ತೆಹ್ರಾನ್/ಮಧ್ಯ ಪೂರ್ವ: ಇರಾನ್ ಮೇಲೆ ಇಸ್ರೇಲ್ ತನ್ನ ವೈಮಾನಿಕ ದಾಳಿಗಳನ್ನು ಮುಂದುವರೆಸುತ್ತಿದೆ. ಇದೇ ಸಮಯದಲ್ಲಿ ಇತ್ತೀಚಿಗೆ ಉತ್ತರ ಇರಾನ್‌ನ ಸೆಮ್ನಾನ್ ಪ್ರಾಂತ್ಯದಲ್ಲಿ ಸಂಭವಿಸಿದ ಭೀಕರ ಭೂಕಂಪ ಒಂದು ಹೊಸ ಪ್ರಶ್ನೆ ಹುಟ್ಟುಹಾಕಿದೆ. ಯುಎಸ್ ಭೂವೈಜ್ಞಾನಿಕ ಸಮೀಕ್ಷೆ (USGS) ಮಾಹಿತಿ ಪ್ರಕಾರ, ಭೂಕಂಪದ ತೀವ್ರತೆ 5.1 ಆಗಿತ್ತು, ಭೂಮಿಯಿಂದ 10 ಕಿಲೋಮೀಟರ್ ಆಳದಲ್ಲಿ ಅದು ಸಂಭವಿಸಿದ್ದು, ಸೆಮ್ನಾನ್ ನಗರದಿಂದ ನೈಋತ್ಯಕ್ಕೆ ಸುಮಾರು 37 ಕಿಲೋಮೀಟರ್ ದೂರದಲ್ಲಿ ಕೇಂದ್ರಬಿಂದುವಿದೆ. ಇರಾನ್‌ನ ಮಾಧ್ಯಮಗಳು ತೀವ್ರತೆಯನ್ನು 5.5 ಎಂದು ಉಲ್ಲೇಖಿಸಿದರೆ, ಇದರ ಕೇಂದ್ರಬಿಂದು ಸೊರ್ಖೇಹ್ ಎಂಬಲ್ಲಿ ಇದ್ದು, ರಾಜಧಾನಿ ಟೆಹ್ರಾನ್‌ನಲ್ಲಿಯೂ ಕಂಪನದ ಅನುಭವವಾಗಿದೆ ಎಂಬ ವರದಿಗಳನ್ನು ಬಿತ್ತರಿಸಿದೆ. ಭೂಕಂಪದ ಬಳಿಕ ಸಾವು-ನೋವುಗಳು ಸಂಭವಿಸಿಲ್ಲ ಎಂದು ಐಆರ್‌ಎನ್‌ಎ (IRNA) ವರದಿ ಮಾಡಿದೆ.