ರಾಜ್ಯಕ್ಕೆ ಬಂತು ಮೊದಲ ಎಲೆಕ್ಟ್ರಿಕ್‌ ಬಸ್‌: ಒಮ್ಮೆ ಚಾರ್ಜ್‌ ಮಾಡಿದ್ರೆ ಎಷ್ಟು ಕಿಮಿ ಓಡುತ್ತೆ?

First Published | Oct 1, 2021, 8:31 AM IST

ಬೆಂಗಳೂರು(ಅ.01):  ರಾಜ್ಯದ ಖಾಸಗಿ ಹಾಗೂ ಸರ್ಕಾರಿ ಸಾರಿಗೆ ಇತಿಹಾಸದಲ್ಲೇ ಮೊದಲ ಎಲೆಕ್ಟ್ರಿಕ್‌ ಬಸ್‌ ಹೊಂದಿದ ಹೆಗ್ಗಳಿಕೆಗೆ ಬಿಎಂಟಿಸಿ ಪಾತ್ರವಾಗಿದೆ. ಬೆಂಗಳೂರಿಗೆ ಆಗಮಿಸಿರುವ ಈ ಬಸ್‌ ಅನ್ನು ಗುರುವಾರ ಸಾರಿಗೆ ಸಚಿವ ಬಿ. ಶ್ರೀರಾಮಲು ಪರಿಶೀಲನೆ ನಡೆಸಿದ್ದಾರೆ. 

ಗುತ್ತಿಗೆ ಮಾದರಿಯಡಿ ಬಿಎಂಟಿಸಿ ಪಡೆಯುತ್ತಿರುವ ಹವಾ ನಿಯಂತ್ರಣರಹಿತ 90 ಎಲೆಕ್ಟ್ರಿಕ್‌ ಬಸ್‌ಗಳು ಹಲವು ವಿಶೇಷತೆಗಳಿಂದ ಕೂಡಿವೆ. ಆಕರ್ಷಕವಾಗಿರುವ ಈ ಎಲೆಕ್ಟ್ರಿಕ್‌ ಬಸ್‌ 9 ಮೀಟರ್‌ ಉದ್ದವಿದೆ. ‘1 ಪ್ಲಸ್‌ 1’ ಮಾದರಿಯಲ್ಲಿ 33 ಪ್ಲಸ್‌ 1 ಸೇರಿದಂತೆ ಒಟ್ಟು 34 ಆಸನಗಳಿವೆ. ಆಸನಗಳು ಪ್ರಯಾಣಿಕರಿಗೆ ಹಿತಾನುಭವ ನೀಡಲಿವೆ. ಬಸ್ಸಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ಎರಡು ಸಿಸಿಟಿವಿ ಕ್ಯಾಮರಾಗಳಿವೆ. ಮುಂಭಾಗ ಮತ್ತು ಮಧ್ಯಭಾಗ ಎರಡು ಸ್ವಯಂಚಾಲಿತ ದ್ವಾರಗಳಿದ್ದು, ಪ್ರಯಾಣಿಕರು ಆರಾಮವಾಗಿ ಬಸ್‌ ಏರಲು ಮತ್ತು ಇಳಿಯಲು ವಿಶಾಲವಾದ ಜಾಗವಿದೆ.

1 ಪ್ಲಸ್‌ 1 ಆಸನಕ್ಕೆ ಸೇಫ್ಟಿಬಟನ್‌ ಸೌಲಭ್ಯವಿದೆ. ಒಂದು ವೇಳೆ ಪ್ರಯಾಣದ ವೇಳೆ ಏನಾದರೂ ಅಹಿತಕರ ಘಟನೆಗಳು ಜರುಗಿದರೆ ಪ್ರಯಾಣಿಕರು ಈ ಬಟನ್‌ ಒತ್ತಿದ ತಕ್ಷಣ ಚಾಲಕನ ಬಳಿ ಅಲಾರಂ ಶಬ್ದವಾಗಲಿದೆ. ಇದರಿಂದ ಚಾಲಕ ತಕ್ಷಣ ಬಸ್‌ ನಿಲುಗಡೆ ಮಾಡಬಹುದಾಗಿದೆ. ಬಸ್ಸಿನ ಮತ್ತೊಂದು ವಿಶೇಷವೆಂದರೆ, ಇದು ಆ್ಯಟೋಮ್ಯಾಟಿಕ್‌ ಬಸ್‌ ಆಗಿದ್ದು, ಕ್ಲಚ್‌ ಹಾಗೂ ಗೇರ್‌ ಇಲ್ಲ. ಕೇವಲ ಆ್ಯಕ್ಸಲೇಟರ್‌ ಮೂಲಕ ಬಸ್‌ ಸಂಚಾರ ಮಾಡುತ್ತದೆ. ಒಮ್ಮೆಗೆ ಒಂದೂವರೆ ತಾಸು ಬಸ್ಸಿನ ಬ್ಯಾಟರಿ ಚಾರ್ಜ್‌ ಮಾಡಿದರೆ 120 ಕಿ.ಮೀ. ಸಂಚರಿಸಲಿದೆ. ಕ್ವಿಕ್‌ ಚಾಜ್‌ರ್‍ಗೂ ಅವಕಾಶವಿದ್ದು, 45 ನಿಮಿಷ ಬ್ಯಾಟರಿ ಚಾರ್ಜ್‌ ಮಾಡಿದರೆ, 60 ಕಿ.ಮೀ. ಸಂಚರಿಸಲಿದೆ. ಗಂಟೆಗೆ 70 ಕಿ.ಮೀ. ವೇಗದಲ್ಲಿ ಈ ಬಸ್‌ ಸಂಚರಿಸಲಿದೆ.

Latest Videos


ಎಂಟಿಸಿ ಎನ್‌ಟಿಪಿಸಿ-ಜೆಬಿಎಂ ಕಂಪನಿಯಿಂದ ಗುತ್ತಿಗೆ ಮಾದರಿಯಡಿ ಬಿಎಂಟಿಸಿ ಈ ಎಲೆಕ್ಟ್ರಿಕ್‌ ಬಸ್‌ ಪಡೆಯುತ್ತಿರುವುದರಿಂದ ಟೆಂಡರ್‌ ಷರತ್ತಿನ ಅನ್ವಯ 10 ವರ್ಷಗಳ ಕಾಲ ಕಂಪನಿಯೇ ಬಸ್‌ಗಳನ್ನು ನಿರ್ವಹಣೆ ಮಾಡಲಿದೆ. ಕಂಪನಿ ಚಾಲಕನನ್ನು ನಿಯೋಜಿಸಿದರೆ, ಬಿಎಂಟಿಸಿ ನಿರ್ವಾಹಕನನ್ನು ನಿಯೋಜಿಸಲಿದೆ. ಬಸ್‌ ಸಂಚಾರದ ಆಧಾರದ ಮೇಲೆ ಪ್ರತಿ ಕಿ.ಮೀ.ಗೆ 51.67 ರು. ಮೊತ್ತವನ್ನು ಕಂಪನಿಗೆ ಪಾವತಿಸಲಿದೆ.

ಬೆಂಗಳೂರು ಮಹಾನಗರ ಸಾರಿಗೆ ನಿಗಮದಲ್ಲಿ (ಬಿಎಂಟಿಸಿ) ಕಾರ್ಯನಿರ್ವಹಿಸಲಿರುವ ವಿದ್ಯುತ್‌ ಚಾಲಿತ ಬಸ್‌ ಬೆಂಗಳೂರಿಗೆ ಆಗಮಿಸಿದ್ದು, ಸಾರಿಗೆ ಸಚಿವ ಬಿ.ಶ್ರೀರಾಮುಲು ಗುರುವಾರ ಬಸ್ಸಿನ ಪರಿಶೀಲನೆ ನಡೆಸಿದರು. ನ.1ಕ್ಕೆ ಈ ಬಸ್‌ ಸೇವೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು. ರಾಜ್ಯದ ಖಾಸಗಿ ಹಾಗೂ ಸರ್ಕಾರಿ ಸಾರಿಗೆ ಇತಿಹಾಸದಲ್ಲೇ ಇದು ಮೊದಲ ಎಲೆಕ್ಟ್ರಿಕ್‌ ಬಸ್‌ ಎಂಬುದು ವಿಶೇಷ.

ಎಲೆಕ್ಟ್ರಿಕ್‌ ಮಿನಿ ಬಸ್‌ ಎ.ಸಿ. ವ್ಯವಸ್ಥೆ ಇಲ್ಲ

9 ಮೀಟರ್‌: ಎಲೆಕ್ಟ್ರಿಕ್‌ ಮಿನಿ ಬಸ್ಸಿನ ಉದ್ದ. ಸಾಮಾನ್ಯ ಬಸ್ಸು 12 ಮೀ.
34 ಆಸನ: 1+1 ಮಾದರಿಯ ಆಸನ ವ್ಯವಸ್ಥೆ. ಪ್ರತಿ ಬಸ್ಸಿನಲ್ಲಿ 34 ಆಸನ
120 ಕಿ.ಮೀ.: 1.5 ತಾಸು ಚಾರ್ಜ್‌ ಮಾಡಿದರೆ 120 ಕಿ.ಮೀ. ಸಂಚಾರ
70 ಕಿ.ಮೀ.: ಎಲೆಕ್ಟ್ರಿಕ್‌ ಬಸ್ಸಿನ ಗರಿಷ್ಠ ವೇಗ ತಾಸಿಗೆ 70 ಕಿಲೋಮೀಟರ್‌
90 ಬಸ್‌: ಗುತ್ತಿಗೆ ಮಾದರಿಯಲ್ಲಿ ಬಿಎಂಟಿಸಿ ಸೇವೆಗೆ ಬರಲಿವೆ 90 ಬಸ್‌

click me!