ಪೆಸಿಫಿಕ್ ದ್ವೀಪದಲ್ಲಿರುವ ಸಮಾವೋ ದೇಶ ಈವರೆಗೆ ಕೊರೋನಾ ಪ್ರಕರಣ ದಾಖಲಾಗದ ಕೆಲವೇ ದೇಶಗಳಲ್ಲಿ ಒಂದು.
ಇಲ್ಲಿ ಕೊರೋನಾ ಬಗ್ಗೆ ಯಾರಿಗೂ ಮಾಹಿತಿಯೇ ಇರದ ಸಮಯದಿಂದಲೇ ಲಾಕ್‌ಡೌನ್ ಹೇರಲಾಗಿದೆ. ಇದಕ್ಕೆ ಕಾರಣವಾಗಿದ್ದು, ಇಲ್ಲಿ ಹಬ್ಬಿದ್ದ ಮತ್ತೊಂದು ಮಹಾಮಾರಿ. ಇಲ್ಲಿ ಕಳೆದ ವರ್ಷ ಮೀಸಲ್ಸ್ ಆತಂಕ ಸೃಷ್ಟಿಸಿದ್ದು, ಸರಿ ಸುಮಾರು 83 ಮಂದಿಯನ್ನು ಬಲಿ ಪಡೆದುಕೊಂಡಿತ್ತು.
ಹೀಗಾಗಿ ಇಲ್ಲಿ ಲಾಕ್‌ಡೌನ್ ಹೇರಲಾಗಿತ್ತು. ಈ ಮಹಾಮಾರಿ ಹರಡಿದ ಪರಿಣಾಮವಾಗೇ ಕೆಲ ದಿನಗಳ ಹಿಂದಷ್ಟೇ ಫೋನೋ ಮ್ಯಾಕ್‌ಫರ್ಲಾಂಡೋ ಸುಮಾಂವೂ ಎಂಬಾಕೆ ಮಿಸ್ ಸುಮಾವೋ ಬ್ಯೂಟಿ ಕ್ವೀನ್ ಎಂಬ ಕಿರೀಟ ತನ್ನ ಮುಡಿಗೇರಿಸಿಕೊಂಡಿದ್ದರು. ಆದರೆ ತನ್ನ ದೇಶ ಈ ಮಹಾಮಾರಿ ವಿರುದ್ಧ ಸಮರ ಸಾರಿರುವುದನ್ನು ಕಂಡ ಈ ಮಹಿಳೆ ತನ್ನ ದೇಶದ ನಾಗರಿಕರ ಸೇವೆ ಮಾಡಲು ನಿರ್ಧರಿಸಿದರು.
ಎರಡು ಲಕ್ಷ ಜನಸಂಖ್ಯೆಯುಳ್ಳ ಈ ದೇಶದಲ್ಲಿ ಮೀಸಲ್ಸ್ ಮಹಾಮಾರಿ ಆರು ಸಾವಿರ ಜನರನ್ನು ಆವರಿಸಿಕೊಂಡಿದ್ದಲ್ಲದೇ, 83 ಮಂದಿಯ ಪ್ರಾಣ ಆಹುತಿ ಪಡೆದಿತ್ತು. ಹೀಗಿರುವಾಗ ನರ್ಸ್ ಆಗಿ ತರೇತಿ ಪಡೆದಿದ್ದ ಫೋನೋ ಮನೆ ಮನೆಗೆ ತೆರಳಿ ಜನರ ಸೇವೆಯಲ್ಲಿ ತೊಡಗಿಸಿಕೊಂಡರು.
ಇದರೊಂದಿಗೆ ಸಮಾವೋ ಈ ಮಹಾಮಾರಿ ವಿರುದ್ಧ ಹೋರಾಡಲು ದೇಶವ್ಯಾಪಿ ಲಾಕ್‌ಡೌನ್ ಘೋಷಿಸಿತು. ಬಳಿಕ ಇಲ್ಲಿ ಮೀಸಲ್ಸ್ ತೊಡೆದು ಹಾಕಲು ಲಸಿಕೆ ಚುಚ್ಚುವ ಕಾರ್ಯ ಆರಂಭವಾಯಿತು. ಈ ವ್ಯಾಕ್ಸಿನೇಷನ್ ಕಾರ್ಯದಲ್ಲಿ ಫೋನೋ ಕೂಡಾ ಸಕ್ರಿಯಳಾಗಿ ಭಾಗವಹಿಸಿದ್ದರು.
ಈ ಮುದ್ದುಮುಖದ ಸುಂದರಿ ಮನೆ ಮನೆಗೆ ತೆರಳಿ ಲಸಿಕೆ ಹಾಕಿದ್ದಲ್ಲದೇ ಜಾಗರೂಕರಾಗಿರುವಂತೆ ಸೂಚಿಸಲಾರಂಭಿಸಿದಳು. ದೇಶ ಮೀಸಲ್ಸ್ ಮಹಾಮಾರಿ ಮೇಲೆ ನಿಯಂತ್ರಣ ಪಡೆಯುತ್ತಿದ್ದಂತೆಯೇ, ಇತ್ತ ವಿಶ್ವದೆಲ್ಲೆಡೆ ಕೊರೋನಾ ಹಬ್ಬಲಾರಂಭಿಸಿತು. ಹೀಗಿರುವಾಗ ಈ ಬ್ಯೂಟಿ ಕ್ವೀನ್ ಸರ್ಕಾರದ ಬಳಿ ಲಾಕ್‌ಡೌನ್ ಮುಂದವರೆಸುವಂತೆ ಮನವಿ ಮಾಡಿಕೊಂಡಳು.
ಸರ್ಕಾರ ಫೋನೋ ಮಾತಿಗೆ ಮಣೆ ಹಾಕಿ ಲಾಕ್‌ಡೌನ್ ಮುಂದುವರೆಸಿತು. ಇದರ ಪರಿಣಾಮವೆಂಬಂತೆ ಎರಡು ಲಕ್ಷ ಜನಸಂಖ್ಯೆಯುಳ್ಳ ಈ ದೇಶದಲ್ಲಿ ಈವರೆಗೆ ಒಂದೂ ಕೊರೋನಾ ಪ್ರಕರಣಗಳು ದಾಖಲಾಗಿಲ್ಲ. ಅತ್ತ ಈ ಸಂಬಂಧ ಪ್ರತಿಕ್ರಿಯಿಸುತ್ತಾ ಮೀಸಲ್ಸ್ ವಿರುದ್ಧ ಹೋರಾಡುತ್ತಾ ಈ ದೇಶದ ಜನ ಕೊರೋನಾವನ್ನು ಸೋಲಿಸಿದ್ದಾರೆ ಎಂದಿದ್ದಾರೆ.
ಫೋನೋ ತನ್ನ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಜನರ ಬಳಿ ಮನೆಯೊಳಗೇ ಇರುವಂತೆ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆಯೂ ಸಲಹೆ ನೀಡಿದ್ದಾರೆ.
ಈ ದೇಶ ಕೊರೋನಾವನ್ನು ಸಾಮಾನ್ಯವಾಗಿ ಪರಿಗಣಿಸಿಲ್ಲ. ಇಲ್ಲಿರುವ ಏಕೈಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಆಸ್ಪತ್ರೆಯನ್ನು ಕ್ವಾರಂಟೈನ್ ಸೆಂಟರ್ ಆಗಿ ಪರಿವರ್ತಿಸಿದೆ. ವಿದೇಶಿಗರು ಯಾರೇ ಬಂದರೂ ಇಲ್ಲಿ ಎರಡು ವಾರ ಕ್ವಾರಂಟೈನ್ ಆಗುವುದು ಕಡ್ಡಾಯ.
ಇನ್ನು ಪ್ರಯಾಣಿಕರು ಕ್ವಾರಂಟೈನ್ ಆಗಲು ನಿರಾಕರಿಸಿದರೆ ಅವರನ್ನು ಮರಳಿ ಬಂದಲ್ಲೇ ಕಳುಹಿಸಲಾಗುತ್ತದೆ. ಇಷ್ಟೇ ಅಲ್ಲದೇ ಈವರೆಗೆ ಇಲ್ಲಿ ಕೊರೋನಾ ವೈರಸ್ ಒಂದೇ ಒಂದು ಪ್ರಕರಣ ದಾಖಲಾಗದಿದ್ದರೂ ಐದಕ್ಕಿಂತ ಹೆಚ್ಚು ಮಂದಿ ಸೇರಬಾರದೆಂಬ ನಿಯಮ ಜಾರಿಗೊಳಿಸಲಾಗಿದೆ.
ತನ್ನ ದೇಶವನ್ನು ಕೊರೋನಾದಿಂದ ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಪಾತ್ರ ನಿಭಾಯಿಸಿದ ಈ ಬ್ಯೂಟಿ ಕ್ವೀನ್‌ಗೆ ವಿಶ್ವಾದ್ಯಂತ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಜೊತೆಗೆ ಈ ದೇಶದಂತೆ ಇತರ ರಾಷ್ಟ್ರಗಳು ಖುಡಾ ಸೂಕ್ತ ಸಮಯದಲ್ಲಿ ಕಟ್ಟು ನಿಟ್ಟಿನ ಕ್ರಮ ವಹಿಸಿದ್ದರೆ ಇಂದು ಕೊರೋನಾದಿಂದ ಇಷ್ಟು ಸಾವು ನೋವು ಸಂಭವಿಸುತ್ತಿರಲಿಲ್ಲ ಎಂಬುವುದು ಕಟು ಸತ್ಯ.