Rohini Vs Roopa: ವೃತ್ತಿ ಜೀವನ ಹೀಗೆ ಮಾಡ್ಕೊಬೇಡಿ? ರೋಹಿಣಿ ಸಿಂಧೂರಿ, ರೂಪಾ ಮೌದ್ಗಿಲ್‌ಗೆ ಕಿವಿ ಹಿಂಡಿದ ಸುಪ್ರೀಂ!

Published : Jun 12, 2026, 06:14 PM IST

ಕರ್ನಾಟಕದ ಇಬ್ಬರು ಪ್ರಭಾವಿ ಮಹಿಳಾ ಅಧಿಕಾರಿಗಳಾದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (IAS Officer Rohini Sindhuri) ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್(IPS Officer Roopa D Moudgil) ನಡುವಿನ ಕಾನೂನು ಸಮರಕ್ಕೆ ಸುಪ್ರೀಂ ಕೋರ್ಟ್ (Supreme Court) ಈಗ ಸಂಧಾನದ ಹಾದಿ ತೋರಿಸಿದೆ.

PREV
16

ಕರ್ನಾಟಕದ ಇಬ್ಬರು ಪ್ರಭಾವಿ ಮಹಿಳಾ ಅಧಿಕಾರಿಗಳಾದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (IAS Officer Rohini Sindhuri) ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್(IPS Officer Roopa D Moudgil) ನಡುವಿನ ದೀರ್ಘಕಾಲದ ಕಾನೂನು ಸಮರಕ್ಕೆ ಸುಪ್ರೀಂ ಕೋರ್ಟ್ (Supreme Court) ಈಗ ಸಂಧಾನದ ಹಾದಿ ತೋರಿಸಿದೆ. ಇಬ್ಬರು ಅಧಿಕಾರಿಗಳ ನಡುವಿನ ಮಾನಹಾನಿ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಗೆ (Mediation) ವಹಿಸಿದ್ದು, ನಿವೃತ್ತ ನ್ಯಾಯಮೂರ್ತಿ ಕುರಿಯನ್ ಜೋಸೆಫ್ (Retired Justice Kurian Joseph) ಅವರನ್ನು ಸಂಧಾನಕಾರರನ್ನಾಗಿ ನೇಮಕ ಮಾಡಿದೆ.

26

ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಂಜೀವ್ ಸಚ್‌ದೇವ್ ಅವರ ಪೀಠವು ಅಧಿಕಾರಿಗಳ ವರ್ತನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತು. 'ಈ ಇಬ್ಬರು ಅಧಿಕಾರಿಗಳು ತಮ್ಮ ಕಾನೂನು ಹೋರಾಟದ ಮೂಲಕ ಪರಸ್ಪರರ ವೃತ್ತಿಜೀವನವನ್ನು ತಾವೇ ಹಾಳುಮಾಡಿಕೊಳ್ಳುತ್ತಿದ್ದಾರೆ' ಎಂದು ನ್ಯಾಯಮೂರ್ತಿ ಶರ್ಮಾ ಮಾರ್ಮಿಕವಾಗಿ ನುಡಿದರು. 

ಸುದೀರ್ಘ ಕೋರ್ಟ್ ಕಲಾಪಗಳಿಗಿಂತ ಮಧ್ಯಸ್ಥಿಕೆಯ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ನ್ಯಾಯಾಲಯ ಬಂದಿದೆ.

36

ಎಲ್ಲಾ ಪ್ರಕರಣಗಳಿಗೂ ತಡೆ:

ಮಧ್ಯಸ್ಥಿಕೆ ಪ್ರಕ್ರಿಯೆ ನಡೆಯುವವರೆಗೆ ಇಬ್ಬರು ಅಧಿಕಾರಿಗಳ ನಡುವೆ ನಡೆಯುತ್ತಿರುವ ಎಲ್ಲಾ ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಅಧಿಕಾರಿಗಳು ಈಗ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರ ಮುಂದೆ ಹಾಜರಾಗಿ ಮಾತುಕತೆಯ ಮೂಲಕ ವಿವಾದವನ್ನು ಅಂತ್ಯಗೊಳಿಸಲು ಪ್ರಯತ್ನಿಸಬೇಕಿದೆ.

46

ವಿವಾದದ ಹಿನ್ನೆಲೆ ಏನು?

2023ರಲ್ಲಿ ಡಿ. ರೂಪಾ ಅವರು ರೋಹಿಣಿ ಸಿಂಧೂರಿ ವಿರುದ್ಧ ಫೇಸ್‌ಬುಕ್‌ನಲ್ಲಿ ಸರಣಿ ಪೋಸ್ಟ್‌ಗಳನ್ನು ಹಾಕುವ ಮೂಲಕ ಈ ವಿವಾದ ಆರಂಭವಾಗಿತ್ತು. ರೋಹಿಣಿ ಸಿಂಧೂರಿ ಅವರು ಜಾಲಹಳ್ಳಿಯಲ್ಲಿ ಬೃಹತ್ ಬಂಗಲೆ ನಿರ್ಮಿಸಿದ್ದಾರೆ ಮತ್ತು ತಮ್ಮ ಆಸ್ತಿ ವಿವರದಲ್ಲಿ ಅದನ್ನು ಘೋಷಿಸಿಲ್ಲ ಎಂದು ರೂಪಾ ಆರೋಪಿಸಿದ್ದರು. ಅಲ್ಲದೆ ಕೆಲವು ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಇದಕ್ಕೆ ಪ್ರತಿಯಾಗಿ ರೋಹಿಣಿ ಸಿಂಧೂರಿ ಅವರು ರೂಪಾ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಮಾನಹಾನಿ ಮೊಕದ್ದಮೆ ಹೂಡಿದ್ದರು. ನಂತರ ಡಿ. ರೂಪಾ ಕೂಡ ರೋಹಿಣಿ ಸಿಂಧೂರಿ ವಿರುದ್ಧ ದೂರು ದಾಖಲಿಸಿದ್ದರು. ರೋಹಿಣಿ ಅವರು ತಮ್ಮನ್ನು 'ಮಾನಸಿಕ ಅಸ್ವಸ್ಥತೆ' ಎಂದು ಕರೆದು ಅವಮಾನಿಸಿದ್ದಾರೆ ಎಂದು ರೂಪಾ ಆರೋಪಿಸಿದ್ದರು. ಈ ಸಂಬಂಧ ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿತ್ತು, ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

56

ಹೈಕೋರ್ಟ್ ನೀಡಿದ್ದ ತೀರ್ಪು:

ಕರ್ನಾಟಕ ಹೈಕೋರ್ಟ್ ತನ್ನ ತೀರ್ಪಿನಲ್ಲಿ, 'ಒಬ್ಬ ಅಧಿಕಾರಿಯ ವಿರುದ್ಧದ ಆರೋಪವು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದೆಯೇ ಅಥವಾ ಇಲ್ಲವೇ ಎಂಬುದನ್ನು ವಿಚಾರಣೆಯ ಹಂತದಲ್ಲಿ ಸಾಕ್ಷ್ಯಾಧಾರಗಳ ಮೂಲಕ ನಿರ್ಧರಿಸಬೇಕು. ಇದನ್ನು ಆರಂಭಿಕ ಹಂತದಲ್ಲೇ ರದ್ದುಗೊಳಿಸಲು ಸಾಧ್ಯವಿಲ್ಲ' ಎಂದು ಹೇಳಿತ್ತು. ಹೈಕೋರ್ಟ್ ಆದೇಶದಿಂದಾಗಿ ರೋಹಿಣಿ ಸಿಂಧೂರಿ ಅವರು ವಿಚಾರಣಾ ನ್ಯಾಯಾಲಯದಲ್ಲಿ ಕ್ರಿಮಿನಲ್ ವಿಚಾರಣೆ ಎದುರಿಸುವಂತಾಗಿತ್ತು.

66

ಈಗ ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಗೆ ಆದೇಶಿಸಿರುವುದರಿಂದ, ಕಳೆದ ಎರಡು ವರ್ಷಗಳಿಂದ ರಾಜ್ಯದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದ ಈ 'ಐಎಎಸ್ ವರ್ಸಸ್ ಐಪಿಎಸ್' ಸಮರವು ಶಾಂತಿಯುತವಾಗಿ ಅಂತ್ಯಗೊಳ್ಳುವ ನಿರೀಕ್ಷೆಯಿದೆ. ರಾಜ್ಯದ ಉನ್ನತ ಅಧಿಕಾರಿಗಳೇ ಹೀಗೆ ಬೀದಿಯಲ್ಲಿ ಜಗಳವಾಡುವುದು ಆಡಳಿತ ಯಂತ್ರದ ಘನತೆಗೆ ಧಕ್ಕೆ ತರುತ್ತದೆ ಎಂಬ ಸಾರ್ವಜನಿಕರ ಅಭಿಪ್ರಾಯಕ್ಕೆ ಸುಪ್ರೀಂ ಕೋರ್ಟ್‌ನ ಈ ನಡೆ ಪೂರಕವಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories