ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದ್ದು, ಇನ್ನೂ ವಾರ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯಾದ್ಯಂತ ಪೂರ್ವ ಮುಂಗಾರು ಮಳೆ ಉತ್ತಮವಾಗಿದೆ. ಅದರಲ್ಲೂ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ.
ಮೇನಲ್ಲಿ ಮಳೆ ಬಂದರೆ ಮುಂಗಾರಿಗೆ ತೊಂದರೆ
ಏಪ್ರಿಲ್ ಅವಧಿಯಲ್ಲಿ ಮಳೆ ಬಂದರೆ ಮುಂಗಾರು ಅವಧಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಮೇ ಕೊನೇ ವಾರದಲ್ಲಿ ಚಂಡಮಾರುತ, ವಾಯುಭಾರ ಕುಸಿತದಂಥ ಸ್ಥಿತಿ ಉಂಟಾದರೆ ಮುಂಗಾರು ಆರಂಭಕ್ಕೆ ಸಮಸ್ಯೆಯಾಗಲಿದೆ. ಉಳಿದಂತೆ ಮುಂಗಾರು ಅವಧಿಯಲ್ಲಿ ಈ ಬಾರಿಯೂ ರಾಜ್ಯದಲ್ಲಿ ವಾಡಿಕೆ ಮಳೆಯಾಗುವ ಲಕ್ಷಣ ಕಂಡು ಬಂದಿವೆ ಎಂದು ಹವಾಮಾನ ತಜ್ಞ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.
ಸಾವಿರಾರು ಹೆಕ್ಟೇರ್ ಬೆಳೆ ಹಾನಿ
ಕೊಪ್ಪಳ, ವಿಜಯನಗರ, ದಕ್ಷಿಣ ಕನ್ನಡ, ಕಲಬುರಗಿ, ಚಾಮರಾಜನಗರ ಸೇರಿ 8 ಜಿಲ್ಲೆಗಳಲ್ಲಿ ಬಿರುಗಾಳಿ, ಆಲಿಕಲ್ಲು ಸಹಿತ ಭಾರಿ ಮಳೆ ಸುರಿದು ರೈತರಿಗೆ ಅಪಾರ ನಷ್ಟ ಸಂಭವಿಸಿದೆ. ಕೊಪ್ಪಳ ಜಿಲ್ಲೆಯೊಂದರಲ್ಲೇ ಅಂದಾಜು 10 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದೆ.
RAIN
ಮಾಗಡಿಯಲ್ಲಿ ಭಾರಿ ಮಳೆ
ಶನಿವಾರ ಸಂಜೆ 4 ಗಂಟೆಗೆ ಮಾಗಡಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಗೆ ಹಲವು ಕಂಬಗಳು ಧರೆಗುಳಿದಿವೆ. ಒಂದು ಗಂಟೆಗೂ ಹೆಚ್ಚು ಕಾಲ ತಾಲೂಕಾದ್ಯಂತ ಉತ್ತಮ ಮಳೆ ಸುರಿದಿದೆ. ಜೊತೆಗೆ ಬಿರುಗಾಳಿ ಸಹಿತ ಮಳೆ ಬಂದದ್ದರಿಂದ ಹಲವೆಡೆ ವಿದ್ಯುತ್ ಕಂಬಗಳು ನೆಲಕ್ಕುರುಳಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.