ಸ್ವಸ್ಥ ಜೀವನಕ್ಕಾಗಿ ಇಂದು ಯೋಗವು ಬಹುತೇಕ ಅನಿವಾರ್ಯವಾಗಿದೆ. ಇದು ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಅನಾವರಣಗೊಳಿಸಲು ಸಹಾಯ ಮಾಡುತ್ತದೆ.
ಹಾಗಾದರೆ ಯೋಗ ಎಂದರೇನು? ಯೋಗವು ಕೇವಲ ಆಸನ ಅಥವಾ ದೇಹದ ಭಂಗಿಗಳಲ್ಲ. ವ್ಯಾಯಾಮ ಮತ್ತು ಆಸನಗಳು ಯೋಗದ ಒಂದು ಭಾಗವಾಗಿರುವುದು ನಿಜ. ಆದರೆ ಯೋಗವನ್ನು ಕೇವಲ ವ್ಯಾಯಾಮ ಎಂದು ಸೀಮಿತಗೊಳಿಸಬಾರದು ಅಥವಾ ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಇದು ಮಾನವ ಜೀವನದ ಸಮಗ್ರ ಬೆಳವಣಿಗೆ, ಅಭಿವ್ಯಕ್ತಿ ಮತ್ತು ಸಂಪರ್ಕವಾಗಿದೆ. ಯೋಗವು ಒಂದು ಸಂಪೂರ್ಣ ವಿಜ್ಞಾನ.
ಯೋಗ ಎಂದರೆ ಕೌಶಲ್ಯ: ಜೀವನವನ್ನು ನಡೆಸುವ ಕೌಶಲ್ಯ, ಮನಸ್ಸನ್ನು ನಿಭಾಯಿಸುವ ಕೌಶಲ್ಯ, ಜನರೊಂದಿಗೆ ಹೊಂದಿಕೊಳ್ಳುವ ಕೌಶಲ್ಯ, ಪ್ರೀತಿಯಿಂದಿರುವ ಕೌಶಲ್ಯ.ಯೋಗದಲ್ಲಿ ಮೊದಲ ಹೆಜ್ಜೆಯೇ ‘ಯಮ’; ಅಂದರೆ ನಿಯಮಗಳು ಅಥವಾ ಸಾಮಾಜಿಕ ನೈತಿಕತೆ. ಅದರಲ್ಲಿ ಮೊದಲನೆಯದು ಅಹಿಂಸೆ. ಒಬ್ಬ ವ್ಯಕ್ತಿಯು ತನ್ನ ಚಿಂತನೆ, ಮಾತು ಮತ್ತು ಕೃತಿಗಳಲ್ಲಿ ಹಿಂಸೆಯನ್ನು ತ್ಯಜಿಸಬೇಕು. ಹಿಂಸೆಯು ಮತ್ತಷ್ಟು ಹಿಂಸೆಯನ್ನು ಹುಟ್ಟುಹಾಕುತ್ತದೆ, ಅಲ್ಲವೇ? ಅದು ಒಂದು ಸರಪಳಿ ಪ್ರತಿಕ್ರಿಯೆಯನ್ನು ಸೃಷ್ಟಿಸುತ್ತದೆ.
ಈಗ ಯಾರಾದರೂ ನಮಗೆ ನೋವುಂಟುಮಾಡುವ ಮಾತುಗಳನ್ನು ಆಡಿದರೆ, ನಾವು ಪ್ರತಿಯಾಗಿ ಅವರಿಗೆ ನೋವುಂಟು ಮಾಡುವಂತಹ ಮಾತುಗಳನ್ನು ಆಡುತ್ತೇವೆ. ಇದು ಒಂದು ನಿರಂತರ ಪ್ರಕ್ರಿಯೆಯಾಗಿ ಮುಂದುವರಿಯುತ್ತದೆ. ಇದನ್ನು ಎಲ್ಲೋ ಒಂದು ಕಡೆ ನಿಲ್ಲಿಸಲೇಬೇಕಾಗುತ್ತದೆ. ಇಲ್ಲದಿದ್ದರೆ ಯೋಗದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಅಹಿಂಸೆಯು ಜೀವನದ ಮೂಲ ಆಧಾರವಾಗಿರಬೇಕು.