ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ರಾಜಯೋಗ ಶುರುವಾಗಿದೆ. ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಗೆಲ್ಲುತ್ತಾರೆ ಎಂದು ಡಾ ಲಕ್ಷ್ಮೀಕಾಂತ್ ಆಚಾರ್ಯ ಗುರೂಜಿ ಭವಿಷ್ಯ ನುಡಿದಿದ್ದಾರೆ. ಇದರ ಬೆನ್ನಲ್ಲಿಯೇ ಮೂರನೇ ಕಾರ್ತಿಕ ಸೋಮವಾರ ನಿಖಿಲ್ ಕುಮಾರಸ್ವಾಮಿ ಅವರು ಕುಟುಂಬ ಸಮೇತರಾಗಿ ಬೆಟ್ಟದ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ತುಮಕೂರಿನಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಚುನಾವಣಾ ಭವಿಷ್ಯದ ವಿಚಾರದ ಬಗ್ಗೆ ಮಾತನಾಡಿದ ಡಾ ಲಕ್ಷ್ಮೀಕಾಂತ್ ಆಚಾರ್ಯ ಗುರೂಜಿ ಅವರು, 2016ರಲ್ಲಿ ಹೆಚ್.ಡಿ. ದೇವೆಗೌಡರು ತುಮಕೂರು ತಾಲೂಕಿನ ಚಿನಗ ಗ್ರಾಮದಲ್ಲಿರುವ ಮುಕಾಬಿಂಕಾ ದೇವಿ ಅಮ್ಮನ ಸನ್ನಿಧಿಯಲ್ಲಿ ಚಂಡಿಕಾಯಾಗ ಮಾಡಿಸಿದ್ದರು. ಅದರ ಫಲ 2024ಕ್ಕೆ ಲಭಿಸಿದೆ. ಅಂದೇ ಮುಕಾಬಿಂಕಾ ದೇವಿ ನಿಖಿಲ್ ಕುಮಾರಸ್ವಾಮಿಯವರ ಭವಿಷ್ಯ ನುಡಿದಿತ್ತು.
ಆಗ ಮಾಜಿ ಪ್ರಧಾನಿ ದೇವೇಗೌಡರ ಮುಂದೆ 2023ರ ನಂತರ ನಿಖಿಲ್ ಕುಮಾರಸ್ವಾಮಿಗೆ ರಾಜಯೋಗ ಶುರುವಾಗಲಿದೆ ಎಂದು ಭವಿಷ್ಯ ನುಡಿಯಲಾಗಿತ್ತು. ಅದರಂತೆ, ನಿಖಿಲ್ ಕುಮಾರಸ್ವಾಮಿಗೆ 2023 ರಿಂದಲೇ ರಾಜಯೋಗ ಶುರುವಾಗಿದೆ. ನಿಖಿಲ್ ಕುಮಾರಸ್ವಾಮಿ ಮೇಲೆ ಭಗವತಿಯ ಪರಿಪೂರ್ಣ ಆಶೀರ್ವಾದ ಆಗಿದೆ. ಅಮ್ಮನವರು ಒಪ್ಪಿಗೆ ಸೂಚಿಸಿದ್ದಾರೆ ಲಕ್ಷ್ಮೀಕಾಂತ್ ಆಚಾರ್ಯ ಗುರೂಜಿ ತಿಳಿಸಿದ್ದಾರೆ.
ರಾಜಯೋಗ ಇಲ್ಲದೆ ಅಧಿಕಾರ ಸಿಗೊಲ್ಲ: ನಿಖಿಲ್ ಕುಮಾರಸ್ವಾಮಿಗೆ ಮುಂದಿನ ದಿನಗಳಲ್ಲಿ ಅಮ್ಮನ ಆಶೀರ್ವಾದ, ಜಯಶೀಲರಾಗುವಂತಹ ಎಲ್ಲಾ ಅನುಗ್ರಹವನ್ನ ಅಮ್ಮನವರು ಮಾಡಿಕೊಟ್ಟಿದ್ದಾರೆ. ಈ ಬಾರಿ ಅಮ್ಮನವರ ಆಶಿರ್ವಾದ ಆಗಿರುವುದರಿಂದ ಖಂಡಿತವಾಗಿ ಗೆಲುವು ಖಚಿತವಾಗಿದೆ. ಅವರ ನಿರೀಕ್ಷೆಗೂ ಮಿರಿದ ಅಂತರದಿಂದ ಗೆಲುವ ಸಾಧಿಸಲಿದ್ದಾರೆ. ಏಕೆಂದರೆ ಚಂಡಿಕಾಯಾಗದಲ್ಲಿ ಅಷ್ಟೊಂದು ರೀತಿಯಾದ ವಿಶೇಷತೆಗಳು ಇರುತ್ತದೆ. ಯಾರು ಅನುಷ್ಠಾನವನ್ನ ಮಾಡಿ ವಿಶೇಷವಾಗಿ ದೇವಿಗೆ ಪೂಜೆಯನ್ನ ಸಲ್ಲಿಸುತ್ತಾರೋ, ಅವರಿಗೆ ಪರಿಪೂರ್ಣವಾದ ಆಶಿರ್ವಾದ ಪರಿಪಾಪ್ತಿಯಾಗುತ್ತದೆ.
ಮಹಾಲಕ್ಷ್ಮಿ, ಮಹಾಕಾಳಿ, ಮಹಾ ಸರಸ್ಪತಿಯ ಸ್ವರೂಪಿಣಿಯಾಗಿರುವಂತಹ ಅಮ್ಮನವರ ಆಶಿರ್ವಾದ ಆಗಿರುವುದರಿಂದ ಖಂಡಿತವಾಗಿ ಅವರ ಕುಟುಂಬಕ್ಕೆ ಒಳ್ಳೆಯ ಅನುಗ್ರಹ ಆಗುತ್ತದೆ. ಹಿಂದಿನ ಎಲ್ಲ ನೋವುಗಳನ್ನ ಮರೆಸಿ ಮುಂದಿನ ಜೀವನ ಸುಖಮಯವಾಗಿರುತ್ತದೆ. ಪ್ರತಿಯೊಂದು ಅಧಿಕಾರ ಸಿಗಬೇಕಾದರೆ ರಾಜಯೋಗ ಇರಬೇಕು. ರಾಜಯೋಗ ಇಲ್ಲದೇ ಅಧಿಕಾರ ಸಿಗಲಿಕ್ಕೆ ಸಾಧ್ಯವಿಲ್ಲ.
ಅದರಂತೆ ಅಮ್ಮನವರ ಆಶಿರ್ವಾದದಿಂದ ಈಗ ನಿಖಿಲ್ ಗೆ ರಾಜಯೋಗ ಸಿಕ್ಕಿದೆ. ಉನ್ನತ ಅಧಿಕಾರಗಳನ್ನ ಅನುಭವಿಸುವ ಅನುಗ್ರಹ ಪ್ರಾಪ್ತಿಯಾಗುತ್ತೆ. ಈ ಹಿಂದೆ ನಿಖಿಲ್ ಕುಮಾರಸ್ವಾಮಿ ಎರಡು ಚುನಾವಣೆಯಲ್ಲೂ ನಿಮಗೆ ಹಿನ್ನಡೆಯಾಗುತ್ತೆ ಅಮ್ಮನವರು ಹೇಳಿದ್ರು. 2023 ರ ನಂತರ ಒಳ್ಳೆಯದಾಗುತ್ತೆ ಅಂತ ಸೂಚಿಸಿದ್ರು. ಅದೇ ಪ್ರಕಾರವಾಗಿ ಈ ಒಂದು ಯೋಗ ಪ್ರಾರಂಭವಾಗಿದೆ. ಕಹಿ ನೆನಪುಗಳೆಲ್ಲಾ ಮಾಯವಾಗಿ ಒಳ್ಳೆಯ ರೀತಿಯ ಅನುಗ್ರಹ ಆಗುತ್ತದೆ ಎಂದು ಭವಿಷ್ಯವನ್ನು ನುಡಿದಿದ್ದರು.
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ನಿಖಿಲ್ ಕುಮಾರಸ್ವಾಮಿ ಭವಿಷ್ಯ ಇದೇ ನ.23ರಂದು ಹೊರಗೆ ಬೀಳಲಿದೆ. ಈಗಾಗಲೇ ಎರಡು ಚುನಾವಣೆಯಲ್ಲಿ ಸೋಲು ಕಂಡಿದ್ದು, ಇದೀಗ 3ನೇ ಚುನಾವಣೆಯಲ್ಲಿ ಸ್ಪರ್ಧಿಸಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಚುನಾವಣೆ ಮತದಾನ ಮುಕ್ತಾಯದ ಬೆನ್ನಲ್ಲಿಯೇ ರಾಜ್ಯದ ವಿವಿಧ ಶಕ್ತಿಶಾಲಿ ದೇವಾಲಯಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಇದರ ಭಾಗವಾಗಿ ಶ್ರೀ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ ನಿಖಿಲ್ ಕುಮಾರಸ್ವಾಮಿ ಶ್ರೀ ರಂಗನಾಥಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹಳೆಕೋಟೆ ಗ್ರಾಮದಲ್ಲಿರುವ ಈ ರಂಗನಾಥಸ್ವಾಮಿ ದೇವಾಲಯವು ಬೆಟ್ಟದ ಮೇಲೆ ನೆಲೆಗೊಂಡಿದೆ. ಸುತ್ತಲೂ ಗ್ರಾಮಗಳಿದ್ದು, ಬಹುತೇಕ ಸುತ್ತಲಿನ ಗ್ರಾಮಸ್ಥರು ಈ ದೇವಾಲಯದ ಕ್ತರಾಗಿದ್ದಾರೆ. ಈ ದೇವಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರು ಬೆಟ್ಟದ ತುದಿಯಿಂದ ರಮಣೀಯ ನೋಟದ ಆನಂದ ಪಡೆಯಬಹುದು, ಜೊತೆಗೆ, ದೂರದಲ್ಲಿ ಹೇಮಾವತಿ ನದಿಯು ಬೆಟ್ಟದ ಮೇಲಿಂದ ನೋಡುಗರಿಗೆ ನೀಲಿ ಸರೋವರದಂತೆ ಕಾಣುತ್ತದೆ. ಈ ರಂಗನಾಥ ಸ್ವಾಮಿ ಬೆಟ್ಟವು ಗುಹಾಲಯ ದೇವಾಲಯವಾಗಿದೆ. ರಂಗನಾಥ ಸ್ವಾಮಿ ಗರ್ಭಗುಡಿಯು ಬಂಡೆಗಳ ನಡುವೆ ನಕ್ಷತ್ರಾಕಾರದ ವಾಸ್ತು ಶೈಲಿಯ ನಿರ್ಮಾಣಗೊಂಡಿದೆ. ಆದ್ದರಿಂದ ಇದನ್ನು ಗುಹಾಲಯ ಎಂದೇ ಕರೆಯುತ್ತಾರೆ.