ ಹಿನ್ನೆಲೆಯಲ್ಲಿ ಮುಂದಿನ ಸೂಚನೆವರೆಗೆ ಹೋರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸಂಚಾರಕ್ಕೆ ನಿರ್ಬಂಧ ಇರುವುದಾಗಿ ಇರಾನ್ ಹೇಳಿಕೊಂಡಿದೆ.
ಜತೆಗೆ, ಅಮೆರಿಕದ ದಾಳಿಯು ಕದನ ವಿರಾಮವನ್ನು ಅರ್ಥಹೀನಗೊಳಿಸುತ್ತದೆ. ಇದರ ಗಂಭೀರ ಪರಿಣಾಮಗಳಿಗೆ ಅಮೆರಿಕವೇ ಪೂರ್ಣ ಹೊಣೆ ಎಂದು ಇರಾನ್ ವಿದೇಶಾಂಗ ಸಚಿವಾಲಯ ಕಿಡಿಕಾರಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ